ಎನ್ ಡಿ ಏ ಬೆಂಬಲಿಗರಿಗೆ ಚುನಾವಣೆ ಸಾದರ ಪಡಿಸಿದ ರಿಯಾಲಿಟಿ ಶೊ

ಎನ್ ಡಿ ಏ ಬೆಂಬಲಿಗರಿಗೆ ಚುನಾವಣೆ ಸಾದರ ಪಡಿಸಿದ ರಿಯಾಲಿಟಿ ಶೊ

ಮೊನ್ನೆ ಚುನಾವಣೆಯಲ್ಲಿ ಯೂ ಪಿ ಏ ಅನಿರೀಕ್ಷಿತ ಜಯಭೇರಿ ಹೊಡೆದ್ದದ್ದು ಎನ್ ಡಿ ಏ ಹಿಂಬಾಲಕರಿಗೆ ಸಹಿಸಲಾಗದ ನಿರಾಶೆ ಮತ್ತು ಕಳವಳ ಅಪೇಕ್ಷಿತ ರೀತಿಯಲ್ಲೆ ಉಂಟಾಗಿದೆ. ನನ್ನ ಸ್ನೇಹಿತರ ಗುಂಪಿನಿಂದ ಕೇಳಿಬಂದದ್ದರ ಸಾರಂಶ ಇದು. "ಅಂತೂ ನಮ್ಮ ದೇಶದ ಜನರಿಗೆ ಯಾವಾಗ್ ಬುದ್ದಿ ಬರುತ್ತೋ ಆ ದೇವ್ರಿಗೆ ಗೊತ್ತು. ಅರವತ್ತು ವರ್ಷಗಳ ಕಾಲ ದೇಶವನ್ನು ಹಾಳು ಮಾಡಿದ ಕಾಂಗ್ರೆಸ್ಸಿಗೆ ಮತ್ತೆ ಮತ ನೀಡಿದ್ದಾರೆ. ಎಲ್ಲಿ ವರೆಗೆ ನಮ್ಮ ’ಅನಕ್ಷರಸ್ತ ಮತ್ತು ಅವಿವೇಕಿ’ ಮತದಾರರು ತಮ್ಮ ಮತವನ್ನು ಈ ರೀತಿ ಮಾರಿಕೊಳ್ಳುತ್ತಾರೊ ಅಲ್ಲಿವರೆಗೂ ನಮ್ಮ ದೇಶ ಉದ್ದಾರ ಆಗಲ್ಲ. ಇನ್ನು ಟೆರರಿಸ್ಟ್ ಅಟ್ಯಾಕ್ ಒಂದರ ಮೇಲೆ ಒಂದರಂತೆ ಶುರುವಾಗತ್ತೆ ನೋಡ್ತಾ ಇರಿ". ಈ ಮಾತು ಕೇಳಿದಾಗ ನನಗನ್ನಿಸಿದ್ದು ಇದು.

ಇಂಗ್ಲಿಶ್ ಭಾಷೆಯಲ್ಲಿ ಬಳಸುವ ಒಂದು ಪದ "ಕಲೆಕ್ಟೀವ್ ವಿಸ್ಡ್ಂ". ಅಂದರೆ ಹೆಚ್ಚು ಜನರು ಸೇರಿ ತೆಗೆದುಕೊಂಡ ನಿರ್ಧಾರ ಹೆಚ್ಚು ಸೂಕ್ತವೂ ಮತ್ತು ಪಕ್ವವೂ ಆಗಿರುತ್ತದೆ. ಈ ಚುನಾವಣೆಯಲ್ಲಿ ಭಾರತದಾದ್ಯಂತ ಸರಾಸರಿ ಹೆಚ್ಚಿನ ಮತದಾರರು ನೀಡಿರುವ ನಿರ್ಧಾರ ಇದು. ’ಇಂದಿನ ಸಂದರ್ಭದಲ್ಲಿ ತಮ್ಮ ಪ್ರತಿನಿಧಿಯಾಗಿ ಲೋಕಸಭೆಗೆ ಹೋಗಲು ಹೆಚ್ಚು ಸಮರ್ಥರಾದವರು ಯೂ ಪಿ ಯೆ’. ಎನ್ ಡಿ ಏ ಬೆಂಬಲಿಗರ ಕಣ್ಣಿಗೆ ಕಾಣುವ ದೇಶದ ಸಮಸ್ಯೆಗಳು, ಭಾರತದ ಬಹು ಪಾಲು ಜನರ ಕಣ್ಣಿನಲ್ಲಿ ಪ್ರಧಾನವಾದ ಸಮಸ್ಯೆಗಳಾಗಿರಲ್ಲಿಲ್ಲ.
ಆದ್ದರಿಂದ ಅವರು ಎನ್ ಡಿ ಎ ಕಡೆ ಆಕರ್ಷಿತರಾಗಲಿಲ್ಲ. ಪ್ರಜಾಪ್ರಭುತ್ವದ ಮೂಲ ಸಿದ್ಧಾಂತವೇ ಇದಲ್ಲವೆ? ಬಹುಮತಕ್ಕೆ ಆದ್ಯತೆ.

ಎನ್ ಡಿ ಎ ಬೆಂಬಲಿಗರಿಗೆ ಭಾರತದ ಪ್ರೌಢ ಮತದಾರನ ಮತ ಬೇಕಿದಲ್ಲಿ ಅವರ ಸಮಸ್ಯೆಗಳನ್ನು, ಆಸೆ-ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು, ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿ, ಗೆದ್ದು ಬಂದಲ್ಲಿ ಮಾತಿಗೆ ತಪ್ಪದೆ ಪಾಲಿಸಬೇಕು. ಎನ್ ಡಿ ಎ ಮುಖ ಪಕ್ಷ ಭಾಜಪ ಮಾಡಿದ್ದು ಏನೆಂದರೆ ಇಡಿ ಭರತದ ಹೆಚ್ಚಿನ ಜನಸಮೂಹದ ಹಿತದ ಬಗ್ಗೆ ಯೋಚಿಸುವ ಬದಲು ಚುನಾವಣೆಯಲ್ಲಿ ಜಯಗಳಿಸಲು ಹಿಂದುಗಳನ್ನೆಲ್ಲ ಒಂದೆಡೆ ಸೇರಿಸಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ತಂತ್ರ ಬಳಸಿದರು. ಹಿಂದುಗಳ ಅಭಿಮಾನ ಮತ್ತು ರಾಮಮಂದಿರ - ಇಂತಹ ಸಮಸ್ಯೆಗಳು ದೇಶದ ಬಹುಜನರ ಸಮಸ್ಯೆಯಾಗದೆ ಹಿಂದುಗಳನ್ನು ಒಂದೆಡೆಗೆ ಆಕರ್ಷಿಸಲು ಬಳಸಿದ ತಂತ್ರವೆಂದು ನಾನು ಹೇಳಬೇಕಿಲ್ಲ. ಅಷ್ಟೇಕೆ ಅವರು ಅಧಿಕಾರಕ್ಕೆ ಬಂದಾಗ ಈ ವಿಷಯಗಳನ್ನು ಮೂಲೆಗೆ ನೂಕಿದ್ದು ಇದಕ್ಕೆ ಸಾಕ್ಷಿಯಾಗಿವೆ. ಈ ಮಧ್ಯೆ ಆಗಾಗ ನಡೆಯುತ್ತಿದ್ದ ಆತಂಕವಾದಿಗಳ ಹೇಯ ಕೃತ್ಯಗಳು ಭಾಜಪಕ್ಕೆ ಇನ್ನೊಂದು ಅಸ್ತ್ರವನ್ನು ನೀಡಿತು. ’ದೇಶದ ಭದ್ರತೆಯನ್ನು ಕಾಪಾಡಲು ಕಾಂಗ್ರೆಸ್ ಪಕ್ಷ ಅಶಕ್ತವಾದುದು ಅಥವ ಮುಸ್ಲಿಮರನ್ನು ಓಲೈಸುವ ಕಾಂಗ್ರೆಸ್ ವೋಟ್ ಬ್ಯಾಂಕ್ ಪಾಲಿಸಿಯಿಂದಾಗಿ ದೇಶದ್ರೋಹಿಗಳಾಗಿದ್ದರು ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ. ನಾವಾದರೆ ದೇಶದ್ರೋಹಿ ಎಂದು ಅನುಮಾನಿಸಲು ಒಂದು ಸಣ್ಣ ಸಾಕ್ಷಿ ಸಿಕ್ಕರೂ ಸಾಕು ಅವರನ್ನು ಒದ್ದು ಜೈಲಿಗೆ ಹಾಕಲು ಮುಲಾಜು ನೋಡುವುದಿಲ್ಲ. ನಮಗೆ ಮತ ಹಾಕಿ.’ ಮುಂಬೈ ಧಾಳಿ ಆದಮೇಲಂತೂ ನಮಗೆ ಓಟು ಹಾಕುವುದರಲ್ಲಿ ಸಂದೇಹವೇ ಇಲ್ಲ ಎಂದುಕೊಂಡು ಭಾಜಪ ಚುನಾವಣೆಗೆ ಹೋದರು.

ಆದರೆ ಚುನಾವಣೆಯ ಪಲಿತಾಂಶ ತೋರಿದ ವಾಸ್ತವಿಕತೆಯೇ ಬೇರೆಯಾಗಿತ್ತು. ಇದನ್ನು ಭಾಜಪ ಅರ್ಥಮಾಡಿಕೊಂಡರೆ ಮುಂದಿನ ಚುನಾವಣೆಗಳಾಲ್ಲಿ ಮತದಾರಳ/ನ ಮನ ಓಲೈಸುವುದರಲ್ಲಿ ಯಶಸ್ವಿ ಆಗಬಹುದು. ಅಥವ ’ಈ ಮಧ್ಯ ಪಂತದ ಸಹವಾಸವೇ ಬೇಡ’ ಎನ್ನುತ್ತ ಭಾಜಪ ಸಂಪೂರ್ಣವಾಗಿ ಹಿಂದುತ್ವವಾದ ಕಡೆಗೆ ವಾಲಿಬಿಟ್ಟರೆ ಅದೊಂದು ದೊಡ್ಡ ದುರಂತ. ಕಾದು ನೋಡಬೇಕು.

ಆದರೆ ಭಾರತೀಯ ಮತದಾರರು ದೂರದೂರ ಪ್ರದೇಶಗಳಲ್ಲಿದ್ದರೂ, ಬೇರೆ ಬೇರೆ ಸಮಯಗಳಲ್ಲಿ ಮತ ಚಲಾಯಿಸಿದರೂ ಸಮಾನ ಮನಸ್ಕರಾಗಿ ಮತ ಚಲಾಯಿಸಿರುವುದು ವಿಸ್ಮಯಕಾರಿಯಾದುದು.

ಮತದಾರ ಪ್ರಭುವಿಗೆ ಅಭಿನಂದನೆಗಳು.

Rating
No votes yet

Comments