ಶಿಕ್ಷಣ ಮತ್ತು ಜೀವನ

ಶಿಕ್ಷಣ ಮತ್ತು ಜೀವನ

"ಬೆವರಿನ ಬದಲು ಹನಿ ರಕ್ತ ಕೊಡುವ ಒಂದು ಯುವಕರ ಗುಂಪು ಕೊಡಿ, ಇಡಿ ಜಗತ್ತನ್ನೆ ಗೆಲ್ಲುತ್ತೇನೆ" ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಎಲ್ಲರೂ ನಂಬಬಹುದಾದ ಹುರುಳಿದೆ ಆದರೆ ಇಪ್ಪತ್ತೊಂದನೆ ಶತಮಾನ ಯುವಕರು ಎಂದಾಗ ನಮ್ಮ ಮುಂದೆ ಮೂಡುವುದು ಒಂದು ದೊಡ್ಡ ಪ್ರಶ್ನೆಯೋ? ಅಥಾವ ದೊಡ್ಡ ಶೂನ್ಯವೋ?!. ಮಾನವ ವೈಜ್ಜಾನಿಕವಾಗಿ ಮುಂದುವರಿಯುತ್ತಾ ಹೋದಂತೆ ಅವನ ಬದುಕು ಯಾಂತ್ರಿಕವಾಗಿ ಹೋಗಿದೆ. ಸುಖದ ಹಾಗು ಸುಲಭದ ದಾಸನಾಗುತ್ತಾ ಬದುಕಿನ ಅರ್ಥವನ್ನೆ ಕಳೆದುಕೊಂಡು ಏನೇ ಆದರೂ ಸರಿ ತಾನು ಕನಸ್ಸಿನಲ್ಲಿ ಕಂಡ ಸುಖದ ಬದುಕು ಸುಲಭದಲ್ಲಿ ಸಿಗಬೇಕು ಎಂಬುವುದು ಈಗ ಹದಿಹರೆಯದಲ್ಲಿ ಮನದ ತುಂಬಾ ಅಚ್ಚೊತ್ತಿದೆ. ಇಲ್ಲಿ ತನ್ನ ಸುಖಕ್ಕೆ ಯಾರ ಗೋರಿಯಾದರೂ ಸರಿ! ಯಾರು ಗುಲಾಮರಾದರೂ ಸರಿ! ತನ್ನ ಬದುಕು ಮಾತ್ರ ಸುಖದಿಂದ ಇರಬೇಕು ಎಂಬ ತತ್ವಕ್ಕೆ ಬೀಳುತ್ತಿದ್ದಾರೆ. ಇಲ್ಲೆ ನಮ್ಮ ಯುವ ಜನಾಂಗ ದಾರಿ ತಪ್ಪಿದ್ದು ಆದರೆ ಇದಕ್ಕೆ ಕಾರಣ ಯಾರು?. ನಮ್ಮ ಶಿಕ್ಷಣವೇ?, ನಮ್ಮ ರಾಜಕೀಯ ವ್ಯವಸ್ಥೆಯೇ?, ಸಮೂಹ ಮಾದ್ಯಮಗಳೇ?, ಪೋಷಕರೇ? ಬದಲಾಗುತ್ತಿರುವ ಸಾಮಾಜಿಕ, ಧಾರ್ಮಿಕ ಪರಿಸ್ಥಿತಿಯೇ?, ಹೌದು ಒಂದನ್ನೆ ಕುರಿತು ಕೈ ತೋರಿಸಿದರೆ ತಪ್ಪಾದಿತು. ಏಕೆಂದರೆ ಎಲ್ಲವೂ ವ್ಯಕ್ತಿಯ ಬದುಕಿನಲ್ಲಿ ಬಂದು ಹೋಗುವ ಪ್ರಮುಖ ಮಜಲುಗಳು, ಜೀವನದ ಏಣಿಯಲ್ಲಿನ ಮೆಟ್ಟಿಲುಗಳು.

ಶಿಕ್ಷಣದ ಬಗ್ಗೆ ಹೇಳುವುದಾದರೆ ಇಂದಿನ ಶಿಕ್ಷಣ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರದೆ ಕೇವಲ ಬಿಳಿ ಕಾಲರಿನ ಉದ್ಯೋಗವನ್ನು ದಕ್ಕಿಸಿಕೊಳ್ಳುವತ್ತ ಮುಖ ಮಾಡಿದೆ. ಒಂದು ವೇಳೆ ಅವನ ವಿದ್ಯೆಗೆ ತಕ್ಕ ಕೆಲಸ ದೊರೆಯದೆ ಹೋದರೆ ಅವನು ನಿರುದ್ಯೋಗ ಎಂಬ ಹಣೆ ಪಟ್ಟಿ ಕಟ್ಟಿಕೊಳ್ಳುತ್ತಾನೆ ಹೊರತು ಬೇರೆ ಯಾವುದೇ ಕೆಲಸಕ್ಕೆ ಒಗ್ಗಿಕೊಳ್ಳಲಾರ. ಶಾಲೆ ಆರಂಭದಿಂದಲೇ ಪುಸ್ತಕದ ಹೊರೆಯೊಂದಿಗೆ ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳುವ ಯಾವುದೇ ಜ್ಜಾನ ಇಂದಿನ ಶಿಕ್ಷಣದಲ್ಲಿ ಸಿಗದೆ ಇರುವುದು ಒಂದು ದೊಡ್ಡ ದುರಂತವೇ ಸರಿ. ಕಾಲೇಜು ಶಿಕ್ಷಣ ಎನ್ನುವುದು ಇಂದು ಕೆಲವು ಮಕ್ಕಳಿಗೆ ಮಸ್ತಿ, ಮೋಜು, ಸ್ವೆಚ್ಚಾಚಾರಕ್ಕೆ ಸಿಮೀತವಾಗಿರುವುದು ಇಂದು ಕಂಡು ಬರುವ ಒಂದು ರೋಗ. ಮಾಹಭಾರತ ಒಂದು ಕಡೆ ವಿಧುರನು ವಿಧ್ಯೆಯ ಬಗ್ಗೆ ಧ್ರತರಾಷ್ಟನಲ್ಲಿ ಹೇಳಿದ ಮಾತಿನ ಅರ್ಥ ಹೀಗಿದೆ. " ಆಲಸ್ಯ, ಮಧ, ಮೋಹ, ಚಾಪಲ್ಯ, ಕಾಡು ಹರಟೆ, ಅಂಹಕಾರ, ದುರಭಿಮಾನ, ತನ್ನಲ್ಲಿರುವ ಒಳ್ಳೆಯದನ್ನು ಇತರರಿಗೆ ಕಲಿಸದಿರುವಿಕೆ ಇವು ಏಳು ವಿಧ್ಯಾರ್ಥಿಯ ದೋಷಗಳು. ಸುಖ ಬಯಸುವವನಿಗೆ ಎಲ್ಲಿಯ ವಿದ್ಯೆ ?! ವಿಧ್ಯಾರ್ಥಿಗೆ ಸುಖವೆಲ್ಲಿ ?!! ಆದರೆ ಇಂದಿನ ಯುವಕರಲ್ಲಿ ತಮ್ಮ ವಿಧ್ಯಾರ್ಥಿ ಜೀವನದಲ್ಲಿ ಮೇಲೆ ಕಾಣಿಸಿದ ಅಭ್ಯಾಸದ ಮಾಹಾಪುರವೇ ಕಾಣಸಿಗುತ್ತದೆ. ಅವರು ಶಿಕ್ಷಣ ಸಂಸ್ಥೆಯಿಂದ ಹೊರ ಬಂದಾಗ ದಿಕ್ಕು ತಪ್ಪಿದಂತಾಗುತ್ತದೆ.

ಇನ್ನು ರಾಜಕೀಯದ ಬಗ್ಗೆ ಹೇಳುವುದಾದರೆ ಮುಂದಿನ ಶುದ್ಧ ರಾಜಕೀಯದ ಕುಡಿಗಳಾದ ಯುವಕರನ್ನು ಇಂದಿನ ರಾಜಕೀಯದ ಕುಡಿಗಳಾದ ಯುವಕರನ್ನು ಇಂದಿನ ರಾಜಕೀಯ ವ್ಯಕ್ತಿಗಳು ತರಭೇತುಗೊಳಿಸದೆ ಅವರಲ್ಲಿದ್ದ ಹುಮ್ಮಸ್ಸು, ಛಲ, ಧ್ಯೆರ್ಯ, ವಿದ್ಯೆಯನ್ನು ತಮ್ಮ ಯಶಸ್ಸಿನ ಮೆಟ್ಟಲಾಗಿಸಿಕೊಂಡು ಅನಾಚಾರದ ಗದ್ದುಗೆಯನ್ನು ಏರುತ್ತಿದ್ದಾರೆ. ಇವರಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತಿ ಬೆಂಕಿಯ ಚೆಂಡಾಗಿಸುತ್ತಿದ್ದಾರೆ. ಸಮೂಹ ಮಾದ್ಯಮಗಳು ಯುವಕರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿವೆ. ದಿನದ ೨೪ ಗಂಟೆಗಳ ಕಾಲ ಬಿತ್ತರಗೊಳ್ಳುವ ಟಿ.ವಿ ಚಾನಲ್ ಗಳು ಕಾರ್ಯಕ್ರಮಗಳು ಹಿಂಸೆ, ಕೊಲೆ, ದರೋಡೆಯನ್ನೆ ವೈಭವಿಕರಿಸುವ ಸಿನೆಮಾ, ಕ್ರೈಂ ಪತ್ರಿಕೆಗಳು ಇಂದು ಹೇರಳವಾಗಿವೆ. ನಮ್ಮ ಸಂಸ್ಕ್ರತಿಯ ಮೇಲೆ ಅತಿ ಹತ್ತಿರದಿಂದ ಪ್ರಭಾವ ಬೀರಿ ನಮ್ಮದು ಎನ್ನುವ ಜೀವನವನ್ನು ಕೊಲೆ ಮಾಡಿ ತಪ್ಪು ದಾರಿಯತ್ತ ಕೈ ತೋರಿಸುತ್ತಿವೆ. ಹಾಗು ಇಂದಿನ ಜನಾಂಗ ಇದನ್ನೇ ತಮ್ಮ ನಿಜ ಜೀವನದಲ್ಲೂ ಅಳವಡಿಸಿಕೊಳ್ಳಲು ತವಕಿಸುತ್ತಾರೆ. ಕಲೆ, ಸಂಸ್ಕ್ರತಿಯ ನೆಲೆಯಲ್ಲಿ ನಡೆಯುವ ಕಾರ್ಯಕ್ರಮಗಳು ಜನರಿಲ್ಲದೆ ಭಣ ಭಣ ಎಂದರೆ ಜ್ಜಾನ ದಾಹವನ್ನು ತಣಿಸಬೇಕಾಗಿದ್ದ ಇಂಟರ್ ನೆಟ್ ಗಳು ಅಶ್ಲೀಲತೆ ಸರಕುಗಳನ್ನು ಯುವ ಜನತೆಗೆ ಯೆತೇಚ್ಛವಾಗಿ ವರ್ಗಾವಣೆ ಮಾಡುತ್ತಿವೆ.

ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆಯಂತೆ ತಮ್ಮ ಮಕ್ಕಳ ಭವಿಷ್ಯದಲ್ಲಿ ತಾವೇ ಶತ್ರುಗಳಾಗುತ್ತಿದ್ದಾರೆ. ತಂದೆ ತಾಯಿಗಳ ಬಿಡುವಿಲ್ಲದ ದುಡಿತವು ಇಂದು ಮಕ್ಕಳ ಪಾಲಿಗೆ ಶಾಪವಾಗಿ ದಿಕ್ಕು ತಪ್ಪುತ್ತಿದ್ದಾರೆ. ಕ್ರಮೇಣ ತಮ್ಮ ಬದುಕಿನ ಮೌಲ್ಯವನ್ನೇ ಮರೆತು ಸಮಾಜಕ್ಕೆ ಮುಳ್ಳಾಗುತ್ತಾರೆ. ಇಂದು ನಮ್ಮ ಕುಟುಂಬದ ಪರಿಸ್ಥಿತಿಯಲ್ಲೂ ಬದಾವಣೆ ಕಂಡುಕೊಂಡಿದ್ದೇವೆ. ಹಿಂದೆ ಇದ್ದ ಅವಿಭಕ್ತ ಕುಟುಂಬಗಳು ಕಣ್ಮೆರೆಯಾಗುತ್ತಿವೆ. ಇದರಿಂದ ವ್ಯಕ್ತಿಯ ಮೇಲಿರುವ ಕುಟುಂಬದ ಹತೋಟಿಯು ತಪ್ಪಿಹೋಗುವ ಭಯ ತುಂಬಾ ಹೆಚ್ಚು. ಇವುಗಳ ನಡುವೆ ಯುವಕರು ಮದ್ಯಪಾನ, ಮಾದಕ ವಸ್ತುಗಳ ವ್ಯಸನಕ್ಕೆ ಗುರಿಯಾಗುತ್ತಾ ಮತ್ತಷ್ಟು ಕೌಟಂಬಿಕ ಕೊಂಡಿಯಿಂದ ಕಳಚಿಕೊಳ್ಳುತ್ತಾರೆ

ಇಂದು ಸಮಾಜಕ್ಕೆ ಬೇಕಾಗಿರುವುದು ಜೀವನದೊಂದಿಗೆ ಸ್ನೇಹ ಬೆಳೆಸುವ ಶಿಕ್ಷಣ, ಜ್ಜಾನವನ್ನು ಹಿಗ್ಗಿಸುವ ಸಮೂಹ ಮಾದ್ಯಮಗಳು ಶುದ್ಧ ರಾಜಕೀಯದ ಅಡಿಪಾಯ, ಪ್ರೀತಿ ವಾತ್ಸಲ್ಯ ತುಂಬುವ ಸಾಮಾಜಿಕ, ಧಾರ್ಮಿಕ ರೀತಿ ನೀತಿಗಳು, ತಪ್ಪನ್ನು ತಿದ್ದಿ ಹೇಳುವ ಕೌಟಂಬಿಕ ಹಿನ್ನಲೆ ಇರಬೇಕು. ಡಿ.ವಿ.ಜಿ ಯವರು ಮಾನವನ ಯತ್ನದ ಬಗ್ಗೆ ಹೀಗೆ ಹೇಳುತ್ತಾರೆ.

ಸತತ ಯತ್ನದಿನಾತ್ಮ ಶಕ್ತಿ ಪರಿವರ್ಧಿಸುವುದು |
ಹಿತ ಪರಿಜ್ಜಾನ ಯತ್ನಾನುಭವ ಫಲಿತ || "
"ಯತನ ಕರ್ತವ್ಯವದು, ನಮಗೆ ವಿದ್ಯಾಭ್ಯಾಸ |
ಯತನ ಜೀವನ ಶಿಕ್ಷೆ-ಮಂಕುತಿಮ್ಮ||

.
ಪ್ರಯತ್ನವು ಕರ್ತವ್ಯವಾಗಿ, ಆದ್ದರಿಂದ ನಮಗೆ ವಿದ್ಯಾಭ್ಯಾಸ, ಹಿತವಾದ ಪರಿಜ್ಜಾನ, ಅನುಭವ ಫಲಿಸುವುದು, ನಿರಂತರ ಯತ್ನದಿಂದ ಆತ್ಮ ಶಕ್ತಿ ಪ್ರವರ್ಧಿಸುವುದು. ಯತ್ನ ಜೀವನದ ಶಿಕ್ಷಣವಾಗಿದೆ. ಜೀವನ ಎನ್ನುವುದು ಅಮೂಲ್ಯವಾದುದ್ದು ಅದನ್ನು ಸಂಬಾಳಿಸಿಕೊಂಡು ಸರಿಯಾದ ದಿಕ್ಕಿನಲ್ಲಿ ಸತತ ಸ್ವ ಪ್ರಯತ್ನದೊಂದಿಗೆ ಸಮಾಜಕ್ಕೆ ಸ್ನೇಹಮಯವಾದ ಬದುಕು ನೀಡಬೇಕಾದದ್ದು ನಮ್ಮ ಕರ್ತವ್ಯ...

Rating
Average: 5 (1 vote)

Comments