ಸವಾರೀನೋ ಪಯಣವೋ (ಭಾಗ-೨)

ಸವಾರೀನೋ ಪಯಣವೋ (ಭಾಗ-೨)

ಪಯಣ ಅಂದ್ರೆ ಇದೇನಾ !

ನೆಲಮಂಗಲ ತನಕ ಬಹಳ ಕೇರ್‌ಫುಲ್ ಆಗಿ ಬೈಕ್ ಓಡಿಸ್ತಾ ಇದ್ದೆ ಅಂತ ಹೇಳಿದ್ರೆ ತಪ್ಪಾಗತ್ತೋ ಏನೋ? ಆದ್ರೂ ಬೈಕ್‌ನ ಸ್ಪೀಡೋ ಮೀಟರ್ ೪೦ ಕಿ.ಮೀ. ಮೀರ್‍ತಾ ಇರ್‍ಲಿಲ್ಲ. ಇದು ವಾಸ್ತವ. ಎಷ್ಟಂದ್ರೂ ಟ್ರಾಫಿಕ್ ಅಲ್ವೇ ? ಇನ್ನೇನು ನೆಲಮಂಗಲ ದಾಟಿತು ಅಂತ ಹೇಳಿದ್ನಲ್ಲಾ. ಹೋಗ್ತಾ ಹೋಗ್ತಾ ನೆಲಮಂಗಲ ಟೋಲ್ ಗೇಟ್ ದಾಟಿದ್ದಾಗಿದೆ. ಅಲ್ಲೊಂದಿಷ್ಟು ಲಾರಿಗಳು ನಿಂತಿದ್ದವು. ಇನ್ನು ಮುಂದಕ್ಕೆ ಹೋಗ್ತಾ ಇದ್ದಂಗೆ ರಸ್ತೆ ಯಾಕೋ ಹಿಂದಕ್ಕೆ ಓಡ್ತಾ ಇರೋ ಹಂಗೆ ಭಾಸವಾಗ್ತಾ ಇತ್ತು. ಅಲ್ಲೊಂದು ಇಲ್ಲೊಂದು ಲಾರಿಗಳು, ಕಾರುಗಳು ಆಗಾಗಾ ನನ್ನ ಬೈಕನ್ನು ಹಿಂದಕ್ಕಿಕ್ಕಿ ಹೋಗ್ತಾ ಇದ್ದವು. ಮನಸ್ಸು ಕೂಡಾ ವಿಹರಿಸೋಕೆ ಪ್ರಾರಂಭಿಸಿತ್ತು.

ನೆಲಮಂಗಲ ತನಕ ಬೈಕ್ ಓಡ್ಸಿದಾಗ ಸವಾರಿ ಅಂತ ಅನಿಸ್ತಾ ಇತ್ತು. ಇಲ್ಲಿಂದ ಮುಂದಿನ ರಸ್ತೆ ನನಗೆ ನೀಡಿದ ಅನುಭವ ಪಯಣದ್ದು...! ಬೈಕಲ್ಲಿ ಇದ್ದಿದ್ದು ನಾನೊಬ್ನೇ ! ಈ ರೀತಿ ಒಬ್ನೇ ಬೆಂಗಳೂರಿನ ಚಿತ್ರದುರ್ಗಕ್ಕೆ ಬೈಕ್‌ನಲ್ಲಿ ಹೋಗೋದು ನನಗೆ ಹೊಸತೇನಲ್ಲ. ಮೂರ್‍ನಾಲ್ಕು ಬಾರಿ ಹೋಗಿದ್ದೆ. ಆಗೆಲ್ಲಾ ಚಿತ್ರದುರ್ಗದ ಗೆಳೆಯರು ನಂಗೆ ಬೈದಿದ್ರು. ನಿಂಗೇನು ಹುಚ್ಚೇ ! ಬೇಕಾದ್ರೆ ನಾವೇ ಬೈಕ್ ಕೊಡ್ತೇವೆ. ಹೈವೇ ಸಹವಾಸ ಬೇಡ ಕಣೋ ಅಂತ.
ನಿಜ ಬೈಕ್ ಓಡಿಸ್ತಾ ಓಡಿಸ್ತಾ ಜೀವನ ಅಂದ್ರೆ ಇಷ್ಟೇ ಅಲ್ವಾ ! ಅಂತ ಅನಿಸಿಬಿಟ್ಟಿತ್ತು. ಜೀವನ ಪಯಣದಲ್ಲಿ ನಾವು ಎಷ್ಟೊಂದು ಜನರನ್ನು ಭೇಟಿ ಮಾಡ್ತೇವೆ. ಪರಿಚಯ ಕೂಡಾ ಆಗತ್ತೆ. ಎಷ್ಟೊಂದ್ ಜನ ಸ್ನೇಹಿತರೂ ಆಗ್ತಾರೆ. ಹಾಗೇ ಅಷ್ಟೇ ವೇಗವಾಗಿ ಕಳೆದೂ ಹೋಗ್ತಾರೆ. ಇವತ್ತಿದ್ದವರು ನಾಳೆ ಇರ್‍ತಾರೆ ಅನ್ನೋ ಗ್ಯಾರೆಂಟಿ ಕೂಡಾ ಇಲ್ಲ. ಅದರಲ್ಲೂ ನ್ಯಾಷನಲ್ ಹೈವೇಯಂತೂ ಜೀವದ ಬೆಲೆ ಏನು? ಎಂಬುದನ್ನು ಸಾರಿ ಸಾರಿ ಹೇಳತ್ತೆ! ರಸ್ತೆ ಹಿಂದಕ್ಕೆ ಹೋಗ್ತಾ ಇರೋದನ್ನು ನೋಡ್ತಾ ನೋಡ್ತಾ ಮನಸ್ಸು ಕೂಡಾ ಹಿಂದಕ್ಕೋಡಿತು.

ಫ್ಲಾಶ್ ಬ್ಯಾಕ್

ಯಸ್! ಎರಡೂವರೆ ತಿಂಗಳ ಹಿಂದೆ ಇದೇ ದಾರಿಯಲ್ಲಿ ಬಂದಿದ್ನಲ್ಲಾ. ಆಗ ನೆಲಮಂಗಲ ಜಕ್ಷಂನ್ ಇದೆಯಲ್ಲಾ ಅದೇ ಸ್ಪಾಟ್. ಸಂಜೆ ೪ ಗಂಟೆ ಸಮಯ ಅದು. ನನ್ನ ಎದುರುಗಡೆಯಲ್ಲೇ ಒಬ್ಬ ಬೈಕ್‌ನಲ್ಲಿ ಹೋಗ್ತಾ ಇದ್ದ. ಹಿಂದೆಯೇ ನಾನೂ ಇದ್ದೆ. ಲಾರಿಯೊಂದು ಮಂಗಳೂರು ಕಡೆ ಹೋಗೋಕೆ ಟರ್ನ್ ಆಗ್ತಾ ಇತ್ತು. ನಾನೂ ನೋಡ್ತಾನೆ ಇದ್ದೆ. ಇನ್ನೇನು ಎದುರುಗಡೆ ಹೋಗ್ತಾ ಇದ್ದಾತ ಪಾಸ್ ಆದ ಅಂತ ಅಂದ್ಕೊಂಡೆ !
ಅರುವತ್ತರ ವೇಗದಲ್ಲಿದ್ದ ನನ್ನ ಸಾಥಿಯ ಕಿವಿ ಹಿಂಡಿದ್ದೆ. ಕಾಲು ತುಳಿದೆ. ಇದ್ದಕ್ಕಿಂದ ವೇಗ ಪೂರ್ತಿ ಕಡಿಮೆಯಾಗಿತ್ತು. ಎದುರುಗಡೆ ಟರ್ನ್ ಆದ ಲಾರಿ ಅಡಿಯಿಂದ ಕರಕರ ಪರಪರ ಸೌಂಡ್ ! ಏನಿರಬಹುದು ಊಹಿಸ್ತೀರಾ ! ನನ್ನ ಎದುರುಗಡೆ ಹೋಗ್ತಾ ಇದ್ನಲ್ಲಾ ಆಸಾಮಿ ಬೈಕ್ ಸಮೇತ ಲಾರಿ ಅಡಿ ಸೇರಿದ್ದ. ಅಷ್ಟಾದ್ರೂ ಆತ ಅಲ್ಲಿಂದ ಎದ್ದು ಬಂದ. ಲಾರಿ ಡ್ರೈವರಿಗೋ ಕನ್‌ಫ್ಯೂಸ್ ! ಆತ ಮತ್ತೂ ಲಾರಿ ನಿಲ್ಲಿಸಿಲ್ಲ. ನಿಧಾನವಾಗಿ ಮುಂದಕ್ಕೆ ತೆಗೆದುಕೊಂಡು ಹೋಗ್ತಿದ್ದ. ಲಾರಿ ಅಡಿಗೆ ಬಿದ್ದವನು ಅಲ್ಲಿಂದ ಎದ್ದು ಬಂದು ಲಾರಿ ಡ್ರೈವರ್ ಮುಂದೆ ನಿಂತು ಕೂಗಾಡ್ತಾ ಇದ್ದ. ಬೈಕ್ ಅಡಿಯಲ್ಲಿದೆ. ಗೊತ್ತಿದ್ರೂ ಲಾರಿ ಮೂವ್ ಮಾಡ್ತಿದ್ದಿಯಲ್ಲಾ ? ಅಷ್ಟೊತ್ತಿಗೆ ಅಲ್ಲಿ ಜನ ಸೇರಿದ್ರು.
ಟ್ರಾಫಿಕ್ ಪೊಲೀಸ್ ಮಾಮ ಕೂಡಾ ಅಲ್ಲಿ ಬಂದ. ಸಮಸ್ಯೆ ಇನ್ನೇನು ಬಗೆ ಹರೀತು ಅಂತ. ಪಕ್ಕದಲ್ಲೇ ಇದ್ದ ಸ್ವಲ್ಪವೇ ಜಾಗದಲ್ಲಿ ಬೈಕ್ ತೂರಿಸಿಕೊಂಡು ಮುಂದಕ್ಕೆ ಹೊರಟೆ ನೋಡಿ. ಹಾಗೇ ಮುಂದಕ್ಕೆ ಹೋಗ್ತಾ ಮನಸ್ಸು ಮತ್ತೆ ರಸ್ತೆ ಮೇಲೆ ಬಂತು. ಅಷ್ಟರಲ್ಲಾಗಲೇ ತುಮಕೂರು ತಲುಪಿತ್ತು ಗಾಡಿ. ಅಲ್ಲೊಂದು ಕಡೆ ರಸ್ತೆಲಿ ಚೆಲ್ಲಿತ್ತು ರಕ್ತದ ಕಲೆ... ಪಕ್ಕದಲ್ಲೇ ಗುರುತೇ ಸಿಗದಂತಾಗಿರುವ ಹೆಣ...

<ಮುಂದುವರಿಯತ್ತೆ>

Rating
No votes yet

Comments