ಆಕಾಶವಾಣಿ ನಿರ್ದೇಶಕರಾದ ಸಂಗೀತಕಲಾನಿಧಿಯೋರ್ವರ ಅನುಭವ

ಆಕಾಶವಾಣಿ ನಿರ್ದೇಶಕರಾದ ಸಂಗೀತಕಲಾನಿಧಿಯೋರ್ವರ ಅನುಭವ

ಬರಹ

ಒಂದೆರಡು ತಿಂಗಳ ಹಿಂದೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಹಿಂಬಾಗದಲ್ಲಿ ಒಂದು ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆದಿತ್ತು. ಅಲ್ಲಿಗೆ ಹೋಗಿದ್ದಾಗ ತುಂಬಾ ಒಳ್ಳೆಯ ಪುಸ್ತಕಗಳು ಕಾಣುತ್ತಿರಲಿಲ್ಲ. ಬೇಸರದಿಂದಲೇ ಹಿಂದಿರುಗುತ್ತಿದ್ದಾಗ ‘ಸಂಗೀತ ಸಮಯ’ ಎಂದೊಂದು ಪುಸ್ತಕ ಕಣ್ಣಿಗೆ ಬಿತ್ತು. ಸಂಗೀತ ಎಂದು ನೋಡಿದಕೂಡಲೇ ಅದನ್ನು ಒಮ್ಮೆ ತಿರುವಿ ಹಾಕಿದೆ. ಅದನ್ನು ನೋಡಿ ನನ್ನವರು, “ಸಂಗೀತಕ್ಕೆ ಸಂಬಂಧಪಟ್ಟ ಎಷ್ಟೋ ಪುಸ್ತಕಗಳು ನಿನ್ನ ಬಳಿ ಇದೆಯಲ್ಲ. ಸಾಲದೇ?” ಎಂದು ಕೇಳಿದರು. ಅವರ ಮಾತಿನ ಕಡೆ ನನಗೆ ಗಮನವೇ ಇಲ್ಲ ಎನ್ನುವಷ್ಟು ಆ ಪುಸ್ತಕ ನನ್ನ ಗಮನ ಸೆಳೆದಿತ್ತು. ನನಗೆ ನಿಧಿ ಸಿಕ್ಕಷ್ಟು ಸಂತೋಷ ಆಗಿತ್ತು. ಅಪರೂಪದ ಪುಸ್ತಕ ಎನ್ನಿಸಿ ಅದನ್ನು ಕೊಂಡುಕೊಂಡೆ. ಅದನ್ನು ಬರೆದವರು ವಾಗ್ಗೇಯಕಾರರಾದ ಶ್ರೀ ವಾಸುದೇವಾಚಾರ್ಯರ ಮೊಮ್ಮಗ ಸಂಗೀತ ಕಲಾರತ್ನ ಎಸ್.ಕೃಷ್ಣಮೂರ್ತಿಯವರು. ಅದರಲ್ಲಿ 20ನೇ ಶತಮಾನದ ಅನೇಕ ಮಹಾನ್ ಸಂಗೀತ ಮೇದಾವಿಗಳ ಜೀವನ ಶೈಲಿ ಮತ್ತು ಸಾಧನೆಗಳನ್ನು ಸರಳ ಸುಂದರ ಭಾಷೆಯಲ್ಲಿ ವಿವರಿಸಿದ್ದಾರೆ.

ಇದರೊಂದಿಗೆ ಅವರ 33 ವರ್ಷಗಳ ಕಾಲದ ಆಕಾಶವಾಣಿಯ ಸೇವೆಯಲ್ಲಿ ಅವರ ಅನುಭವಕ್ಕೆ ಬಂದ ಕೆಲವು ರಂಜನೀಯ ಘಟನೆಗಳ ಬಗ್ಗೆಯೂ ವಿವರಿಸಿದ್ದಾರೆ. ಅವರ ಅನುಭವವೊಂದನ್ನು ಇಲ್ಲಿ ಸ್ಮರಿಸಿದ್ದೇನೆ.

ಮೈಸೂರು ಆಕಾಶವಾಣಿಯಿಂದ ಟಿ. ನಾಗಮ್ಮನವರ ಗಾಯನ ಪ್ರಸಾರ ಪ್ರಾರಂಭವಾಗಬೇಕಿತ್ತು. ಡ್ಯೂಟಿಗೆ ಹಾಜರಾಗ ಬೇಕಾಗಿದ್ದ ಅನೌನ್ಸರ್ ಬಂದಿರಲಿಲ್ಲ. ಕಾರ್ಯಕ್ರಮ ನಿರ್ವಾಹಕರೇ ಅನೌನ್ಸ್ ಮಾಡಬೇಕಾಗಿತ್ತು. ಅವರಿಗದು ಅಭ್ಯಾಸವಿಲ್ಲದ ಕೆಲಸ. ಸಾಲದುದಕ್ಕೆ ಅವರಿಗೂ ಸಂಗೀತಕ್ಕೂ ಗಾವುದ ಗಾವುದ ದೂರ. ಗತ್ಯಂತರವಿಲ್ಲದೇ ಅಖಾಡಕ್ಕೆ ಇಳಿದಿದ್ದರು. ಕಲಾವಿದರಿಂದ ರಚನೆಗಳ ವಿವರಗಳನ್ನು ಪಡೆದುಕೊಂಡರು. ಗಂಭೀರವಾದ ಧ್ವನಿಯಲ್ಲಿ ಅನೌನ್ಸ್ ಮಾಡಲು ಪ್ರಾರಂಭಿಸಿದರು.

“ಆಕಾಶವಾಣಿ, ಮೈಸೂರು. ಈಗ ಶ್ರೀಮತಿ ಟಿ. ನಾಗಮ್ಮನವರಿಂದ ಗಾಯನ. ಪಕ್ಕವಾದ್ಯ: ಎಂ.ಎಸ್. ಸುಭ್ರಹ್ಮಣ್ಯಂ ಅವರಿಂದ ಪಿಟೀಲು, ಎಮ್.ಎಸ್. ರಾಮಯ್ಯರವರಿಂದ ಮೃದಂಗ. ಪ್ರಾರಂಭಕ್ಕೆ ‘ನಿನ್ನುಕೋರಿ’ ಎಂಬ ಕೀರ್ತನೆ, ಮೋಹನ ರಾಗ, ಆದಿತಾಳ.”

ಇದನ್ನು ಕೇಳಿಸಿಕೊಂಡ ರಾಮಯ್ಯನವರು ತಕ್ಷಣವೇ ಅನೌನ್ಸರ್ ಮೇಜಿನ ಬಳಿಗೆ ಬಂದು ಅವರ ಕಿವಿಯಲ್ಲಿ, “ಇದು ಕೀರ್ತನೆ ಅಲ್ಲ! ವರ್ಣ, ವರ್ಣ! ಕಡೆಯಲ್ಲಿ ತಿದ್ದುಪಡಿ ಹೇಳಿಬಿಡಿ” ಎಂದು ಪಿಸುಗುಟ್ಟಿದರು.

ವರ್ಣ ಮುಗಿಯಿತು. ಮುಂದಿನ ಅನೌನ್ಸ್ ಮೆಂಟಿನಲ್ಲಿ ತಿದ್ದುಪಡಿಯನ್ನು ಸೇರಿಸಿಕೊಂಡಿದ್ದರ ವೈಖರಿ ಹೀಗಿತ್ತು.
“ಇನ್ನು ಮುಂದೆ ತ್ಯಾಗರಾಜರ ‘ತೆಲಿಸಿರಾಮ ಚಿಂತನತೋ’ ಎಂಬ ವರ್ಣ, ಪೂರ್ಣ ಚಂದ್ರಿಕೆ ರಾಗ, ಆದಿತಾಳ”
ರಾಮಯ್ಯನವರು ಹಣೆ ಹಣೆ ಚೆಚ್ಚಿಕೊಳ್ಳುತ್ತಾ ಮತ್ತೆ ಅನೌನ್ಸರ್ ಬಳಿ ಬಂದರು. ಆತನಿಗೆ ಹೇಳಿ ಏನೂ ಪ್ರಯೋಜನವಿಲ್ಲ ಎಂದುಕೊಂಡು ತಾವೇ ಛಾನಲ್ ಓಪನ್ ಮಾಡಿಕೊಂಡು ಅನೌನ್ಸ್ ಮೆಂಟ್ ಕೊಟ್ಟರು.

“ಕ್ಷಮಿಸಬೇಕು. ಈಗ ತ್ಯಾಗರಾಜ ವಿರಚಿತ ‘ತೆಲಿಸಿರಾಮ ಚಿಂತನತೋ’ ಎಂಬ ವರ್ಣ, ಪೂರ್ಣಚಂದ್ರಿಕೆ ರಾಗ, ಆದಿತಾಳ” ಎಂದರು.

ಕಲಾವಿದರು ಮುಖಮುಖ ನೋಡಿಕೊಂಡು ಕಿಸಿಕಿಸಿ ನಕ್ಕಾಗ, ತಾವು ಮಾಡಿದ ಆಭಾಸದ ಅರಿವಾಯಿತು ರಾಮಯ್ಯನವರಿಗೆ! ಮುಖದ ಮೇಲಿನ ಬೆವರು ಸಾಲನ್ನು ಒರೆಸಿಕೊಂಡರು
.
“ನಿಮ್ಮ ಆಕಾಶವಾಣಿ ಅನೌನ್ಸ್ ಮೆಂಟನ್ನು ಕೇಳಿ ತಾನು ರಚಿಸಿದ್ದು ವರ್ಣವೋ ಕೀರ್ತನೆಯೋ ಎಂದು ತ್ಯಾಗರಾಜರಿಗೂ ಅನುಮಾನ ಬಂದಿರಬೇಕು.” ಎಂದು ಎಸ್. ಕೃಷ್ಣಮೂರ್ತಿಯವರ ಮಿತ್ರರೊಬ್ಬರು ನಂತರ ಅವರನ್ನು ಪರಿಹಾಸ್ಯ ಮಾಡಿದರಂತೆ.

ಎಸ್. ಕೃಷ್ಣಮೂರ್ತಿಯವರು ಇನ್ನೂ ಹಲವಾರು ರಂಜನೀಯ ಅನುಭವಗಳನ್ನು ತಮ್ಮ ಈ ಹೊತ್ತಿಗೆಯಲ್ಲಿ ವರ್ಣಿಸಿದ್ದಾರೆ.