ಡಬ್ಬಾ ಕ್ಯಾಮೆರಾದಲ್ಲಿ ಸೂರ್ಯಗ್ರಹಣ

ಡಬ್ಬಾ ಕ್ಯಾಮೆರಾದಲ್ಲಿ ಸೂರ್ಯಗ್ರಹಣ

ಬರಹ

’ತಿಂಡಿ ತಿನ್ನುವುದಾದರೆ ಹನ್ನೊಂದು ಗಂಟೆ ಒಳಗೆ ತಿನ್ನಿ. ಊಟ ಮಾಡುವುದಾದರೆ ಮಧ್ಯಾಹ್ನ ನಾಲ್ಕರ ನಂತರ ಮಾತ್ರ’ ಎಂದು ಮಡದಿ ಫರ್ಮಾನು ಹೊರಡಿಸಿದಾಗಲೇ ನನ್ನ ಹೊಟ್ಟೆಗೆ ಗ್ರಹಣ ಹಿಡಿದಾಗಿತ್ತು. ಅವಸರದಲ್ಲಿ ತಿಂಡಿ ತಿನ್ನುವ ಹೊತ್ತಿಗೆ ಹೊರಗೆ ಗ್ರಹಣ ಶುರುವಾಗಿತ್ತು. ಮಡದಿ ಟಿವಿ ಮುಂದೆ ಪ್ರತಿಷ್ಠಾಪಿತಳಾಗುವ ಹೊತ್ತಿಗೆ, ಹಳೆಯ ಎಕ್ಸ್‌ರೇ ಫಿಲಂ ಹಾಗೂ ಡಬ್ಬಾ ಕ್ಯಾಮೆರಾ ಹಿಡಿದು ನಾನು ಬೀದಿಯಲ್ಲಿ ನಿಂತಿದ್ದೆ. ಅಕ್ಷರಶಃ ಒಂಟಿಯಾಗಿ!

ಬೀದಿಯಲ್ಲಿ ನಾನೆಂಬ ಒಂದೇ ಒಂದು ನರಪಿಳ್ಳೆ ಇರಲಿಲ್ಲ!

ಬೀದಿ ನಾಯಿಗಳೂ ಮುಖ ಮರೆಸಿಕೊಂಡಿದ್ದವು. ರಜೆ ಇದ್ದಾಗೆಲ್ಲ ಕಲರವ ತುಂಬಿಸಿರುತ್ತಿದ್ದ ಬೀದಿಗಳು ಬಿಕೋ ಎನ್ನುತ್ತಿದ್ದವು. ಒಂದೆರಡು ಮನೆಗಳಿಂದ ಟಿವಿ ಹಾಗೂ ಜ್ಯೋತಿಷಿಗಳ ಏರು ದನಿಯ ಎಚ್ಚರಿಕೆಗಳು ಮಸುಕಾಗಿ ಕೇಳಿ ಬರುತ್ತಿದ್ದುದು ಬಿಟ್ಟರೆ, ಸದ್ದು ಕೂಡ ಅಷ್ಟಕ್ಕಷ್ಟೇ.

ಎಕ್ಸ್‌ರೇ ಫಿಲಂನಲ್ಲಿ ಸೂರ್ಯಗ್ರಹಣದ ದೃಶ್ಯ ಚೆನ್ನಾಗಿಯೇ ಕಾಣುತ್ತಿತ್ತು. ಆದರೆ, ಕ್ಯಾಮೆರಾ ಹಿಡಿಯುತ್ತಲೇ ಕಾಣುತ್ತಿದ್ದುದು ಬರೀ ಬೆಳಕು. ಫೊಟೊ ತೆಗೆಯುವುದು ಹೇಗೆ? ಎಕ್ಸ್‌ರೇ ಫಿಲಮನ್ನೇ ಕ್ಯಾಮೆರಾ ಲೆನ್ಸ್‌ಗೆ ಅಡ್ಡ ಹಿಡಿದರೆ ಕಾಣುತ್ತಿದ್ದುದು ಮಂಕು ಚಿತ್ರ ಮಾತ್ರ. ಅದರಲ್ಲಿ ಸೂರ್ಯನನ್ನು ಹುಡುಕಬೇಕಿತ್ತು.

ಮೋಡ ಅಡ್ಡ ಬಂದಾಗೆಲ್ಲ ಕುರುಡಾಗಿ ಕ್ಲಿಕ್ಕಿಸುತ್ತ, ಮೋಡ ತಿಳಿಯಾದಾಗ, ಫಿಲಂ ಅಡ್ಡ ಹಿಡಿಯುತ್ತ ಒಂದಿಷ್ಟು ಫೊಟೊಗಳನ್ನು ತೆಗೆದಾಯ್ತು. ’ಅಯ್ಯೋ, ಅಷ್ಟ್ಯಾಕೆ ಕಷ್ಟಪಡ್ತೀರಿ. ಇಂಟರ್‌ನೆಟ್‌ನಲ್ಲಿ ಫೋಟೊಗಳು ಸಿಕ್ತವೆ’ ಎಂದು ಮಡದಿ ಕರೆದರೂ ಕೇಳಿಸದೇ, ಡಬ್ಬಾ ಕ್ಯಾಮೆರಾದಲ್ಲಿ ಫೊಟೊ ತೆಗೆದೇ ಸಿದ್ಧ ಎಂದು ಹಠ ಮುಂದುವರಿಸಿದೆ.

ಗ್ರಹಣ ತನ್ನ ಗರಿಷ್ಠ ಮಟ್ಟ ತಲುಪುವವರೆಗೆ ಫೊಟೊ ತೆಗೆದಿದ್ದೇ ಲಾಭ. ಆಮೇಲೆ ಮೋಡಗಳು ಮಾಯವಾದವು. ಎಲ್ಲೆಡೆ ಮಂಕು ಬೆಳಕು. ಗೃಹಮಂತ್ರಿಯ ಎಚ್ಚರಿಕೆ ಮೀರಿ ಒಂದಿಷ್ಟು ಬಿಸ್ಕಿಟ್‌ ಕಬಳಿಸಿ, ನೀರು ಕುಡಿದು, ನಿಯಮ ಮುರಿದ ಹೆಮ್ಮೆಯಲ್ಲಿ ಮತ್ತೆ ಮುಗಿಲಿಗೆ ಮುಖವೊಡ್ಡಿದೆ. ಎಕ್ಸ್‌ರೇ ಫಿಲಂನೊಳಗಿಂದ ಸೂರ್ಯಗ್ರಹಣದ ಸೊಗಸನ್ನು ಆಸ್ವಾದಿಸುತ್ತ ಇಡೀ ಮಧ್ಯಾಹ್ನ ಖಾಲಿ ಬೀದಿಯಲ್ಲಿ ಒಂಟಿಯಾಗಿ ಓಡಾಡಿದೆ.

ನಡುನಡುವೆ ಕುತೂಹಲ ತಾಳದೇ ಮಡದಿಯೂ ಎಕ್ಸ್‌ರೇ ಫಿಲಂ ಕಸಿದು ಗ್ರಹಣ ದಿಟ್ಟಿಸಿದ್ದೂ ಆಯ್ತು. ’ಏಕೋ ಕಣ್ಣು ಒಂಥರಾ ಮಂಜಾಗ್ತಿವೆ’ ಎಂದು ಆಕೆ ಗಾಬರಿಪಟ್ಟಳಾದರೂ ನಾನು ಕ್ಯಾರೇ ಅನ್ನಲಿಲ್ಲ. ಗ್ರಹಣ ಮನಸ್ಸಿಗೆ ಹಿಡಿದರೆ ಹಾಗಾಗುತ್ತೆ ಎಂದು ಉಡಾಫೆ ಮಾತಾಡಿದೆ. ಬಹುಶಃ ನನ್ನ ಮಾತು ಗುರಿ ಮುಟ್ಟಿರಬೇಕು. ಆಮೇಲೆ ಆಕೆಯ ಕಣ್ಣುಗಳು ಮಂಜಾದಂತೆ ಕಾಣಲಿಲ್ಲ.

ಸಂಜೆ ಕೂತು, ಫೊಟೊಗಳನ್ನು ಡೌನ್‌ಲೋಡ್‌ ಮಾಡಿ ನೋಡಿದರೆ ಖುಷಿಯಾಯ್ತು. ಆರೇಳು ಫೋಟೊಗಳು ಪರವಾಗಿಲ್ಲ ಎನ್ನುವಂತೆ ಬಂದಿದ್ದವು. ಗ್ರಹಣವನ್ನು ಇತರರು ಎಷ್ಟೇ ಚೆನ್ನಾಗಿ ತೆಗೆದಿರಬಹುದು. ಆದರೆ, ನನ್ನ ಡಬ್ಬಾ ಕ್ಯಾಮೆರಾದಲ್ಲಿ ಹಿಡಿದ ಫೊಟೊಗಳು ಕೊಟ್ಟ ಖುಷಿಯೇ ಖುಷಿ. ನಾನು ಐದು ಅಥವಾ ಆರನೇ ತರಗತಿಯಲ್ಲಿ ಇದ್ದಾಗ ಊರಲ್ಲಿ ಬರಿಗಣ್ಣಲ್ಲಿ ನೋಡಿದ ಖಗ್ರಾಸ ಸೂರ್ಯಗ್ರಹಣ ಹಾಗೂ ೧೯೯೫ರಲ್ಲಿ (ಬಹುಶಃ) ಬೆಂಗಳೂರಿನಲ್ಲಿ ನೋಡಿದ ಇಂಥದೇ ಇನ್ನೊಂದು ಗ್ರಹಣದ ನೆನಪು ಬಂದಿತು.

ಅವತ್ತಿಗೂ ಇವತ್ತಿಗೂ ಬದಲಾಗದ ಒಂದಂಶವೆಂದರೆ, ಈಗಿನಂತೆ ಆಗಲೂ ಬಹುತೇಕ ಜನ ಗ್ರಹಣ ನೋಡದೇ ಮನೆ ಒಳಗೇ ಇದ್ದುದು. ಗ್ರಹಣವೇನೋ ಸ್ವಲ್ಪ ಸಮಯದ ನಂತರ ಬಿಡುತ್ತದೆ. ಆದರೆ, ಜನರ ಮನಸ್ಸಿಗೆ ಕವಿದ ಗ್ರಹಣ ಮಾತ್ರ ಬಿಡಲು ನಮ್ಮ ಜೀವಿತಾವಧಿ ಸಾಕಾಗಲಿಕ್ಕಿಲ್ಲ ಅಂತ ಅಂದುಕೊಳ್ಳುತ್ತ ಫೊಟೊ ಅಪ್‌ಲೋಡ್‌ ಮಾಡಿದೆ.

- ಚಾಮರಾಜ ಸವಡಿ