ಅಂತಾಕ್ಷರಿ ಆಡೋಣ ಬಾರಾ...

ಅಂತಾಕ್ಷರಿ ಆಡೋಣ ಬಾರಾ...

ಕಾಲೇಜು ಲೇಡೀಸ್ ಹಾಸ್ಟೆಲ್್ನಲ್ಲಿ ಕಾಲ ಕಳೆಯುವ ಮಜಾನೇ ಬೇರೆ ಅಲ್ವಾ. ಅಲ್ಲಿನ ಸುಖ ಅನುಭವಿಸಿದವರಿಗೇ ಗೊತ್ತು. ನಾನು ಡಿಗ್ರಿ ಕಲಿಯುವಾಗ ಒಂದು ವರ್ಷ(ಅಂತಿಮ ವರ್ಷ) ಹಾಸ್ಟೆಲ್್ನಲ್ಲಿದ್ದೆ. ಕಾಲೇಜು ಮನೆಯಿಂದ 10 ಕಿ ಮೀ ದೂರವಿದ್ದರೂ ಅಂತಿಮ ವರ್ಷದಲ್ಲಿ ಪ್ರೊಜೆಕ್ಟ್ ಮಾಡಲಿರುವ ಕಾರಣ ನಾನು ಹಾಸ್ಟೆಲ್ ಸೇರಿದ್ದೆ. ಮೊದ ಮೊದಲು ಹಾಸ್ಟೆಲ್ ಅಷ್ಟೊಂದು ಇಷ್ಟವಾಗಲಿಲ್ಲ. ದಿನಾ ಸಂಜೆಯ ವೇಳೆ ಮನೆಗೆ ಹೋಗುವ ಸಹಪಾಠಿಗಳನ್ನು ನೋಡಿದರೆ ನನಗೂ ಮನೆಗೆ ಹೋಗ್ಬೇಕು ಅನಿಸುತ್ತಿತ್ತು. ಮನೆ ಬಿಟ್ಟು ನಿಲ್ಲುವುದು ಅದೇ ಮೊದಲು. ಸಂಜೆ ಆರೂವರೆ ಗಂಟೆಗೆ ಅಪ್ಪ ಮನೆಗೆ ಬರುವ ಹೊತ್ತು. ಆ ಹೊತ್ತಲ್ಲಿ ಹಾಸ್ಟೆಲ್್ನಲ್ಲಿ ಕುಳಿತಿರುವಾಗ ಮನಸ್ಸಿಗೆ ತುಂಬಾನೇ ಬೇಜಾರು. ದಿನಾ ಮನೆಯಿಂದ ಫೋನ್. ಕೆಲವೊಮ್ಮೆ ತುಂಬಾ ಬೇಸರವಾದಾಗ ಥಟ್ ಅಂತಾ ಮನೆಗೆ ಹೊರಟೇ ಬಿಡುತ್ತಿದ್ದೆ. ರಜಾ ದಿನ ಆಗಿದ್ದರೆ ಮನೆಯಲ್ಲಿ ಹಾಜರ್!

ಇದು ಹಾಸ್ಟೆಲ್ ಸೇರಿದಾಗ ಆದ ಮೊದ ಮೊದಲ ಅನುಭವ. ಆಮೇಲೆ ಎಲ್ಲಾ ಸರಿಹೋಯ್ತು. ಅಲ್ಲಿನ ವಾತಾವರಣ, ಗೆಳತಿಯರೊಂದಿಗಿನ ಒಡನಾಟ ತುಂಬಾನೇ ಹಿಡಿಸಿತು. ಜೊತೆಗೆ ಓದಲು ಸಾಕಷ್ಟು ಸಮಯ ಕೂಡಾ ಲಭಿಸುತ್ತಿತ್ತು. ಬೆಳಗ್ಗೆ 9.30ಕ್ಕೆ ಕ್ಲಾಸು ಆರಂಭ. ಮೊದಲು ಮನೆಯಿಂದ ಬರುತ್ತಿರುವಾಗ 9.00ಗಂಟೆಗೆ ಕ್ಲಾಸು ತಲುಪುತ್ತಿದ್ದ ನಾವುಗಳು( ನಾನು ಮತ್ತು ನನ್ನ ಗೆಳತಿಯರು) ಹಾಸ್ಟೆಲ್ ಸೇರಿದ ಮೇಲೆ 9.40ಕ್ಕೆ ಕ್ಲಾಸಿಗೆ ಹಾಜರಾಗುತ್ತಿದ್ದೆವು. ಹಾಸ್ಟೆಲ್್ನಿಂದ ಕ್ಲಾಸು ತಲುಪ ಬೇಕಾದರೆ 5 ನಿಮಿಷದ ನಡಿಗೆ ಅಷ್ಟೇ. ಆದ್ರೂ ನಾವು ಕಾಲೇಜ್್ನ ಸೀನಿಯರ್ಸ್ ಅಲ್ವಾ ಎಂಬ ಕೊಬ್ಬು. ಕೆಲವೊಂದು ಲೆಕ್ಚರ್್ಗಳು ನಮಗಾಗಿ ಕಾಯುತ್ತಿರುತ್ತಿದ್ದರು (ಪಾಪ!). ಇನ್ನು ಕೆಲವರು ಮುಂದಿನ ಕ್ಲಾಸಿಗೆ ಬಂದರೆ ಸಾಕು ಎಂದು ಗದರಿಸುತ್ತಿದ್ದರು. ಇದಲ್ಲಾ ಮಾಮೂಲಿ ವಿಷಯ ಬಿಡಿ.

ಸಂಜೆ 4.30ಕ್ಕೆ ಕ್ಲಾಸು ಮುಗಿದ ನಂತರ ಹಾಸ್ಟೆಲ್್ಗೆ ಬಂದರೆ ಸ್ನಾನಕ್ಕಾಗಿ ಕ್ಯೂ ನಿಲ್ಲಬೇಕು. ಮೊದಲು ಹೋಗಿ ಯಾರು ಬಾತ್ ರೂಂನಲ್ಲಿ ಬಕೆಟ್ ಇಡುತ್ತಾರೋ ಅವರದ್ದು ಮೊದಲು ಸ್ನಾನ, ನಂತರ ಹೀಗೆ ಹೋಗುತ್ತದೆ ಒಬ್ಬರಾದನಂತರ ಒಬ್ಬರು ಎಂಬ ಸರಣಿ. ಇದಾದ ಮೇಲೆ 5 ಗಂಟೆಗೆ ಕಾಫಿ/ಟೀ. 6 ಗಂಟೆಗೆ ಲೇಡೀಸ್ ಹಾಸ್ಟೆಲ್ ಗೇಟು ಮುಚ್ಚಲ್ಪಡುತ್ತವೆ. ನಂತರ ಹಾಸ್ಟೆಲ್ ಒಳಗಡೆ ಪ್ರವೇಶಿಸಬೇಕಾದರೆ ಸೂಕ್ತ ಅನುಮತಿ ಬೇಕು. ಇಲ್ಲದಿದ್ದರೆ ಒಂದಿಷ್ಟು ಬೈಗುಳ ತಿನ್ನಬೇಕಾಗುತ್ತಿತ್ತು. ಅಂತೂ 6 ಗಂಟೆಗೆ ಮೇಟ್ರನ್ ಬಂದು ಹಾಜರು ಕರೆಯುತ್ತಾರೆ. ಆಮೇಲೆ 5 ನಿಮಿಷ ಪ್ರಾರ್ಥನೆ, ಇದಾದ ಮೇಲೆ ಹಾಲು. ಇದೆಲ್ಲಾ ಮುಗಿದ ಮೇಲೆ ಶುರುವಾಗುತ್ತದೆ ಹಾಸ್ಟೆಲ್ ಮಸ್ತಿ.

ಕೆಲವೊಂದು ಪುಸ್ತಕ ಹುಳುಗಳು ಪುಸ್ತಕಕ್ಕೆ ಅಂಟಿಕೊಂಡು ಕುಳಿತರೆ, ಧಾರಾವಾಹಿ ಪ್ರೇಮಿಗಳು ಟೀವಿ ಮುಂದೆ ಕೂರುತ್ತಾರೆ. ನಾವಂತೂ ಪುಸ್ತಕದ ಹುಳುಗಳೂ ಅಲ್ಲ ಧಾರಾವಾಹಿ ಪ್ರೇಮಿಗಳೂ ಅಲ್ಲ. ಇವೆರಡೂ ಅಲ್ಲದ ಒಂದಿಷ್ಟು ಹುಡುಗಿಯರು ಜೊತೆಯಾಗಿ ಕುಳಿತರೆ ಏನೆಲ್ಲಾ ಸುದ್ದಿ ಸ್ವಾರಸ್ಯಗಳು !.

ಪ್ರತಿಯೊಬ್ಬರೂ ಅವರವರ ಕ್ಲಾಸಿನಲ್ಲಿ ಅಂದು ನಡೆದ ವಿಷಯಗಳ ಬಗ್ಗೆ ಹೇಳ್ತಾನೆ ಇರ್ತಾರೆ. ಏನೆಲ್ಲಾ ತರ್ಲೆ ಮಾಡಿದೆವು, ಟೀಚರ್ ಬೈದದ್ದು, ಕ್ಲಾಸ್ ಬಂಕ್ ಮಾಡಿದ್ದು, ಲ್ಯಾಬ್್ನಲ್ಲಿ ಪ್ರೋಗ್ರಾಂ ಕಾಪಿ ಹೊಡೆದದ್ದು ಎಲ್ಲಾ ವಿಷಯಗಳು ಇಲ್ಲಿ ಮಂಡಿಸಲ್ಪಡುತ್ತವೆ. ಕ್ಲಾಸಿನ ಒಳಗಿನ ವಿಷಯ ಮುಗಿದ ಮೇಲೆ ಶುರುವಾಗುತ್ತದೆ ಕ್ಲಾಸಿನ ಹೊರಗಿನ ವಿಷ್ಯಗಳು. ಈ ರೀತಿಯ ಚರ್ಚಾ ವೇದಿಕೆಯಲ್ಲಿ ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಹಾಗೂ ಖಂಡಿಸುವ ಹಕ್ಕು ಇದ್ದೇ ಇರುತ್ತದೆ. ಕೆಲವೊಮ್ಮೆ ಒಂದಿಷ್ಟು ಭಿನ್ನಾಭಿಪ್ರಾಯಗಳು ಹುಟ್ಟಿ ಜಗಳವೂ ನಡೆಯುತ್ತದೆ. ಮತ್ತೆ ಮರುದಿನ ಎಲ್ಲರೂ ಒಂದಾಗುತ್ತೇವೆ. ನಮ್ಮೀ ಚರ್ಚಾ ವೇದಿಕೆಯಲ್ಲಿ ಗ್ರಾಮದಿಂದ ಹಿಡಿದು ಇಂಟರ್್ನ್ಯಾಷನಲ್ ಸುದ್ದಿಗಳೂ ಚರ್ಚೆಯಾಗುತ್ತವೆ. ನ್ಯೂಸ್ ಪೇಪರ್, ಟಿವಿ, ಪ್ರಾಜೆಕ್ಟ್ ಈ ಎಲ್ಲಾ ಚರ್ಚೆಗಳಿಗೂ ಇದೊಂದು ಮುಕ್ತ ವೇದಿಕೆ. ಕೆಲವೊಬ್ಬರು ಸುದ್ದಿ ಸಂಗ್ರಹಿಸುವಲ್ಲಿ ಅತೀ ಜಾಣರು. ಇಡೀ ಕಾಲೇಜಿನ ಸುದ್ದಿ, ಟೀಚರ್ಸ್ ಸುದ್ದಿ, ಬಾಯ್ಸ್ ಹಾಸ್ಟೆಲ್ ಸುದ್ದಿ ಎಲ್ಲವೂ ಇವರಲ್ಲಿ ಇರುತ್ತವೆ. ಅದಕ್ಕಾಗಿಯೇ ಕೆಲವೊಂದು ಗೆಳತಿಯರಿಗೆ ದೂರದರ್ಶನ್, ಏಷ್ಯಾನೆಟ್, ಎಂಟಿವಿ, ಕಾರವಲ್(ಇದು ನಮ್ಮೂರಿನ ಲೋಕಲ್ ದಿನಪತ್ರಿಕೆ), ರೀಡರ್ಸ್ ಡೈಜೆಸ್ಟ್ (ಆರ್್ಡಿ), ಎನ್್ಡಿಟಿವಿ ಎಂದೆಲ್ಲಾ ಅಡ್ಡ ಹೆಸರುಗಳನ್ನಿಡುತ್ತಿದ್ದೆವು. ಅಂದ ಮಾತ್ರಕ್ಕೆ ನಮ್ಮದು ಇಂಜಿಯನಿರಿಂಗ್ ಕಾಲೇಜು. ಇಲ್ಲಿನ ಮಕ್ಕಳ ಕಿತಾಪತಿಯಂತೂ ಊರಿಗೆಲ್ಲಾ ಫೇಮಸ್. ರಾಜಕೀಯದಲ್ಲಿ ನಮ್ಮ ಕಾಲೇಜಿನದ್ದು ಎತ್ತಿದ ಕೈ ಅಂದ ಮೇಲೆ ಸುದ್ದಿಗಳಿಗೆ ಬರವೇನು?

ಎಲ್ಲಾ ಸೀರಿಯಸ್ ಸುದ್ದಿಗಳು ಆದ ಮೇಲೆ ಒಂದಿಷ್ಟು ಎಂಟರ್್ಟೈನ್್ಮೆಂಟ್ ಬೇಡ್ವಾ? ಆಗ ಕಾಲೇಜ್್ನಲ್ಲಿನ ಲವ್್ರ್ಸ್ ಬಗ್ಗೆ ಸುದ್ದಿಯ ಮಹಾಪೂರವೇ ಹರಿದು ಬರುತ್ತಿತ್ತು. ಯಾರು ಯಾರನ್ನು ಪ್ರೊಪೋಸ್ ಮಾಡಿದರು, ಉತ್ತರ ಹೇಗೆ ಹೇಳಿದರು, ಯಾರೆಲ್ಲಾ ಪ್ರೇಮದ ಬಲೆಗೆ ಬಿದ್ದವರು, ಎದ್ದವರು, ಸೋತವರು, ಗೆದ್ದವರು, ಎರಡನೇ ಇನ್ನಿಂಗ್ಸ್ ಆರಂಭಿಸಿದವರು ಎಲ್ಲರ ಬಗ್ಗೆಯೂ ಇಲ್ಲಿ ಚರ್ಚೆ ನಡೆಯುತ್ತದೆ. ಹೀಗೆ ಒಂದು ಗಂಟೆಯ ಚರ್ಚೆ ಮುಗಿದು ಇನ್ನು ಸ್ವಲ್ಪ ಪುಸ್ತಕ ತಿರುವಿ ನೋಡೋಣ ಎಂದು ತೀರ್ಮಾನಿಸಿದಾಗ 'ಪವರ್ ಕಟ್್'!.

ಈ ಸಮಯದಲ್ಲಿ ಕ್ಯಾಂಡಲ್ ಅಥವಾ ಚಾರ್ಜರ್ ಇಟ್ಟು ಓದಬೇಕು. ಹೀಗೆ ನಾವುಗಳು ಓದಬೇಕಾದರೆ ಪರೀಕ್ಷೆ ಹತ್ತಿರ ಬರಲೇಬೇಕು. ಸದ್ಯ ಪರೀಕ್ಷೆಯ ಗಾಳಿ ಸೋಕದೇ ಇರುವ ಸಮಯದಲ್ಲಿ ಈ ಪವರ್ ಕಟ್ ವೇಳೆ ಎಲ್ಲರೂ ಸೇರಿ ಅಂತಾಕ್ಷರಿ ಆಡುತ್ತೇವೆ. ಈ ಅಂತಾಕ್ಷರಿ ಎಷ್ಟು ಮನರಂಜನೆ ನೀಡುತ್ತದೆ ಅಂದರೆ ಕೆಲವೊಮ್ಮೆ ಪುಸ್ತಕ ಹುಳುಗಳೂ, ಹಾಸ್ಟೆಲ್್ನಲ್ಲಿರುವ ಟೀಚರ್ಸ್ ಕೂಡಾ ನಮ್ಮೊಂದಿಗೆ ಭಾಗಿಯಾಗುತ್ತಾರೆ. ಕೆಲವೊಮ್ಮೆ ಹಿಂದಿ ಗೀತೆಗಳು ಮಾತ್ರ ಬಳಸಬಹುದಾದ ಅಂತಾಕ್ಷರಿ. ಇನ್ನೊಮ್ಮೆ ಯಾವ ಭಾಷೆಯನ್ನೂ ಬಳಸಬಹುದು. ನನ್ನ ಗೆಳತಿಯರೆಲ್ಲರೂ ಮಲಯಾಳಿಗಳು ಅವರು ಮಲಯಾಳಂ ಗೀತೆ ಹಾಡಿದರೆ ಪ್ರತಿಯಾಗಿ ನಾನು ಕನ್ನಡ ಗೀತೆ ಹಾಡುತ್ತಿದ್ದೆ. ಕೆಲವೊಮ್ಮೆ ನನಗೆ ಕನ್ನಡ ಚಿತ್ರ ಗೀತೆಯ ಸಾಹಿತ್ಯ ತಿಳಿಯದಿರುವಾಗ ಇನ್ನೊಂದು ಗೀತೆಯ ಸಾಹಿತ್ಯ ಸೇರಿಸಿ ಹೇಗೋ ಹಾಡಿ ಬಿಡುತ್ತಿದ್ದೆ. ಅವರಿಗೇನು ಗೊತ್ತು ಕನ್ನಡ? ನಾನು ಹಾಡಿದ್ದೆ ಸರಿಯೆಂದು ನಂಬಿ ಬಿಡುತ್ತಿದ್ದರು. ಆದ್ರೆ ಅವರು ಆ ಥರಾ ಮಾಡುವಂತಿಲ್ಲ ನನಗೆ ಮಲಯಾಳಂ ಹಾಡು ಕೂಡಾ ಗೊತ್ತು. ಹೇಗೋ ನಾನಿದ್ದ ಟೀಮ್ ಯಾವಾಗಲೂ ಗೆಲ್ಲುತ್ತಿತ್ತು.

ಸುಮ್ಮನೆ ಟೈಮ್್ಪಾಸ್್ಗಾಗಿ ಆಡುತ್ತಿದ್ದ ಈ ಅಂತಾಕ್ಷರಿ ಆಟ ಆಮೇಲೆ ನಮ್ಮ ಕಾಲೇಜಿನಲ್ಲಿ ನಡೆದ ಇಂಟರ್ ಕಾಲೇಜ್ ಫೆಸ್ಟ್ 'Rhythm'ನಲ್ಲಿ ನಮ್ಮನ್ನು (ನಾನು ಮತ್ತು ನನ್ನ ಗೆಳತಿ ಸಂಗೀತಾ)ಳನ್ನು ಚಾಂಪಿಯನ್ಸ್ ಆಗಿ ಮಾಡಿತ್ತು. ಕಾಲೇಜು ಲೈಫ್ ಕಳೆದ ಮೇಲೆ ಅಂತಾಕ್ಷರಿ ಆಡುವುದೇ ಅಪರೂಪ. ಮನೆಯಲ್ಲಿ ಕೆಲವೊಮ್ಮೆ ಎಲ್ಲರೂ ಫ್ರೀಯಾಗಿದ್ದು ಒಳ್ಳೆ ಮೂಡ್್ನಲ್ಲಿದ್ದರೆ ಅಂತಾಕ್ಷರಿ ಆಡುತ್ತೇವೆ. ಆಗ ನನ್ನ ಅಮ್ಮನ ಹಳೇ ಕನ್ನಡ ಹಾಡು, ಅಪ್ಪ ಹಾಡುವ ಹಳೇ ಮಲಯಾಳಂ ಹಾಡು ಜೊತೆಗೆ ನಮ್ಮ ಹೊಸ, ಹಳೆಯ ಹಿಂದಿ ಹಾಡುಗಳು...ಎಲ್ಲಾ ಸೇರಿ ಅಂತಾಕ್ಷರಿ ಕೇವಲ ಸ್ಪರ್ಧೆ, ಮನರಂಜನೆ ಮಾತ್ರ ಅಲ್ಲ ಹಲವಾರು ಹಾಡುಗಳ ಸಂಗಮವಾಗಿ ಹೊಮ್ಮಿ ಬರುತ್ತದೆ. ಜೊತೆಗೆ ಮನಸ್ಸು ಹಗುರಗೊಳಿಸುವಂತಹ ಉತ್ತಮ ಕ್ರಿಯೆಯಾಗಿಯೂ..ನೀವೂ ಫ್ರೀಯಾಗಿ ಸುಮ್ಮನೆ ಕುಳಿತಿರುವಿರಾದರೆ ಅಂತಾಕ್ಷರಿ ಆಡಲು ಶುರು ಮಾಡಿ.."ಬೈಟೆ ಬೈಟೆ ಕ್ಯಾ ಕರೋಗೆ ಹೋಜಾಯೆ ಕುಛ್ ಕಾಮ್... ಶುರು ಕರೋ ಅಂತಾಕ್ಷರಿ ಲೇಕೆ ಪ್ರಭು ಕ ನಾಮ್..."

Rating
No votes yet

Comments