ಕ್ಷೇತ್ರ ಪರಿಚಯ: ಕೊಲ್ಲೂರು

ಕ್ಷೇತ್ರ ಪರಿಚಯ: ಕೊಲ್ಲೂರು

ಬರಹ

ಪರಶುರಾಮ ಸೃಷ್ಟಿಸಿದ ಕರ್ನಾಟಕ ಕರಾವಳಿಯ ಪ್ರದೇಶದ ಸಪ್ತಕ್ಷೇತ್ರಗಳಲ್ಲಿ ಒಂದು ಕೊಲ್ಲೂರು. ಕೊಡಚಾದ್ರಿ ಎಂದಾಗ ಹಲವರಿಗೆ ನೆನಪಾಗುವುದು ಚಾರಣ. ಕೊಡಚಾದ್ರಿ ಬೆಟ್ಟದಿಂದ ಪಶ್ಚಿಮ ದಿಕ್ಕಿನಲ್ಲಿ ಇಳಿದರೆ ಸಿಗುವುದು ಪವಿತ್ರ ಕ್ಷೇತ್ರ. ಅದುವೇ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ. ಕರ್ನಾಟಕದ ಪ್ರಸಿದ್ಧ ದೇವಿ ಕ್ಷೇತ್ರ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಿಂದ ಸುಮಾರು ೪೫ ಕಿ.ಮೀ ಅಂತರದಲ್ಲಿದೆ ಈ ಕ್ಷೇತ್ರ. ಹಾಗೆ ಕುಂದಾಪುರ ತಾಲೂಕಿನ ಬೈಂದೂರಿನಿಂದ ೩೦ ಕಿ.ಮೀ ಅಂತರದಲ್ಲಿದೆ. ಸೌಪರ್ಣಿಕಾ ನದಿ ಮತ್ತು ಪಶ್ಚಿಮ ಘಟ್ಟದ ಸಾಲುಗಳ ಬಳಿ ಇರುವ ಇತಿಹಾಸ ಪ್ರಸಿದ್ಧ ಕ್ಷೇತ್ರ. ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಅಂಧ್ರಪ್ರದೇಶ, ಕೇರಳ, ಗೋವಾ, ಮಹಾರಾಷ್ತ್ರದವರಿಗೂ ಈ ಕ್ಷೇತ್ರ ಬಹಳ ವಿಶೇಷ. ಮಳೆಗಾಲ, ಬೇಸಿಗೆಗಾಲ ಎಂಬ ಋತುಭೇದವಿಲ್ಲದೆ ಜನಸಾಗರದಿಂದ ತುಂಬಿ ತುಳುಕುತ್ತಿರುತ್ತದೆ. ಸುಪ್ರಸಿದ್ಧ ಗಾಯಕರಾದ ಯೇಸುದಾಸ್ ಅವರು ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದಂದು ತಪ್ಪದೆ ಇಲ್ಲಿಗೆ ಬಂದು ಚಂಡಿಕೆಯಾಗ ನಡೆಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ. ಅಲ್ಲದೇ ಸಂಗೀತ ಕಚೇರಿ ಕೂಡ ನೀಡುತ್ತಾರೆ

ದೇವಾಲಯದ ಮಾಹಿತಿ:
ಕೊಲ್ಲೂರು ಅತೀ ಪ್ರಾಚೀನವಾದ ದೇವಸ್ಥಾನವೆಂದು ಸ್ಕಂದ ಪುರಾಣದಿಂದ ತಿಳಿದು ಬರುತ್ತದೆ. ದೇವಿಯ ಮೂರ್ತಿಯು ಪೂರ್ವಾಭಿಮುಖವಾಗಿ ಪ್ರತಿಷ್ಠೆಗೊಂಡಿದೆ. ಉತ್ತರ ಭಾಗದಲ್ಲಿ ಭೋಜನ ಶಾಲೆಯಿದೆ. ದೇವಸ್ಥಾನದ ಹಲವು ಭಾಗಗಳು ಶಿಲಾಮಯವಾಗಿ ನಿರ್ಮಿಸಲ್ಪಟ್ಟಿವೆ. ಪೂರ್ವ ಭಾಗ ಭಕ್ತರ ಪ್ರವೇಶ ದ್ವಾರವಾಗಿಯೂ, ಪಶ್ಚಿಮ ದ್ವಾರವು ಆನೆ ಬಾಗಿಲು ಎಂಬ ಹೆಸರು ರೂಡಿಯಲ್ಲಿದೆ. ದೇವಸ್ಥಾನದ ಒಳ ಆವರಣದ ಸುತ್ತಲೂ ಅನೇಕ ಗುಡಿಗಳಿವೆ (ಆಂಜನೇಯ, ಗಣಪತಿ ಮುಂತಾದವು). ಇವುಗಳಿಗೆ ಪರಿವಾರ ದೇವರುಗಳೆಂದು ಸಹ ಕರೆಯುತ್ತಾರೆ. ದೇವಸ್ಥಾನದ ಮುಂಭಾಗದಲ್ಲಿ ಅಗ್ನಿತೀರ್ಥವೆಂಬ ಹೊಳೆ ಹರಿಯುತ್ತದೆ. ಇದು ಕಡೆಗೆ ಸೌಪರ್ಣಿಕಾ ನದಿ ಸೇರುತ್ತದೆ. ಸೌಪರ್ಣಿಕಾ ನದಿ ದೇವಸ್ಥಾನದ ಸ್ವಲ್ಪ ದೂರದಲ್ಲಿದೆ. ಈ ನದಿಯು ನಂತರ ಮರವಂತೆ ಎಂಬಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ.

ಕೊಲ್ಲೂರು ಹೆಸರು ಬಂದಿದ್ದು:
ಮಹಾತಪಸ್ವಿಯಾದ ಕೋಲ ಮುನಿಯ ತಪಕ್ಕೆ ಮೆಚ್ಚಿ ಶಿವ ಪ್ರತ್ಯಕ್ಷನಾದನು. 'ಎಲೈ ಮುನಿಯೇ, ನಿನ್ನ ಧ್ಯಾನದಿಂದಾಗಿ ಈ ಸ್ಥಳವು ಈಗಾಗಲೇ ಪವಿತ್ರವಾಗಿದೆ. ಪಾರ್ಥಿವ ಲಿಂಗವನ್ನು ಧ್ಯಾನಾನುಸಂಧಾನ ಮಾಡುತ್ತಿರುವೆಯಾದರೆ, ಪರಶೈವಿ ಎಂತಲೂ ಮಹಾವೈಷ್ಣವಿ ಎಂಬ ಮಹಾಲಕ್ಷ್ಮಿಯು ಪ್ರತ್ಯಕ್ಷಳಾಗಿ ನಿನ್ನ ಆಶ್ರಮ ವಾಸಿಯಾಗುತ್ತಾಳೆ' ಎಂದು ಹರಸಿದನು. ಕೋಲಮುನಿಯ ತಪೋಬಲದಿಂದ ಮಹಾರಣ್ಯವು ಕೋಲಾಪುರವಾಯಿತು. ಜನರ ನಾಣ್ಣುಡಿಯಿಂದಲೋ, ಗ್ರಾಮೀಣರಿಂದಲೋ ತದನಂತರ ಕ್ಷೇತ್ರವು ಕೊಲ್ಲೂರು ಎಂಬ ಹೆಸರನ್ನು ತಾಳಿತು

ಕುಟಚಾದ್ರಿ (ಕೊಡಚಾದ್ರಿ):
ಹಿಂದೆ ರಾಮ ರಾವಣರ ಯುದ್ಧಕಾಲದಲ್ಲಿ ಹನುಮಂತನು, ಮೂರ್ಛಿತನಾದ ಲಕ್ಷ್ಮಣ ಹಾಗೂ ವಾನರ ಸೇನೆಯನ್ನು ಪುನಶ್ಚೇತನಗೊಳಿಸಲು, ತನ್ನ ಭುಜಬಲದಿಂದ ಪರ್ವತವನ್ನೆತ್ತಿ ಅಂಗೈಯಲ್ಲಿರಿಸಿ ಬರುತ್ತಿರುವಾಗ, ಎತ್ತಿ ಹಿಡಿದ ಸಂಜೀವಿನಿ ಪರ್ವತದಿಂದ ಕೆಲಭಾಗಗಳು ಈ ಪ್ರದೇಶದಲ್ಲಿ ಬಿತ್ತು. ಬಿದ್ದಿರುವ ತುಂಡುಗಳ ಭಾಗಗಳಲ್ಲಿ ಕುಟಜ ಎಂಬ ಮೃತ ಸಂಜೀವಿನಿ ಲತೆ ಇದ್ದರಿಂದ, ಈ ಪರ್ವತಕ್ಕೆ ಕುಟಚಾದ್ರಿ ಎಂಬ ಹೆಸರು ಬಂತು ಎಂದು ಇತಿಹಾಸ ಹೇಳುತ್ತದೆ.

ಕುಟಚಾದ್ರಿಗೆ ಮಳೆಗಾಲದಲ್ಲಿ ಹೋಗುವುದು ಕಷ್ಟ. ದೇವಾಲಯದಿಂದ ಸುಮಾರು ೨೫ ಕಿ.ಮೀ ದೂರದಲ್ಲಿದೆ. ಕೊಲ್ಲೂರಿನಿಂದ ಸಾಗರಕ್ಕೆ ಬಸ್ಸಿನಲ್ಲಿ ಪ್ರಯಾಣಿಸಿ ಕಾರಿಘಾಟ್ ಎಂಬಲ್ಲಿ ಇಳಿದು ಅಲ್ಲಿಂದ ೧೨ ಕಿ.ಮೀ ಕಾಲ್ನಡಿಗೆಯಲ್ಲಿ ಹೋಗಬೇಕು. ಬಹಳ ದಟ್ಟ ಅರಣ್ಯದ ಪ್ರದೇಶವಿದು. ಅಲ್ಲಿ ಕಾಲಭೈರವ ದೇವಸ್ಥಾನ ಸಿಗುತ್ತದೆ. ಇಲ್ಲಿ ತಂಗಲು ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹವಿದೆ. ಕೊಲ್ಲೂರಿನಿಂದ ಕುಟಚಾದ್ರಿಗೆ ವಾಹನ ದಾರಿಯೂ ಇದ್ದು ೪೫ ಕಿ.ಮೀ ಸುತ್ತು ಮಾರ್ಗದಲ್ಲಿ ಸಂಚರಿಸಬೇಕು. ಸಾಗರಕ್ಕೆ ಹೋಗುವ ಮಾರ್ಗದಲ್ಲಿ ನಿಟ್ಟೂರಿನಾಚೆಗೆ ಬಲಭಾಗದಲ್ಲಿ ಕುಟಚಾದ್ರಿಗೆ ಹೋಗುವ ರಸ್ತೆ ಇದೆ. ಕುತಚಾದ್ರಿಯಲ್ಲಿ ಚೋತ್ರಮೂಲ ಎಂಬ ಸ್ಥಳದಲ್ಲಿ ಕೋಲ ಮಹರ್ಷಿಗಳು ತಪಸ್ಸು ಮಾಡಿದ ಗುಹೆ ಹಾಗೂ ಪೀಠಗಳನ್ನು ನೋಡಬಹುದು. ಕೊಲ್ಲೂರಿಗೆ ಹೋಗುವವರು ಅಗತ್ಯವಾಗಿ ಈ ಪ್ರೇಕ್ಷಣಿಯ ಸ್ಥಳಗನ್ನು ನೋಡಿಕೊಂಡು ಬನ್ನಿ.

 

 

ತಾಯಿ ಮೂಕಾಂಬಿಕೆ ಇಲ್ಲಿ ನೆಲೆಸಿದ್ದು:
ಶುಕ್ರಾಚಾರ್ಯರಿಂದ ಮಂತ್ರೋಪದೇಶವನ್ನು ಪಡೆದು ಮಹಾಭೈರವಿಯನ್ನಾರಾಧಿಸಿ ಪುರುಷರಿಂದ ಮರಣವಿಲ್ಲೆಂಬಂತೆ ಅಜೇಯತ್ವವನ್ನು ಹೊಂದಿದ ಕಂಹಾಸುರನೆಂಬ ದೈತ್ಯನು, ಮೂರು ಲೋಕವನ್ನು ಕೆಡಹುತ್ತಾ ಬಂದನು. ಇದನ್ನು ಕಂಡ ತ್ರಿಮೂರ್ತಿಗಳು ಕಂಹನ ವಧೆಗಾಗಿ ತ್ರಿಪುರ ಭೈರವಿಯನ್ನು ಸೃಜಿಸಿ ನಿಯೋಜಿಸಿದರು. ಭೈರವಿಯು ಕಂಹನಲ್ಲಿ ಯುದ್ಧ ಸಾರಿದಳು. ಇದನ್ನರಿತ ಶುಕ್ರಾಚಾರ್ಯರು 'ನೀನು ಪುರುಷರಿಂದ ಮಾತ್ರ ಮರಣವಿಲ್ಲ ಎಂದು ಯಾರಿಂದ ವರವನ್ನು ಪಡೆದೆಯೋ, ಅವಳೇ ನಿನ್ನ ಮೇಲೆ ಯುದ್ಧ ಸಾರಿದ್ದಾಳೆ. ಆದ್ದರಿಂದ ಅವಳೊಂದಿಗೆ ಯುದ್ಧಕ್ಕೆ ಇಳಿಯದೆ, ಯಾರಿಂದಲೂ ಮರಣವಿಲ್ಲೆಂಬಂತೆ ತಪಸ್ಸನ್ನು ಆಚರಿಸಿ ಅಮರತ್ವವನ್ನು ಪಡೆ' ಎಂದು ಕಂಹನಿಗೆ ಸೂಚಿಸಿದರು. ಅಂತೆಯೇ ತಪೋನಿರತನಕ್ಕಾಗಿ ಋಷ್ಯ ಮೂಕವೆಂಬ ಪರ್ವತದ ಕಡೆಗೆ ಮುಂದುವರಿದನು. ಕಂಹಾಸುರನು ಘೋರ ತಪಸ್ಸನ್ನು ಆಚರಿಸಿದನು. ದೇವತೆಗಳು 'ಈ ತಪಸ್ಸು ಫಲಿಸಿದರೆ ಕಂಹಾಸುರನು ಅಮರನಾಗುತ್ತಾನೆ ಹಾಗೂ ಅವನ ಹಿಂಸೆಯ ಪ್ರತಾಪವನ್ನು ಯಾರಿಂದಲೂ ನಿಲ್ಲಿಸಲಾಗದು' ಎಂಬ ಭಯಭೀತರಾಗಿ ದೇವಿಯ ಮೊರೆ ಹೊಕ್ಕರು. ಅಂತೆಯೇ ದೇವಿ ಕಂಹನ ನಾಲಿಗೆಯಲ್ಲಿ ನೆಲೆಸಿ ಅವನನ್ನು ಮೂಕನನ್ನಾಗಿ ಮಾಡಿದಳು. ಕಾಲಾನಂತರ ಶಿವನು ಕಂಹನ ತಪಸ್ಸಿಗೆ ಮೆಚ್ಚಿ, ಅವನ ಇಷ್ಟಾರ್ಥವನ್ನು ಕೇಳಿದನು. ಕಂಹನ ಬಾಯಿಯಿಂದ ಮಾತು ಹೊರಬರದಿದ್ದಾಗ , ಸ್ವಲ್ಪ ಸಮಯದ ಬಳಿಕ ಶಿವನು ಅಂತರ್ಧಾನನಾದನು. ಇದನ್ನರಿತ ಕಂಹನು ದೇವತೆಗಳ ಸಂಚೆಂದು  ತಿಳಿದು ಅವರೊಂದಿಗೆ ಯುದ್ಧಕ್ಕೆ ಇಳಿಯಲು ಅಣಿಯಾದನು. ತಾನು ಮೂಕನಾದರೆನಂತೆ, ಶಿವನು ತನ್ನ ವರವನ್ನು ಈಡೇರಿಸಿದನು ಎಂದು ತಿಳಿದು, ತನಗೆ ಯಾರೂ ಇದಿರಿಲ್ಲವೆಂದು ದೇವಿಯ ಮುಂದೆ ಯುದ್ಧಕ್ಕೆ ಇಳಿದನು. ಮೂಕನಾಗಿದ್ದರಿಂದ ಅವನು ಮೂಕಾಸುರನಾದನು. ದೇವಿಗೂ ಮೂಕಾಸುರನಿಗೂ ಯುದ್ಧವಾಯಿತು. ಮೂಕಾಸುರನನ್ನು ಸಂಹಾರ ಮಾಡುವ ಮುಂಚೆ, ಅವನ ಮೂಕತ್ವವನ್ನು ಹೋಗಲಾಡಿಸಿ 'ಎಲೈ ಕಂಹನೆ ನನ್ನ ಭಕ್ತನಾಗಿದ್ದರೂ, ಸಜ್ಜನರನ್ನು ಹಿಂಸಿದುದ್ದಕ್ಕೆ ನಾನೇ ನಿನ್ನ ಸಂಹಾರ ಮಾಡಬೇಕಾಯಿತು.  ನಿನ್ನ ಕಡೆಯ ಇಚ್ಛೆಯನ್ನು ಕೇಳಿಕೋ' ಎಂದು ದೇವಿ ನುಡಿದಳು. ಕಂಹನು 'ನನ್ನ ಕ್ಷಮಿಸು ತಾಯಿ. ಇನ್ನು ಮುಂದೆ ನನ್ನ ಹೆಸರಿನಿಂದ ವಿಖ್ಯಾತಳಾಗಿ ಭಕ್ತ ಜನರ ಬೇಡಿಕೆ ಈಡೇರಿಸುವವಳಾಗಬೇಕೆಂಬುದೇ ನನ್ನ ಪ್ರಾರ್ಥನೆ' ಎಂದು ಬೇಡಿಕೊಂಡನು. ಅವನ ಇಚ್ಚೆಯಂತೆ ಅಂದಿನಿಂದ ದೇವಿಗೆ ಮೂಕಾಂಬಿಕೆ ಎಂಬ ಹೆಸರು ಸಹ ಸೇರಿತು. ಅಂದಿನಿಂದ ಕೊಲ್ಲೂರಿನಲ್ಲಿ ಶಾಶ್ವತವಾಗಿ ಮೂಕಾಂಬಿಕ ಎಂಬ ಹೆಸರಿನಲ್ಲಿ ದೇವಿ ನೆಲೆಸಿದ್ದಾಳೆ.

ಸೌಪರ್ಣಿಕಾ ನದಿ:
ದೇವಾಲಯದ ಪಶ್ಚಿಮ ದಿಕ್ಕಿಗೆ ಸ್ವಲ್ಪ ನಡೆದರೆ, ನದಿ ತೀರ ಸಿಗುತ್ತದೆ. ಈ ನದಿ ೨೦ ಕಿ.ಮೀ ದೂರದ ಕುಟಚಾದ್ರಿ ಬೆಟ್ಟದಿಂದ ಹರಿದು ಬರುತ್ತದೆ. ಹಿಂದೆ ಸುಪರ್ಣನೆಂಬ ಗರುಡನು ಈ ನದಿ ದಡದಲ್ಲಿ ದೇವಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ತಪಸ್ಸನ್ನು ಮಾಡಿದ್ದರಿಂದ ಈ ನದಿಗೆ ಸೌಪರ್ಣಿಕಾ ನದಿ ಎಂದು ಹೆಸರಾಗಿದೆ.

ಶಂಕರಾಚಾರ್ಯರ ಆಗಮನ:
ಹಿಂದೆ ಶಂಕರಾಚಾರ್ಯರು ಕೊಲ್ಲೂರಿಗೆ ಆಗಮಿಸಿ ಇಲ್ಲಿ ದೇವಿಯನ್ನು ಕುರಿತಾಗಿ ತಪಸ್ಸನ್ನು ಆಚರಿಸಿದರೆಂಬ ಇತಿಹಾಸ ಇದೆ. ಅವರಿಗೆ ದೇವಿ ಸಾಕ್ಷಾತ್ಕಾರವಾಗಿ ಪಂಚಲೋಹದ [{(ಹಿತ್ತಾಳೆ, ಕಬ್ಬಿಣ, ತಾಮ್ರ, ತವರ(ಟಿನ್), ಸೀಸ) ಅಥವಾ (ಚಿನ್ನ, ಬೆಳ್ಳಿ, ತಾಮ್ರ, ಜಿಂಕ್, ಸೀಸ) ಅಥವಾ (ತವರ(ಟಿನ್), ಬೆಳ್ಳಿ, ತಾಮ್ರ, ಜಿಂಕ್, ಸೀಸ). ಚಿನ್ನ-ಬೆಳ್ಳಿ ದುಬಾರಿಯಾದ್ದರಿಂದ ಹೆಚ್ಚಾಗಿ ಮೊದಲ ಮಿಶ್ರಣ ಬಳಸುತ್ತಾರೆ} ಪಂಚಲೋಹದ ವಿಗ್ರಹಗಳು ಅನೇಕ ದಿನ ಬಾಳಿಕೆ ಬರುತ್ತದೆ. ಆದ್ದರಿಂದ ವಿಗ್ರಹಗಳನ್ನು ಹೆಚ್ಚಾಗಿ ಪಂಚಲೋಹದಿಂದ ತಯಾರಿಸುತ್ತಾರೆ] ಮೂರ್ತಿಯನ್ನು ಮಾಡಿಸಿ ಪ್ರತಿಷ್ಠಾಪಿಸಲು ಆಜ್ಞೆ ಇತ್ತರಂತೆ. ಅಂತೆಯೇ ಆಚಾರ್ಯರು ಸ್ಪಂದಿಸಿದರು. ಈಗ ಕೊಲ್ಲೂರಿನಲ್ಲಿ ಇದೆ ಪಂಚಲೋಹದ ದೇವಿಯ ಮೂರ್ತಿಯಿದೆ. ಇಂದಿಗೂ ಶಂಕರಾಚಾರ್ಯರು ನಿರ್ದೇಶಿಸಲ್ಪಟ್ಟಂತೆ ದೇವಸ್ಥಾನದಲ್ಲಿ ಪೂಜಾವಿಧಾನಗಳು ನಡೆಯುತ್ತವೆ.

ಇತರೆ ಮಾಹಿತಿ:
೧) ಉಳಿದುಕೊಳ್ಳುವವರಿಗಾಗಿ ಇಲ್ಲಿ ಹಲವು ಅತಿಥಿ ಗೃಹಗಳಿವೆ. ವಿಶೇಷ ಸೇವೆ ನೀಡಿದವರು ಕೆಲವು ಬಾರಿ ಇಲ್ಲಿ ತಂಗಬೇಕಾಗಿ ಬರಬಹುದು (ಉದಾ: ಚಂಡಿಕಾ ಯಾಗ). ಹತ್ತಿರ ಬೇರಾವ ಊರು (ಕುಂದಾಪುರಕ್ಕೆ ೪೫ ಕಿ.ಮೀ) ಇರದ ಕಾರಣ ಇಲ್ಲಿ ಬಹಳಷ್ಟು ಅತಿಥಿ ಗೃಹಗಳಿವೆ.
೨) ಕೆನರಾ ಹಾಗೂ ಸಿಂಡಿಕೇಟ್ ಬ್ಯಾಂಕ್ ಎ.ಟಿ.ಎಂ ಸೇವೆ ಲಭ್ಯ.
೩) ಬಿ.ಎಸ್.ಎನ್.ಎಲ್ ಹೊರತುಪಡಿಸಿ ಬೇರಾವ ಮೊಬೈಲ್ ಸಂಪರ್ಕ ದೊರೆಯುವುದಿಲ್ಲ.
೪) ಭಕ್ತಾದಿಗಳಿಗೆ ಪ್ರತಿನಿತ್ಯ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ.
೫) ಶುಕ್ರವಾರ, ಮಾರ್ಚ್ ತಿಂಗಳಿನಲ್ಲಿ ನಡೆಯುವ ರಥೋತ್ಸವ, ಸೌರಮಾನ ಯುಗಾದಿ, ಬೇಸಿಗೆ ರಜಾ ದಿನಗಳು ಹಾಗೂ ನವರಾತ್ರಿಯಂದು ಅಪಾರ ಭಕ್ತಾದಿಗಳು ಸೇರುತ್ತಾರೆ.

ಸಂಪರ್ಕ:
೧) ಮಂಗಳೂರು, ಉಡುಪಿ, ಕುಂದಾಪುರಗಳಿಂದ ನೇರ ಬಸ್ ಸೌಲಭ್ಯವಿದೆ.
೨) ಬೆಂಗಳೂರಿನಿಂದ ಬರುವವರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸೌಲಭ್ಯವಿದೆ. ಕಡಿದಾದ ಮಾರ್ಗವಾದ್ದರಿಂದ (ಶಿವಮೊಗ್ಗ ಮಾರ್ಗವಾಗಿ) ಐರಾವತ ಬಸ್ಸುಗಳಿಲ್ಲ.
೩) ಹತ್ತಿರದ ರೈಲ್ವೆ ನಿಲ್ದಾಣ: ಬೈಂದೂರು (ಸುಮಾರು ೩೦ ಕಿ.ಮೀ). ಇತ್ತೀಚಿಗೆ ಈ ನಿಲ್ದಾಣ ಕೊಲ್ಲೂರು ಮೂಕಾಂಬಿಕ ರೋಡ್ ಎಂದು ಮರುನಾಮಕರಣಗೊಂಡಿದೆ. ಇಲ್ಲಿಂದ ಸಹ ಬಸ್ ಸೌಲಭ್ಯವಿದೆ.
೪) ಹತ್ತಿರದ ವಿಮಾನ ನಿಲ್ದಾಣ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಸುಮಾರು ೧೩೦ ಕಿ.ಮೀ). ಶಿವಮೊಗ್ಗ ವಿಮಾನ ನಿಲ್ದಾಣವಾದಾಗ ಅದೇ ಹತ್ತಿರವಾಗಬಹುದು.

ಹತ್ತಿರದ ಪ್ರೇಕ್ಷಣೀಯ ಸ್ಥಳಗಳು: ಹಟ್ಟಿಯಂಗಡಿ, ಮರವಂತೆ ಸಮುದ್ರ ತೀರ, ಮುರ್ಡೇಶ್ವರ, ಇಡಗುಂಜಿ, ಕೊಡಚಾದ್ರಿ ಬೆಟ್ಟ.

ಸೂಚನೆ: ಕೊಡಚಾದ್ರಿ ಬೆಟ್ಟದಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂದರೆ, ಸಂಪದಿಗರಾದ ಹಾಗೂ ಕೊಡಚಾದ್ರಿಯ ಅನುಭವಿ ಚಾರಣಿಗರಾದ ಅನಂತೇಶ ನೆಂಪು ಅವರನ್ನು ಸಂಪರ್ಕಿಸಿ
------------------------------------------------------------------------------------------------------------------------------------------------------
ಪೌರಾಣಿಕ ಹಾಗೂ ಕೊಡಚಾದ್ರಿ ಬೆಟ್ಟದ ಮಾಹಿತಿಗಳು: ಕ್ಷೇತ್ರ ಪರಿಚಯ ಪುಸ್ತಕ
ಚಿತ್ರ ಕೃಪೆ: ನಂದಕುಮಾರ‍