ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

ಬರಹ

ನೀ ಹೀಗೇಕೆ ಕಾಡುತಿರುವೆ ಪ್ರಿಯೆ!
ಅದೆಂದೋ ಮುಗಿಯಿತಲ್ಲ ಕಥೆ,
ಇದೇನಿದ್ದರೂ ನೆನಪುಗಳ ವ್ಯಥೆ,
ನಾನಿಲ್ಲಿ, ನೀನಲ್ಲಿ, ದೂರ ತೀರದಲ್ಲಿ,
ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!

ಅದೆಷ್ಟು ವರ್ಷಗಳು ಜಾರಿದವು,
ಅದೆಷ್ಟು ಊರುಗಳು ಬದಲಾದವು,
ಅದೆಷ್ಟು ಋತುಗಳು ಬಂದು ಹೋದವು,
ಅದೆಷ್ಟು ನಿಟ್ಟುಸಿರು, ಅದೆಷ್ಟು ಕಂಬನಿ,
 ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!

ನಾ ಮೊದಲೋ ನೀ ಮೊದಲೋ ನಾನರಿಯೆ,
ಆದರೆ ಇಬ್ಬರೂ ದಾಟಿಹೆವು ಸಾಗರವ,
ನಾನೊಂದು ತೀರದಿ, ನೀ ಇನ್ನೊಂದು ತೀರದಿ,
ಸೇರುವುದು ಮತ್ತೆ ಕನಸಿನ ಮಾತೇ ಸರಿ,
ಆದರೂ ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

ಓಡುವ ಕಾರಲಿ, ಮಾಡುವ ಕೆಲಸದಲಿ
ಬಿರುಬೇಸಿಗೆಯ ಬಿಸಿಗಾಳಿಯಲಿ,
ಎಂದಾದರೊಮ್ಮೆ ಬರುವ ಮಳೆಹನಿಯಲಿ
ಚುಮುಗುಟ್ಟುವ ಮುಂಜಾವಿನ ಛಳಿಯಲಿ
ಒಡಲಾಳದ ಕದಲುವಿಕೆಯಲಿ ನಿನದೇ ನೆನಪು,
ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

ನಾನಂದುಕೊಂಡೆ ನಿನ್ನ ಮರೆತೆನೆಂದು
ನಾ ನೆಮ್ಮದಿಯಲಿ ಬದುಕುತಿರುವೆನೆಂದು
ನೀ ನಿನ್ನ ಬಾಳ ಹಾದಿಯಲಿ ಸಾಗುತಿರುವೆ ಸುಖವಾಗೆಂದು
ಏನಂದುಕೊಂಡರೂ, ಎಷ್ಟೇ ನಿನ್ನ ಮರೆತೆನೆಂದರೂ
ನೀ ಮತ್ತೆ ಮತ್ತೆ ಬರುತಿರುವೆ, ನನ್ನ ಕನಸಲಿ,
ನೀ ನಿಂತೇ ಇರುವೆ ನನ್ನ ಮನಸಲಿ,
ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!