ಆ ಕಾಲ ಒಂದಿತ್ತು... ಬಾಲ್ಯವಾಗಿತ್ತು

ಆ ಕಾಲ ಒಂದಿತ್ತು... ಬಾಲ್ಯವಾಗಿತ್ತು

ನಾಳೆಯಿಂದ ಶಾಲೆ ಪ್ರಾರಂಭವಾಗುತ್ತಿದೆ ಎಂದರೆ ಸಾಕು ಅಜ್ಜಿ ಮನೆಯಲ್ಲಿರುವ ನಮಗೆ ಏನೋ ಒಂದು ತರಥ ಬೇಸರ.... ಉಂಡು ಆಟವಾಡುತ್ತಾ, ಜಮೀನುಗಳಿಗೆ ತೆರಳುವುದು, ದನ ಕಾಯುವವರೊಂದಿಗೆ ಕಾಡಿನ ಹಣ್ಣುಗಳನ್ನು ತಿನ್ನುತ್ತಾ ದಿನಕ್ಕೊಂದು ಪ್ರಪಂಚದಲ್ಲಿ ಕಾಲ ಕಳೆಯುತ್ತಿರುವವರಿಗೆ ರಜಾ ದಿನಗಳು ಮುಗಿಯುವುದೇ ಬೇಡ ಎನ್ನುವಂತಹ ಮನೋಭಾವ ಏನು ಮಾಡುವುದು ಆದರೂ ಆ ದಿನ ಬಂದೇ ಬಿಡುತ್ತಿತ್ತು. ಆದರೂ ಒಂದು ದಿನ ತಡವಾಗಿಯೇ ಹೋಗುತ್ತಿದ್ದ ನನಗೆ ಬೆಂಗಳೂರಿನ ಕಾಂಕ್ರಿಟ್ ಕಾಡಿನಲ್ಲೂ ಅಜ್ಜಿಯ ಮನೆ ನೆನಪು ಕಾಡುತ್ತಿದೆ.

ಗುರುವಾರ ನಾನು, ನನ್ನ ಸಹೋದ್ಯೋಗಿ ಮಲ್ಲಿಕಾರ್ಜುನ್ ಬೆಂಗಳೂರು ಪಟ್ಟಣದಲ್ಲಿರುವ ಪ್ರಮುಖ ಪುಸ್ತಕ ಅಂಗಡಿಗಳಲ್ಲಿ ಪುಸ್ತಕ ತೆಗೆದುಕೊಳ್ಳುತ್ತಿರುವ ಹುಡುಗರ ಮಧ್ಯೆ ಸಾಗುತ್ತಾ
ಮಲ್ಲೇಶ್ವರಂ ರೈಲ್ವೆ ಸ್ಟೇಷನ್ ಬಳಿ ಹೋಗುವಾಗ ನೇರಳೆ ಮರಗಳು ಕಾಣಿಸುತ್ತಿದ್ದಂತೆ ನೆನಪಿನ ಅಲೆಗಳು ಪ್ರಾವಾಹೋಪಾದಿಯಲ್ಲಿ ಮುತ್ತಿಕೊಳ್ಳುತ್ತಿದ್ದಾಗ ತಟ್ಟಂತ ನೆನಪಾದ ಒಂದು ಸಂಗತಿ... ನೇರವಾಗಿ ಹೇಳುತ್ತೇನೆ ಕೇಳ್ರಿ...

ನಾನಾಗ 4ನೇ ತರಗತಿ ಇರಬಹುದು ಅಜ್ಜಿ ಮನೆಗೆ ಹೋದಾಗ ನನಗೆ ಹೆಚ್ಚು ಖುಷಿ ಕೊಡುತ್ತಿದ್ದ ಸಂಗತಿ ಎಂದರೆ ದನ ಕಾಯಲು (ಜಾನುವಾರುಗಳಿಗೆ ಹುಲ್ಲು ಮೇಯಿಸಲು ಕರೆದೊಯ್ಯುವುದು) ಹೋಗುವುದು. ಇದಕ್ಕೆ ಕಾರಣವೂ ವಿಶೇಷವಾದದ್ದೇ 'ಮಾತು ಬಾರದ ಕನಿಷ್ಠ 25-30 ಹಸುಗಳನ್ನು ಯಾವ ರೀತಿ ಕರೆದುಕೊಂಡು ಹೋಗಿ ವಾಪಸ್ಸು ಕರೆದುಕೊಂಡು ಬರುತ್ತಾರೆ ಎನ್ನುವುದೇ ನನಗೊಂದು ಯಕ್ಷಪ್ರಶ್ನೆ.....!

ಹಸು ಕಾಯುವ ಹುಡುಗರು ತಮ್ಮ ಭಾಷೆಯಲ್ಲಿ ಏನನ್ನೋ ಹೇಳುತ್ತಾ ಅವುಗಳನ್ನು ಕರೆದುಕೊಂಡು ಹೋಗುತ್ತಿದ್ದರೆ ಅವರ ಬಳಿ ಇರುವ ಕೋಲನ್ನು ನಾನು ಹಿಡಿದುಕೊಂಡು ನನ್ನದೇನೋ ಬಡ ಬಡಾಯಿಸುವ ಮಾತಿಗೆ ಅವುಗಳು ಹೋಗುತ್ತಿವೆ ಎನ್ನುವ ಗರ್ವದಿಂದ ಮುಂದೆ ಮುಂದೆ ಹೋಗುತ್ತಿರುವುದು ನೆನಪಿಸಿಕೊಂಡರೆ ಈಗಲೂ ಎಂತಹ ಬಾಲ್ಯವಪ್ಪಾ ಅದು ಸ್ವಚ್ಚಂದವಾದ ಬದುಕಿನದ್ದು ಎನಿಸುತ್ತಿದೆ.

ವಿಷಯ ಬೆಂಗಳೂರು ಬಿಟ್ಟು ಹೊಗ ಬಾರದಲ್ವ ಛೇ...
ಇವತ್ತು ಹತ್ತು ರೂಪಾಯಿ ಕೊಟ್ಟು ನೇರಳೆ ಹಣ್ಣನ್ನು ಕೊಂಡಾಗ ಕಣ್ರಿ ಇದೆಲ್ಲಾ ನೆನಪಿಗೆ ಬಂದಿದ್ದು. ಎರಡು ಮೂರು ಹಣ್ಣು ತಿಂದಿಲ್ಲ ಅಷ್ಟರಲ್ಲೇ ಅಲ್ಲೊಂದು ನೇರಳೆ ಮರ ಕಾಣಬೇಕೆ ಅದೂ ಮರದ ತುಂಬಾ ಹಣ್ಣುಗಳು ಯಾಕಾದರೂ ಹಣ ಕೊಟ್ಟೆವೂ ಕಿತ್ತು ತಿನ್ನಬಹುದಿತ್ತಲ್ಲಾ ಎಂದು ಹಣ್ಣನ್ನೆ ನೋಡುತ್ತಾ ಬಾಲ್ಯದ ನೆನಪುಗಳು ಮರುಕಳಿಸಬೇಕೆ...?

ವಿಷಯ ಇಷ್ಟೇ ಅಲ್ಲ....
ಕಾಡಲ್ಲಿ ತಿಂದ ಕವಳೆ ಹಣ್ಣು, ಮಾವಿನ ಹಣ್ಣನಿನ ಸವಿ ನೆನಪು ಮಾಡಿಕೊಳ್ಳುತ್ತಾ ನಾನು ಮಲ್ಲಿಕಾರ್ಜುನ್ ನೇರಳೆ ಮರ ಹತ್ತಿ ಹಣ್ಣನ್ನು ಕೀಳಲೆ ಬೇಕು ಅಂದುಕೊಂಡಿದ್ದೇ ತಡ ಮತ್ತೆ ದೊಡ್ಡತನ ಅಡ್ಡಬಂತು ಆದರೂ ನಮಗೆ ಇದು ಹೊಸ ಪ್ರದೇಶ ಇಲ್ಲಿ ನಮಗ್ಯಾರು ಗೊತ್ತಿಲ್ಲ ಜನ ಬೇರೆ ಕಡಿಮೆ ಇದ್ದಾರೆ ಎನ್ನುವ ಆಸೆ ಮನಸ್ಸು ಬೇರೆ.

ಮರ ಹತ್ತಿದೆವೋ ಇಲ್ಲವೋ ಅಷ್ಟೇ ಹೇಳಬೇಕಾ.....
ನಿಜವಾಗಿಯೂ ಮರ ಹತ್ತಿ ನೇರಳೆ ಹಣ್ಣು ಕಿತ್ತು ತಿಂದೆವು. ಇವರೇನು ಮನುಷ್ಯರಾ ಇಲ್ಲಾ ದನ ಕಾಯುವವರಾ ಎಂದು ಕೊಳ್ಳುತ್ತಾರೆ ಎನ್ನುವ ಕಳವಳ ಇದ್ದರೂ ಅದನ್ನು ಲೆಕ್ಕಿಸದೇ ಈ ಕೆಲಸ ಮಾಡಿದ್ದೇವೆ. ಇವರೆಂತಾ ದನ ಕಾಯುವವರೋ ಅಂತಿರಾ ನೀವು.... ಸುಮ್ಮನೆ ಅಲ್ಲ ಮಾತು ಬರದ ಜಾನುವಾರುಗಳನ್ನು ಬೇರೆಯವರ ಗದ್ದೆಗೆ ಹೋಗದಂತೆ ನೋಡಿಕೊಂಡು ಮೇಯಿಸಿಕೊಂಡು ಬರುವುದೆಂದರೆ.

ನಿಮಗೇನು ಮರ ಹತ್ತಿಸಿ ಮಾತ್ರ ಗೊತ್ತಾ ಅಥವಾ ಮರ ಹತ್ತಿರುವ ಅನುಭವ ಇದೆಯಾ.....

Rating
No votes yet

Comments