ಅಮಾವಾಸ್ಯೆಯ ರಾತ್ರಿಯಲ್ಲಿ... ನಂದಿ ಬೆಟ್ಟದ ತಪ್ಪಲಿನಲ್ಲಿ.

ಅಮಾವಾಸ್ಯೆಯ ರಾತ್ರಿಯಲ್ಲಿ... ನಂದಿ ಬೆಟ್ಟದ ತಪ್ಪಲಿನಲ್ಲಿ.

ಅದೊಂದು ಅಮಾವಾಸ್ಯೆಯ ರಾತ್ರಿ!!  ನಂದಿ ಬೆಟ್ಟದ ಸುತ್ತಲಿದ್ದ ಹಲವಾರು ಬೆಟ್ಟಗಳ ನಡುವಿನಿಂದ ಸುಯ್ಯನೆ ಬೀಸುತ್ತಿದ್ದ ತಂಗಾಳಿಗೆ ಆ ಕಾರ್ಖಾನೆಯ ಮುಂದಿದ್ದ ಉದ್ಯಾನವನದಲ್ಲಿದ್ದ ಹಲವಾರು ಹೂ ಗಿಡಗಳಲ್ಲಿ ಅರಳಿದ್ದ ಸುಮಗಳ ಮಧುರ ವಾಸನೆ ಮನ ತುಂಬುತ್ತಿತ್ತು, ಕಚೇರಿಯ ಮುಂದಿದ್ದ ನೀಲಗಿರಿ ಮರ ತೊನೆದಾಡುತ್ತಾ, ಬಳುಕುವ ಸುಂದರಿಯ ಸೊಂಟವನ್ನು ನೆನಪಿಸುತ್ತಿತ್ತು.  ಸಮಯ ರಾತ್ರಿಯ ಹನ್ನೆರಡಾಗುವುದರಲ್ಲಿತ್ತು,  ಅಲ್ಲಿನ ಭದ್ರತಾ ವಿಭಾಗದ ಮುಖ್ಯಸ್ಥನಾಗಿದ್ದ ನಾನು ಕೆಲವು ದಿನಗಳಿಂದ ಹಲವು ವಿಶೇಷ ಕಾರಣಗಳಿಂದಾಗಿ ರಾತ್ರಿ ಪಾಳಿಯಲ್ಲಿ ಬಂದು ಆ ಕಾರ್ಖಾನೆಯ ರಾತ್ರಿ ಪಾಳಿಯ ಸಕಲ ಚಟುವಟಿಕೆಗಳನ್ನೂ ಕೂಲಂಕುಷವಾಗಿ ಪರಿಶೀಲಿಸಿ, ಅತಿಯಾದ ಕುತೂಹಲದಿಂದ ನನ್ನ ಗಡಿಯಾರದ ಮುಳ್ಳು ಆ ಹನ್ನೆರಡು ಘಂಟೆಯ ಗಡಿಯನ್ನು ದಾಟುವುದಕ್ಕಾಗಿ ಕಾದು ಕುಳಿತಿದ್ದೆ!  ಹಾಗೆ ಕಾದು ಕುಳಿತಿದ್ದರ ಹಿನ್ನೆಲೆ ಹೀಗಿದೆ:

ಅದೊಂದು ಸಣ್ಣ ಕಾರ್ಖಾನೆ, ಸುಮಾರು ಐನೂರು ಜನ ಕೆಲಸಗಾರರು, ಅದರಲ್ಲಿ ಇನ್ನೂರು ಜನ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು, ಪಕ್ಕದ "ಕಣಿವೆ ಪುರ, ನಂದಿಗ್ರಾಮ" ಗಳಲ್ಲಿ ವಾಸಿಸುತ್ತಾ, ದಿನವೂ ಕಾರ್ಖಾನೆಯ ಕೆಲಸಕ್ಕೆ ತಪ್ಪದೆ ಬರುತ್ತಾ ತಮ್ಮ ಜೀವನ ನಡೆಸುತ್ತಿದ್ದವರು.  ಯಾವಾಗಲೂ ಅಮಾವಾಸ್ಯೆ ಬಂತೆಂದರೆ ಸಾಕು, ಹಲವಾರು ಜನ ಕೆಲಸಕ್ಕೆ ರಜಾ ಹಾಕುತ್ತಿದ್ದರು, ರಜಾ ಸಿಕ್ಕದಿದ್ದಲ್ಲಿ ಅನಧಿಕೃತ ಗೈರು ಹಾಜರಾಗುತ್ತಿದ್ದರು. ಅದಕ್ಕಾಗಿ ಬಗೆ ಬಗೆಯ ಕಥೆಗಳನ್ನು ಹೇಳುತ್ತಿದ್ದರು, ಅದರಲ್ಲಿ ತುಂಬಾ ಮುಖ್ಯವಾದುದು, ಆ ಕಾರ್ಖಾನೆಯಲ್ಲಿ, ಅದೂ ಅಮಾಮಾಸ್ಯೆಯ ದಿನಗಳಲ್ಲಿ " ದೆವ್ವ " ಬರುತ್ತದೆ ಎಂಬುದಾಗಿತ್ತು!  ಅವರ ದೈನಂದಿನ ಕೆಲಸದ ವಸ್ತುಗಳು ಇಟ್ಟಲ್ಲಿಂದ ಬೇರೆಲ್ಲೋ ಹೋಗುವುದು, ಯಾರಾದರೂ ನಿದ್ರೆ ತಡೆಯದೆ ಮಲಗಿ ಬಿಟ್ಟರೆ ಅವರನ್ನು ಕೊಂಡೊಯ್ದು ಬೇರೆಲ್ಲೋ ಮಲಗಿಸುವುದು, ರಾತ್ರಿಯ ಟೀ ಮಾಡುವ ಹುಡುಗ ಬಹಳ ರಸವತ್ತಾಗಿ ಎಲ್ಲರ ನಿದ್ದೆಯೋಡಿಸುವಂತಹ ಟೀ ಮಾಡಿ ತರುವಾಗ ಅದು ಬರೀ ನೀರಾಗಿ ಬಿಡುವುದು, ಹೀಗೆ ನೂರೆಂಟು ಕಥೆಗಳು ಹೆಣೆದುಕೊಂಡಿದ್ದವು. ಇದನ್ನು ಪರಿಪೂರ್ಣವಾಗಿ ಶೋಧಿಸಿ ಈ ಸಮಸ್ಯೆಗೆ ಒಂದು ಪರಿಹಾರ ಕಂಡು ಹಿಡಿಯಲು ನನಗೆ ಆದೇಶಿಸಲಾಗಿತ್ತು.  ಅದಕ್ಕಾಗಿ ನಾನು ಅಮಾವಾಸ್ಯೆಗೆ ಮುಂಚೆಯೇ, ದಿನದ ಪಾಳಿಯಿಂದ ರಾತ್ರಿ ಪಾಳಿಗೆ ವರ್ಗಾವಣೆಗೊಂಡು, ಆ "ಭಯಂಕರ" ಅಮಾವಾಸ್ಯೆಗಾಗಿ ಕಾಯುತ್ತಿದ್ದೆ, ಕೊನೆಗೂ ಬಂದೇ ಬಂತು, ಆ ಅಮಾವಾಸ್ಯೆಯ ರಾತ್ರಿ!

ನನ್ನ ತಂಡದಲ್ಲಿದ್ದ ಮೇಲ್ವಿಚಾರಕರು ಹಾಗೂ ಕೆಲವು ಹಿರಿಯ ಭದ್ರತಾ ರಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅಲ್ಲಿ ರಾತ್ರಿಯಲ್ಲಿ, ಅದೂ ಅಮಾವಾಸ್ಯೆಯ ಹಿಂದೆ ಮುಂದೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಕೂಲಂಕುಷ ಮಾಹಿತಿ ಸಂಗ್ರಹಿಸಿದೆ.  ಒಬ್ಬನಂತೂ ನನ್ನನ್ನು ಕಾರ್ಖಾನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದ ಜನರೇಟರ್ ರೂಮಿನ ಬಳಿ ಕರೆದೊಯ್ದು,(ಅದು ಸರಿಯಾಗಿ ಒಂದು ಬೆಟ್ಟದ ಬುಡದಲ್ಲಿದೆ), ಅಲ್ಲಿ ಮರಳು ನೆಲದಲ್ಲಿ ಉಂಟಾಗಿದ್ದ ಸುಮಾರು ಒಂದಡಿ ಅಗಲದ ಕಾಲುವೆಯಂಥಾ ಜಾಗವನ್ನು ತೋರಿಸಿ, ಅವನು ಪ್ರತಿದಿನ ಅದನ್ನು ಅಳಿಸಿ ಹಾಕಿದಂತೆಲ್ಲಾ ಅದು ಮತ್ತೆ ಮತ್ತೆ ಬರುತ್ತದೆಂದೂ, ಅಲ್ಲಿ ಸುಮಾರು ಇಪ್ಪತ್ತು ಅಡಿ ಉದ್ಧದ ಹಾವು, ಬೆಟ್ಟದಿಂದ ಬಂದು ಆ ಕಾರ್ಖಾನೆಯ ಆವರಣವನ್ನು ಒಂದು ಸುತ್ತು ಹೊಡೆದು ಮತ್ತೆ ವಾಪಸ್ಸು ಹೋಗುತ್ತದೆಂದು ಹೇಳಿದಾಗ, ಆ ಜಾಗವನ್ನು ಕಂಡು ನನ್ನ ರೋಮಗಳೆಲ್ಲಾ ಎದ್ದು ನಿಂತವು!  ಆ ಕುರುಹು ನಿಜವಾಗಿಯೂ ಒಂದು ದೊಡ್ದ ಗಾತ್ರದ ಹಾವು ತನ್ನ ಭಾರೀ ಮೈಯನ್ನೆಳೆದುಕೊಂಡು ಹೋಗುವಾಗ ಉಂಟಾಗುವಂಥದ್ದೆ ಎಂದು ನನಗೂ ಅನ್ನಿಸಿತ್ತು.  ಯಾವ ರಕ್ಷಕನಾಗಲಿ, ವಿದ್ಯುತ್ ಪರಿಕರಗಳ ಮೇಲ್ವಿಚಾರಕನಾಗಲಿ,  ಆ ಅಮಾವಾಸ್ಯೆಯ ದಿನದಂದು ಜನರೇಟರ್ ರೂಮಿನ ಬಳಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಒಪ್ಪುತ್ತಿರಲಿಲ್ಲ!  ಏನಾದರೂ ಒಂದು ಕಾರಣ ನೀಡಿ ಕೆಲಸದಿಂದ ತಪ್ಪಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಒಟ್ಟು ಉತ್ಪಾದನೆಯ ಮೇಲೆ ದುಷ್ಪರಿಣಾಮವಾಗಿ, ಇದೊಂದು ಬಿಡಿಸಲಾಗದ ಒಗಟಾಗಿ ಆಡಳಿತ ಇಲಾಖೆಗೆ ಒಂದು ದೊಡ್ಡ ತಲೆನೋವಾಗಿತ್ತು. ಈ ಸಂಗತಿಯನ್ನು ಬಿಡಿಸಿ, ಸರಿಪಡಿಸುವ ಗುರುತರ ಕಾರ್ಯ "ಮಹಾ ಧೈರ್ಯವಂತ, ಛಲದಂಕಮಲ್ಲ ಮಂಜಣ್ಣ" ಇತ್ಯಾದಿ ಇತ್ಯಾದಿ ಬಿರುದಾಂಕಿತನಾಗಿದ್ದ ನನಗೆ ವಹಿಸಲಾಗಿತ್ತು.

ಭದ್ರತಾ ರಕ್ಷಕರ ತಂಡದಲ್ಲಿ ಸ್ವಲ್ಪ ಧೈರ್ಯವಂತರೆಂದು ಗುರುತಿಸಿಕೊಂಡಿದ್ದ ವೇದಮೂರ್ತಿ ಹಾಗೂ ಭೀಮಯ್ಯರನ್ನು ಇತರ ಹತ್ತು ಮಂದಿಯ ಜೊತೆಗೆ ಆ ಅಮಾವಾಸ್ಯೆಯ ದಿನದ ರಾತ್ರಿ ಪಾಳಿಗೆ ನಿಯೋಜಿಸಿದೆ. ಹೊಸ ಪ್ಯಾಕ್ ಗೋಲ್ಡ್ ಫ್ಲೇಕ್ ಸಿಗರೇಟ್ ಜೇಬಿನಲ್ಲಿಳಿಸಿ ಒಂದರ ಹಿಂದೊಂದು ಸಿಗರೇಟ್ ಸುಡುತ್ತಾ ಎಲ್ಲಾ ಮೂಲೆ ಮೂಲೆಗಳನ್ನೂ ಸುತ್ತಿ ಎಲ್ಲವೂ ಸರಿಯಾಗಿದೆಯೆಂದು ಖಾತ್ರಿ ಪಡಿಸಿಕೊಂಡು, ಆ ಹನ್ನೆರಡು ಘಂಟೆಯಾಗುವುದನ್ನೇ ಕಾಯುತ್ತಿದ್ದೆ.  ಸರಿಯಾಗಿ ಹನ್ನೆರಡು ಘಂಟೆಗೆ ವೇದಮೂರ್ತಿಯ ಜೊತೆಗೆ ಭದ್ರತಾ ಕಚೇರಿಯಿಂದ ಹೊರಟೆ, ನಮ್ಮ ರಕ್ಷಕರು ಸಾಕಿದ್ದ ಮೂರು ನಾಯಿಗಳು ನಮ್ಮನ್ನು ಹಿಂಬಾಲಿಸಿದವು.  ಕಾರ್ಖಾನೆಯ ಒಳಗೆಲ್ಲೂ ಯಾವುದೇ ವ್ಯತ್ಯಾಸವೂ ಕಂಡು ಬರಲಿಲ್ಲ, ಮೇಲ್ವಿಚಾರಕ "ಲಿಂಗದೇವರು" ಹೇಳಿದ್ದ ಪರಿಕರಗಳು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಇದ್ದಕ್ಕಿದ್ದಂತೆ ಬದಲಾಗುವುದನ್ನು ನೋಡಬೇಕೆಂದು ಸುಮಾರು ಒಂದು ಘಂಟೆ ಕಾಲ ಕಾದರೂ ಏನೂ ಆಗಲಿಲ್ಲ! ಅವನಿಗೊಮ್ಮೆ ಛೀಮಾರಿ ಹಾಕಿ, ಧೈರ್ಯದಿಂದ ಕೆಲಸ ಮಾಡುವಂತೆ ತಾಕೀತು ಮಾಡಿ ಹೊರ ಬಂದೆ.  ಅಲ್ಲಿಂದ ಸೀದಾ ಹೋಗಿದ್ದು ಬೆಟ್ಟದ ಬುಡದಲ್ಲಿದ್ದ ಜನರೇಟರ್ ರೂಮಿನ ಕಡೆಗೆ, ಅಲ್ಲಿಯವರೆಗೂ ನಮ್ಮನ್ನು ಹಿಂಬಾಲಿಸುತ್ತಿದ್ದ ನಾಯಿಗಳು ಜನರೇಟರ್ ರೂಮ್ ಸಮೀಪಿಸುತ್ತಿದ್ದಂತೆ, ಇದ್ದಕ್ಕಿದ್ದಂತೆ ಜೋರಾಗಿ ಬೊಗಳಲು ಆರಂಭಿಸಿದವು, ಹೆಚ್ಚು ಮಾತಾಡದೆ ನನ್ನ ಜೊತೆ ಬರುತ್ತಿದ್ದ ವೇದಮೂರ್ತಿಯೂ ಸಹ " ಸಾರ್, ಇಲ್ಲಿಂದ ಮುಂದೆ ಹೋಗುವುದು ಬೇಡ, ತುಂಬಾ ಅಪಾಯ" ಎಂದು ಪೀಕ ತೊಡಗಿದ, ತಣ್ಣಗಿನ ಗಾಳಿ ಬೀಸುತ್ತಿದ್ದರೂ ಅವನ ಹಣೆಯ ಮೇಲೆ ಬೆವರಿನ ಹನಿಗಳು ಇಳಿಯುತ್ತಿದ್ದುದನ್ನು ಗಮನಿಸಿದೆ.  " ವೇದಮೂರ್ತಿ, ಜನರೇಟರ್ ರೂಮಿಗೆ ಹೋಗಲೇಬೇಕು, ನಾನು ಭೀಮಯ್ಯನಿಗೆ ಅಲ್ಲಿರುವಂತೆ ಹೇಳಿದ್ದೇನೆ, ಅವನನ್ನು ನೋಡಲೇಬೇಕು" ಎಂದಾಗ ಅವನು "ಭೀಮಯ್ಯ ಯಾವುದೇ ಕಾರಣಕ್ಕೂ ಅಲ್ಲಿರುವುದಿಲ್ಲ ಸಾರ್, ಅವನಿಗೆ ಈಗಾಗಲೆ ಅಲ್ಲಿ ದೆವ್ವದ ದರ್ಶನವಾಗಿದೆ, ಅವನು ಈಗ ಮನೆಯಲ್ಲಿ ಎರಡು ಪೆಗ್ ಹೊಡೆದು ಮಲಗಿರುತ್ತಾನೆ" ಎಂದವನಿಗೆ, ಯಾವುದೇ ಕಾರಣಕ್ಕೂ ಜನರೇಟರ್ ರೂಮ್ ನೋಡದೆ ಹಿಂದಿರುಗುವ ಪ್ರಶ್ನೆಯೇ ಇಲ್ಲವೆಂದುತ್ತರಿಸಿ ಸುಮ್ಮನೆ ನನ್ನ ಜೊತೆ ಬರುವಂತೆ ಹೇಳಿದೆ.  ನಾವು ಮುಂದೆ ಹೋದಂತೆಲ್ಲಾ ನಮ್ಮ ಜೊತೆಯಿದ್ದ ನಾಯಿಗಳ ಆರ್ಭಟ ಮತ್ತಷ್ಟು ಜೋರಾಯಿತು.  ಕೊನೆಗೆ ನನ್ನ ಮುಂದೆ ಬಂದು ನಿಂತ ಒಂದು ದೊಡ್ಡ ನಾಯಿ ನನ್ನನ್ನು ಮುಂದೆ ಹೋಗಲು ಬಿಡದೆ ಜನರೇಟರ್ ರೂಮಿನ ಕಡೆಗೇ ತದೇಕಚಿತ್ತವಾಗಿ ನೋಡುತ್ತಾ, ಭಯಂಕರವಾಗಿ ಬೊಗಳತೊಡಗಿತು.  ನನ್ನ ಹಿಂದಿನಿಂದ ಜೋರಾಗಿ ಹೆಜ್ಜೆ ಸದ್ದಿನ ಸಪ್ಪಳ ಕೇಳಿ, ಹಿಂತಿರುಗಿ ನೋಡಿದರೆ, ನನ್ನ ಜೊತೆ ಬಂದಿದ್ದ ವೇದಮೂರ್ತಿ, ಸತ್ತೆನೋ ಕೆಟ್ಟನೋ ಎನ್ನುವಂತೆ ಓಡಿ ಹೋಗುತ್ತಿದ್ದ!  ನಾನೀಗ ಆ ಜನರೇಟರ್ ರೂಮಿನ ಬಳಿ ಏಕಾಂಗಿಯಾಗಿದ್ದೆ, ನನ್ನ ಮೈ ಮೇಲಿನ ರೋಮಗಳೆಲ್ಲಾ ಎದ್ದು ನಿಂತು ಯಾವುದೋ ಅಪಾಯವನ್ನು ಗ್ರಹಿಸಿ, ಮುಂದೆ ಹೋಗದಂತೆ ನನ್ನ ಕಾಲ್ಗಳನ್ನು ಮೆದುಳು ತಡೆಯುತ್ತಿತ್ತು.

ಆದರೂ, ಇಷ್ಟದೇವರನ್ನು ಮನದಲ್ಲೇ ನೆನೆದು ಮುಂದೆ ಹೆಜ್ಜೆ ಇಟ್ಟೆ, ಅದುವರೆಗೂ ಬೊಗಳಿ ಗಲಾಟೆ ಮಾಡುತ್ತಿದ್ದ ನಾಯಿಗಳೂ ಮುಂದೆ ಬರದೆ ಅಲ್ಲೆ ನಿಂತು ಬಿಟ್ಟವು!  ಧೈರ್ಯವಾಗಿ ಜನರೇಟರ್ ರೂಮಿನ ಮುಂಬಾಗಿಲಿಗೆ ಬಂದ ನಾನು, ಅಲ್ಲಿ ಕರ್ತವ್ಯದಲ್ಲಿರಬೇಕಾಗಿದ್ದ ಭೀಮಯ್ಯನಿಗಾಗಿ ಹುಡುಕುತ್ತಿದ್ದೆ, ಒಂದು ಮೂಲೆಯಲ್ಲಿದ್ದ ಕುರ್ಚಿಯ ಮೇಲೆ ವ್ಯಕ್ತಿಯೊಬ್ಬ ಗೋಡೆಗೊರಗಿ ಕುಳಿತಿದ್ದನ್ನು ಕಂಡು ಅವನ ಬಳಿ ಸಾರುವಾಗ ಟಕ್ಕೆಂದು ಎಲ್ಲಾ ವಿದ್ಯುತ್ ದೀಪಗಳು ಆರಿ ಹೋದವು!  ಇಡೀ ಕಾರ್ಖಾನೆಯ ಪ್ರದೇಶವನ್ನು ಗಾಡಾಂಧಕಾರ ಆವರಿಸಿ ಬಿಟ್ಟಿತು. ನಾಯಿಗಳ ಬೊಗಳುವಿಕೆ ಈಗ ಇನ್ನೂ ಭೀಕರವಾಗಿ ಕೇಳಿಸತೊಡಗಿತು. ನನ್ನ ಕೈನಲ್ಲಿದ್ದ ಪುಟ್ಟ ಟಾರ್ಚಿನ ಬೆಳಕಿನಲ್ಲಿ ಹಾಗೆಯೇ ಮುಂದುವರೆದು ನೋಡಿದರೆ ಆ ವ್ಯಕ್ತಿ ಭೀಮಯ್ಯನೇ ಆಗಿದ್ದ! ಪ್ರಗ್ನೆಯಿಲ್ಲದೆ ಗೋಡೆಗೊರಗಿದ್ದ ಅವನ ಬಾಯಿಂದ ನಾಲಿಗೆ ಹೊರ ಬಂದಿತ್ತು, ಅರ್ಧ ಮುಚ್ಚಿದ್ದ ಕಣ್ಣುಗಳಲ್ಲಿ ಅವ್ಯಕ್ತ ಭಯ ಎದ್ದು ಕಾಣುತ್ತಿತ್ತು.  ಅವನನ್ನು ಅಲುಗಾಡಿಸಿದರೆ ಪ್ರತಿಕ್ರಿಯೆ ಬರಲಿಲ್ಲ, ಪಕ್ಕದಲ್ಲಿದ್ದ ನೀರಿನ ಬಾಟಲಿಯಿಂದ ಸ್ವಲ್ಪ ನೀರನ್ನು ಅವನ ಮುಖದ ಮೇಲೆ ಚಿಮುಕಿಸಿ ಜೋರಾಗಿ ಅಲುಗಾಡಿಸಿದಾಗ ಬಾಹ್ಯ ಪ್ರಪಂಚಕ್ಕೆ ಬಂದ ಅವನು ಟಾರ್ಚಿನ ಬೆಳಕಿನಲ್ಲಿ ನನ್ನನ್ನು ನೋಡಿ, ಒಂದೇ ಸಮನೆ ಗೋಳಾಡತೊಡಗಿದ, "ಸಾರ್, ನೀವ್ಯಾಕಿಲ್ಲಿಗೆ ಬಂದ್ರಿ, ಆ ಮುಂಡೆ ಮತ್ತವಳ ಮಕ್ಳು ನಿಮ್ಮನ್ನು ಮುಗಿಸಿ ಬಿಡ್ತಾರೆ, ನನ್ನ ಕುತ್ತಿಗೆ ಹಿಚಿಕಿ ಇನ್ನೇನ್ ನನ್ನ ಕೊಲ್ಲೋದ್ರಲ್ಲಿದ್ಳು, ನೀವು ಬರೋದನ್ ನೋಡಿ, ನನ್ನ ಬಿಟ್ಬಿಟ್ಳು, ಆದ್ರೆ ನಿಮ್ಮನ್ ಬಿಡಲ್ಲ ಅಂದಿದ್ದಾಳೆ, ನೀವ್ ಮೊದ್ಲು ಇಲ್ಲಿಂದ ಹೊರ್ಟೋಗಿ" ಅಂದವನನ್ನು ಸಾಂತ್ವನಿಸಿ, ಸುತ್ತೆಲ್ಲಾ ಒಮ್ಮೆ ನೋಡಿದೆ, ಎಲ್ಲೂ ಯಾರೂ ಕಾಣಲಿಲ್ಲ.  ಅವನನ್ನು ನನ್ನ ಜೊತೆಯಲ್ಲಿ ಹಾಗೆಯೇ ನಿಧಾನಕ್ಕೆ ಭದ್ರತಾ ಕಚೇರಿಗೆ ಕರೆದುಕೊಂಡು ಬಂದು, ಟೀ ಕುಡಿಸಿ ಏನಾಯ್ತು, ಸರಿಯಾಗಿ ಹೇಳು ಅಂದಾಗ ಅವನು ಹೇಳಿದ, ಕಥೆ ಕೇಳುತ್ತಾ ಹೋದಂತೆ ನನ್ನಲ್ಲಿ ಅದನ್ನು ನಂಬಬೇಕೋ ಬೇಡವೋ ಎನ್ನುವ ಇಬ್ಬಂದಿತನ ಶುರುವಾಯಿತು!

ಈ ಭೀಮಯ್ಯ, ಹೆಸರಿಗೆ ತಕ್ಕಂತೆ ಆಜಾನುಬಾಹು, ದಪ್ಪ ಮೀಸೆ, ಗಡುಸಾದ ಧ್ವನಿ, ಇಡೀ ಕಣಿವೆಪುರದಲ್ಲಿ ಎದ್ದು ಕಾಣುವ ವ್ಯಕ್ತಿತ್ವ.  ನನ್ನ ಮಾತಿಗೆ ಬೆಲೆ ಕೊಟ್ಟು ಅಂದು, ಅಮಾವಾಸ್ಯೆಯಾದರೂ ಸಹ, ರಾತ್ರಿ ಪಾಳಿಗೆ ಬರಲು ಒಪ್ಪಿದ್ದ.  ಜನರೇಟರ್ ರೂಮಿನ ಹತ್ತಿರವೆ ದೆವ್ವ ಓಡಾಡುತ್ತದೆಂದು ನಂಬುವವರಲ್ಲಿ ಇವನು ಮುಂಚೂಣಿಯಲ್ಲಿದ್ದ.  ಏಕೆಂದರೆ ಅವನಿಗೆ ಹಲವಾರು ಬಾರಿ ಅಮಾವಾಸ್ಯೆಯ ಹಿಂದೆ ಮುಂದೆ ಆ ರೀತಿ ಅನುಭವವಾಗಿ ಕೊನೆಗೆ ಅಲ್ಲಿ ರಾತ್ರಿ ಪಾಳಿಯಲ್ಲಿ ಬರುವುದನ್ನು ನಿಲ್ಲಿಸಿದ್ದ. ಹಾಗೆ ನನ್ನ ಮಾತಿಗೆ ಬೆಲೆ ಕೊಟ್ಟು ಬಂದವನಿಗೆ ಅಂದು ವಿಶೇಷ ಔತಣವೇ ಕಾದಿತ್ತು!  ರಾತ್ರಿ ಹತ್ತು ಘಂಟೆಗೊಮ್ಮೆ ಹಾಗೇ ಓಡಾಡಿಕೊಂಡು ಬಂದು ಟೀ ಕುಡಿದು, ನಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆಂಬ ವಿಚಾರ ತಿಳಿದುಕೊಂಡು ಮತ್ತೆ ಜನರೇಟರ್ ರೂಮಿಗೆ ಹೋಗಿ ನನ್ನ ಬರುವನ್ನು ಎದುರು ನೋಡುತ್ತಾ ಕುಳಿತಿದ್ದಾನೆ.  ಬಲಗೈಯಲ್ಲಿ ಬಲವಾದ ಬಿದಿರಿನ ಲಾಠಿ, ಎಡಗೈಯಲ್ಲಿ ಪ್ರಖರವಾದ ಟಾರ್ಚ್ ಹಿಡಿದು ತಾನು ಮಹಾ ಧೈರ್ಯಸ್ಥ ಹಾಗೂ ನಂಬುಗೆಯ ಬಂಟ ಎಂದು ತೋರಿಸಲು ಸಜ್ಜಾಗಿ ನಿಂತಿದ್ದವನಿಗೆ ಸುಮಾರು ಹನ್ನೆರಡು ಘಂಟೆಯ ಹೊತ್ತಿಗೆ ಹಾಗೇ ನಿದ್ರೆ ಆವರಿಸಿಕೊಂಡಿದೆ, ಸ್ವಲ್ಪ ಹೊತ್ತಿನ ನಂತರ ಮಕ್ಕಳ ಕೇಕೆಯ ಸದ್ದು ಕೇಳಿ ಎಚ್ಚರವಾಗಿದೆ, ಕಣ್ಬಿಟ್ಟು ನೋಡಿದವನಿಗೆ ಅವನ ಮುಂದೆ ಇಬ್ಬರು ಸಣ್ಣ ಮಕ್ಕಳು ಬಿಳಿ ಬಟ್ಟೆಯಲ್ಲಿ ಚಪ್ಪಾಳೆ ಹೊಡೆಯುತ್ತಾ ಕೇಕೆ ಹಾಕುತ್ತಾ ಕುಣಿಯುತ್ತಿದ್ದರಂತೆ, ಅವರ ಹಿಂದೆ ಶ್ವೇತ ವಸ್ತ್ರಧಾರಿಯಾದ ಹೆಣ್ಣೊಬ್ಬಳು (ದೆವ್ವ) ಉದ್ಧನೆಯ ಕೂದಲನ್ನು ಗಾಳಿಗೆ ಹಾರ ಬಿಟ್ಟು, ಇವನನ್ನೆ ದುರುಗುಟ್ಟಿ ನೋಡುತ್ತಾ ನಿಂತಿದ್ದಳಂತೆ!  ಭೀಮಯ್ಯನ ಜಂಘಾಬಲ ಉಡುಗಿ ಹೋಗಿದೆ, ಅಲ್ಲಿಂದ ಓಡಲು ನೋಡಿದ್ದಾನೆ.  ಆಗ ಆ ಮಕ್ಕಳು " ಅಮ್ಮಾ ಅವ್ನು ಓಡೋಗ್ತಾನೆ, ಅವುನ್ನ ಬಿಡ್ಬೇಡ, ಕೊಲ್ಲಮ್ಮ" ಅಂತಾ ಜೋರಾಗಿ ಕಿರುಚುತ್ತಾ ಕೇಕೆ ಹಾಕಿ ನಕ್ಕವಂತೆ, ಮುಂದೆ ಬಂದ ಆ ಹೆಣ್ಣು ದೆವ್ವ ಇವನ ಕಪಾಳಕ್ಕೊಂದು ಬಿಗಿದು ಅವನ ಕುತ್ತಿಗೆ ಹಿಚುಕತೊಡಗಿದಳಂತೆ!  ಅದೇ ಸಮಯಕ್ಕೆ ಸರಿಯಾಗಿ ನಾನು ಅಲ್ಲಿಗೆ ಪ್ರವೇಶಿಸಿದ್ದೆ!  ನನ್ನನ್ನು ಕಂಡೊಡನೆ ಆ ಹೆಣ್ಣು ಮತ್ತವಳ ಮಕ್ಕಳು ಅಲ್ಲಿಂದ ಪರಾರಿಯಾದರಂತೆ!  ಅವನನ್ನು ಸಾಂತ್ವನಿಸಿ, "ಹಾಗೆಲ್ಲಾ ಏನೂ ಇಲ್ಲ, ಇದೆಲ್ಲಾ ನಿನ್ನ ಕಲ್ಪನೆ ಅಷ್ಟೆ, ನಾನು ಅಲ್ಲಿಗೆ ಬಂದಾಗ ನನಗೆ ಯಾವ ದೆವ್ವವೂ ಕಾಣಲಿಲ್ಲವಲ್ಲಾ", ಎಂದು ಧೈರ್ಯ ಹೇಳಿದರೂ ನನ್ನ ಮನ ಅಲ್ಲಿ ಅದೇನೋ ಅವ್ಯಕ್ತ ಶಕ್ತಿ ಇದೆ ಎಂದು ಶಂಕಿಸಲಾರಂಭಿಸಿತ್ತು.  

ಭೀಮಯ್ಯನನ್ನು ಮುಖ್ಯದ್ವಾರದ ಬಳಿಯಿದ್ದ ಭದ್ರತಾ ಕಚೇರಿಯಲ್ಲೇ ಬಿಟ್ಟು ಮತ್ತೊಮ್ಮೆ ನಾನೊಬ್ಬನೇ ಆ ಜನರೇಟರ್ ರೂಮಿನ ಕಡೆಗೆ ನಡೆದೆ.  ಅದುವರೆಗೂ ಆರಿ ಹೋಗಿದ್ದ ವಿದ್ಯುತ್ ದೀಪಗಳು ಹೊತ್ತಿಕೊಂಡವು.  ವಿದ್ಯುತ್ ಪರಿಕರಗಳ ಮೇಲ್ವಿಚಾರಕನಾಗಿದ್ದ ಜಯವಂತನನ್ನು ಸಂಪರ್ಕಿಸಿ ವಿದ್ಯುತ್ ಕಡಿತಕ್ಕೆ ಕಾರಣವೇನೆಂದು ಕೇಳಿದರೆ ಅವನು ವಿದ್ಯುತ್ ಸಂಪರ್ಕ ಕಡಿತವಾಗಿದ್ದು ಆ ಸಮಯದಲ್ಲಿ ತಂತಾನೆ ಚಾಲೂ ಆಗಬೇಕಿದ್ದ ಜನರೇಟರ್ ಕಾರ್ಯ ನಿರ್ವಹಿಸದೆ ದೀಪಗಳು ಆರಿ ಹೋದವೆಂದೂ, ಕಾರ್ಖಾನೆಯ ಯಂತ್ರೋಪಕರಣಗಳೂ ಸಹ ನಿಂತು ಹೋದವೆಂದೂ ತಿಳಿಸಿದ.  ಅವನನ್ನು ಜೊತೆಗೆ ಕರೆದುಕೊಂಡು ಹೋಗಿ ಜನರೇಟರ್ ರೂಮಿನ ಎಲ್ಲಾ ಕೀಲಿಮಣೆಗಳನ್ನು ಪರೀಕ್ಷಿಸಿದರೆ, ಎಲ್ಲವೂ ಸರಿಯಾಗಿತ್ತು!  ವಿದ್ಯುತ್ ಕಡಿತವಾದರೆ ಸ್ವಯಂಚಾಲಿತವಾಗಿ ಜನರೇಟರ್ ಓಡಬೇಕಿತ್ತು, ಆದರೆ ಅದು ಆ ಸಮಯದಲ್ಲಿ ಕಾರ್ಯ ನಿರ್ವಹಿಸದೆ ಸುಮ್ಮನಿತ್ತು!! ಜಯವಂತ ಕೂಡಾ ಪ್ರತಿ ಅಮಾವಾಸ್ಯೆಯಲ್ಲೂ ಇಲ್ಲಿ ಹೀಗೇ ಆಗುತ್ತಿದೆ ಎಂದು ಒಗ್ಗರಣೆ ಹಾಕಿದ. ಅದು ಹೇಗೆ ಎನ್ನುವುದು ನನ್ನ ಮುಂದಿನ ಯಕ್ಷ ಪ್ರಶ್ನೆಯಾಗಿತ್ತು.  

ಮುಂದೇನಾಯ್ತು........ ಮುಂದಿನ ಲೇಖನದಲ್ಲಿ.

Rating
No votes yet

Comments