ಗೌಡರು ಅಂದರೆ ಯಾರು ?

ಗೌಡರು ಅಂದರೆ ಯಾರು ?

ಬರಹ

ಗೌಡರು ಅಂದರೆ ಸಿನೆಮಾಗಳಲ್ಲಿ ಕೆಲವು ಕತೆಗಳಲ್ಲಿ ಚಿತ್ರಿತವಾಗಿರುವಂತೆ ಆತ ಕ್ರೂರಿ ಅಥವ ಮೂರ್ಖನೂ ಅಲ್ಲ. ಇನ್ನೂ ಹೇಳಬೇಕೆಂದರೆ ಅವನು ದಬ್ಬಾಳಿಕೆ ಮಾಡುವನೂ ಅಲ್ಲ. ಅವನು ಊರಿನ ಸಮಗ್ರ ಪರಿಪಾಟ ಪರದಾಟಗಳನ್ನು ಸಮನ್ವಯಗೊಳಿಸಿ ಊರಿಗೆ ಶಾಂತಿ ಸಮಾಧಾನ ಒದಗಿಸುವ ಒಂದು ದೈವೀಕ ಶಕ್ತಿ. ಸಕಲ ಜಾತಿಗಳನ್ನೂ ಸಮಾನಾಂತರದಲ್ಲಿ ನೋಡಿ ಸಮನ್ವಯ ತರಲು ಸದಾ ತನ್ನ ಕಾಲವನ್ನು ವ್ಯಯ ಮಾಡುವುದಲ್ಲದೆ ಕೆಲವು ಸನ್ನಿವೇಶಗಳಲ್ಲಿ ಸ್ವಂತ ಹಣವನ್ನೇ ಹೂಡಿ ಬಡವರ ಪರ ವಹಿಸಿ ಬಲ್ಲಿದರ ಹತೋಟಿ ಹದ್ದುಬಸ್ತಿನಲ್ಲಿ ಇಡುವವ. ಧಾರ್ಮಿಕ ಕೆಲಸಗಳ ವಾರಸುದಾರ. ಧರ್ಮ ಸ್ಥಾಪನೆಗೆ ನೆರೆ ಊರಿನ ಸಹಕಾರ ಪಡೆಯುವವ. ಅವನು ಊರಿನ ಗುಡಿಯನ್ನು ಚಪ್ಪಲಿ ಹೊಲಿಯುವವನನ್ನು ತನ್ನ ಸ್ವಂತ ಮಕ್ಕಳನ್ನು ಸಮಾನ ದೃಷ್ಟಿಯಲ್ಲಿ ನೋಡುವವ. ರಾಜಕೀಯ ಮಾಡುವುದೆಂದರೆ ಅವನಿಗೆ ಉಸಿರಾಟವಿದ್ದಂತೆ. ಅವನ ಪ್ರತಿಷ್ಠೆಗೆ ಭಂಗ ತರುವ ಎದುರಾಳಿಯನ್ನು ಸೆದೆಬಡಿಯುವಲ್ಲಿ ಅವ ಪರಾಕ್ರಮಿಯೇ ಸರಿ. ಅನ್ಯರ ಕಷ್ಟವನ್ನು ತನ್ನ ಪ್ರತಿಷ್ಟೆಯ ಕಣವನ್ನಾಗಿಸಿ ಕೆಲವೊಮ್ಮೆ ಗಲಿಬಿಲಿ ಆಗುವವನಿವ. ಶತಮಾನಗಳ ಚರಿತ್ರೆ ಹೇಳುವಂತೆ ಅವನು ತನ್ನ ಹೊಲದಲ್ಲಿ ಬೆಳೆದ ಅನ್ನವನ್ನು ಊರಿನ ಬಡವರಿಗೆ ಹಂಚಿ ಧನ್ಯತೆಯನ್ನು ಕಂಡವನಿವ. ಶ್ಯಾನುಭೋಗರು ಇವನ ಪರಮಾಪ್ತರು ಹಾಗು ಮಂತ್ರಿ. ಅವರೊಡನೆ ಸಕಲ ಏಳಿಗೆಗಳ ಚೆರ್ಚೆ ಮತ್ತು ಊರಿನ ಸಭೆಯಲ್ಲಿ ಅವುಗಳ ಅವಲೋಕನ ಚಿಂತನ ಮಂಥನ. ಶುಭ ಸಮಾರಂಭಗಳಲ್ಲಿ ಎಲ್ಲಾ ವರ್ಗದವರ ಸಮಾನ ಪಾಲುಗೊಳ್ಳುವಿಕೆ. ಅದರಿಂದ ಊರಿನ ಹಿರಿಮೆಗೆ ಪ್ರಯತ್ನ. ಒಟ್ಟಿನಲ್ಲಿ ಅವನು ಊರಿನ ಸಕಲ ಜೀವರಾಶಿಗಳಲ್ಲದೆ ಪ್ರಕ್ರುತಿಯ ಸಕಲಕ್ಕೂ ಆಧಾರ. ಇವನ ತೀರ್ಮಾನಗಳು ಮತ್ತು ಅನುಷ್ಟಾನಗಳು ಊರಿನ ಸರಾಸರಿ ಬುದ್ಧಿಯ ಸೂಚಕ. ಯಾರನ್ನೂ ಹಿಂದೆ ಬಿದ್ದೆವು ಅನ್ನುವ ಮನೋಭಾವಕ್ಕೆ ಈಡುಮಾಡಬಾರದು ಅನ್ನುವ ಮನೋ ಇಂಗಿತ. ಎಲ್ಲರನ್ನು ಸರಿದೂಗಿಸುವ ಯತ್ನದಲ್ಲಿ ಇವನು ಬಿಂಬಿತವಾದದ್ದು ಭಿನ್ನವಾಗಿ ರೂಪಿತವಾಗಿವೆ.

ಎಲ್ಲರಿಗೂ ಒಳ್ಳೆಯದನ್ನು ಬಯಸುವವ ಯಾರಿಂದಲೂ ಒಳ್ಳೆಯವ ಎನ್ನಿಸಿಕೊಳ್ಳಲಾರನೆಂದರೆ ಬಹಶಹ ಆತನೇ ಗೌಡ. ಸರ್ವರಿಗೂ ಸಮಾನತೆ ಎಂದು ಹಂಬಲಿಸಿದ ಮಹಾತ್ಮ ಗಾಂಧೀಜಿಗೆ ಗುಂಡು ಹಾಕಿದ್ದು ಒಂದು ವರ್ಗ. ಅದೇ ವರ್ಗ ಯಾರೇ ಸಮಾನತೆಗೆ ಶ್ರಮಿಸಿದರೂ ಗುಂಡು ಹಾಕುತ್ತಾರೆ ಅಂದರೆ ಹಳ್ಳಿಯಲ್ಲಿ ಅದನ್ನು ಮಾಡೋ ಕೆಲಸಕ್ಕೆ ಕಲ್ಲು ಹಾಕ್ತಾರೆ ಅಂತಾರೆ. ನಿರ್ಮಲ ಮನಸ್ಸಿನವರಿಗೆ ಕುತ್ಸಿತ ಆಲೋಚನೆಗಳು ಹೊಳೆಯುವುದಿಲ್ಲ. ಯಾರನ್ನೂ ಅವರು ಕೆಟ್ಟ ನೋಟದಲ್ಲಿ ನೋಡಬಯಸುವುದಿಲ್ಲ. ಅದೇ ಅವರ ಪರಮ ದುರ್ಬಲತೆ.ಅದೇ ಅವರ ಸರ್ವ ಶ್ರೇಷ್ಟತೆ.
ಅವರನ್ನು ಕವನವೊಂದರಲ್ಲಿ ಸರೆ ಹಿಡಿದರೆ ಹೀಗಿರಬಹುದು. ಓದಿ.....

ಗರಿಕೆ ಗೌಡ್ರು

ಬೇರುಗಳು
ಆಳಕ್ಕೆ ಇಳಿಯುದಿಲ್ಲ
ಕಾಂಡಗಳು
ಆ ಎತ್ತರಕ್ಕೆ ಏರುವುದಿಲ್ಲ
ನೀರು ಸಿಕ್ಕರೆ
ಬುರು ಬುರು ಬೆಳೆಯುವುದಲ್ಲ;
ಬೇಸಿಗೆ ಬಂದಾಗ-
ಒಣಗಿ ಕರಕಲಾಗುತ್ತದಲ್ಲ!
ಅದನ್ನು
ಸಾಯಿಸದೆ ಬಿಟ್ಟವರಿಲ್ಲ
ಇಷ್ಟಾದರೂ
ನೆಲವ ಅಪ್ಪಿಕೊಂಡು
ಕಾಡು,ಮೇಡು,ಮನೆ,ಹಿತ್ತಲು
ಎಲ್ಲಡೆ ಹರಡಿದೆಯಲ್ಲ;
ಏನು ಇದು ನಿನ್ನ ಕತೆ
ಓ ನನ್ನ ಗರಿಕೆ?
ಗೊತ್ತಾಗಲಿಲ್ಲವೆ ?
ನಿಂದೂನೂವೆ
ಗೌಡರ ತರವೇ ಹೋಲಿಕೆ !!.
--------000----------
-ಶಿವಶಶಿ