ಹಸಿರು ಹಸಿರು ಕನಸುಗಳು

ಹಸಿರು ಹಸಿರು ಕನಸುಗಳು

ಬರಹ

ಕನಸುಗಳಿಗೇನು ಬಿಡಿ, ಲೆಕ್ಕವಿಲ್ಲದಷ್ಟಿರುತ್ತವೆ. ಆದರೆ ಕೆಲವಿರುತ್ತವೆ ಕನಸುಗಳು..ಓಹ್!! ಅವೆಷ್ಟು ತೀವ್ರವಾಗಿರುತ್ತವೆ ಎಂದರೆ ಅವು ನನಸಾಗಿಬಿಟ್ಟರೆ ಬಹುಶಃ ನಾವು ಅಷ್ಟೊಂದು ಆನಂದ ಪಡುವುದಿಲ್ಲ ಏಕೆಂದರೆ ಆ ಕನಸುಗಳನ್ನು ಮತ್ತೆ ಕಾಣಲು ಸಾಧ್ಯವಿಲ್ಲವಲ್ಲ. ಅಂಥವೇ ನನ್ನದೊಂದೆರೆಡು ಕನಸುಗಳಿವೆ. ಇದನ್ನು ಏಕೆ ಬರೆಯುತ್ತಿದ್ದೇನೆಂದರೆ ಅಕಸ್ಮಾತ್ ಅವು ಪೂರೈಸುವ ಸಾಧ್ಯತೆಗಳು ಕಂಡರೆ ಆ ಎಕ್ಸೈಟ್ ಮೆಂಟ್ ಅನ್ನು ಹೇಳಿಕೊಂಡು ಸ್ವಲ್ಪ ಅದನ್ನು ತಹಬಂದಿಗೆ ತಂದು ಕೊಳ್ಳಲು ಸಾಧ್ಯವಾಗುತ್ತದೆ ಎಂದು. ನಾನು ಮತ್ತೆ ಅವು ಸಾಧ್ಯವಾಗುತ್ತಿವೆ ಅಂತ ಬರೆದರೆ, ನೀವೆಲ್ಲಾ ‘ಸಂತೋಷ, ನಿಮಗೆ ಗುಡ್ ಲಕ್’ ಅಂತೆಲ್ಲಾ ಬರೀತೀರಲ್ಲಾ, ಆಗ ಆ ನನ್ನ ಸಂತೋಷ ಇನ್ನೂ ಜಾಸ್ತಿಯಾಗುತ್ತದೆ. ಇರಲಿ ಪೀಠಿಕೆಯೇ ಮುಗಿಯುವುದಿಲ್ಲ ನನ್ನ ಮಾತಿನಲ್ಲಿ..ಮಾತು ಕಮ್ಮಿ ಮಾಡಬೇಕು ಅಂತ ಅದೆಷ್ಟು ಹೊಸ ವರ್ಷಗಳಲ್ಲಿ ರೆಸೊಲ್ಯೂಷನ್ ಮಾಡಿಕೊಂಡಿದ್ದೇನೋ..ಬಿಡಿ ಬಿಡಿ ಈಗ ನನ್ನ ಕನಸುಗಳನ್ನು ಕೇಳಿ ಪ್ಲೀಸ್..

ಒಂದು ಸಾರಿ, ಜೀವನದಲ್ಲಿ ಒಂದು ಸಾರಿ ಲೇಡಿ ಮ್ಯಾಕ್‘ಬೆತ್ ಪಾತ್ರ ಮಾಡಬೇಕು. ಅಬ್ಬಾ ಎಂಥಾ ಹೆಂಗಸು ಆಕೆ! ಅಂಥಾ ಕ್ರೌರ್ಯ, ಅಂಥಾ ತೀವ್ರವಾದ ಆಸೆ ಜೊತೆಗೆ ಅತ್ಯಂತ ಪ್ರಾಕ್ಟಿಕಲ್ ಮತ್ತು ತೀಕ್ಷ್ಣ ಬುದ್ಢಿ. ಎದೆಹಾಲು ಕುಡಿಯುತ್ತಾ ನಗುತ್ತಿರುವ ಮಗುವನ್ನು ಎದೆಯಿಂದ ಕಿತ್ತು ನೆಲಕ್ಕಪ್ಪಳಿಸಿ ಕೊಲ್ಲುವ ಕ್ರೌರ್ಯವನ್ನು ಬೇಡುತ್ತಾಳೆ ಅವಳು!! ಅದ್ಯಾವ ಘಳಿಗೆಯೋ ಅವಳಿಗೆ ಅದು ಸಿದ್ಢಿಸಿಯೂಬಿಡುತ್ತದೆ..ಎಲ್ಲಾ ನಾಶ,ಎಲ್ಲಾ ರಕ್ತಪಾತದ ನಂತರ ಅದರಿಂದ ಪಡೆದ ಏನನ್ನೂ ಅನುಭವಿಸದೆ ಹುಚ್ಚಿಯಾಗಿ ಉಳಿದೆಲ್ಲಾ ಜೀವನವನ್ನೂ ಕೈಗೆ ಮೆತ್ತಿದ ಭ್ರಾಮಕ ರಕ್ತವನ್ನು ತೊಳೆಯುವುದರಲ್ಲೇ ಕಳೆದು ಸಾಯುತ್ತಾಳೆ. ಅಬ್ಬಾ!! ಶೇಕ್‍ಸ್ಪಿಯರ್!! ಪ್ರತಿ ರಂಗಕರ್ಮಿಯೂ ಈ ಮಹಾಶಯನ ಫೋಟೋ ಇಟ್ಟುಕೊಂಡು ದಿನಾ ತುಪ್ಪದ ದೀಪ ಹಚ್ಚಬೇಕು. ಲೇಡಿ ಮ್ಯಾಕ್‘ಬೆತ್, ಇಯಾಗೋ ಎಂಥೆಂಥ ಪಾತ್ರಗಳನ್ನ ಸೃಷ್ಟಿಸಿದ್ದಾರಲ್ಲ. ಒಂದು ಸಾರಿ ಕನಿಷ್ಠ ಒಂದು ಸಾರಿಯಾದರೂ ಲೇಡಿ ಮ್ಯಾಕ್‘ಬೆತ್ ಆಗಬೇಕು ನಾನು. ಅದು ನನಸಾದ ದಿನ ಅದರ ಶೋ ಯಾವತ್ತು ಎಲ್ಲಿ ಇದೆ ಅನ್ನೋದನ್ನ ಇಲ್ಲೇ ಬರೀತೀನಿ. ನೀವೆಲ್ಲಾ ಪ್ಲೀಸ್ ಬರಬೇಕು. ಇದನ್ನ ಬರೆಯುತ್ತಿರುವಾಗಲೇ ನನ್ನ ಹೃದಯದ ಬಡಿತ ಹೆಚ್ಚಾಗುತ್ತಿದೆ.

ಇಂಕಾ - ಇತಿಹಾಸದ ಉತ್ಕೃಷ್ಟ ಸಮಾಜಗಳಲ್ಲೊಂದು. ಉನ್ನತ ಮಟ್ಟದ ಎಂಜಿನಿಯರುಗಳು, ಶ್ರೇಷ್ಟ ಮಟ್ಟದ ನಾವಿಕರು, ಯೋಧರು, ಮುಂದಿನ ನೂರು ವರ್ಷಗಳನ್ನು ಇಂದು ನೋಡಬಲ್ಲಂಥವರು. ಅವರು ಪ್ರಾಯಃ ತಮ್ಮ ಕೊನೆಯನ್ನು ಕಂಡರೇನೋ, ಪೆರುವಿನಲ್ಲಿ ತಮ್ಮ ಕೊನೆಯ ನಗರ ಮಾಚುಪಿಚುವನ್ನು ಸ್ಥಾಪಿಸಿದರು. ಸುರಕ್ಷೆಗೆ ಅತ್ಯಂತ ಹೆಚ್ಚಿನ ಗಮನ ಕೊಟ್ಟು, ತಮ್ಮೆಲ್ಲಾ ವಿದ್ಯೆಯನ್ನು ಸುರಿದು, ತಮ್ಮ ಅಸ್ತಿತ್ವದ ಕೊನೆಯ ಹಾಗೂ ಶಾಶ್ವತ ಕುರುಹಾಗಿ ಬಿಟ್ಟು ಹೋಗಿದ್ದಾರೆ. ಅತ್ಯಂತ ಸುವ್ಯವಸ್ಥಿತ, ಸುರಕ್ಷಿತ ತಾಣವಾಗಿ ನಿಲ್ಲಿಸಿದ್ದಾರೆ. ಇಂದು ಅಲ್ಲಿ ಗಂಭೀರ ನಿಶ್ಶಬ್ದ. ಅಲ್ಲಿ ಬೀಸುವ ಗಾಳಿಯನ್ನು ಗಮನವಿಟ್ಟು ಕೇಳಿದರೆ ಅವರ ಮಾತುಗಳು ಕೇಳಿಸುತ್ತದೆಯೇನೋ ಅನ್ನಿಸುತ್ತದೆ. ಅಲ್ಲಿ ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡರೆ ಅವರ ಅಂಶಗಳಲ್ಲೊಂದಿಷ್ಟು ನಮ್ಮಲ್ಲಿ ಸೇರಿಕೊಂಡಿತೇನೋ ಎಂಬ ಭಾವ - ಹೀಗಾಗಬಹುದು ಎಂದುಕೊಂಡಿದ್ದೇನೆ. ಅಲ್ಲಿ, ಆ ನಗರಕ್ಕೆ ಕೊಂಡೊಯ್ಯುವ ಮೆಟ್ಟಿಲುಗಳ ಬಳಿ ನಿಂತಾಗ..ಅದು ನನ್ನ ಜೀವನದ ಸಾರ್ಥಕ ಕ್ಷಣಗಳಲ್ಲೊಂದಾಗಿರುತ್ತದೆ ಎನ್ನುವುದು ಮಾತ್ರ ನಿಸ್ಸಂಶಯ.

ಪೂರೈಸಿಕೊಳ್ಳುತ್ತೇನೆ. ಒಂದಲ್ಲಾ ಒಂದು ದಿನ ಪೂರೈಸಿಕೊಳ್ಳುತ್ತೇನೆ. ಆ ದಿನ ನನ್ನ ಜೊತೆ ನನಗೆ ಹಾರೈಸಲು ತುಂಬಾ ಜನರಿರಲಿ ಎಂದು ಇಲ್ಲಿ ಬರೆಯುತ್ತಿದ್ದೇನೆ.