ಆಧುನಿಕ ಜೀವನದ ಪರಿಪಕ್ವತೆಗೆ ಬೇಕಾದ ಪರಿಕರಗಳು ಜಾನಪದ ಗೀತೆಗಳಲ್ಲಿ ಹೇರಳವಾಗಿವೆ

ಆಧುನಿಕ ಜೀವನದ ಪರಿಪಕ್ವತೆಗೆ ಬೇಕಾದ ಪರಿಕರಗಳು ಜಾನಪದ ಗೀತೆಗಳಲ್ಲಿ ಹೇರಳವಾಗಿವೆ

ಬರಹ
ಸಾಮಾನ್ಯ ಜೀವನದಲ್ಲಿ ಕಾಣುವಂತಹ ಹಿಗ್ಗು ಶಿಷ್ಟ ಜೀವನದಲ್ಲಿ ಕಾಣುವುದು ಕಷ್ಟ. ಬಾಹ್ಯ ಜಗತ್ತಿನ ಚಿಂತೆಯಿಂದ ಮುಕ್ತವಾಗಿ, ಜೀವನದ ಪ್ರತಿಯೊಂದು ಕ್ಷಣಗಳನ್ನು ನಮ್ಮದೇ ಆದ ನಿಯಮಿತ ಲೋಕದಲ್ಲಿ ಕಳೆಯುದು ಒಂದು ಅಪೂರ್ವ ಆನಂದವೇ ಸರಿ. ನಗರದಿಂದ ಸ್ವಲ್ಪ ದೂರ ಹೋಗಿ ಅಲ್ಲಿನ ಜನಜೀವನದಲ್ಲಿ ಬೆರೆತು, ಅದರ ಅಂತರಾಳಕ್ಕಿಳಿದಾಗ ಸಾಮಾನ್ಯ ಜೀವನದ ಮಹತ್ತರ ಅನುಭವ, ಯಾವುದೋ ಒಂದು ಹೊಸ ಅನ್ವೇಷಣೆ ತಂದಷ್ಟು ಖುಷಿ ತರುತ್ತದೆ. "ಕುಬೇರನ ಸಂಪತ್ತಾಗಲಿ, ದೇವೇಂದ್ರನ ಭೋಗವೈಭವವಾಗಲಿ, ಧುರ್ಯೋಧನನ ಅಧಿಕಾರವಾಗಲಿ, ನಿಶ್ಚಿಂತೆಯಿಂದ ಕೂಡಿದ ಜೀವನಕ್ಕೆ ಸರಿಸಾಟಿಯಾಗಲಾರದು." ಜೀವನದ ಪ್ರತಿಯೊಂದು ಘಟನೆಯನ್ನು ತೀವ್ರವಾಗಿ ಅನುಭವಿಸುವುದು, ಪ್ರತಿಕ್ರಿಯಿಸುವುದು ಸಾಮಾನ್ಯ ಗ್ರಾಮ್ಯ ಜೀವನದ ವಿಶಿಷ್ಟ ಲಕ್ಷಣ. ಆ ತೀವ್ರವಾದ ಅನುಭವ, ಪ್ರತಿಕ್ರಿಯೆಗಳು ಬಂದಷ್ಟೇ ತೀವ್ರವಾಗಿ ಇಳಿದುಹೋಗುತ್ತವೆ. ಅಂತಹ ಅನುಭವಗಳು, ಭಾವನೆಗಳು, ಆಶೆ-ಆಭಿರುಚಿಗಳು, ಸಾಮಾಜಿಕ ಕಟ್ಟು-ಕಟ್ಟಳೆಗಳು, ಜೀವನದ ಶಾಶ್ವತವಾದ ಮೌಲ್ಯಗಳು ನಮ್ಮ ಜನಪದ ಗೀತೆಗಳಲ್ಲಿ ತೆಕ್ಕೆ ತೆಕ್ಕೆಯಾಗಿ ಸಿಗುತ್ತವೆ.


ರೈತನು ಬೆವರು ಸುರಿಸಿ, ಬಿತ್ತಿ ನೀರುಣಿಸಿದ ಜೋಳದ ಬೆಳೆ ಬಲಿತು ಫಲ ಕೊಡಲು ಕಾಯುತ್ತಿರುತ್ತಾನೆ. ಇನ್ನೂ ಹಸಿಯಿರುವ ಜೋಳದ ಕಾಳುಗಳನ್ನು ಹಕ್ಕಿಗಳು ಹೆಕ್ಕಿ ತಿನ್ನುತ್ತಿರುತ್ತವೆ. ರೈತನಿಗೆ ತಾನು ಬಿತ್ತಿ ಬೆಳೆದ ಕಾಳುಗಳು ಹಕ್ಕಿಗಳ ಪಾಲಾಗುವುದಲ್ಲ ಎನ್ನುವ ಚಿಂತೆಯಿರುತ್ತದೆ. ತನ್ನ ಬೆಳೆಯಲ್ಲಿ ಗಿಣಿಗಳು ಸುಳಿದು ಹಸಿ ಜೋಳದ ಕಾಳುಗಳನ್ನು ತಿನ್ನುವುದನ್ನು ತಡೆಯಲು ಅವನು ಹೊಲದಲ್ಲೇ ಬಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಹಕ್ಕಿಗಳತ್ತ ಬೀಸಿ, ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಾನೆ. ಅದನ್ನು ಕಂಡ ತುಂಬು ಹೃದಯದ ಗರತಿಯೊಬ್ಬಳು, ಜೋಳದ ಹೊಲದಲ್ಲಿದ್ದ ಗಿಣಿಯೊಂದಕ್ಕೆ ಈ ರೀತಿ ಹೇಳುತ್ತಾಳೆ.

ಹಳ್ಳದ ಹೊಲದಾಗ ಬೆಳ್ಳಿಯ ಬಿಳಿಜೋಳ
ಮೆಲ್ಲಕ ಮೆಲಿಯೋ ಗಿಣಿರಾಮ ನನ್ನಣ್ಣ,
ಕಲ್ಲ ಬಂದಾವು ಕಡಿಗಾಗೊ|

ಹಳ್ಳದ ಪಕ್ಕದಲ್ಲೇ ಇರುವ ಜೋಳದ ಹೊಲದಲ್ಲಿದ್ದ ಗಿಳಿಗೆ "ಮೆಲ್ಲನೆ, ಶಬ್ದವಾಗದಂತೆ" ಮೆಲಿಯಲು ಹೇಳುತ್ತಾಳೆ, ಒಂದು ವೇಳೆ ಗಿಣಿರಾಯನನ್ನು ಓಡಿಸಲು ರೈತನೊಬ್ಬ ಬಂದರೆ, ಅವನ ಕಲ್ಲುಗಳು ಬರುವ ಮೊದಲೇ ಅಲ್ಲಿಂದ ಪಾರಗಲು ಗಿಳಿಗೆ ಎಚ್ಚರಿಸುತ್ತಾಳೆ. ಮೇಲ್ನೋಟಕ್ಕೆ ಇದು ಕೇವಲ ನಿಸರ್ಗದ ಸಣ್ಣ ವರ್ಣನೆಯೆನಿಸಬಹುದು. ಆದರೆ ಈ ಗೀತೆಯ ಧ್ವನಿಯ ಆಳಕ್ಕೆ ಇಳಿಯುವುದು ಸುಲಭವಲ್ಲ. ಗ್ರಾಮ್ಯ ಜೀವನಕ್ಕೂ-ನಿಸರ್ಗಕ್ಕೂ ಇರುವ ನಿಕಟ ಸಂಬಂಧದ ಸೂಚನೆ ಇಲ್ಲಿದೆ. "ಮೆಲ್ಲನೆ ಮೆಲಿಯೊ ಗಿಣಿರಾಮ" ಎಂಬಲ್ಲಿ ನಿಸರ್ಗ ಪ್ರೇಮವಿದೆ. "ಕಲ್ಲ ಬಂದಾವು ಕಡಿಗಾಗೋ" ಎಂಬಲ್ಲಿ, ರೈತನ ಪರಿಶ್ರಮದ ಪ್ರತಿಬಿಂಬವಿದೆ. ಬಾಳಿ ಬದುಕಲು ತಾನು ಬೆಳೆದ ಬೆಳೆ ಎಷ್ಟೊಂದು ಮುಖ್ಯ ಎಂಬ ಪ್ರಜ್ಞೆ ಇಲ್ಲಿದೆ.

ಜಾನಪದ ಗೀತೆಗಳಲ್ಲಿ ನಿಸರ್ಗ ಮತ್ತು ಜೀವನ ಮೌಲ್ಯಗಳ ಹೋಲಿಕೆಯಿಂದ ಹೊಸದೊಂದು ಅರ್ಥ ಹೊರಡಿಸುವ ಪ್ರಯತ್ನ ಸರ್ವೇ ಸಾಮಾನ್ಯ. ಉದಾಹರಣೆಗೆ,

ಮೂಡಲದ ಕೆಂಪಿನೊಳು ಹಾಡಿದವು ಹಕ್ಕಿಗಳು
ನಾಡ ನುಂಗುತಲಿ ಹೊಂಬಿಸಿಲು| ಕತ್ತಲೆಯು
ಓಡಿತು ಪಡುವಣಕೆ ದಿನಕಂಜಿ|

ಎಂಬ ಗೀತೆಯಲ್ಲಿ, ಸೂರ್ಯೋದಯದ ವರ್ಣನೆಯಿದೆ. ಇದು ಮುಂಜಾವಿನ ಕೆಂಪು, ಹಕ್ಕಿಗಳ ಕಲರವವನ್ನು ಕಣ್ಮುಂದೆ ತರುತ್ತದೆ. ಈ ಗೀತೆಯಲ್ಲಿ ಬರುವ, "ಕತ್ತಲೆಯು ಓಡಿತು ಪಡುವಣಕೆ ದಿನಕಂಜಿ" ಎಂಬುದು ಅನುಭವಪೂರ್ಣವಾದ ಮಾತು. ಇಲ್ಲಿ ಕತ್ತಲೆಯನ್ನು ಅಸತ್ಯಕ್ಕೆ ಹೋಲಿಸಿ, ಬೆಳಕನ್ನು (ದಿನವನ್ನು) ಸತ್ಯಕ್ಕೆ ಹೋಲಿಸಿದರೆ ಅರ್ಥ ಇನ್ನೂ ಸ್ವಾರಸ್ಯಪೂರ್ಣವಾಗುತ್ತದೆ. ಸತ್ಯದ ಮುಂದೆ ಅಸತ್ಯವು ನಿಲ್ಲದೆ, ಕತ್ತಲೆಯು ಬೆಳಕನ್ನು ಎದುರಿಸದೆ ಪಶ್ಚಿಮಕ್ಕೆ ಓಡುವಂತೆ, ಅಸತ್ಯವು ಓಡಿ ಹೋಯಿತು ಎಂಬ ಅರ್ಥ ಬರುತ್ತದೆ. ಇಲ್ಲಿ ಕತ್ತಲೆಯನ್ನು ತಿರಸ್ಕೃತವಾದ ಯಾವುದೇ ವಸ್ತುವಿನೊಂದಿಗೆ ಹೋಲಿಸಿ, ಬೆಳಕನ್ನು ಅದಕ್ಕೆ ವಿರುದ್ಧವಾದ ವಸ್ತುವಿಗೆ ಹೋಲಿಸಿದರೆ ಹೊಸ ಹೊಸ ಅರ್ಥಗಳು ಬರುವ ಸಾಧ್ಯತೆಯಿದೆ. ಸಹೃದಯರು ಈ ರೂಪಕದ ಚೌಕಟ್ಟಿನಲ್ಲಿ ಸಹಸ್ರಾರು ಅರ್ಥಗಳನ್ನು ಹುಡುಕಿ ಆನಂದಿಸಬುದು.

ಸುತ್ತ ಮುತ್ತ ಇರುವ ಸಮಾಜದೊಂದಿಗೆ ನಮ್ಮ ಸಂಭಂಧ ಹೇಗಿರಬೇಕು, ನಮ್ಮ ರೀತಿ ನಡುವಳಿಕೆ ಹೇಗಿರಬೇಕು ಎಂಬುದನ್ನು ಹಲವಾರು ಗೀತೆಗಳು ಅಂತರಾಳಕ್ಕೆ ಇಳಿಯುವಂತೆ ಅರ್ಥೈಸುತ್ತವೆ.

ಮಂದಿ ಮಕ್ಕಳೊಳಗ ಚೆಂದಾಗೊಂದಿರಬೇಕು
ನಂದಿಯ ಶಿವನ ದಯದಿಂದ| ಹೋಗಾಗ
ಮಂದಿಯ ಬಾಯಾಗ ಇರಬೇಕು|

ಹುಟ್ಟು-ಸಾವು ಎಂಬ ಎರಡು ದಡಗಳ ಮಧ್ಯ ಜೀವನವಿದೆ. ಜೀವನದ ಈ ಹೋರಾಟದಲ್ಲಿ ನಾವು ಹೇಗಿರಬೇಕೆಂದರ, ನಾವು ಈ ಲೋಕ ಬಿಟ್ಟು ಹೋಗುವಾಗ ಜನ (ಮಂದಿ), ನಮ್ಮನ್ನು ಕೊಂಡಾಡುತ್ತಿರಬೇಕು ಎಂಬ ಅರ್ಥ ಈ ಗೀತೆಯಲ್ಲಿದೆ.

ಜನಪದ ಗೀತಗಳಲ್ಲಿ ಬಡತನ-ಸಿರಿತನದ ತಾರತಮ್ಯವಂತೂ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿವೆ, ಉದಾಹರಣೆಗೆ,

ಬಂಗಾರದ ಬಳೆಯಿಟ್ಟು ಬೈಬ್ಯಾಡ ಬಡವರ
ಬಂಗಾರ ನಿನಗೆ ಸ್ಥಿರವಲ್ಲ| ಮದ್ದಿನದ
ಹೊತ್ತು ಹೊರಳೋದು ತಡವಲ್ಲ|

ಇಲ್ಲಿ "ಮದ್ದಿನದ ಹೊತ್ತು ಹೊರೊಳೋದು ತಡವಲ್ಲ" ಎಂಬ ಮಾತನ್ನು ಗಮನಿಸಬೇಕು. ಮಧ್ಯಾಹ್ನದ ಸೂರ್ಯ ಪಡುವಣಕ್ಕೆ ಬರುವುದು ಎಷ್ಟು ತ್ವರಿತವೋ ಅಷ್ಟೇ ತ್ವರಿತ ಗತಿಯಲ್ಲಿ ನಮ್ಮ ಸಿರಿತನ/ಬಡತನ ಬದಲಾಗಬಹುದು. ಶಿಷ್ಟ ಸಾಹಿತ್ಯದಲ್ಲಿ ಈ ತರಹದ ಅರ್ಥವನ್ನು ಇಷ್ಟೊಂದು ಸರಳವಾಗಿ, ಸಮಗ್ರವಾಗಿ ಮತ್ತು ಹೃದಯಸ್ಪರ್ಷಿಯಾಗಿ ಹೇಳುವುದು ತುಂಬ ಕಷ್ಟದ ಕೆಲಸ.

ಜಾನಪದ ಗೀತೆಗಳ ಮತ್ತೊಂದು ವಿಶಿಷ್ಟತೆಯೆಂದರೆ, ಅದರಲ್ಲಿ ಪ್ರತಿಬಿಂಬಿತವಾಗಿರುವ ಸ್ತ್ರೀಯ ಬದುಕು. ಸಹಸ್ರಾರು ಗೀತೆಗಳಲ್ಲಿ ಮೂಡಿಬಂದಿರುವ ಸ್ತ್ರೀಯ ಜೀವನ ಚಿತ್ರಣ ನಮ್ಮನ್ನು ಮಮ್ಮಲ ಮರುಗಿಸುತ್ತದೆ. ಹಲಸಂಗಿ ಗೆಳೆಯರು (ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ, ಇತ್ಯಾದಿ) ತಮ್ಮ "ಗರತಿಯ ಹಾಡು" ಎಂಬ ಜಾನಪದ ಗೀತೆಗಳ ಸಂಗ್ರಹದಲ್ಲಿ ಗ್ರಾಮೀಣ ಸ್ತ್ರೀಯ ಜೀವನವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಉದಾಹರಣೆಗೆ ಒಂದೆರಡು ಗೀತೆಗಳನ್ನು ನೋಡಬಹುದು.

ಬಂದದ್ದು ಬರಲವ್ವ ಎದಿಗೊಟ್ಟು ನಿಲಬೇಕು
ಹೆದರಿದರ ಬೆನ್ನ ಬಿಡದವ್ವ| ನನ ಮಗಳ
ಒದಗಿದರ ದುಃಖ ಒಳನುಂಗೆ|

ಇಲ್ಲಿ ಅಂದಿನ ಹೆಣ್ಣೊಬ್ಬಳು ಗಂಡನ ಮನೆಯಲ್ಲಿ ಪಟ್ಟಿರಬಹುದಾದ ಕಷ್ಟಗಳನ್ನು ಮನಗಂಡ ತಾಯಿಯೊಬ್ಬಳು ತನ್ನ ಮಗಳಿಗೆ ಧೈರ್ಯವನ್ನಿತ್ತುವ ಚಿತ್ರಣವಿದೆ. ಎಷ್ಟೇ ಕಷ್ಟ ಬಂದರೂ, ಅದನ್ನು ಎದುರಿಸಬೇಕು. ಕಷ್ಟಗಳಿಗೆ ಹೆದರಿದರೆ ಅವು ನಮ್ಮ ಬೆನ್ನು ಬಿಡುವುದಿಲ್ಲ, ಮತ್ತೆ ಮತ್ತೆ ನಮ್ಮನ್ನು ಕಾಡುತ್ತವೆ, ಆದ್ದರಿಂದ ಹೆದರದೇ ಮುನ್ನುಗ್ಗಬೇಕು, ಒಂದು ವೇಳೆ ದುಃಖ ಅನಿವಾರ್ಯವಾದರೆ ಅದನ್ನು ಮನಸ್ಸಿನಲ್ಲಿ ಹಿಡಿದಿಟ್ಟು ಮುಂದೆ ಸಾಗಬೇಕು ಎಂಬ ಅರ್ಥ ಇಲ್ಲಿದೆ.

ತೊಟ್ಟೀಲ ಹೊತ್ಕೊಂಡು ತೌರ್ಬಣ್ಣ ಉಟ್ಕೊಂಡು
ಅಪ್ಪಕೊಟ್ಟೆಮ್ಮೆ ಹೊಡ್ಕೊಂಡು ತೌರೂರ
ತಿಟ್ಟ ಹತ್ತಿ ತಿರುಗಿ ನೋಡ್ಯಾಳೊ|

ಈ ಗೀತೆಯ ಪ್ರತಿಯೊಂದು ಶಬ್ದವೂ ಒಂದೊಂದು ಚಿತ್ರವನ್ನು ಕೊಡುತ್ತದೆ. ಇಂದಿಗೂ ಹೆರಿಗೆಗೆಂದು ಗರ್ಭಿಣಿಯೊಬ್ಬಳು ತವರನ್ನು ಆಶ್ರಯಿಸುವುದು ಸಾಮಾನ್ಯ. ಮಗುವಿಗೆ ಜನ್ಮ ಕೊಟ್ಟು, ಸ್ವಲ್ಪ ಕಾಲ ತವರಿನಲ್ಲೇ ಉಳಿದು, ಮಗು ತಕ್ಕಷ್ಟು ಬೆಳೆದ ಮೇಲೆ ಮತ್ತೆ ಗಂಡನ ಮನೆಗೆ ಹೋಗುವಾಗ ಅವಳ ಮನಸ್ಸಿನಲ್ಲಿ ಸುಳಿದಾಡಿರಬಹುದಾದ ಸಹಸ್ರಾರು ಭಾವನೆಗಳನ್ನು ಸಮಗ್ರವಾಗಿ ಸೆರೆಹಿಡಿಯುವ ಪ್ರಯತ್ನ ಈ ಗೀತೆಯಲ್ಲಿದೆ. ಮಗುವಿನ ಜನನವಾದಮೇಲೆ, ಮಗಳು ಮತ್ತೆ ತನ್ನ ಗಂಡನ ಮನೆಗೆ ಹೋಗುವಾಗ, ಅವಳ ಮಗುವಿಗೆ ಹಾಲು ಹೈನಿನ ತೊಂದರೆಯಾಗದಿರಲಿ ಎಂಬ ಆಶಯದಿಂದ ತಂದೆ-ತಾಯಿಗಳು ಮಗಳ ಜೊತೆಗೆ ಹಾಲು ಕರೆಯುವ ಎಮ್ಮೆಯನ್ನೋ, ಹಸುವನ್ನೋ ಕಳಿಸಿಕೊಡುವ ಪದ್ಧತಿ ಇತ್ತು. ಹೋಗುವಾಗ ಮಗಳಿಗೆ ಹೊಸಬಟ್ಟೆ (ತೌರ್ಬಣ್ಣ) ಉಡಿಸಿ, ಹೊಸದಾಗಿ ತಂದ ತೊಟ್ಟಿಲಿನೊಡನೆ ಮಗಳನ್ನು ಕಳಿಸಿಕೊಡುತ್ತಾರೆ. ಊರು ದಾಟಿದ ಮೇಲೆ ತವರನ್ನು, ತಂದೆ-ತಾಯಿಗಳ ಅಕ್ಕರೆಯ ಪ್ರೀತಿಯನ್ನು ನೆನೆಯುತ್ತ, ಹೃದಯತೊಂಬಿ ಬಂದ ತೀವ್ರ ಭಾವನೆಗಳನ್ನು ತಡೆಯಲಾಗದೆ, ತಿರುಗಿ, ಎತ್ತರದ ಒಂದು ಜಾಗದಿಂದ (ತಿಟ್ಟು ಹತ್ತಿ) ಮತ್ತೆ ತನ್ನ ತವರನ್ನು ಕಣ್ತುಂಬ ನೋಡುತ್ತಾಳೆ. ತಾಯಿಯ ಪ್ರೀತಿಯನ್ನು ನೆನೆದು ಕಣ್ಣೀರಿಡುತ್ತಾಳೆ. ಇದು ಈ ಗೀತೆಯಲ್ಲಿ ಅಡಗಿರುವ ಧ್ವನಿ. ಇಂತಹ ಒಂದು ಧ್ವನಿಯನ್ನು ಇಷ್ಟೊಂದು ಸರಳವಾಗಿ, ನೇರವಾಗಿ, ಸಮಗ್ರವಾಗಿ, ಮನಸ್ಸಿನಲ್ಲಿ ನಾಟುವಂತೆ ಹೇಳುವ ಸಾಮರ್ಥ್ಯ ಕೇವಲ ಜಾನಪದ ಸಾಹಿತ್ಯಕ್ಕೆ ಮಾತ್ರ ಇದೆ ಎಂದರೆ ಅತಿಶಯೋಕ್ತಿಯಾಗಲಾರದು.

ಜನಪದ ಗೀತೆಗಳಲ್ಲಿ ಕಾವ್ಯಾಂಶವಿದೆ, ಜನಜೀವನದ ಚಿತ್ರಣವಿದೆ, ನೀತಿಯಿದೆ, ಮೌಲ್ಯಗಳ ಚರ್ಚೆಯಿದೆ. ಒಟ್ಟಿನಲ್ಲಿ ಸಾಹಿತ್ಯ ಬೇಕಾದರೆ ಸಾಹಿತ್ಯವಿದೆ. ಸಮಗ್ರ ಜೀವನದ ಪರಿಪಾಠ ಬೇಕಾದರೆ, ಮಾರ್ಗದರ್ಷಕದಂತಿರುವ ಜೀವನ ಜ್ಯೋತಿಯ ಬೆಳಕಿದೆ. ಯಾವುದಕ್ಕೂ ಅವುಗಳನ್ನು ತಾಳ್ಮೆಯಿಂದ, ಕುತೂಹಲದಿಂದ ಓದುವ ಸಹೃದಯತೆಯೊಂದಿದ್ದರೆ ಸಾಕು, ಆಧುನಿಕ ಜೀವನದ ಪರಿಪಕ್ವತೆಗೆ ಬೇಕಾದ ಪರಿಕರಗಳು ಜಾನಪದ ಗೀತೆಗಳಲ್ಲಿ ಹೇರಳವಾಗಿ ದೊರೆಯುತ್ತವೆ.

ಹೆಚ್ಚಿನ ಓದಿಗಾಗಿ:
೧. ಗರತಿಯ ಹಾಡು - ಹಲಸಂಗಿ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು.
೨. ಜಾನಪದ ಗೀತಾಂಜಲಿ - ದೇ. ಜವರೆಗೌಡ.

ಸೂ: ಇದೇ ಲೇಖನವನ್ನು ಇಲ್ಲಿಯೂ ಓದಬಹುದು.