ಮಂಗಳೂರ ಮಾದರಿ...

ಮಂಗಳೂರ ಮಾದರಿ...

           ಮಂಗಳೂರಿಗೆ ಬಂದಾಗ ಇಲ್ಲಿನ ಪುಸ್ತಕ ರೀತಿಯ ಕನ್ನಡ ಪ್ರಯೋಗವನ್ನು ನೀವು ಕೇಳಿಯೇ ಇರುತ್ತೀರಿ. ಇಲ್ಲವೇ ಸಿನಿಮಾದಲ್ಲಿ ಎಂಥದು ಮಾರಾಯ ನಿನ್ನ ಪಿರಿಪಿರಿ.. ನಾನು ಮಂಗಳೂರು ಮಂಜುನಾಥ ಅಲ್ವೋ? ಅನ್ನುವ ಕೆಟ್ಟ ಅನುಕರಣೆಯನ್ನಂತೂ ಕೇಳಿಯೇ ಇರುತ್ತೀರಿ. (ಮಂಗಳೂರಿನಲ್ಲಿ ಈ ರೀತಿ ಮಾತಾಡುವುದನ್ನು ನಾನು ಇಷ್ಟು ವರ್ಷದಲ್ಲಿ ಒಮ್ಮೆಯೂ ಕೇಳಿಲ್ಲ. ಇದೇ ರೀತಿ ಮಂಗಳೂರಿಗರೂ ಕೂಡ ಬೆಂಗಳೂರು ಇಲ್ಲವೇ ಧಾರವಾಡ ಕನ್ನಡವನ್ನು ಮಾತನಾಡಲು ಪ್ರಯತ್ನಿಸುತ್ತಾರೆ) ಇದರ ಜೊತೆಗೆ ವಿಶಿಷ್ಟ ರೀತಿಯಲ್ಲಿ ಪದಬಳಕೆ ಮಾಡುವುದನ್ನು ಗಮನಿಸಿರಬಹುದು.

ಕಾರಣ: ಇದಕ್ಕೆ ಇಲ್ಲಿನ ಕ್ರೈಸ್ತ ಮಿಶಿನರಿಗಳು ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಭಾಷೆಯ ಜೊತೆಗೆ ಆ ಭಾಷೆಯ ರಚನೆಯನ್ನು ಅನುಸರಿಸಿದರು.ಕಾಲಾನಂತರ ಆ ಪದಗಳು ಸಹಜವೇನೋ ಎಂಬಂತೆ ಬಳಕೆಯಾಗತೊಡಗಿದವು. ತುಳು, ಮಲೆಯಾಳಂ, ಬ್ಯಾರಿ ಭಾಷೆಯ ಪ್ರಭಾವ ಕಾರಣವಿರಬಹುದು.ತುಳು ಇಲ್ಲಿಯ ಬಹುತೇಕರ ಮಾತೃಭಾಷೆ. ಇಲ್ಲಿನ ಕನ್ನಡ ಪ್ರಯೋಗದಲ್ಲಿ ತುಳು ಪದಗಳ ಧಾರಾಳ ಬಳಕೆ ಕಾಣಬಹುದು.

ವಿಶೇಷ: ನಾವು ಮಂಗಳೂರು ಕನ್ನಡ ಎಂದು ಸಾಮಾನ್ಯವಾಗಿ ಹೇಳುತ್ತೇವೆಯಾದರೂ ಅದರೊಳಗೆಯೇ ಹಲವು ಉಪಭಾಷೆಗಳಿವೆ. ಕುಂದಾಪುರ ಸೀಮೆಯ  ಕುಂದಗನ್ನಡ ತುಳುನಾಡಿನ ವಿಶಿಷ್ಟ ಕನ್ನಡ ಪ್ರಯೋಗ. ವಿಶೇಷವೆಂದರೆ ಕುಂದಾಪುರದ ವ್ಯಕ್ತಿ ಕುಂದಗನ್ನಡ ಬಿಟ್ಟು ಮಂಗಳೂರು ಕನ್ನಡ ಉಪಯೋಗಿಸಿದರೆ ಎಂಥ ಕರ್ನಾಟಕಿ ಆಡೋದು ಅಂತ ಛೇಡಿಸುತ್ತಾರೆ.

ಇಲ್ಲಿ ಕನ್ನಡ ಮಾತಾಡುವ ಇನ್ನೊಂದು ಪ್ರಮುಖ ಸಮುದಾಯ ಹವ್ಯಕರದ್ದು. ಹವಿಕನ್ನಡದಲ್ಲಿ ಹೆಚ್ಚಾಗಿ ಹಳಗನ್ನಡ ಪದಪ್ರಯೋಗವನ್ನು ಉಳಿಸಿಕೊಂಡಿದೆ. (ಆದರೆ ಈ ವಾದವನ್ನು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕೃತಿ ಖ್ಯಾತಿಯ ಶಂಕರಭಟ್ಟರು ಒಪ್ಪುವುದಿಲ್ಲ). ಕರಾವಳಿಯೇತರ ಹವಿಕನ್ನಡಕ್ಕೂ ಕರಾವಳಿಯ ಹವಿಗನ್ನಡಕ್ಕೂ ತುಸು ವ್ಯತ್ಯಾಸವಿದೆ. ಹವಿಗನ್ನಡದ ಪದಪ್ರಯೋಗ ಮತ್ತು ತುಳುವಿನಲ್ಲಿರುವ ಪದಪ್ರಯೋಗ ರೀತಿಗಳು ಹೋಲುತ್ತವೆ. ಹಳಗನ್ನಡಕ್ಕೂ ತುಳು ಭಾಷೆಗೂ ಹತ್ತಿರದ ಭಾಂದವ್ಯವಿದೆ. ಇಲ್ಲಿ ಕನ್ನಡವು ಜಾತಿಯಿಂದ ಜಾತಿಗೆ, ವೃತ್ತಿಯಿಂದ ವೃತ್ತಿಗೆ, ಪ್ರದೇಶದಿಂದ ಪ್ರದೇಶಕ್ಕೆ ಈ ಉಪಭಾಷೆಯು ಬದಲಾಗುತ್ತಿರುತ್ತದೆ.

ಕೆಲವು ಪದಪ್ರಯೋಗಗಳು:

೧. ಅವನು ಇವತ್ತು ನಮ್ಮ ಮನೆಯಲ್ಲಿ ನಿಲ್ಲುತ್ತಾನೆ. (ಇರುತ್ತಾನೆ ಎಂಬರ್ಥದಲ್ಲಿ)

೨. ಬೇಗ ಮಂಗಳೂರಿಗೆ ಎತ್ತಬೇಕು.(ತಲುಪಬೇಕು)

೩. ಮಗು ತುಂಬಾ ಕೂಗುತ್ತಿದೆ (ಅಳುತ್ತಿದೆ)

೪. ನಿಮ್ಮದು ಟೀ ಆಯ್ತಾ? (ಸಾಮಾನ್ಯವಾಗಿ ಬೆಳಗಿನ ತಿಂಡಿ)

೫. ಟೈಮ್ ೧೦ ಗಂಟೆ ಆಯ್ತು. ಇವತ್ತು ಕ್ಲಾಸ್ ಇತ್ತಾ? (ಇದೆಯಾ?)

೬. ನೀನೂ ಬರೋ ಕಣೋ.. (ಕಣೋ ಪದ ಸೇರಿಸಿದರೆ ಅದು ಬೆಂಗಳೂರು ಕನ್ನಡವಾಗುತ್ತದೆ ಎಂಬ ತಿಳುವಳಿಕೆ ಇರುವಂತೆ ತೋರುತ್ತದೆ. ಹಾಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಸೇರಿಸಿಬಿಡುತ್ತಾರೆ.)

ಗಮನಿಕೆ:  ಭಾಷಾಬಳಕೆಯಲ್ಲಿನ ಬದಲಾವಣೆ ವೇಗವಾಗಿ ಪರಿವರ್ತನೆಯಾಗುವುದು ಕಾಲೇಜು ವಿದ್ಯಾರ್ಥಿಗಳ ನಡುವೆ. ಇಲ್ಲಿಯೂ ಕನ್ನಡ ಬಳಕೆಯಲ್ಲಿ ಪಡ್ಡೆ ಭಾಷೆಯೂ ಪ್ರವೇಶ ಪಡೆಯುತ್ತಿದೆ. ಮಾಧ್ಯಮಗಳು ಬಹುಶ: ಇದಕ್ಕೆ ಸಾಕಷ್ಟು ಕಾರಣವಿರಬಹುದು. ಉದಾಹರಣೆಗೆ ಮಚ್ಚ, ಮಗ, ಲೈನು ಹೊಡೆಯುವುದು (ಈ ಪದಕ್ಕಂತೂ ಒಂದೇ ಪ್ರದೇಶದಲ್ಲಿ ಹಲವು ಪದಪ್ರಯೋಗಳಿರಬಹುದು), ಕಳಿಚಿಕೋ ಇತ್ಯಾದಿ. ಇನ್ನೊಂದು ವಿಶೇಷವೆಂದರೆ ಕಾಲೇಜು ಹುಡುಗಿಯರ (ಅದರಲ್ಲೂ ನಗರಪ್ರದೇಶದ) ಭಾಷಾಬಳಕೆಯಲ್ಲಿ ಆಗುತ್ತಿರುವ ವ್ಯತ್ಯಾಸಗಳು.ಈ ಮೊದಲು ಸಾಕಷ್ಟು ತುಳು ಬಳಕೆ ಮಾಡುತ್ತಿದ್ದ ವಿದ್ಯಾರ್ಥಿ ವರ್ಗ ಇಂಗ್ಲೀಷ್ ಬಳಕೆಗೆ ಒಳಗಾಗಿದೆ. ಇಲ್ಲವೇ ವಿಶೇಷ ಶೈಲಿಯಲ್ಲಿ ಕನ್ನಡ ಬಳಕೆ ಮಾಡತೊಡಗಿದ್ದಾರೆ. ಇದನ್ನು ಇಲ್ಲಿ ಮಾತಲ್ಲಿ ಶೇಲೆ ಮಾಡುವುದು ಎನ್ನುತ್ತಾರೆ. ಸ್ವಲ್ಪ ಸರಳವಾಗಿ ಹೇಳಬೇಕೆಂದರೆ ಇಂಗ್ಲೀಷ್ ತರಹ ಕನ್ನಡವನ್ನು ಬಳಸುವುದು. 

  ಇಷ್ಟೊಂದು ಚೇಂಜ್ ಆಯ್ತಲ್ಲ ಅಂತ ತಲೆ ಬಿಸಿ ಮಾಡಿಕೊಳ್ಳಬೇಡಿ. ಬದಲಾವಣೆ ಭಾಷೆಯ ಮೊದಲ ತತ್ವ. ಇಂಥ ಬದಲಾವಣೆಗಳ ಹಿಂದಿರುವ ಕಾರಣಗಳನ್ನು ಹುಡುಕಿ ಅಧ್ಯಯನ ಮಾಡುವುದು ಭಾಷಾವಿಜ್ಞಾನದ ಕೆಲಸ.

Rating
No votes yet

Comments