''ಇಂದು' ಆಕೆ ಬದುಕಿದ್ದರೆ!?'

''ಇಂದು' ಆಕೆ ಬದುಕಿದ್ದರೆ!?'

ಬರಹ

ಅದು ೧೯೭೭ - ೭೮ರ ಇಸವಿಯಿದ್ದಿರಬೇಕು, ಬಿಹಾರದ ಬೆಲ್ಚಿ ಎಂಬ ಗ್ರಾಮದಲ್ಲಿ ಮೇಲ್ಜಾತಿಯವರ ಕ್ರೌರ್ಯಕ್ಕೆ  ಸಿಕ್ಕಿ ದಲಿತರ ಮಾರಣ ಹೋಮವಾಗಿತ್ತು. ಘಟನೆಯಲ್ಲಿ ನೊಂದವರಿಗೆ ಸಾಂತ್ವಾನ ಹೇಳಲು (ರಾಜಕೀಯ ಉದ್ದೇಶವು ಇತ್ತು, ಅದು ಬೇರೆ ಮಾತು ಬಿಡಿ) ಅದೇ ದಿನ ನಡು ರಾತ್ರಿಯಲ್ಲಿ ಏಕಾಂಗಿಯಾಗಿ ದಿಲ್ಲಿಯಿಂದ ಹೊರಟು,ಜೀಪಿನಿಂದ ಪ್ರಯಾಣ ಶುರು ಮಾಡಿ,ನಂತರ ಜೀಪು ಮುಂದೆ ಸಾಗದಿದ್ದಾಗ ರೈತನ ಟ್ರಾಕ್ಟರ್ ನಲ್ಲಿ ಮುಂದೆ ಸಾಗಿ, ನಡುವಲ್ಲಿ ನದಿ ಬಂದಾಗ ಆನೆಯೇರಿ ಘಟನೆ ನಡೆದ ಸ್ಥಳಕ್ಕೆ ಒಬ್ಬಂಟಿಯಾಗಿ ಬಂದ ಅವರನ್ನು ನೋಡಿದಾಗ ನೊಂದವರಿಗೆ ಸಾಕ್ಷಾತ್ 'ತಾಯಿ'ಯನ್ನು ನೋಡಿದಂತೆ ಆಯ್ತು. ಆ ತಾಯಿ 'ಇಂದಿರಾ ಗಾಂಧೀ' ಅವರ ಕಣ್ಣೀರು ಒರೆಸಿದ್ದಳು.

೧೯೭೧ರ ಸಮಯದಲ್ಲಿ ಪಾಕಿಗಳು ಅವರ ಸಹೋದರರು ಎಂದೆ ಹೇಳಿಕೊಳ್ಳುವ ಬಾಂಗ್ಲಾದೇಶದವರ ಮೇಲೆ ದೌರ್ಜನ್ಯ ಮಾಡುತಿದ್ದಾಗ,ಸೈನ್ಯವನ್ನು ನುಗ್ಗಿಸಿ ಪಾಕಿಗಳಿಗೆ ಮರೆಯಲಾಗದ ಪಾಠವನ್ನೇ ಕಲಿಸಿದ್ದರು, ಆಗಿನ ವಿರೋಧ ಪಕ್ಷದ ನಾಯಕರಾಗಿದ್ದಂತಹ 'ವಾಜಪೇಯಿ' ಅವರೇ ಅವರನ್ನು 'ದುರ್ಗಾ' ಅಂತ ಕರೆದಿದ್ದರು.ಆ ಯುದ್ಧದಲ್ಲಿ ಇಂದಿರಾ ಗಾಂಧಿಯವರು ನಡೆದು ಕೊಂಡ ರೀತಿಯತ್ತಲ್ಲ, ಆ ಯುದ್ಧದಲ್ಲಿ ಅವರು ತೋರಿದ ಗಟ್ಟಿತನವನ್ನ ಮತ್ಯಾವ ಭಾರತದ ಪ್ರಧಾನಿಯೂ ತೋರಿಸಿಲ್ಲ ಬಿಡಿ.ಖುದ್ದು ಅವರಪ್ಪನನ್ನೇ  ಈ ವಿಷಯದಲ್ಲಿ ಅವರು ಮೀರಿಸಿದ್ದರು.

೭೧ರ ಯುದ್ಧವೇನು ಇದ್ದಕಿದ್ದಂತೆ ಶುರುವಾದದ್ದಲ್ಲ, ಪೂರ್ವ ಪಾಕಿಸ್ತಾನದ (ಬಾಂಗ್ಲಾದೇಶ) ಮೇಲೆ ಈಗಿನ ಪಾಕಿಸ್ತಾನದವರ ಮಿಲಿಟರಿ ದಬ್ಬಾಳಿಕೆ ಮಿತಿ ಮೀರಿತ್ತು.ಬೆಂಕಿ ಹತ್ತಿದ್ದು ಪಾಕಿನಲ್ಲಿ, ಬಿಸಿ ತಟ್ಟಿದ್ದು ಭಾರತಕ್ಕೆ. ನಿರಾಶ್ರಿತರ ಸಂಖ್ಯೆ ದೇಶವನ್ನೇ ಅಲ್ಲಾಡಿಸುವ ಮಟ್ಟಿಗೆ ಬೆಳೆದಿತ್ತು.ಪಾಕಿಗಳಿಗೆ ಇತ್ತ ಚೀನಾ ಅತ್ತ ಅಮೇರಿಕಾದ ಬೆಂಬಲ ಬೇರೆ.ಇಂದಿರಮ್ಮ ಮೊದಲು ಅಮೇರಿಕಾವನ್ನ ಪಾಕಿಗಳಿಗೆ ಬುದ್ದಿ ಹೇಳುವಂತೆ ಕೇಳಿದರು ಅಮೇರಿಕಾ ಜಪ್ಪಯ್ಯ ಅನ್ನಲಿಲ್ಲ,ಬದಲಿಗೆ ಅಮೆರಿಕ-ಪಾಕ್-ಚೀನಾದ ಒಂದು axis ನಿರ್ಮಾಣ ಮಾಡಿಕೊಂಡು,ಭಾರತವೇನಾದರೂ ಪಾಕಿನ ಮೇಲೆ ಬಿದ್ದರೆ ಚೀನಾ-ಅಮೇರಿಕಾಗಳೆರಡು ಭಾರತದ ಮೇಲೆ ಮುಗಿ ಬೀಳುವ ಸಾಧ್ಯತೆ ಇತ್ತು.

ಆದರೆ ಇಂದಿರಮ್ಮ ಈ ಯುದ್ಧವನ್ನ ನಿರ್ವಹಿಸಿದ ರೀತಿಯೇ ಬೇರೆ, ಆಕೆ ರಷ್ಯಾದೊಂದಿಗೆ ನಾಗರಿಕ ಒಪ್ಪಂದವನ್ನು ಮಾಡಿಕೊಂಡಳು (ಅದು ಸೈನಿಕ ನೆರವನ್ನು ಬಳಸಿಕೊಳ್ಳುವ ಒಪ್ಪಂದವು ಆಗಿತ್ತು!). ಮುಖ್ಯವಾಗಿ ೭೧ ರ ಯುದ್ಧದಲ್ಲಿ ಆಕೆ ಮಾಡಿದ ಒಳ್ಳೆ ಕೆಲಸವೆಂದರೆ ಆಯಾ ವಿಷಯಗಳಲ್ಲಿ ಪರಿಣಿತರ ಸಲಹೆಯನ್ನ ಪಾಲಿಸಿದ್ದು.ಹಾಗೆ ಮಾಡಿದ್ದರಿಂದಲೇ ಯುದ್ಧ ಶುರುವಾಯಿತು ಅನ್ನುವಷ್ಟರಲ್ಲೇ ಪಾಕಿಗಳನ್ನು ಮಂಡಿಯೂರಿಸಿ ಕೂರಿಸಲು ಸಾಧ್ಯವಾಗಿದ್ದು! ಅಮೇರಿಕಾ-ಚೀನಗಳಿಗೆ ಆಕ್ರಮಣ ಮಾಡಲು ಸಮಯವೇ ಸಿಗಲಿಲ್ಲ! ಮತ್ತು ಆ ಯುದ್ದದ ಗೆಲುವಿನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೊಂದು ಕಳೆ ಬಂದು ಬಿಟ್ಟಿತ್ತು. ಭಾರತ ಕೇವಲ ಶಾಂತಿ ಮಂತ್ರವಲ್ಲ ಅಗತ್ಯ ಬಿದ್ದರೆ 'ಕ್ರಾಂತಿಯ ಕಹಳೆ'ಯನ್ನು ಮೊಳಗಿಸಬಲ್ಲದು ಅಂತ ತೋರಿಸಿಕೊಟ್ಟ ಯುದ್ಧ ಅದು.

೧೯೮೪ ರಲ್ಲಿ ಅವರು 'ಆಪರೇಷನ್ ಬ್ಲೂ- ಸ್ಟಾರ್' ನಡೆಸದೆ ಹೋಗಿದ್ದರೆ, ಇಂದು ಪಾಕಿಸ್ತಾನದ ಬಳಿಯೇ ಖಲಿಸ್ತಾನವು ಸೃಷ್ಟಿಯಾಗುತ್ತಿತ್ತು. ಈ ಆಪರೇಷನ್ ನಡೆದರೆ ತಮ್ಮ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರೂ,ಅವರು ಅದನ್ನು ದೇಶಕ್ಕೋಸ್ಕರ ಮಾಡಿದರು.ofcourse ಭಿಂದ್ರನ್ವಾಲೆ ಅವರ ಸೃಷ್ಟಿಯೇ ಆದರೂ, ಭಾರತದಂತಹ ದೇಶದಲ್ಲಿ ಧಾರ್ಮಿಕ ಕೇಂದ್ರದ ಮೇಲೆ ದಾಳಿಮಾಡಿಸಲು ಎಂಟೆದೆಯಿರಬೇಕು. ಇಂದಿರಮ್ಮ  ಅದನ್ನು ಸಾಧಿಸಿ ತೋರಿಸಿದಳು.

ಬ್ಯಾಂಕ್ಗಳ ರಾಷ್ಟ್ರೀಕರಣದಂತಹ ಹತ್ತು ಹಲವರು ಜನಪರ ಕಾರ್ಯಕ್ರಮಗಳು. ಇನ್ನು 'ಸಂತಾನ ನಿಯಂತ್ರಣ' ಈ ದೇಶಕ್ಕೆ ಅಗತ್ಯವಾಗಿ ಬೇಕಾಗಿತ್ತು. ಅದನ್ನು ಜಾರಿಗೆ ತಂದರೂ ಅದನ್ನು ಕಾರ್ಯ ರೂಪಕ್ಕಿಳಿಸಿದ ಪರಿಯಿದೆಯಲ್ಲ, ಅದೇ ಇಂದಿರಮ್ಮನ ಸೋಲಿಗೆ ಕಾರಣವಾಗಿತ್ತು. ಮತ್ತೆ ಅಂತ ಕಾರ್ಯಕ್ರಮ ಜಾರಿಗೆ ತರುವುದು ಒತ್ತಟ್ಟಿಗಿರಲಿ,ಮಾತನಾಡಲು ಸಹ ಈಗಿನ ನಾಯಕರಿಗೆ ಸಾಧ್ಯವಿಲ್ಲ ಬಿಡಿ. 

ಎಮರ್ಜೆನ್ಸಿಯ ನಂತರ ಅವಳನ್ನ ಕಾಡಿಸಿದ ಜನತಾ ಸರ್ಕಾರವನ್ನ (ಪಾಪಕ್ಕೆ ಶಿಕ್ಷೆ!) ರಾಜಕೀಯವಾಗಿ ಹಣಿಯುತ್ತ, ಮತ್ತೆ ಧೂಳಿನಿಂದ ಮೇಲೆದ್ದು ಬಂದ ಪರಿ ಆಕೆಯಲ್ಲಿನ ರಾಜಕಾರಣಿ,ಹಠವಾದಿಯನ್ನ ತೋರಿಸುವಂತದ್ದು. ಇಂದಿರೆ ಅಂದಾಕ್ಷಣ ಎಮರ್ಜೆನ್ಸಿ,ಸಂಜಯ್ ಅಂತ ತಪ್ಪು ತೋರಿಸಬಹುದೇನೋ ನಿಜ.ಆದರೆ ಆಕೆ ಭಾರತದ 'ಐರನ್ ಲೇಡಿ' ಅನ್ನುವುದನ್ನ ಅವಳ ವೀರೋಧಿಗಳು ವೀರೋಧಿಸಲಾರರು!

ಪಾಕಿಗಳ,ಚೀನಿಗಳ, ಉಗ್ರವಾದಿಗಳ ಆರ್ಭಟ ಹೆಚ್ಚಿರುವ ಈ ದಿನಗಳಲ್ಲಿ ನನಗೆ ಪದೇ ಪದೇ ಅನ್ನಿಸುವುದು''ಇಂದು' ಆಕೆ ಬದುಕಿದ್ದರೆ!?'.ನಿನ್ನೆ ಅವರ  ೯೦ನೆ ಜನ್ಮ ದಿನ.ಇಂದಿರೆಯಂತ ನಾಯಕಿಯರು ಮತ್ತೆ ಮತ್ತೆ ಹುಟ್ಟಿ ಬರಲಿ.