ನಾನು ಅಮ್ಮನ ಕಣ.

ನಾನು ಅಮ್ಮನ ಕಣ.

ಬರಹ

"ತಾಯಿಯು ದೇವರಿಗಿಂತಲೂ ಮೇಲು, ದೇವರ ಮೊಲೆಯಲ್ಲಿ ದೊರಕುವುದೇ ಹಾಲು?"

ನನ್ನ ಅಮ್ಮ ನೆನಪಾದಾಗಲೆಲ್ಲ ಚುಟುಕು ಬ್ರಹ್ಮ ದಿನಕರ ದೇಸಾಯಿ ಅಭಿಮಾನದಿಂದ ಬರೆದ ಈ ವಾಕ್ಯ ನನಗೆ ನೆನಪಾಗುತ್ತದೆ. ಅವ್ವ ನಮ್ಮ ರಕ್ತ-ಮಾಂಸ ಮತ್ತು ಅಂತ:ಕರಣ ಏನೆಲ್ಲವುಗಳ ಒಟ್ಟು ಮೊತ್ತ. ನಮ್ಮ ಮನೆಯವರ ಪ್ರೀತಿಯ ಮೇಷ್ಟ್ರು ಪಿ. ಲಂಕೇಶ್ ಅವರು ಬರೆದ ಅವ್ವ ನನಗೆ ನನ್ನ ಅಮ್ಮ ನೆನಪಾದಾಗಲೆಲ್ಲ ಇನ್ನೂ ಆಪ್ತವೆನಿಸುತ್ತದೆ. " ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ ಕೆಸರು ಗದ್ದೆಯ ನೋಡಿಕೊಂಡು ಯೌವನವ ಕಳೆದವಳು ಚಿಂದಿಯ ಸೀರೆಯನ್ನು ಉಟ್ಟುಕೊಂಡು".

ನನ್ನ ಅಮ್ಮನದು ಪ್ರಾಮಾಣಿಕವಾದ, ಕಪಟವಿರದ ಪ್ರೀತಿ. ಆ ಅಕ್ಕರೆ ಅನನ್ಯ. ಹೃದಯದಿಂದ ಪ್ರೀತಿಸಿದ ಜೀವವದು. ತನಗಾಗಿ ಕಿಂಚಿತ್ತೂ ಚಿಂತಿಸದೆ ತನ್ನ ಕರುಳ ಕುಡಿಗಳಿಗಾಗಿ ಬಾಳ ತೇಯ್ದ ಗಂಧ. ಆಕೆ ಅಮ್ಮ ಮಾತ್ರವಲ್ಲ ನಮ್ಮ ಗುರು, ಮಾರ್ಗದರ್ಶಿ, ಅಂತರಂಗದ ಸಖಿ. ನಮ್ಮ ಬದುಕಿನ ಜೀವ ಚೈತನ್ಯ. ನಮ್ಮ ಬಾಳ ಬೆಳಗು. ಮಮತೆಯ ಮಮಕಾರವನ್ನು ಹರಿಸಿ ಬದುಕಿಗೆ ಅರ್ಥ ಕೊಟ್ಟವಳು ಆಕೆ. ಅಮ್ಮನ ಅಂತರಾಳದ ಅನುರಾಗವನ್ನು ಯಾವ ಪ್ರೀತಿಗೂ ಹೋಲಿಸಲಾಗದು. ಜನ್ಮನೀಡಿದ ತನ್ನೆಲ್ಲ ನೋವುಗಳನ್ನು ತುಟಿ ಕಚ್ಚಿ, ಬಿಗಿದಪ್ಪಿ ತನ್ನ ಮಕ್ಕಳಿಗೆ ಜೀವತುಂಬಿ, ಭಾವತುಂಬಿ ಉತ್ತುಂಗಕ್ಕೆ ಬೆಳಸುವ ಅಮ್ಮ ನಿಜರೂಪದ ದೇವರು.



ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ಹೇಳಿದಂತೆ..

"ತಾಯೊಲವೆ ತಾಯೊಲವು ಈ ಲೋಕದೊಳಗೆ/
ಕಡಲಿಂಗೆ ಕಡಲಲ್ಲದುಂಟೆ ಹೋಲಿಕೆಗೆ".

ಈ ಬದುಕು ಸೋತು ನಿಂತಾಗ ಬಲವಾಗಿ ಜೊತೆಗೂಡಿ ನಿಂತು ಬಲದೊಳಗೆ ಛಲವಾಗಿ ಮುನ್ನಡಿಸಿದಳು. ಕಾರ್ಮೋಡದ ದಿನಗಳು ಕವಿದರೂ ಎಲ್ಲ ನಮ್ಮವರು ಕೈ ಬಿಟ್ಟರೂ ಕಾರ್ಮೋಡ ಕಣ್ಣಾಗಿ ಬೆಳಕ ಹರಿಸಿದವಳು. ಅಮ್ಮನ ಪ್ರೀತಿ ಅಳೆಯಲು ಯಾವ ಸಾಧನಗಳೂ ಇಲ್ಲ. ಬದುಕನ್ನು ನೋಡುವ, ಅದನ್ನು ಸಮಚಿತ್ತದಿಂದ ಎದುರಿಸುವ ಕಲೆಯನ್ನು ಅಮ್ಮ ಕಲಿಸಿದಳು. ಬಹುಶ: ಅದು ಆಕೆಯಿಂದ ಮಾತ್ರ ಸಾಧ್ಯ. ಅಪೂರ್ವವಾದ ಪ್ರೀತಿಯನ್ನು ನೀಡಿ ಸಮಾಜದಲ್ಲಿ ಗೌರವಯುತವಾಗಿ ಬದುಕುವುದನ್ನು ನಮಗೆ ಕಲಿಸಿದಳು ನಮ್ಮ ಅಮ್ಮ.

ಆದರೆ..

" ನನ್ನ ಹಿಡಿದು ಐದು ಮಕ್ಕಳ ಹೊರೆದು, ಪೊರೆದು / ಕೆಮ್ಮಿ ಕೆಮ್ಮಿ ಸಣ್ಣಗಾದವಳು ಅಮ್ಮ;
ಒಳಗೊಳಗೇ ಒರತೆ ಹೊತ್ತಿ / ಮೈಗೂಡು ಕಳಚಿ ನಮ್ಮ ಅನಾಥರಾಗಿಸಿ ಮಣ್ಣಾದವಳು".

ತಾಯೊಲವಿನ ಕವಿಯೋರ್ವ ಹೆಣೆದ ಈ ಸಾಲುಗಳು ನನಗೆ ಅದ್ಭುತವಾಗಿ ಕಂಡಿವೆ..ನನ್ನ ಅನುಭವಕ್ಕೂ ದಕ್ಕಿವೆ.

"ಕೇಳಿದರೆ ಕೊಟ್ಟಾರು
ಅನ್ನ, ಬಟ್ಟೆ, ಸೂರು
ನಿನ್ನ ಪ್ರೀತಿ ಯಾರು ಕೊಡಬಲ್ಲರು? ಅಮ್ಮ"

ಈ ಜಗತ್ತಿನಲ್ಲಿ ಸುಂದರವಾಗಿ ಕಾಣುವುದೆಲ್ಲ ನನಗೆ ಅಮ್ಮನ ಸೃಷ್ಟಿ ಎನಿಸುತ್ತದೆ. ಅವುಗಳಲ್ಲಿ ನನಗೆ ಅಮ್ಮನೇ ಕಾಣುತ್ತಾಳೆ. ಆಕೆಯ ಪ್ರೀತಿ, ಮಮತೆ, ವಾತ್ಸಲ್ಯ ಅಂತ:ಕರಣಗಳ ಸಾಕಾರ ಮೂರ್ತಿ ಅಮ್ಮನ ಮಡಿಲಿನಲ್ಲಿ ನಾನು ಪರಮ ಸುಖಿ. ಅಮ್ಮ ನನಗೆ ಎಲ್ಲವೂ ಆಗಿದ್ದಳು. ನಮಗೈವರಿಗೆ ತನ್ನ ಜೀವ, ಭಾವ ಎಲ್ಲವನ್ನೂ ಮೀಸಲಾಗಿಟ್ಟಿದ್ಲು. ವಿಷ್ಣು ನಾಯಕರು ಹೇಳಿದಂತೆ ನನ್ನ ಅಮ್ಮ "ಧೂಳ್ರೊಟ್ಟಿ ತಾ ತಿಂದು ಬಾಳ್ರೊಟ್ಟಿ ನಮಗಿತ್ತು; ಮುಕ್ಕಾಲು ಶತಮಾನ ಬಾಳ್ದ ಚುಕ್ಕಿ".

ಉರಿ ಬಿಸಿಲಿನ ಊರು ಶಹಾಪುರದ ನಮ್ಮ ಮನೆಯಲ್ಲಿ ಅಮ್ಮ ದೇವರ ಪೂಜೆಗೆ ನಿಂತಳೆಂದರೆ ಮನೆಯಲ್ಲಿ ತಂಪಿನ ಅನುಭವವಾಗುತ್ತಿತ್ತು. ಇಡೀ ಮನೆ ದೇವಾಲಯವಾಗಿ ಭಾಸವಾಗುತ್ತಿತ್ತು. ಈಗ ನನಗೆ ಅನಿಸುತ್ತದೆ..ಅವಳ ಭಕ್ತಿಯ ಉತ್ಕಟತೆಯನ್ನು ಕಂಡೇ ದೇವರು ದೇವಲೋಕದಲ್ಲಿ ತನ್ನ ಪೂಜೆಗೆ ಆಕೆಯನ್ನು ಅಕಾಲಿಕವಾಗಿ ಕರೆದುಕೊಂಡು ಹೋಗಿಬಿಟ್ಟಿರಬೇಕು ಎಂದು.

ಆಕೆ ಹೋದಳು..ಗಿಡವಾಗಿ, ಮರವಾಗಿ ಬೆಳೆದು ನೆರಳು-ಹಣ್ಣು ಎರಡೂ ನೀಡಿ ನಮ್ಮ ಬಾಳಿನ ನಂಬಿಕೆಯ ಬೇರಾಗಿ ನಿಂತಿದ್ದವಳು..ಬಳ್ಳಿಯಾಗಿ ಹಬ್ಬಿದ್ದ ನಮ್ಮನ್ನು ಕೊಸರಿ ಒಗೆದು. ಆಧಾರವಿಲ್ಲದ ಬಳ್ಳಿ ನೆಟ್ಟಗೆ ನಿಂತೀತೇ? ಹೂವು, ಹಣ್ಣು ಹೊದ್ದು ಕಂಗೊಳಿಸೀತೇ? ತುಂಬಿದ್ದ ಬಾಳ ಪಾತ್ರೆ ಬರಿದಾಗಿ ನಾವೆಲ್ಲ ಚದುರಿದ ಲತೆಗಳಾದೆವು. ಸುಂದರವಾಗಿದ್ದ ಬದುಕು ನೆಲಕ್ಕೊರಗಿ ಅಂಗಾತ ಮಲಗಿತು. ಬದುಕೆಂಬೋ ಬವಣೆ ನನ್ನನ್ನು ದಣಿಸಿದಾಗಲೆಲ್ಲ ‘ಅಮ್ಮ ಬೇಕು’ ಎಂದು ಮನಸ್ಸು ಚೀರುತ್ತದೆ. ದೇವರಲ್ಲಿ ಮನಸ್ಸು ಮೊರೆ ಇಡುತ್ತದೆ..ಸಾವಿರ ಜನ್ಮಗಳೆನಾದರೂ ಇದ್ದರೆ ಆಕೆಯೇ ನಮ್ಮ ಅಮ್ಮನಾಗಲಿ; ನಾವೇ ಆಕೆಯ ಕರುಳ ಕುಡಿಗಳಾಗಲಿ ಎಂದು.

ಹೆಸರಿಗೆ ತಕ್ಕಂತೆ ಯಾವತ್ತೂ ‘ಶಾಂತ’ವಾಗಿಯೇ ಅಪ್ಪನ ಹೆಸರಿನ ‘ಬಸವ’ ನಿಲಯದಲ್ಲಿದ್ದ ನಮ್ಮ ಅಮ್ಮ ತೀರಿ ಈಗ ಎರಡು ವರ್ಷಗಳಾದವು. ಸವಿತಾ ನಾಗಭೂಷಣ ಅವರು ಹೇಳುವಂತೆ "ನಾನವಳ ಕಣ ಮಣಭಾರ ಋಣ".