ಸ್ವಾಮಿ ಅಧ್ಯಾತ್ಮಾನಂದ: ಅಧ್ಯಾತ್ಮ ಎಂದರೇನು

ಸ್ವಾಮಿ ಅಧ್ಯಾತ್ಮಾನಂದ: ಅಧ್ಯಾತ್ಮ ಎಂದರೇನು

ಬರಹ

ಎಲ್ಲರಲ್ಲೂ ನೆಲೆಸಿರುವ ಆತನಿಗೆ ಇಲ್ಲಿಂದ ವಂದಿಸುವೆವು. ನಮ್ಮಲ್ಲಿ ನೆಲೆಸಿರುವ ಆತನಿಗೆ ನಿಮ್ಮ ಕಂಪ್ಯೂಟರ್ ಪರದೆಗೆ ಉದ್ಧಂಡ ನಮಸ್ಕಾರ ಹಾಕುವುದರ ಮೂಲಕ ನಮಸ್ಕರಿಸಿ.

ಅಧ್ಯಾತ್ಮದ ಬಗ್ಗೆ ನಗೆ ನಗಾರಿ ಡಾಟ್ ಕಾಮ್‌ಗೆ ಬರೆಯಬೇಕು ಎಂದು ತೊಣಚಪ್ಪನವರು ಕೇಳಿಕೊಂಡಾಗ ನಾವು ದಿಗ್ಭ್ರಾಂತರಾದೆವು. ಕಾರಣವಿಷ್ಟೆ. ನಾವು ಈ ನಗೆ ನಗಾರಿ ಡಾಟ್ ಕಾಮ್ ಎಂಬ ಬ್ಲಾಗಿನ ಹೆಸರನ್ನೇ ಆಲಿಸಿರಲಿಲ್ಲ. ಇದೊಂದು ಬ್ಲಾಗು ಬಿಡಿ, ವಾಸ್ತವವಾಗಿ ನಮಗೆ ಬ್ಲಾಗ್ ಎಂದರೇನೆಂದೇ ತಿಳಿದಿರಲಿಲ್ಲ. ಇತ್ತೀಚೆಗಷ್ಟೇ ಹುಟ್ಟಿಕೊಂಡಿರುವ ಈ ಬ್ಲಾಗ್ ಬಗ್ಗೆ ತಿಳಿಯದಿರುವುದು ಅಂತಹ ಅಪರಾಧವಲ್ಲ ಬಿಡಿ. ಒಬ್ಬನಿಗೆ ಬ್ಲಾಗ್ ಬಗ್ಗೆ ತಿಳಿದಿಲ್ಲ ಎಂದರೆ ಆತ ಕಾಲೇಜು ವಿದ್ಯಾರ್ಥಿಯಲ್ಲ, ಪುಕ್ಕಟೆ ಅಂತರ್ಜಾಲದ ಸಂಪರ್ಕವಿರುವ ಆಫೀಸಿನಲ್ಲಿ ದುಂದಾಗಿ ಕಳೆಯಲು ಹೆಚ್ಚು ಸಮಯವಿರುವ ಉದ್ಯೋಗಿಯಲ್ಲ, ಪತ್ರಿಕಾ ಕಛೇರಿಗಳ ಕಸದ ಬುಟ್ಟಿಯಲ್ಲಿ ಪ್ರಾಣ ಬಿಡುವ ತಮ್ಮ ಕೃತಿಗಳಿಗೆ ಕೃತಕ ಉಸಿರಾಟ ಕೊಡಬಯಸುವ ಹವ್ಯಾಸಿ ಲೇಖಕನಲ್ಲ, ಪತ್ರಿಕೆಯಲ್ಲಿ ಎರಡು ಕಾಲಂ ವರದಿ ಪ್ರಕಟವಾಗದ ಸಂಪಾದಕೀಯ ಬರೆಯುವ ಹುಮ್ಮಸ್ಸಿರುವ ಪತ್ರಕರ್ತನಲ್ಲ, ಅವರಿವರನ್ನು ಬಯ್ಯುವ, ಅದಕ್ಕಾಗಿ ಸಮಯ ವಿನಿಯೋಗಿಸುವ, ಬೈದವರಿಗೆ ತಾನಿಲ್ಲಿ ಕೀಬೋರ್ಡಿನ ಮೇಲೆ ಕುಟ್ಟಿದ್ದು ತಲುಪಿಯೇ ತಲುಪುತ್ತದೆ ಎಂದು ಬ್ಲಾಗ್ ಅಂಚೆ ಇಲಾಖೆಯ ಮೇಲೆ ಅಪಾರ ವಿಶ್ವಾಸವಿರಿಸುವ ನಾಮವಿಲ್ಲದ,ಲಿಂಗವಿಲ್ಲದ ಜೀವಿಯಲ್ಲ ಎಂದು ನಿರ್ಧರಿಸಬಹುದು.

ಆದರೆ ನಮಗೆ ಈ ಅಂತರಜಾಲ ಎಂದರೇನೆಂಬುದೇ ತಿಳಿದಿರಲಿಲ್ಲ. ನಮ್ಮ ಮಠದ ವಾತಾವರಣದಲ್ಲಿ ನಮಗೆ ವೆಬ್ ಎಂದರೆ ಜೇಡನದ್ದೇ ಎಂದು ಕೇಳುವಷ್ಟರ ಮಟ್ಟಿಗೆ ಮಾತ್ರ ತಿಳುವಳಿಕೆ ಬೆಳೆದಿತ್ತು. ಆದರೆ ಕಾಲ ಬದಲಾದ ಹಾಗೆ ನಾವೂ ಬದಲಾಗಬೇಕಲ್ಲವೇ? ಏಕೆ ಬದಲಾಗಬೇಕು ಎಂದು ಜಿಜ್ಞಾಸುಗಳು ಪ್ರಶ್ನಿಸಬಹುದು. ಬದಲಾಗದಿದ್ದರೆ ಚಲಾವಣೆ ಇರುವುದಿಲ್ಲವಾದ್ದರಿಂದ ಬದಲಾಗಲೇ ಬೇಕು.

ಅಂತರಜಾಲದ ಓನಾಮವನ್ನೂ ತಿಳಿಯದ ನಮ್ಮ ಕೈಲಿ ಅಂಕಣವನ್ನು ಬರೆಸುವ ಸಾಹಸವನ್ನು ಮಾಡಲು ಬಂದ ತೊಣಚಪ್ಪನವರನ್ನು ನಾವು ಗದರಿಸಿ ಕಳುಹಿಸಿದೆವು. ತೊಣಚಿ ಬಿಡು ಎಂದರೆ ಬಿಟ್ಟು ಬಿಡುವುದೇ? ನಮ್ಮ ಮಠದಲ್ಲಿ ದಾನ, ಖರ್ಚು ವೆಚ್ಛಗಳನ್ನು ನೆನಪಿಡುವುದಕ್ಕಾಗಿ ತಂದಿಟ್ಟುಕೊಂಡಿದ್ದ ಕಂಪ್ಯೂಟರನ್ನು ಅಂತರಜಾಲದ ಸಂಪರ್ಕಕ್ಕೆ ಒಡ್ಡಿ ನಮಗೆ ನಗೆ ನಗಾರಿ ಬ್ಲಾಗನ್ನು ತೊಣಚಪ್ಪ ತೋರಿದರು. ಸಂಪಾದಕರಾದ ನಗೆ ಸಾಮ್ರಾಟರ ಬರಹಗಳನ್ನು ತೋರಿಸಿದರು. ಅದರಲ್ಲಿ ಸಾಮ್ರಾಟರು ತಮ್ಮನ್ನು ‘ನಾವು’ ಎಂದು ಕರೆದುಕೊಳ್ಳುವುದನ್ನು ನೋಡಿ ನಮಗೆ ಗಾಬರಿಯಾಯಿತು. ಇವರು ಇನ್ನ್ಯಾವುದೋ ಮಠದ ಸ್ವಾಮಿಯೇ ಎಂಬ ಶಂಕೆ ಉಂಟಾಯಿತು. ಆದರೆ ಆ ಬಗೆಯ ಸ್ವಸಂಬೋಧನೆಯ ಹಿಂದಿನ ಕಾರಣವನ್ನು ಅರಿತು ನಾವು ಸಮಾಧಾನ ಹೊಂದಿದೆವು.

ನಮ್ಮ ಈ ಅಂಕಣದ ಮೊದಲ ಲೇಖನವಾಗಿ ನಾವು ಏನನ್ನು ಬರೆಯಬೇಕೆಂದು ಆಲೋಚಿಸುವಾಗ ಅಧ್ಯಾತ್ಮದ ಬಗ್ಗೆ ಬರೆಯುವುದಕ್ಕಾಗಿ ನಮ್ಮನ್ನೇ ಏಕೆ ಸಂಪಾದಕರು ಆರಿಸಿದರು ಎಂಬ ಪ್ರಶ್ನೆಯು ಹುಟ್ಟಿಕೊಂಡಿತು. ಅಧ್ಯಾತ್ಮ ಎಂಬುದು ಮಠದ ಸ್ವಾಮೀಜಿಗಳ, ಸಂನ್ಯಾಸಿಗಳ, ಪೂಜಾರಿಗಳ, ಪಿಂಚಣಿ ಎಣಿಸುತ್ತಿರುವವರ ಸ್ವತ್ತು ಆದದ್ದು ಯಾವಾಗಿನಿಂದ ಎಂಬ ಜಿಜ್ಞಾಸೆ ಮೂಡಿತು. ಆಟೋ ಚಾಲಕನಿಗೆ, ರೈತನಿಗೆ, ಚಮ್ಮಾರನಿಗೆ, ಬಸ್ ಡ್ರೈವರಿಗೆ, ಟೀ ಸ್ಟಾಲ್ ಮಾಣಿಗೆ, ವಾರ್ತಾ ನಿರೂಪಕಿಗೆ ತಿಳಿಯದ ಯಾವ ಅಧ್ಯಾತ್ಮ ಮಠ ಮಂದಿರಗಳಲ್ಲಿ ಕೂತ ಸ್ವಾಮೀಜಿಗಳಿಗೆ ತಿಳಿದೀತು ಎನ್ನಿಸಿತು. ಮದುವೆ, ದಾಂಪತ್ಯದ ಬಗ್ಗೆ, ಕುಟುಂಬದ ಬಗ್ಗೆ, ಸಂಸಾರ ಸಾಗರದ ಬಗ್ಗೆ ಅವ್ಯಾವುಗಳಲ್ಲೂ ತೊಡಗಿಕೊಳ್ಳದವನಿಗೆ ತಿಳಿದಿರಲು ಹೇಗೆ ಸಾಧ್ಯ? ಈಜೇ ಬರದವನ ಬಳಿ ನದಿಯ ಆಳದ ಬಗ್ಗೆ, ಅದರ ಹರಿವಿನ ಬಗ್ಗೆ, ದಾಟುವ ಬಗ್ಗೆ ಸಲಹೆ ಕೇಳುವುದು ವಿವೇಕಯುತವೇ? ಹೆಣ್ಣಿನ ಸಂಗವನ್ನೇ ಅರಿಯದ (ಅಥವಾ ಹಾಗೆ ತೋರ್ಪಡಿಸುವ) ಸಂನ್ಯಾಸಿ ಹೆಣ್ಣು ಮಾಯೆ, ಹೆಣ್ಣು ಬಂಧನ, ಸಂಸಾರ ಸಾಗರ ಎನ್ನದೆ ಇನ್ನೇನು ಅಂದಾನು? ಹೆಣ್ಣು ಗಂಡಿನ ಸಂಯೋಗವನ್ನು ಪಾಪವೆನ್ನದೆ ಮತ್ತೇನು ಅಂದಾನು? ಎಟುಕದ ದ್ರಾಕ್ಷಿ ಹುಳಿಯಲ್ಲವೇ?

ಜಿಜ್ಞಾಸೆಗಳು ಕೈ ಹಿಡಿದು ಜಗ್ಗುತ್ತಿರುವಾಗ ನಾವು ಸಾಮ್ರಾಟರನ್ನು ಸಂಪರ್ಕಿಸಿದೆವು. ಚಾಟ್ ಕೋಣೆಯಲ್ಲಿ ಕುಳಿತು ನೇರವಾಗಿ ನಮ್ಮ ಗೊಂದಲಗಳನ್ನು ತೋಡಿಕೊಂಡೆವು. “ನೋಡಿ ಸ್ವಾಮಿಗಳೇ, ನಿಮ್ಮ ಈ ಜಿಜ್ಞಾಸೆಗಳು ಹುಟ್ಟುವುದಕ್ಕೆ ನಮ್ಮ ಬ್ಲಾಗಿಗೆ ಬರೆಯುವುದರಿಂದಾವ ಸಂಭಾವನೆಯೂ ದೊರೆಯುವುದಿಲ್ಲ ಎನ್ನುವುದೇ ಪ್ರಮುಖ ಕಾರಣವಾದರೆ ನಾವು ಅಸಹಾಯಕರು. ನಮ್ಮ ಬ್ಲಾಗಿನ ಅಭಿಮಾನಿಗಳ ಸಂಖ್ಯೆ ಕಡಿಮೆ ಎನ್ನುವುದು ಕಾರಣವಾದರೆ ಅದರ ಬಗ್ಗೆಯೂ ನಾವೇನು ಮಾಡಲು ಸಾಧ್ಯವಿಲ್ಲ, ಬ್ಲಾಗ್ ಹಿಟ್ಟುಗಳನ್ನು ಏರಿಸಿಕೊಳ್ಲುವುದಕ್ಕಾಗಿ ಲಿಂಗ ಬದಲಾವಣೆ ಮಾಡಿಸಿಕೊಳ್ಳಲು ಸೌಕರ್ಯವಿಲ್ಲ, ಹೆಸರು ಬದಲಿಸಿಕೊಳ್ಳುವ ಅನಿವಾರ್ಯವಿಲ್ಲ.  ಈ ಬರವಣಿಗೆಯಿಂದ ನಿಮ್ಮ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಲಾರದು ಎನ್ನುವುದು ನಿಮ್ಮ ಚಿಂತೆಯಾಗಿದ್ದರೆ ಅದರ ಬಗ್ಗೆ ಏನಾದರೂ ಉಪಾಯ ಹೂಡಬಹುದು. ಆದರೆ ಇದು ನನ್ನ ಪ್ರಾಮಾಣಿಕ ಪ್ರಶ್ನೆ, ಆತ್ಮಸಾಕ್ಷಿಯ ಕಾಟ ಎನ್ನುವುದಾದರೆ ಒಂದು ಮಾತು ನೆನಪಿನಲ್ಲಿಡಿ. ಶಂಖದಿಂದ ಬಂದರಷ್ಟೇ ತೀರ್ಥ. ಆನೆ ನಡೆದದ್ದೇ ದಾರಿ. ಒಂದನೆಯ ತರಗತಿಯ ಹುಡುಗನ ಉತ್ತರ ಪತ್ರಿಕೆಯನ್ನೇ ವೇದಿಕೆಯ ಮೇಲೆ ನಿಂತು ಕವಿ ಎಂದು ಕರೆದುಕೊಳ್ಳುವವನೊಬ್ಬ ಓದಿದರೆ ಅದೇ ಕವಿತಾವಾಚನವಾಗುತ್ತೆ. ಹೀಗಾಗಿ ನೀವು ಯೋಚಿಸಬೇಡಿ, ಸುಮ್ಮನೆ ನನ್ನ ತಲೆ ಕೊರೆಯಬೇಡಿ, ನಿಮ್ಮದೂ ಕೊರೆದುಕೊಳ್ಳಬೇಡಿ. ಕೊರೆಸಿಕೊಳ್ಳಲು ಸಾಲುಗಟ್ಟಿರುವ ಅಸಂಖ್ಯಾತ ಪ್ರಜೆಗಳು ನಮ್ಮ ಸಾಮ್ರಾಜ್ಯದಲ್ಲಿವೆ.” ಎಂದವರು ವಿವರಿಸಿದಾಗ ನಮಗೆ ಧೈರ್ಯ ಬಂದಿತು.

ಹೀಗಾಗಿ ಅಧ್ಯಾತ್ಮ ಎಂಬ ಕಬ್ಬಿಣದ ಕಡಲೆಯನ್ನು ತಿನ್ನಿಸಿ, ನಗೆ ನಗಾರಿಯೆಂಬ ನೀರನ್ನು ಕುಡಿಸಿ ನೀವು ‘ನಗೆ ಬಾಂಬು’ಗಳನ್ನು ಸಿಡಿಸುವಂತೆ ಮಾಡಿ ನಿಮ್ಮ ವಾತಾವರಣವನ್ನು ಹಾಸ್ಯಮಯ ಮಾಡುವ ಉದ್ದೇಶದಿಂದ ನಾವು ಬರೆಯಲು ಒಪ್ಪಿಕೊಂಡಿದ್ದೇವೆ. ಮುಂದಿನ ಸಂಚಿಕೆಯಿಂದ ನಮ್ಮ ಅಧ್ಯಾತ್ಮ ಪ್ರವಚನವನ್ನು ಶುರು ಮಾಡುವೆವು. ಶಿರಸ್ತ್ರಾಣ, ಕರ್ಣ ಕವಚಗಳನ್ನು, ನೇತ್ರ ಕುಂಡಲಗಳನ್ನು ತಯಾರು ಮಾಡಿಟ್ಟು ಕೊಳ್ಳುವವರಿಗೆ ಸಾಕಷ್ಟು ಸಮಯಾವಕಾಶವಿದ್ದೇ ಇದೆ.