ಹತ್ತಾರು ಸುಂದರ ಗೂಡುಗಳು; ಹತ್ತಾರು ಸುಂದರಿಯರೊಂದಿಗೆ ಸಂಸಾರ!

Submitted by harshavardhan … on Tue, 06/30/2009 - 22:09
ಬರಹ

ಗುಬ್ಬಿಗೆ ಎಷ್ಟು ಜನ ಗಂಡಂದಿರು?

ನಮ್ಮ ದೇಶದ ಖ್ಯಾತ ಪಕ್ಷಿ ಶಾಸ್ತ್ರಜ್ಞ ಡಾ. ಸಲೀಂ ಮೊಯಿಜುದ್ದೀನ್ ಅಬ್ದುಲ್ ಅಲಿ ಅವರಿಗೂ ಈ ಪ್ರಶ್ನೆ ಕಾಡಿತ್ತು!

ನಮ್ಮ ಮನೆಗಳಲ್ಲಿ ಗೋಡೆಗೆ ನೇತು ಹಾಕಲಾಗಿರುವ ಹಿರಿಯರ ಫೊಟೋ ಫ್ರೇಮ್ ಗಳ ಹಿಂಬದಿಯಲ್ಲಿ ಆಶ್ರಯ ಪಡೆದು ಸಂಸಾರ ಹೂಡುತ್ತಿದ್ದ ಗುಬ್ಬಕ್ಕ ಡಾ. ಸಲೀಂ ಅಲಿ ಅವರ ಕುದುರೆ ಲಾಯದ ಮೇಲ್ಛಾವಣಿಯ ಹೆಂಚುಗಳ ಬುಡದಲ್ಲಿ ಗೂಡು ಕಟ್ಟಿತ್ತು.

ಹೆಣ್ಣು ಗುಬ್ಬಚ್ಚಿ ಹುಲ್ಲಿನ ಗೂಡಿನಲ್ಲಿ ಮೊಟ್ಟೆ ಇಟ್ಟುದನ್ನು ಡಾ. ಅಲಿ ಖಾತ್ರಿ ಪಡಿಸಿಕೊಂಡರು. ಅಮ್ಮಾವ್ರ ಗಂಡನಂತಿದ್ದ, ಆಹಾರ ನೀಡಲು ಆಗಮಿಸುತ್ತಿದ್ದ ಗಂಡು ಗುಬ್ಬಣ್ಣನನ್ನು ಏರ್ ಗನ್ ಬಳಸಿ ಅವರು ಹೊಡೆದು ಹಾಕಿದರು. ಹತ್ತು ನಿಮಿಷ ಗತಿಸಿರಲಿಲ್ಲ..ಮತ್ತೊಂದು ಗಂಡು ಗುಬ್ಬಿ ಆಹಾರ ಒದಗಿಸಲು ಸಿದ್ಧವಾಗಿ ನಿಂತಿತ್ತು!

೭-೮ ದಿನಗಳ ಬಳಿಕ ಡಾ. ಅಲಿ ಗೂಡನ್ನು ಪರೀಕ್ಷಿಸಿದರು. ಮೊಟ್ಟೆಯೊಡೆದು ೩ ಮರಿಗಳು ಜನ್ಮ ತಾಳಿದ್ದವು. ಈ ಹಸಿ ಬಾಣಂತಿ ಗುಬ್ಬಕ್ಕನಿಗೆ ಗಂಡು ಗುಬ್ಬಿ ಬಂದು ಆಹಾರ ಒದಗಿಸುತ್ತಿತ್ತು. ಮತ್ತೆ ಏರ್ ಗನ್ ಹಿಡಿದು ಬೇಟೆಗೆ ಸನ್ನದ್ಧರಾದರು. ಕೆಲ ನಿಮಿಷಗಳಲ್ಲಿ ಆ ಗಂಡು ಗುಬ್ಬಿಯನ್ನೂ ಸಹ ಅವರು ಹೊಡೆದು ಉರುಳಿಸಿದರು. ಇತ್ತ ಪಾಪ ಗಂಡನನ್ನು ಕಳೆದುಕೊಂಡು ವಿಧವೆಯಾದ ಗುಬ್ಬಕ್ಕ ಶೋಕ ಆಚರಿಸುತ್ತಾಳೆ ಎಂದು ಊಹಿಸಿದ್ದ ಡಾ. ಅಲಿಗೆ ಮತ್ತೆ ಆಶ್ಚರ್ಯ ಕಾದಿತ್ತು! ಮತ್ತೊಂದು ಗಂಡು ಗುಬ್ಬಿ ಈ ವಿಧವೆಗೆ ಆಸರೆಯಾಗಿ ಆಹಾರ ಒದಗಿಸಲು ಟೊಂಕ ಕಟ್ಟಿ ನಿಂತಿತ್ತು. ಹೀಗೆ ಒಟ್ಟು ೮ ಗಂಡು ಗುಬ್ಬಿಗಳನ್ನು ಇವರು ಹೊಡೆದು ಉರುಳಿಸಿದರೂ ಹೆಣ್ಣು ಗುಬ್ಬಿ ‘ನಿತ್ಯ ಸುಮಂಗಲಿಯಾಗಿತ್ತು’!

ವಿಧವಾ ವಿವಾಹ, ಮಹಿಳೆಯರ ಹಕ್ಕು, ಮಕ್ಕಳ ಹಕ್ಕು ಈ ಯಾವ ಹಕ್ಕುಗಳಿಗೂ ಗುಬ್ಬಿಗಳ ಸಮುದಾಯದಲ್ಲಿ ಚ್ಯುತಿಬಾರದು!

ಸಾರಸ್ ಕ್ರೇನ್ ಎಂದು ಕರೆಯಲ್ಪಡುವ ಕ್ರೌಂಚ ಪಕ್ಷಿ ಅಪ್ಪಟ ಸಂಪ್ರದಾಯವಾದಿ. ಚುಂಚಿಗೆ ಚುಂಚು ತಾಕಿಸಿ ವಿವಾಹ ಬಂಧನಕ್ಕೆ ಒಳಗಾದ ಗಂಡು ಇಲ್ಲವೆ ಹೆಣ್ಣು ಕ್ರೌಂಚ ಪಕ್ಷಿ ಜೀವನಪರ್ಯಂತ ಏಕ ಪತಿ ಅಥವಾ ಪತ್ನಿ ವೃತಸ್ಥವಾಗಿ ಜೀವನ ಸಾಗಿಸುತ್ತವೆ. ಇಬ್ಬರಲ್ಲಿ ಒಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದರೂ ಮರು ಮದುವೆಯ ಮಾತಿಲ್ಲ! ಜೀವನ ಪರ್ಯಂತ ಒಂಟಿಯಾಗಿಯೇ ಬದುಕುತ್ತವೆ.

ಆದರೆ ಜಕಾನಾ ಎಂಬ ನೀರು ಹಕ್ಕಿಯ ವರ್ತನೆ ಮಾತ್ರ ತೀರ ವಿಚಿತ್ರ. ಗೂಡು ಕಟ್ಟುವುದು, ಮೊಟ್ಟೆಗಳಿಗೆ ಕಾವು ಕೊಡುವುದು ಹಾಗು ಮರಿಗಳ ಲಾಲನೆ, ಪಾಲನೆ ಮಾಡುವುದು ಗಂಡಿನ ಜವಾಬ್ದಾರಿ! ಗೂಡಿನಲ್ಲಿ ಕೊನೆಯ ತತ್ತಿ ಇಟ್ಟ ಬಳಿಕ ಹೆಣ್ಣು ಪಕ್ಷಿ ಎಲ್ಲ ಹೊಣೆಯನ್ನು ಗಂಡಿಗೆ ನೀಡಿ ಅಲ್ಲಿಂದ ಕಾಲ್ತೆಗೆಯುತ್ತದೆ. ಒಟ್ಟಾರೆ ಹೆಣ್ಣು ಜಕಾನಾ ಬಜಾರಿಯಾಗುತ್ತದೆ. ಗೂಡಿನ ಎದುರೇ ಹಾರಾಡುತ್ತ ಮತ್ತೊಂದು ಗೂಡನ್ನು ಕಟ್ಟಿಕೊಂಡು ಹಳೆಯ ಗಂಡಿಗೆ ವಿಚ್ಛೇದನ ಬಿಸಾಕುತ್ತದೆ! ಬಡಪಾಯಿ ಈ ಮಾಜಿ ಗಂಡ ಜಕಾನಾ ಪ್ರೀತಿಸಿ ಕೈಹಿಡಿದ ಹೆಂಡತಿ ಮನೆ ಬಿಟ್ಟು ಹೋದ ವೇದನೆ ಅನುಭವಿಸುತ್ತ ಮೊಟ್ಟೆಗಳಿಗೆ ಕಾವು ಕೊಡುತ್ತ, ಮರಿಗಳ ಪೋಷಣೆ ಮಾಡಬೇಕು.

ಇತ್ತ ಬಜಾರಿ ಹೆಣ್ಣು ಜಕಾನಾ ಸೊಕ್ಕಿನಿಂದ ಹೊಸ ಗಂಡಿನೊಂದಿಗೆ ಸರಸ ಆರಂಭಿಸುತ್ತದೆ. ತನ್ನ ಹಳೆಯ ಗಂಡನ ಮನೆ ಎದುರು ಹಾರಾಡುತ್ತ ಮಕ್ಕಳ ಸಾಕಣೆ ಹೇಗೆ ನಡೆದಿದೆ ಎಂದು ಮೇಲುಸ್ತುವಾರಿ ನಡೆಸುತ್ತದೆ. ಹೀಗೆ ಹೆಣ್ಣು ಜಕಾನಾ ಯಾವತ್ತೂ ಸದಾ ವಿಚ್ಛೇದನ ಪತ್ರ ಇಟ್ಟುಕೊಂಡೇ ಪ್ರತಿ ಬಾರಿ ಹಸೆಮಣೆ ಏರುತ್ತದೆ. ನಾಲ್ಕಾರು ಗಂಡುಗಳಿಗೆ ಹೀಗೆ ಸಲೀಸಾಗಿ, ರಾಜಾರೋಷವಾಗಿ ವಿಚ್ಛೇದನಾ ಚೀಟಿ ನೀಡುತ್ತ, ತನ್ನ ಸಂತಾನೋತ್ಪತ್ತಿ ಕೆಲಸ ಅನಾಯಾಸವಾಗಿ ನಡೆಸುತ್ತದೆ.

ಡಾ. ಸಲೀಂ ಅಲಿ ತಮ್ಮ ಆತ್ಮ ಕಥೆಯಲ್ಲಿ ಗೀಜಗ ಪಕ್ಷಿ ಹಾಗು ಸುಂದರವಾದ ಆ ಪಕ್ಷಿಯ ಗೂಡಿನ ಬಗ್ಗೆ ಅತ್ಯಂತ ಮುತುವರ್ಜಿಯಿಂದ ಉಲ್ಲೇಖಿಸುತ್ತಾರೆ. ಸಿವಿಲ್ ಇಂಜಿನೀಯರಿಂಗ್ ನಲ್ಲಿ ಪರಿಣತಿ ಪಡೆದಂತೆ ಗಂಡು ಗೀಜಗ ಅತ್ಯಂತ ಚಾಕಚಕ್ಯತೆಯಿಂದ ಭತ್ತ ಹಾಗು ಮೆದೆಯ ಹಸಿರು ಹುಲ್ಲು ಬಳಸಿ ಗೂಡು ಕಟ್ಟುತ್ತದೆ. ಈ ಗಂಡು ಕಟ್ಟಿದ ಗೂಡು ನೋಡಲು ವಧುಗಳ ದಂಡೇ ನೆರೆಯುತ್ತದೆ. ಮುಕ್ಕಾಲು ಭಾಗದಷ್ಟು ಗೂಡು ನೇಯ್ದಾದ ಮೇಲೆ ಗಂಡಿನ ಕುಶಲತೆಗೆ ಮನಸೋತ ಹೆಣ್ಣು ಗೀಜಗವೊಂದು ಜೊತೆಯಾಗುತ್ತದೆ. ಮುಂದೆ ತನಗೆ ಬೇಕಾದ ಹಾಗೆ ಅನುಕೂಲವಾಗುವ ರೀತಿಯಲ್ಲಿ ಗೂಡನ್ನು ಗಂಡಿನಿಂದ ರೂಪಿಸಿಕೊಳ್ಳುತ್ತದೆ. ನಂತರ ನೂತನ ಗೃಹ ಪ್ರವೇಶದ ನಂತರ ‘ಹನಿಮೂನ್’.

ಈ ಸರಸದ ಬಳಿಕ ಹೆಣ್ಣು ಗೀಜಗ ಗೂಡಿನಲ್ಲಿ ಮೊದಲ ತತ್ತಿ ಇಟ್ಟ ವಿಚಾರ ತಿಳಿಯುತ್ತಲೇ ಗಂಡು ಗೂಡಿನಿಂದ ಪಡಪೋಷಿಯಂತೆ ಪರಾರಿ! ಕೆಲವೇ ತಾಸುಗಳಲ್ಲಿ ಮತ್ತೊಂದೆಡೆಗೆ ಹೊಸ ಗೂಡನ್ನು ನೇಯಲು ಪ್ರಾರಂಭಿಸುತ್ತದೆ. ಇಲ್ಲಿಯೂ ಮುಕ್ಕಾಲು ಭಾಗ ಗೂಡಿನ ರಚನೆಯಾದ ನಂತರ ಹೊಸ ವಧುವಿನ ಆಗಮನ. ಮತ್ತೆ ಅದೇ ಕಥೆಯ ಪುನರಾವರ್ತನೆ. ಹೀಗೆ ಹತ್ತಾರು ಹೆಣ್ಣು ಗೀಜಗಗಳಿಗೆ ತನ್ನ ಹೊಸ ಹೊಸ ಮನೆಗಳನ್ನು ತೋರಿಸಿ ಮರುಳು ಮಾಡಿ ಗರ್ಭದಾನ ಮಾಡುತ್ತದೆ ಗಂಡು ಗೀಜಗ.

ಹೇಗಿದೆ ಪಕ್ಷಿ ಲೋಕದ ಸಾಂಸಾರಿಕ ಜೀವನ? ಅದು ವಿಸ್ಮಯಗಳ ಆಗರ. ಇಲ್ಲಿ ಪ್ರೇಮ ಪತ್ರಗಳ ಬಟವಾಡೆ ಇದೆ. ವಧು-ವರರ ಅನ್ವೇಷಣೆಯ ಸಂಭ್ರಮವಿದೆ. ಹೆಣ್ಣನ್ನು ಗೆಲ್ಲಲು ನಾನಾ ತಂತ್ರ ಹೂಡುವ ಗಂಡುಗಳು, ಹಾಗೆಯೇ ಮನಸೋತ ಹೆಣ್ಣಿನ ಸೆರಗು ಹಿಡಿದು ಅಮ್ಮವ್ರ ಗಂಡ ಎನಿಸಿಕೊಳ್ಳುವ ಮಾವನ ಮನೆಯ ಅಳಿಯಂದಿರು ಇಲ್ಲಿದ್ದಾರೆ! ಎಲ್ಲ ಮುಗಿದ ಬಳಿಕ ಕೈಕೊಡುವ ಹೆಣ್ಣುಗಳ ಇಲ್ಲಿದ್ದಾರೆ! ಹಾಗೆಯೇ ಕೈಕೊಡುವ ಪಡಪೋಷಿ ಗಂಡಂದಿರು ಸಹ ಇರುವ ಸೋಜಿಗ ಇಲ್ಲಿ ಮನೆ ಮಾಡಿದೆ. ನಾಲ್ಕಾರು ಹುಡುಗಿಯರನ್ನು ಪ್ರೀತಿಸಿದ, ವಿರಹ ವೇದನೆಯಲ್ಲಿ ಬೆಂದ ಹುಡುಗರಿದ್ದಾರೆ. ಹೆಣ್ಣನ್ನು ಹೆರುವ ಯಂತ್ರವಾಗಿಸಿ ಅಂಡಲೆಯುವ ಪೋಲಿ ಗಂಡುಗಳಿದ್ದಾರೆ. ಬಯಲಿಗೆ ಬಿದ್ದ ಕಥೆಗೆ ಜೀವನ ಪೂರ್ತಿ ಅಳುವ ಹುಡುಗಿಯ ಪ್ರಾರಬ್ಧವಿದೆ. ಸಮಾಜ ಮನ್ನಣೆ ನೀಡುವ ಬದುಕಿನ ಆದರ್ಶವೆಂದು ಏಕ ಪತ್ನಿ ಹಾಗು ಏಕಪತಿ ವೃತಸ್ಥರಾಗಿ ಜೀವನಯಾನ ನಡೆಸುವ ಜೀವಲೋಕದ ವೈಚಿತ್ರ್ಯಗಳಿವೆ! ಹಾಗೆಯೇ ಸಂಪ್ರದಾಯದ ಹೆಸರಿನಲ್ಲಿ ವಿಧವೆ-ವಿಧುರರ ಶೋಕ ಗೀತೆಗಳೂ ಇವೆ.

ಅಂದಹಾಗೆ ಇಷ್ಟೆಲ್ಲ ನೆನಪಾಗಲು ಕಾರಣವಿದೆ. ನನ್ನ ಮಿತ್ರ ಛಾಯಾಪತ್ರಕರ್ತ ಕೇದಾರನಾಥ್ ಇಲ್ಲಿಗೆ ಸಮೀಪದ ಬೆಳಗಾವಿ ನಾಕಾ ಬಳಿಯ ಬಾಯ್ ಪಾಸ್ ರಸ್ತೆಯ ಮೇಲೆ ಗೂಡು ಕಟ್ಟಿ ಹೊಸ ವಧುವಿನ ಅನ್ವೇಷಣೆಯಲ್ಲಿ ತೊಡಗಿದ್ದ ಗಂಡು ಗೀಜಗನ ಅಪರೂಪದ ಫೊಟೋ ಕ್ಲಿಕ್ಕಿಸಿದ್ದಕ್ಕಾಗಿ ನಾನು ಕೀಲಿ ಮಣೆಯಲ್ಲಿ ಈ ಕಥಾ ಹಂದರ ಹೆಣೆಯಬೇಕಾಯಿತು!

ಲೇಖನ ವರ್ಗ (Category)