ನಕ್ಕಳಾ ರಾಜಕುಮಾರಿ......

ನಕ್ಕಳಾ ರಾಜಕುಮಾರಿ......

"ನಕ್ಕಳಾ ರಾಜಕುಮಾರಿ, ನಗುವಿನ ಅಲೆಯನ್ನೇ ಉಕ್ಕಿಸಿದಳಾ ರಾಜಕುಮಾರಿ".

ಅಪ್ಪನ ಆರ್ಭಟ, ಅಮ್ಮನ ಅಸಹಾಯಕತೆ, ಆ ಹೋರಾಟದ ದಿನಗಳು ನನ್ನ ನೆಮ್ಮದಿಗೆಡಿಸಿ, ನಿದ್ರೆಯನ್ನು ದೂರ ಮಾಡಿದ್ದ ದಿನಗಳಲ್ಲಿ ಜನ್ಮವೆತ್ತಿದ ನನ್ನೊಲವಿನ ರಾಜಕುಮಾರಿ, ನೊಂದಿದ್ದ ನನ್ನ ಮನಕ್ಕೆ ’ಓಯಸಿಸ್’ ಆಗಿ ಬಂದಿದ್ದಳು. ಅಪ್ಪ - ಅಮ್ಮನ ಮರುಳು ಮಾತಿಗೆ ಮನ ಸೋತು, ಮದುವೆಯಾಗಲು ಮನ:ಪೂರ್ತಿ ತಯಾರಿಲ್ಲದಿದ್ದರೂ, ಒಪ್ಪಿದ್ದೆ. ಕೇವಲ ಆರೇ ತಿಂಗಳಲ್ಲಿ, ಕನಸಿನ ಸೌಧ ಕುಸಿದು, ಮತ್ತೆ ಅಪ್ಪನ ವಕ್ರ ದ್ರುಷ್ಟಿಗೆ ಬಲಿಯಾಗಿ ಮನೆಯಿಂದ ಆಚೆ ಬಂದಾಗ, ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆಯೊಂದಿಗೆ, ಕಾಣುತ್ತಿದ್ದ ನೋಟವೆಲ್ಲಾ ಬಟಾ ಬಯಲಿನಂತೆ, ಸುಡುವ ಮರುಳುಗಾಡಿನಂತೆ ಭಾಸವಾಗುತ್ತಿತ್ತು. ಆಗ ಈ ಭುವಿಗೆ ಬಂದವಳು "ಗೌತಮಿ".

ನನ್ನ ಕಲಾಳ ದಾಂಪತ್ಯ ಜೀವನದ ಒಂದು ಹಚ್ಚ ಹಸುರಿನ ಹೆಗ್ಗುರುತಾಗಿ ಬಂದಿಳಿದವಳು, ನಮ್ಮ ಪಾಲಿಗೆ " ದೇವರು ಕೊಟ್ಟ ಕಾಣಿಕೆ". ಅವಳ ಆಟ, ಹಠ, ಅಳು, ನಗು, ಕೇಕೆಗಳೆಲ್ಲಾ ನನ್ನ ಹಿಂದಿನ ಜೀವನದ ಮಾಸದ ಗಾಯಗಳಿಗೆಲ್ಲಾ ಔಷಧಿ ಹಚ್ಚಿ ಗುಣ ಪಡಿಸಲು ಆರಂಭಿಸಿಬಿಟ್ಟವು!! ನನ್ನ ಕೆಲಸ ಮುಗಿಸಿ ನಾನು ಮನೆಗೆ ಬರುವ ಹೊತ್ತಿಗೆ ಅವಳು, ಅವಳಮ್ಮ, ಬಾಗಿಲಲ್ಲಿ ನಿಂತು ನನಗಾಗಿ ಕಾಯುತ್ತಿದ್ದರು. ಆಗ ನನ್ನ ವಾಹನ, " ಹೀರೋ ಸೈಕಲ್". ಅವಳನ್ನು ಕೂರಿಸಿಕೊಂಡು ಒಂದು ರೌಂಡು ಹೋಗಿ ಬಂದರೆ ಅವಳಿಗೆ ಖುಷಿ, ನಾನಿರುವಾಗ ಅವಳು ಯಾವಾಗಲೂ ನನ್ನೊಂದಿಗೆ, ಅಪ್ಪಿ ತಪ್ಪಿಯೂ ಅಮ್ಮನ ಹತ್ತಿರ ಸುಳಿಯುತ್ತಿರಲಿಲ್ಲ, ನನ್ನ ಎದೆಯ ಮೇಲೇ ಮಲಗಬೇಕು, ನನ್ನ ಜೊತೆಯೇ ಇರಬೇಕು. ಓಹ್! ಅದೆಂಥಾ ಉಡುಗೊರೆ ಕೊಟ್ಟ, ಆ ದೇವರು. ನನ್ನ ಮನಸ್ಸಿನಲ್ಲಾಗುತ್ತಿದ್ದ ಭಾವನೆಗಳ ಏರಿಳಿತಗಳನ್ನು ನಾನು ಮಾತುಗಳಲ್ಲಿ ವ್ಯಕ್ತಪಡಿಸಲಾಗುತ್ತಿರಲಿಲ್ಲ. ಕಲಾಳನ್ನು ಬಿಗಿದಪ್ಪಿ ಸುಮ್ಮನೆ ನಿಟ್ಟುಸಿರು ಬಿಡುತ್ತಿದ್ದೆ, ಆದರೆ ಅದು ಅವಳಿಗೆ ಅರ್ಥವಾಗುತ್ತಿರಲಿಲ್ಲ.

ಜೀವನ ಹೀಗೇ ಮುಂದುವರೆದು, ಅವಳಿಗಾಗಿ, ಅವಳ ಸುಖಕ್ಕಾಗಿ, ಏನೆಲ್ಲಾ ಮಾಡಬೇಕೋ, ಎಲ್ಲದಕ್ಕೂ ಸೈ, ಅವಳ ಜೀವನ ಚೆನ್ನಾಗಿರಬೇಕು, ನಾನು ಪಟ್ಟ ಕಷ್ಟ, ನನ್ನಕ್ಕ ಅನುಭವಿಸಿದ ಹಿಂಸೆ, ಆ ಮಗಳಿಗೆ ಎಂದೂ, ಕನಸಿನಲ್ಲೂ, ಬರಬಾರದು ಎಂಬ ಧ್ರುಡ ನಿರ್ಧಾರದೊಂದಿಗೆ ಕೆಲಸ ಮಾಡುತ್ತಿದ್ದೆ. ಬಹಳ ಚೂಟಿಯಾಗಿದ್ದ ಮಗಳು ಎಲ್ಲ ತರಗತಿಗಳಲ್ಲೂ ಮೊದಲು, ಅವಳೇ "ಕ್ಲಾಸ್ ಲೀಡರ್". ಲಗ್ಗೆರೆಯ ಒಂದು ಸಾಮಾನ್ಯ ಶಾಲೆಯಾದ ’ ಶಾರದ ವಿದ್ಯಾ ಮಂದಿರ’ ದಲ್ಲಿ ಓದಿ, ಹತ್ತನೆಯ ತರಗತಿಯಲ್ಲಿ ೯೩% ಅಂಕಗಳನ್ನು ತೆಗೆದುಕೊಂಡು, ಪುರಸ್ಕ್ರುತಳಾದಾಗ, ನನ್ನ ಜನ್ಮ ಸಾರ್ಥಕವಾದ ಅನುಭವವಾಯಿತು. ಅವಳೊಬ್ಬ ವೈದ್ಯಳಾಗಲಿ ಎಂಬುದು ನನ್ನ ಆಶಯವಾಗಿತ್ತು, ಆದರೆ, ಮೂರ್ನಾಲ್ಕು ಧಾರಾವಾಹಿಗಳಲ್ಲಿ ಅಭಿನಯಿಸಿ, ಮೂರು ಕನ್ನಡ ಚಾನಲ್ ಗಳಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡಿ, ಅನುಭವ ಗಳಿಸಿ, ಈಗ, ನನ್ನ ನೆಚ್ಚಿನ, " ಆರತಿ, ಭಾರತಿ, ಕಲ್ಪನ, ಮಂಜುಳ, ಚಂದ್ರಕಲಾ" ರಂತೆ ಅಭಿನೇತ್ರಿಯಾಗಲು ಹೊರಟಿದ್ದಾಳೆ. ಅವಳಿಗೆ ನನ್ನ ಮನ:ಪೂರ್ವಕ ಶುಭಹಾರೈಕೆಗಳು. ಅಪ್ಪನ ಆರದ ಗಾಯಗಳಿಗೆ ದೈವಲೋಕದ " ಮದ್ದಾಗಿ" ಬಂದ, ಮುದ್ದಿನ ಮಗಳ ಮುಂದಿನ ಜೀವನ, ಸುಂದರವಾಗಿರಬೇಕಲ್ಲವೇ?? ಶುಭ ಹಾರೈಸಿ.... ನನ್ನ ರಾಜ ಕುಮಾರಿಗೆ.

Rating
No votes yet

Comments