’ಹಕ್ಕಿ ಹಾರುತಿದೆ ನೋಡಿದಿರಾ?’ : ವರಕವಿಯ ಶ್ರೇಷ್ಠ ರೂಪಕ

’ಹಕ್ಕಿ ಹಾರುತಿದೆ ನೋಡಿದಿರಾ?’ : ವರಕವಿಯ ಶ್ರೇಷ್ಠ ರೂಪಕ

ಬರಹ

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜರ್ಮನಿಯ ಬರ್ಲಿನ್ ನಗರದಲ್ಲಿ ವಾಸಿಸುತ್ತಿರುವ ಕನ್ನಡಿಗ ಮಿತ್ರ ಮಹೇಂದ್ರ ವಿಜಯಶೀಲ (mavipra) ಅವರು ಈಚೆಗೆ ನನಗೆ ’ಸಂಪದ’ದ ಮೂಲಕ ಸಂದೇಶವೊಂದನ್ನು ಕಳಿಸಿ, ದ.ರಾ.ಬೇಂದ್ರೆಯವರ ಪ್ರಸಿದ್ಧ ಕವನ ’ಹಕ್ಕಿ ಹಾರುತಿದೆ ನೋಡಿದಿರಾ?’ ಇದರ ಭಾವಾರ್ಥವನ್ನು ತಿಳಿಸುವಂತೆ ಕೇಳಿಕೊಂಡರು. ಉತ್ತರವಾಗಿ ನಾನು ಲೇಖನವೊಂದನ್ನು ಬರೆದು ಅವರಿಗೆ ಕಳಿಸಿದೆ. ವರಕವಿ ಬೇಂದ್ರೆಯವರ ಕಾವ್ಯದಲ್ಲಿ ಆಸಕ್ತಿಯುಳ್ಳ ಸಹೃದಯರ ಅವಗಾಹನೆಗಾಗಿ ನಾನು ಆ ಲೇಖನವನ್ನು ಇಲ್ಲಿ ಪ್ರಚುರಪಡಿಸುತ್ತಿದ್ದೇನೆ.

***

’ಹಕ್ಕಿ ಹಾರುತಿದೆ ನೋಡಿದಿರಾ?’: ವರಕವಿಯ ಶ್ರೇಷ್ಠ ರೂಪಕ
-------------------------------------------------------

ದ.ರಾ.ಬೇಂದ್ರೆಯವರು ಜೀವನವನ್ನು ಒಂದು ದೃಶ್ಯಕಾವ್ಯವಾಗಿ ಕಂಡವರು. ಜೀವನವನ್ನು ಸಾಕ್ಷಿಪ್ರಜ್ಞೆಯಿಂದ ಅವಲೋಕಿಸಿದ ಕವಿ ಅವರು. ಅವರ ಕಾವ್ಯದಲ್ಲಿ ಜೀವನದೃಷ್ಟಿ, ಸಾಕ್ಷಿಪ್ರಜ್ಞೆ ಮತ್ತು ಅನುಭಾವ ಇವು ಢಾಳವಾಗಿ ವಿಜೃಂಭಿಸುತ್ತವೆ.

ಜಗತ್ತನ್ನು, ಜೀವ-ಜೀವನಗಳನ್ನು, ಮಾತ್ರವಲ್ಲ, ಅಖಿಲ ಬ್ರಹ್ಮಾಂಡವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ’ಕಾಲ’ವನ್ನು ಹಕ್ಕಿಗೆ ಹೋಲಿಸಿ ವರಕವಿ ರಚಿಸಿರುವ ರೂಪಕ ’ಹಕ್ಕಿ ಹಾರುತಿದೆ ನೋಡಿದಿರಾ?’ ಇದು ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ಕವಿತೆಗಳಲ್ಲೊಂದು. ಆ ಕವಿತೆಯ ಪೂರ್ಣಪಾಠ ಇಂತಿದೆ:

ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? /೧/

ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? /೨/

ನೀಲಮೇಘಮಂಡಲ-ಸಮ ಬಣ್ಣ!
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ!
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? /೩/

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? /೪/

ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? /೫/

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳಿನೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? /೬/

ಮುಟ್ಟಿದೆ ದಿಙ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೋ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? /೭/

ಕಾಲದ ಗತಿಯನ್ನು ಮತ್ತು ಆಯಾಮವನ್ನು ಹಕ್ಕಿಯ ಹಾರಾಟಕ್ಕೆ ಹೋಲಿಸಿ ಕವಿಯಿಲ್ಲಿ ಹಕ್ಕಿಯ ರೂಪ(ಕ)ದಲ್ಲಿ ಕಾಲಕೋಶದಲ್ಲಿ ಪಯಣಿಸಿದ್ದಾರೆ. ಈ ಕವಿತೆಯನ್ನು ನಾನು ಅರ್ಥೈಸಿಕೊಂಡಿರುವುದು ಹೀಗೆ: (ನುಡಿಸಂಖ್ಯೆಯ ಕ್ರಮದಲ್ಲಿ ಬರೆದಿದ್ದೇನೆ):

೧. ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲಿ ಒಂದಷ್ಟು ಕಾಲ ಸಂದಿರುತ್ತದೆ. ಹೀಗೆಯೇ ದಿನರಾತ್ರಿಗಳು ಕಳೆಯುತ್ತವೆ. ಸುತ್ತಮುತ್ತ, ಮೇಲೆ-ಕೆಳಗೆ, ಹೀಗೆ ವಿಶ್ವವ್ಯಾಪಿಯೂ ಅನಂತವೂ ಆಗಿರುವ ಕಾಲವು (ಗಾವುದ ಗಾವುದ) ಮುಂದೆ ಸಾಗುತ್ತಿರುತ್ತದೆ. ಕಾಲದ ಹಕ್ಕಿ ಹಾರುತ್ತಿರುತ್ತದೆ.

೨. ಕರಿನರೆ ಅಂದರೆ ಸುಟ್ಟು ಕರಿಕಾದ ಬಿಳಿಗೂದಲು. ಗತಿಸಿಹೋದ ಕಾಲ. ಜೀವಿಗೆ ವೃದ್ಧಾಪ್ಯದ ಕಾಲ. ಕರಿನರೆ ಅಂದರೆ ವರ್ತಮಾನಕ್ಕೆ ಕತ್ತಲಾಗಿರುವ ಗತಕಾಲ. ಕಪ್ಪಾಗಿ ಕಾಡುವ ಗತಾನುಭವವೂ ಅದಾಗಿರಬಹುದು. ಅಂಥ ಕರಿನರೆ ಬಣ್ಣದ ಪುಚ್ಛವು ಕಾಲವೆಂಬ ಹಕ್ಕಿಯ ಹಿಂಬದಿಗಂಟಿಕೊಂಡಿದೆ. ವರ್ತಮಾನವೆಂಬ ಬಿಳಿಬಣ್ಣದ, ಹೊಳಪಿನ ಗರಿಯು ಕಾಲದ ಹಕ್ಕಿಯಲ್ಲಿ ಗರಿಗರಿಯಾಗಿ ಕಂಗೊಳಿಸುತ್ತಿದೆ! ವರ್ತಮಾನವಾದ್ದರಿಂದ ಅದು ಬೆಳಕಿನಲ್ಲಿದೆ. ಎಂದೇ ಬಿಳಿ-ಹೊಳೆ ಬಣ್ಣ. ವರ್ತಮಾನಕ್ಕೆ ’ಹೊಳೆ’ವ ಬಣ್ಣ. ವರ್ತಮಾನವು, ಹರಿಯುತ್ತಿರುವ (ಕಾಲದ) ಹೊಳೆಯೂ ಹೌದು. ಕಾಲದ ಹಕ್ಕಿಗೆ ಕೆಂಬಣ್ಣದ-ಹೊಂಬಣ್ಣದ ರೆಕ್ಕೆಗಳೆರಡು. ಕೆಂಬಣ್ಣ ಮತ್ತು ಹೊಂಬಣ್ಣಗಳು ಸಂಕೇತಿಸುವ ವಸ್ತು-ವಿಷಯ-ಭಾವಗಳೆಲ್ಲ ಇಲ್ಲಿ ಪ್ರಸ್ತುತ. ಇಂಥ ರೆಕ್ಕೆಪುಕ್ಕಗಳನ್ನೊಳಗೊಂಡ ಹಾರುವ ಹಕ್ಕಿ ’ಕಾಲ’.

೩. ಕಾಲದ ಹಕ್ಕಿಯ ಬಣ್ಣ ನೀಲಮೇಘಮಂಡಲಸದೃಶ. ನೀಲಿ ಅಂದರೆ ವೈಶಾಲ್ಯ. ನೀಲಮೇಘಮಂಡಲದಂತೆ ಸಮಬಣ್ಣವೂ ಹೌದು. ಕಾಲದ ದೃಷ್ಟಿ ತರತಮರಹಿತ. ಕಾಲದ ಹಕ್ಕಿಯು ನೀಲಮೇಘಮಂಡಲದಂತೆ ಅಗಾಧ-ವ್ಯಾಪಕ-ವಿಶಾಲ. ಎಷ್ಟೆಂದರೆ, ಆಕಾಶಕ್ಕೆ ರೆಕ್ಕೆಗಳು ಮೂಡಿ ಅಕಾಶವೇ ಹಾರುತ್ತ ಸಾಗಿದಂತೆ! ಕಾಲದ ಹಕ್ಕಿಯ ’ಹಾರಾಟ’ (ಶ್ಲೇಷೆ ಗಮನಿಸಿರಿ) ಅಂಥದು! ಅನಾದಿಯೆಂಬ ಮುಗಿಲಿಗೆ ಮೂಡಿದ ರೆಕ್ಕೆಗಳೊಡನೆ, ಅನಂತವೆಂಬ ನೀಲಮೇಘಮಂಡಲದಲ್ಲಿ, ದಿನ-ಮಾಸ-ವರ್ಷ....ಯುಗ....ಮನ್ವಂತರ....ಕಲ್ಪ....ಗಳೆಂಬ ನಕ್ಷತ್ರಗಳ ಮಾಲೆ ಧರಿಸಿ, ದಿನ-ರಾತ್ರಿಗಳೆಂಬ ಸೂರ್ಯ-ಚಂದ್ರರನ್ನು ಕಣ್ಣುಗಳಾಗಿ ಹೊಂದಿ, ನೋಡುತ್ತ, ತೋರುತ್ತ, ತೋರಿಸುತ್ತ ಕಾಲದ ಹಕ್ಕಿಯು ಹಾರುತ್ತಿದೆ.

೪. ಸಾಮ್ರಾಜ್ಯಗಳ ಭರ್ಜರಿ ತೆನೆಗಳನ್ನೆಲ್ಲ ಒಕ್ಕಿ, ಚಿಕ್ಕಪುಟ್ಟ ಮಂಡಲ-ಗಿಂಡಲಗಳ ಕೋಟೆಕೊತ್ತಲಗಳನ್ನೆಲ್ಲ ಮುಕ್ಕಿ, ಖಂಡ-ಖಂಡಗಳನ್ನೇ (ಒಂದೆಡೆ ಪ್ರಾಕೃತಿಕ ಬದಲಾವಣೆ-ಪ್ರಗತಿ-ವಿಜ್ಞಾನ; ಇನ್ನೊಂದೆಡೆ ಯುದ್ಧ-ಪ್ರಕೃತಿವಿಕೋಪ-ವಿನಾಶ ಈ ರೀತಿ) ತೇಲಿಸಿ-ಮುಳುಗಿಸಿ, ’ಸಾರ್ವಭೌಮ’ರೆಲ್ಲರ ನೆತ್ತಿಯ ಕುಕ್ಕಿ (ಇದೀಗ ಪ್ರಜಾಪ್ರಭುತ್ವದ ಬಯಲಲ್ಲಿ) ಕಾಲದ ಹಕ್ಕಿಯು ಹಾರುತ್ತಿದೆ.

೫. ಯುಗಯುಗಗಳ ಆಗುಹೋಗುಗಳನ್ನು ತಿಕ್ಕಿ-ತೀಡಿ, ಚರಿತ್ರೆಯನ್ನು ಹಿಂದೆಬಿಟ್ಟು (ಅಳಿಸಿ-ಒರಸಿ), ಮನ್ವಂತರಗಳ (ಅಂದರೆ ದೀರ್ಘ ಕಾಲಾವಧಿಯ) ಭಾಗ್ಯಕ್ಕೆ (ಅಂದರೆ ಪ್ರಗತಿಗೆ) ಹೇತುವಾಗಿ-ಸಾಕ್ಷಿಯಾಗಿ, ಮನ್ವಂತರಗಳ (ಅಂದರೆ ಪರಿವರ್ತನೆಯ ಸಮಯದ) ಭಾಗ್ಯಕ್ಕೆ (ಅಂದರೆ ಇತ್ಯಾತ್ಮಕ ಬದಲಾವಣೆಗಳಿಗೆ) ಹೇತುವಾಗಿ-ಸಾಕ್ಷಿಯಾಗಿ, ರೆಕ್ಕೆಯ ಬೀಸುತ್ತ (ಅಂದರೆ ಕಾಲಕ್ರಮದಲ್ಲಿ) ಚೇತನಗೊಳಿಸಿ (ಅಂದರೆ ಪ್ರಗತಿಯ ಕಸುವು ನೀಡಿ), ಹೊಸಗಾಲದ ಹಸುಮಕ್ಕಳ ಹರಸಿ (ಅಂದರೆ ಬದಲಾದ ಲೋಕಕ್ಕೆ ಕಣ್ಣುತೆರೆದ ಅಂದಂದಿನ ಜನರನ್ನು-ಜೀವಿಗಳನ್ನು ಮುನ್ನಡೆಸಿ ಮತ್ತು ಇಂದಿನ ಲೋಕಕ್ಕೆ ಕಣ್ಣುತೆರೆದಿರುವವರನ್ನು ಮುನ್ನಡೆಸುತ್ತ) ಕಾಲದ ಹಕ್ಕಿಯು ಹಾರುತ್ತಿದೆ (ಕಾಲ ಸಾಗುತ್ತಿದೆ).

೬. ಬೆಳ್ಳಿಯ, ಅಂದರೆ ಶುಕ್ರಗ್ರಹದ ವಾಯುಮಂಡಲವನ್ನು ಪ್ರವೇಶಿಸಿದ ನಾವು, ತಿಂಗಳಿನೂರಿನ, ಅಂದರೆ ತಿಂಗಳಬೆಳಕಿನ ಚಂದ್ರನ ’ತಂಪು’ನೆಲ ತುಳಿದ ನಾವು ಇದೀಗ ಮಂಗಳಗ್ರಹದ ಅಂಗಳವನ್ನೂ ತಲುಪಿದ್ದೇವೆ. ಕಾಲಾಂತರದಲ್ಲಿ ನಮ್ಮ ಸಾಧನೆಯಿದು.

೭. ಹೀಗೆ ನಾವು ದಿಕ್ಕುದಿಕ್ಕುಗಳೆಡೆ ನಮ್ಮ ಗಮನ ಹರಿಸಿದ್ದೇವೆ, ಗತಿಶೀಲರಾಗಿದ್ದೇವೆ. ವಿಶ್ವ(ದ)ರೂಪವನ್ನರಿಯಲೆತ್ನಿಸುತ್ತಿದ್ದೇವೆ. ’ಆಚೆಗೆ’, ಅರ್ಥಾತ್, ಅಧ್ಯಾತ್ಮದೆಡೆಗೂ ನಮ್ಮ ಗಮನವನ್ನು ಹರಿಯಬಿಟ್ಟಿದ್ದೇವೆ. ಈ ನಮ್ಮ ಗತಿಯು ಕಾಲಕ್ರಮದಲ್ಲಿ ಬ್ರಹ್ಮಾಂಡದ ರಹಸ್ಯವನ್ನು ಒಡೆಯುತ್ತದೆಯೇ ಅಥವಾ ಈ ವಿಶ್ವವನ್ನೇ ಹೋಳುಮಾಡುತ್ತದೆಯೇ ಬಲ್ಲವರು ಯಾರು? ಇಂಥ ಯಾವುದೋ ಘಟನೆಗೆ ಆ ಸೃಷ್ಟಿಕರ್ತ ಹಾಕಿರುವ ಹೊಂಚೇ ಇದೆಲ್ಲ? ಸೃಷ್ಟಿಕರ್ತನೋ, ಈ ವಿಶ್ವದ ಇನ್ನಾವುದೋ ಶಕ್ತಿಯೋ ಅಥವಾ ಎಲ್ಲ ತಂತಾನೆಯೋ? ಇದೆಲ್ಲ ಉದ್ದೇಶಿತವೋ ಅನುದ್ದೇಶಿತವೋ? ಯಾರು ಬಲ್ಲರು? ಈ ಗೂಢಗಳನ್ನೊಳಗೊಂಡಿರುವ ’ಕಾಲ’ವೆಂಬ ಹಕ್ಕಿಯು ಹಾರುತ್ತಿದೆ. ಕಾಲ ಸಾಗುತ್ತಿದೆ.

ನನ್ನ ಅರಿವಿಗೆ ಈ ಕವನ ದಕ್ಕಿದ್ದು ಇಷ್ಟು. ನನಗೆ ದಕ್ಕದಿರುವ ಹೊಳಹು ಈ ಕವನದಲ್ಲಿ ಇರುವುದು ಸರ್ವಥಾ ಸಾಧ್ಯ. ಬೇಂದ್ರೆಯವರ ಕಾವ್ಯದ ಮಹತ್ತು ಅಂಥದು.

***

ಮೇಲ್ಕಂಡ ನನ್ನ ಲೇಖನವನ್ನೋದಿ ವಿಜಯಶೀಲ ಅವರು ಭಾವಪೂರ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆ ಪ್ರತಿಕ್ರಿಯೆಯಲ್ಲಿ ವಿಜಯಶೀಲರ ವಿನಯಶೀಲ ಗೋಚರಿಸುತ್ತದೆ, ಮಾತ್ರವಲ್ಲ, ಬೇಂದ್ರೆಯವರ ಬಗ್ಗೆ ಮತ್ತು ಬೇಂದ್ರೆಯವರ ಕಾವ್ಯದ ಬಗ್ಗೆ ಅತ್ಯಂತ ಸೂಕ್ತ ಹಾಗೂ ಸಮರ್ಥ ನುಡಿಗಳಲ್ಲಿ ವಿಜೃಂಭಿಸಿರುವ ’ಕಾಣ್ಕೆ’ (ಗ)ಮನ ಸೆಳೆಯುತ್ತದೆ. ಆ ಸುದೀರ್ಘ ಪ್ರತಿಕ್ರಿಯೆಯು ಇಂಗ್ಲಿಷ್‌ನಲ್ಲಿರುವುದರಿಂದ ಅದನ್ನಿಲ್ಲಿ ನಮೂದಿಸಿಲ್ಲ. ಆಸಕ್ತರು ನನ್ನ ಬ್ಲಾಗ್ http://gulige.blogspot.com/
ಇದರಲ್ಲಿ ಆ ಪ್ರತಿಕ್ರಿಯೆಯನ್ನು ಓದಬಹುದು.

ಕಾವ್ಯಾರ್ಥಕ್ಕಾಗಿ ವಿಜಯಶೀಲ ಅವರು ನನ್ನಲ್ಲಿ ಮಾಡಿಕೊಂಡ ಕೋರಿಕೆ, ನನ್ನ ಲೇಖನರೂಪಿ ಉತ್ತರ, ಅದಕ್ಕೆ ವಿಜಯಶೀಲರ ಭಾವಪೂರ್ಣ ಪ್ರತಿಕ್ರಿಯೆ, ಇದೀಗ ಈ ಬರಹಗುಚ್ಛವನ್ನೋದುತ್ತಿರುವ ನಿಮ್ಮೊಡನೆ ನನ್ನೀ ಸಾಹಿತ್ಯಸಾಂಗತ್ಯ, ಇವನ್ನೆಲ್ಲ ಗಮನಿಸಿದಾಗ, ’ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್’, ಎಂಬ ’ಹಿತೋಪದೇಶ’ದ ನುಡಿ ನನಗೆ ನೆನಪಿಗೆ ಬರುತ್ತದೆ. ನಮ್ಮನ್ನು ನಾವು ಧೀಮಂತರೆಂದು ಗುರುತಿಸಿಕೊಳ್ಳುವುದರಲ್ಲಿ ತಪ್ಪೇನಿದೆ?

---೦---