ನನ್ನ ಲಿನಕ್ಸ್ ಪಯಣ...

ನನ್ನ ಲಿನಕ್ಸ್ ಪಯಣ...

ನಾನು ಲಿನಕ್ಸ್ ಬಗ್ಗೆ ಹೇಳ್ಬೇಕಂದ್ರೆ ಏಳು ವರ್ಷ ಹಿಂದಕ್ಕೆ ಹೋಗಬೇಕು. ಆಗ ಹಾಸನದಲ್ಲಿ ಇಂಜಿನಿಯರಿಂಗ್ ಓದ್ತಾ ಇದ್ದೆ, ಆಗ ತಾನೇ ೪ ನೆ ಸೆಮ್ ಮುಗಿದಿತ್ತು. ಸಹಪಾಠಿಗಳೆಲ್ಲ ಕ್ಯಾಡ್ ಕಲಿಯಲು ಬೇರೆಬೇರೆ ಕೋರ್ಸಿಗೆ ಸೇರಿದರೆ, ನಾನು ಮಾತ್ರ ರೂಮಲ್ಲೇ ಕುಳಿತು ಕಲಿಯುವ ಎಂದು ಕಂಪ್ಯೂಟರ್ ಕೊಂಡುಕೊಂಡೆ. ಅದೇ ಸಮಯಕ್ಕೆ ಹಾಸ್ಟೆಲ್ ನಲ್ಲಿ CS ಮಿತ್ರರು ರೆಡ್ ಹ್ಯಾಟ್ ೯ ನಲ್ಲಿ ಪ್ರೊಗ್ರಾಮಿಂಗ್ ಅದು ಇದು ಅಂತ ಏನೇನೋ ಪ್ರಯಿತ್ನಿಸ್ತಿದ್ರು, ನಂಗೆ ಲಿನಕ್ಸ್ ಬಗ್ಗೆ ಅರಿವಿಲ್ಲದಿದ್ದರೂ, ಹೊಸತನ್ನು ತಿಳಿಯುವ ಬಗ್ಗೆ ಕುತೂಹಲ. ಅವರತ್ರ ರೆಡ್ ಹ್ಯಾಟ್ ೯ ನ ಮೂರು ಸಿಡಿ ಗಳನ್ನ ತೆಗೆದುಕೊಂಡು, ಅದನ್ನು ಅನುಸ್ಥಾಪನೆ ಮಾಡುವ ಬಗೆಯನ್ನು ಕೇಳಿ ತಿಳ್ಕೊಂಡೆ. ಇನ್ಸ್ಟಾಲೇಶನ್ ಸ್ಟೆಪ್ ಅನ್ನು ಸರಿಯಾಗಿ ಅನುಸರಿಸದಿದ್ರೆ ಹಾರ್ಡ್ಡಿಸ್ಕ್ ಕ್ರಾಶ್ ಆಗುತ್ತೆ ಅಂತ ಎಚ್ಚರಿಕೆಯನ್ನೂ ಕೊಟ್ಟರು. ರೂಟ್, ಬೂಟ್, ಸ್ವ್ಯಾಪ್, ಹೋಂ ಪಾರ್ಟಿಶನ್ ಎಲ್ಲ ಮಾಡ್ಕೊಬೇಕೆಂದು ಸಲಹೆ ಇತ್ತರು. ಅಂತೂ ರೂಮಿಗೆ ಬಂದು ಅನುಸ್ಥಾಪನೆ ಮಾಡಲು ಶುರು ಮಾಡಿದೆ, ಮೊದಲ ಸಾರಿ ಬೂಟಿಂಗ್ ನಲ್ಲಿ ಎರರ್ ಬಂತು, ಬೂಟ್ ಮೆನು ಡಿಸ್ಪ್ಲೆ ಆದರೂ, RH ಲೋಡ್ ಆಗ್ತಿರ್ಲಿಲ್ಲ, ಇದೆನಪ ಗ್ರಹಚಾರ ಹಾರ್ಡ್ಡಿಸ್ಕ್ ಕ್ರಾಶ್ ಆಯ್ತಾ ಅಂತ ಗಾಬರಿ ಆಯ್ತು. ಬೂಟ್ ಮೆನುವಿನ ವಿಂಡೋಸ್ ಸೆಲೆಕ್ಟ್ ಮಾಡಿದಾಗ ಲೋಡ್ ಆಯ್ತು, ಸದ್ಯ ಬಚಾವ್ ಆದೆ ಅಂದುಕೊಂಡೆ. ಲಿನಕ್ಸ್ ಲೋಡ್ ಆಗದಿರುವ ಬಗ್ಗೆ ಸ್ನೇಹಿತನ್ನ ಕೇಳಿದಾಗ, ಮತ್ತೊಂದಿಷ್ಟು ಸಲಹೆ ಇತ್ತ. Ram ಕಡಿಮೆ ಇದ್ರೆ, ಸ್ವ್ಯಾಪ್ ಪಾರ್ಟಿಶನ್ ಎರಡು ಪಟ್ಟು ಮಾಡಿ ಪ್ರಯತ್ನಿಸು ಅಂದ. ಸರಿ..ಮತ್ತೆ ಪ್ರಯತ್ನಿಸಿದೆ....ಈ ಸಾರಿ ನನಗೆ ದಂತ ಭಗ್ನವಾಗಲಿಲ್ಲ. ಎಲ್ಲವೂ ಸರಿಯಾಗಿ ಬಂತು. ಇನ್ನೊದು ಖುಷಿಯಾಗಿದ್ದು ಏನಂದ್ರೆ, ಆಡಿಯೋ, ವೀಡಿಯೊ ಎಲ್ಲ ಡಿಫಾಲ್ಟಾಗಿ ಬಂತು. ವಿಂಡೋಸ್ ನಲ್ಲಾಗಿದ್ರೆ ಮದರ್ ಬೋರ್ಡಿಗೊಂದು, ಕೀಬೋರ್ಡಿಗೊಂದು, ಮೌಸ್ ಗೊಂದು ಅಂತ ಡ್ರೈವರ್ ಅನುಸ್ಥಾಪಿಸಬೇಕಿತ್ತು. ಹೀಗೆ, ನನಗೆ ಲಿನಕ್ಸ್ ಮೊದಲನೇ ನೋಟಕ್ಕೆ ಇಷ್ಟ ಆದಳು. ಹೀಗೆ ರೆಡ್ ಹ್ಯಾಟ್ ೯ ನಿಂದ ಆರಂಭವಾದ ನಂಟು ಇನ್ನೂ ಮುಂದುವರೆದಿದೆ.

ಅಂದಿನಿಂದ ದಿನಾ ಲಿನಕ್ಸ್ ನಲ್ಲಿ ಹೊಸತೇನಿದೆ ಎಂಬ ಹುಡುಕಾಟ ಶುರು ಆಯ್ತು. ಡಾಸ್, ಪಾಸ್ಕಲ್ ಬಗ್ಗೆ ಐಡಿಯಾ ಇದ್ದ ನನಗೆ ಲಿನಕ್ಸಿನ $ ಪ್ರಾಂಪ್ಟ್ ಅಷ್ಟೇನೂ ಕಷ್ಟ ಎನಿಸಲಿಲ್ಲ. ರೂಮಲ್ಲಿ ಅಂತರ್ಜಾಲದ ಸಂಪರ್ಕ ಇರದಿದ್ದಕ್ಕೆ, ನನ್ನ ಸರ್ಕಸ್ ಶುರುವಾಯ್ತು. ನೆಟ್ ಗೆ ಹೋಗೋದು, ಬೇಕಿದ್ದ ಪ್ಯಾಕೇಜ್ ಗಳನ್ನ ಗೂಗಲಿಸಿ ಡೌನ್ಲೋಡ್ ಮಾಡ್ಕೊಂಡು, ಬಳಿ ಇದ್ದ ೧.೪೪ MB ಫ್ಲಾಪಿ ನಲ್ಲಿ ಒಂದಲ್ಲ ಹತ್ತು ಬಾರಿ ಅಲೆದಾಡಿ ಸಿಸ್ಟಮ್ ಗೆ ಕಾಪಿ ಮಾಡುವಾಗ ಸುಸ್ತೋ ಸುಸ್ತು. ಜೊತೆಗೆ ಡಿಪೆಂಡೆನ್ಸಿ ತೊಂದರೆ ಬಂದ್ರೆ ಮತ್ತೆ ಸರ್ಕಸ್ ಶುರು. ಆದರೂ ಲಿನಕ್ಸ್ ಬಗ್ಗೆ RH9 ಒಳ್ಳೆ ಪಾಠ ಹೇಳಿಕೊಡ್ತು.
ನಾನು ಬೆಂಗಳೂರಿಗೆ ಬರುವವರೆಗೂ ರೆಡ್ ಹ್ಯಾಟ್ ೯ ನೆ ನನ್ನ ಜೊತೆಗಿತ್ತು. ಆಮೇಲೆ ಫೆಡೋರಾ ಕೋರ್ ೪ ಸಿಕ್ಕಾಗ, ಅದೂ ಒಂದೇ ಡೀವಿಡಿನಲ್ಲಿ. ಅದನ್ನೂ ಅನುಸ್ಥಾಪಿಸಿದ್ದಾಯಿತು. ಅದೇ ಹೊತ್ತಿಗೆ ಸಿಫಿ ಬ್ರಾಡ್ಬ್ಯಾಂಡ್ (ಈಗಿರೋದು BSNL bb) ಸಂಪರ್ಕ ತೆಗೆದುಕೊಂಡೆ. ವಿಂಡೋಸ್ ನಲ್ಲ್ಲಿ ಕನೆಕ್ಟ್ ಆದರೂ, ಫೆಡೋರದಲ್ಲಿ ಹೇಗೆ ಅಂತ ಗೊತ್ತಾಗಲಿಲ್ಲ. ಕಸ್ಟಮರ್ ಕೇರ್ ಗೆ ಫೋನಾಯಿಸಿ, ಕೇಳಿದ್ದಕ್ಕೆ, ತಂತ್ರಾಂಶವನ್ನು ಅನುಸ್ಥಾಪಿಸಲು ಹೇಳಿದ್ರು. ಅಂತೂ, ಲಿನಕ್ಸ್ ನಲ್ಲಿ ಅಂತರ್ಜಾಲ ಬಂತು. ಅಲ್ಲಿಯವರೆಗೆ, ಫಾಸ್ , ಓಪನ್ ಸೋರ್ಸ್ ಅಂದ್ರೆ ಏನು ಅಂತ ಗೊತ್ತಿರದ ನನಗೆ, ಮುಕ್ತ ತಂತ್ರಾಂಶ ಜಗತ್ತಿನ ಅಗಾಧತೆಯನ್ನು ತೋರಿಸಿತು.
ಹೀಗೆ ಅಂತರ್ಜಾಲ ಜಾಲಡ್ತಿರಬೇಕಿದ್ರೆ, kubantu.org ಕಣ್ಣಿಗೆ ಬಿತ್ತು. ಹಾಗೆ ಉಚಿತ ಸಿಡಿಯನ್ನು ಆರ್ಡರ್ ಮಾಡಿದೆ. ಸುಮಾರು ಎರಡು ತಿಂಗಳ ನಂತರ (Sep -2006) ಕುಬುಂಟು ೬.೦೬ ಆವೃತ್ತಿಯ ಸಿಡಿ ರೂಮಿಗೆ ಬಂತು. ಅನುಸ್ಥಾಪನೆ ಮಾಡಿದ ಮೇಲೆ RH/ಫೆಡೋರಾಕಿಂತ ತುಂಬಾ ಇಷ್ಟ ಆಯ್ತು. ತುಂಬಾ ಇಷ್ಟ ಆಗಿದ್ದು ಪ್ಯಾಕೇಜ್ repository. ಆವತ್ತಿಂದ ವಿಂಡೋಸನ್ನ ಸಿಸ್ಟಮ್ ನಿಂದಲೇ ಎತ್ತಂಗಡಿ ಮಾಡಿ, ಪೂರ್ಣ ಲಿನಕ್ಸಿಗೆ ಶಿಫ್ಟ್ ಆಗ್ಬಿಟ್ಟೆ.

ಆವತ್ತಿಂದ ನನ್ನ ಫಾಸ್ ನ ನಿಜವಾದ explore ಶುರುವಾಗಿದ್ದು. ರೆಪೋದ ಬೇರೆ ಬೇರೆ ತಂತ್ರಾಂಶಗಳು, ಆಟಗಳು, ನೆಟ್ವರ್ಕ್ ಟೂಲ್ ಗಳನ್ನು ಅನುಸ್ಥಾಪನೆ ಮಾಡ್ಕೊತಿದ್ದೆ. ತೊಂದರೆ ಅಥವಾ ಅನುಮಾನ ಉಂಟಾದಾಗ ಮೇಯ್ಲಿಂಗ್ ಲಿಸ್ಟ್ ಗೆ ಮೇಲ್ ಮಾಡ್ತಿದ್ದೆ, ಕೆಲವಾರು ನಿಮಿಷಗಳಲ್ಲಿ ಪ್ರತಿಕ್ರಿಯೆಗಳ ಸುರಿಮಳೆ ಬಂದಾಗ, ಅಬ್ಬ! ಎಷ್ಟು ದೊಡ್ಡ helpdesk ಅಂತ ಆಶ್ಚರ್ಯಪಟ್ಟಿದ್ದೆ :). ಆಮೇಲೆ ಗೊತ್ತಾಯ್ತು, ಅವರೆಲ್ಲ ಲಿನಕ್ಸ್ ಬಳಸ್ತ, ಬೆಳೆಸ್ತ, ತಮಗೆ ಗೊತ್ತಿರೊದನ್ನ ಇತರರಿಗೂ ತಿಳಿಸ್ತ ಮುಕ್ತ ತಂತ್ರಾಂಶವನ್ನು ಬೆಳೆಸ್ತಿರೋ ಡೆವಲಪರ್ ಸಮುದಾಯ (community) ಅಂತ.
ಹೀಗೆ ನನ್ನ ಪಯಣ ಕುಬುಂಟು ೬.೦೬ ನಿಂದ ೭.೧೦ ತನಕ, ಹೊಸ ಆವೃತ್ತಿ ಬಿಡುಗಡೆಯಾದಾಗ ಅಪ್ಗ್ರೇಡ್ ಮಾಡ್ತಾ, ಸಾಗಿತು.
ಆದರೆ ಅದೇನೋ ೭.೧೦ ನಿಂದ ೮.೦೪ ಗೆ ಅಪ್ಗ್ರೇಡ್ ಮಾಡ್ಲಿಕ್ಕೆ ಆಗ್ಲಿಲ್ಲ. ಸಿನಾಪ್ಟಿಕ್, ನಾನು ಅಪ್ಗ್ರೇಡ್ ಮಾಡೋಲ್ಲ, ಪ್ಯಾಕೇಜ್ ಡೌನ್ಲೋಡ್ ಮಾಡಲ್ಲ ಅಂತ ಹಠ ಮಾಡ್ತು. ಅಲ್ಲಿಗೆ ನನ್ನ ಕುಬುಂಟು ಯಾತ್ರೆ ಮುಗಿದಿತ್ತು. ಅವಾಗ ತಾನೇ ಸಂಪದ ಪರಿಚಯ ಆಗಿತ್ತು, ಹರಿ, ಶಿವೂ ಅವರೆಲ್ಲ ಉಬುಂಟು ಬಗ್ಗೆ ಹೇಳ್ತಾ ಇದ್ರು. ಸರಿ, ಉಬುಂಟು ೮.೦೪ ಅನುಸ್ಥಾಪಿಸಿದೆ. KDE ನಿಂದ gnome ಗೆ ಬದಲಾದಾಗ ಸ್ವಲ್ಪ ಗೊಂದಲ ಆದ್ರೂ, ಅಮೇಲೆ ಅಭ್ಯಾಸ ಆಯ್ತು.

ಹೀಗೆ ಮೊನ್ನೆ ಮೊನ್ನೆಯವರೆಗೂ ಸಾಗಿದ ನನ್ನ ಗ್ನು/ಲಿನಕ್ಸ್ ಪಯಣ ಸದ್ಯಕ್ಕೆ ನಿಂತಿದೆ. ಕಾರಣ, ಏಳು ವರ್ಷ ನನ್ನ ಜೊತೆಗಿದ್ದ ಸಿಸ್ಟಮ್ ಈಗ ಊರಲ್ಲಿ ಹಿತವಾಗಿ ಕೂತಿದೆ. ನನ್ನ ಇಷ್ಟದ "ಲ್ಯಾಪಿ" ಪಡೆಯುವವರೆಗೆ ಪಯಣಕ್ಕೆ ಬ್ರೇಕ್.

ಇಲ್ಲಿ ತನಕ ಗ್ನು/ಲಿನಕ್ಸ್ ಪ್ರತಿದಿನವೂ ಒಂದು ಹೊಸ ಅನುಭವವನ್ನು ನೀಡಿದೆ. ಯಾವತ್ತೂ ಇದು ನನಗೆ ಬೇಡ ಅನಿಸಲಿಲ್ಲ. ಸ್ನೇಹಿತರೆಲ್ಲ ವೈರಸ್, ಸಿಸ್ಟಮ್ ಸ್ಲೋ ಅಂತ ಹೇಳುವಾಗ, ನಾನು ಹಾಯಾಗಿ ಇದ್ದೆ. ಜೊತೆಗೆ ಇದೊಂದೆ ಕಾರಣ ಸಾಕಿತ್ತು ನಾನವರಿಗೆ ಗ್ನು/ಲಿನಕ್ಸ್ ಬಗ್ಗೆ ಹೇಳಲಿಕ್ಕೆ. ಹಾಗೆ, ತಿಳಿಸುವಾಗ ಅದೇನೋ ಒಂತರ ಖುಷಿ ಅಗ್ತಾ ಇತ್ತು. ಒಟ್ಟಿನಲ್ಲಿ ಲಿನಕ್ಸ್ ಪಯಣ ಸುಖಕರವಾಗಿ, ಸವಿಯಾಗಿತ್ತು.

Rating
No votes yet

Comments