line of control

line of control

ಬರಹ

" ಓಹ್, ಸಮಯವೇ ಸಿಗುವುದಿಲ್ಲ ವ್ಯಾಯಾಮಕ್ಕೆ"
"ಒಮ್ಮೆ ವ್ಯಾಯಾಮ ಶುರು ಮಾಡಿದ್ರೆ ಬಿಡಲೇ ಬಾರದಂತೆ, ಇಲ್ದಿದ್ರೆ muscles ಲೂಸ್ ಆಗ್ಬಿಡತ್ತಂತೆ"

"ನನಗೆ ಡಿಗ್ರಿ ಮಾಡಲು ತುಂಬಾ ಇಷ್ಟ, ಆದರೇನು ಮಾಡೋದು, ನನಗೀಗ ೩೪ ವಯಸ್ಸು, ಡಿಗ್ರೀ ಮುಗಿಸುವಷ್ಟರಲ್ಲಿ ೩೭ ಆಗ್ಬಿಡತ್ತೆ"

"ಏನಾದರೂ ಹೊಸ ಹವ್ಯಾಸ ಅಥವಾ ಕೋರ್ಸ್ ಮಾಡೋಣ ಅಂದ್ರೆ ನೆರೆಯವರು, ಗೆಳಯ/ತಿ ಯರು ತಮಾಷೆ ಮಾಡಬಹುದು ಅಂತ ಭಯ"

" ಈ ವಯಸ್ನಲ್ಲಿ ಓದಾ? ಒಳ್ಳೆ ತಮಾಷೆ"

ಮೇಲೆ ಹೇಳಿದ ಸಾಲುಗಳೇ line of control. ಇವು ನಿಮ್ಮಲ್ಲಿರುವ ಅಭಿಲಾಷೆಯನ್ನು, ಆಸಕ್ತಿಯನ್ನು, ತುಡಿತವನ್ನು ಹೊಸಕಿ ಹಾಕಲು ಉಪಯೋಗಿಸಲ್ಪಡುವ ಹಲವು ಮಾತುಗಳಲ್ಲಿ ಕೆಲವು. ಮೇಲೆ ಹೇಳಿದ ಸಾಲುಗಳೇ ನಿಯಂತ್ರಣ ರೇಖೆಯನ್ನು ದಾಟಿ ಮುಂದೆ ಸಾಗಿ ಭವಿಷ್ಯವನ್ನು ರೂಪಿಸಲು, ಸ್ವಪ್ನವನ್ನು ಸಾಕಾರಗೊಳಿಸಲು, ಹೊಸ ತನ್ನತನವನ್ನು ಕಂಡುಕೊಳ್ಳಲು ನಿಮ್ಮನ್ನು ಅಡ್ಡಿ ಪಡಿಸುವಂಥವು.

ಈಗ ಒಂದೊಂದಾಗಿ ಮೇಲೆ ಹೇಳಿದ ಸಾಲುಗಳನ್ನೂ ಅವುಗಳ ಸತ್ಯಾಸತ್ಯತೆ ಗಳನ್ನೂ ಚರ್ಚಿಸೋಣ.
" ಓಹ್, ಸಮಯವೇ ಸಿಗುವುದಿಲ್ಲ ವ್ಯಾಯಾಮಕ್ಕೆ"
ಇದು ಒಂದು ಕಾರಣವೇ ಅಲ್ಲ ವ್ಯಾಯಾಮ ಮಾಡದೆ ಇರುವುದಕ್ಕೆ. ಮನೆಯಲ್ಲಿ ನಿಂತಲ್ಲೇ ಮಾಡಬಹುದು. ಯಾವುದಾದರೂ ಹಾಳು ಸೀರಿಯಲ್ ಅನ್ನು ಬಲಿಕೊಟ್ಟೋ, ಅಥವಾ ಕಾಡು ಹರಟೆ ಹೊಡೆಯುವ ಸಮಯದಲ್ಲೋ ಮಾಡಬಹುದು ವ್ಯಾಯಾಮವನ್ನು. ವ್ಯಾಯಾಮದ benefit ಕುರಿತು ಓದಿಆದಾಗ ತಿಳಿಯುವುದು ಅದರ ಮಹತ್ವ.

"ಒಮ್ಮೆ ವ್ಯಾಯಾಮ ಶುರು ಮಾಡಿದ್ರೆ ಬಿಡಲೇ ಬಾರದಂತೆ, ಇಲ್ದಿದ್ರೆ muscles ಲೂಸ್ ಆಗ್ಬಿಡತ್ತಂತೆ"
ವಾಹ್, ಎಂಥ ಐಡಿಯಾ, ಯಾರು ಕೊಟ್ಟರೋ, ಕಾಣೆ. ಕೆಲಸ ಆರಂಭಿಸುವ ಮೊದಲೇ ಅಪಸ್ವರ. ಮೊದಲು ಶುರು ಮಾಡಿರಲ್ಲ, ಆಮೇಲೆ ನೋಡುವ ತ್ಯಜಿಸುವ ಕುರಿತು.

"ನನಗೆ ಡಿಗ್ರಿ ಮಾಡಲು ತುಂಬಾ ಆಸೆ, ಆದರೇನು ಮಾಡೋದು, ನನಗೀಗ ೩೪ ವಯಸ್ಸು, ಡಿಗ್ರೀ ಮುಗಿಸುವಷ್ಟರಲ್ಲಿ ೩೭ ಆಗ್ಬಿಡತ್ತೆ"
ತುಂಬಾ ಚೆನ್ನಾಗಿದೆ ಅರ್ಗ್ಯುಮೆಂಟು. ಸರಿ ನಿಮಗೆ ಡಿಗ್ರೀ ಮಾಡಬೇಕು, ಆದರೆ ವಯಸ್ಸು ೩೪ ಆಯಿತು. ಡಿಗ್ರಿ ಮುಗಿಸಿದಾಗ ೩೭ ಆಗ್ಬಿಡತ್ತೆ. ಓಕೆ, ಡಿಗ್ರಿ ಮಾಡಲಿಲ್ಲ ಅನ್ನಿ, ೩ ವರ್ಷಗಳ ನಂತರ ನಿಮ್ಮ ವಯಸ್ಸು ೩೪ ರಲ್ಲೇ ಇರುತ್ತೋ ಅಥವಾ ಈ ಮಹರಾಯ ಡಿಗ್ರಿ ಮಾಡಿಲ್ಲ ಅಂತ ಸಮಯ ನಿಮಗಾಗಿ ವಯಸ್ಸು ಕಾಯುತ್ತಾ ಕುಳಿತಿರುತ್ತೋ? ಯಾವುದು ಚೆನ್ನು, ಹಗಲುಗನಸು ಕಾಣುತ್ತಾ ಡಿಗ್ರಿ ಇಲ್ಲದೆ ೩೭ ಆಗುವುದೋ ಅಥವಾ ಡಿಗ್ರಿ ತೆಗೆದುಕೊಂಡು ೩೭ ಆಗುವುದೋ? ಕೇಳಿಲ್ಲವೇ,
Time and tide wait for no man ?

"ಏನಾದರೂ ಹೊಸ ಹವ್ಯಾಸ ಅಥವಾ ಕೋರ್ಸ್ ಮಾಡೋಣ ಅಂದ್ರೆ ನೆರೆಯವರು, ಗೆಳಯ/ತಿ ಯರು ತಮಾಷೆ ಮಾಡಬಹುದು ಅಂತ ಭಯ"
ಬದುಕು ಇಂಟರೆಸ್ಟಿಂಗ್ ಆಗಿ ನಡೆಯಲು ಹಲವು ಪಾತ್ರಗಳ ಅವಶ್ಯಕತೆ ಇದ್ದಿದ್ದೇ. ಅದರಲ್ಲಿ ವಿದೂಷಕರ ಪಾತ್ರವೂ ಒಂದು. ತಾನು ಮಾಡಲಾರದೆ ಇತರರು ಧೈರ್ಯ ಮಾಡಿ ಏನನ್ನಾದರೂ ಮಾಡಲು ಹೊರಟರೆ ಇವರ ನಾಲಗೆ ನಿದ್ದೆಯಿಂದ ಮೈ ಮುರಿಯುತ್ತಾ ಏಳುತ್ತದೆ . wright ಸೋದರರು ಪ್ರಪ್ರಥಮವಾಗಿ ವಿಮಾನ ಹಾರಿಸುವಾಗ ನಕ್ಕವರು, edison ಪ್ರಪ್ರಥಮವಾಗಿ ಬಲ್ಬ್ ಕಂಡುಹಿಡಿಯಲು ಪಟ್ಟ ಪಾಡು ಕಂಡು ನಕ್ಕವರು ಹೀಗೆ ನೂರಾರು ಸಾಧಕರ ಕೆಲಸಗಳನ್ನು ಕಂಡು ಹಲುಬಿ ನಕ್ಕವರು ಏನನ್ನೂ ಸಾಧಿಸಲಿಲ್ಲ. ಸೋಲಿನ ನಗೆ ನಕ್ಕರು ಅಷ್ಟೇ.

೮೮ ನೆ ವಯಸ್ಸಿನಲ್ಲಿ ಡಿಗ್ರಿ ಮಾಡಿದವರಿದ್ದಾರೆ. ೭೬ ವರ್ಷದ ನೇಪಾಲದ ವ್ಯಕ್ತಿ ಎವೆರೆಸ್ಟ್ ಹತ್ತಿ ದಾಖಲೆ ಮಾಡಿದ.
ಇವರೆಲ್ಲಾ ವಯಸ್ಸನ್ನು ಪರಿಗಣಿಸಲೇ ಇಲ್ಲ ತಮ್ಮ ಕಾಯಕದ ಕಡೆ ದೃಷ್ಟಿ ನೆಡುವಾಗ. ಅವರೆದುರಿಗಿದ್ದದ್ದು ಸಾಧಿಸಲೇಬೇಕು ಎನ್ನುವ ಹಂಬಲ, ಛಲ. ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡು ಕೇಳಿಲ್ಲವೇ, ? ನಿಮ್ಮ ಆಸೆಗೂ, ಬಯಕೆಗೂ ಏಕೆ ಒಂದು ಎಲ್ಲೆ?