ಸಾಧನಾ ಚತುಷ್ಟಯ

ಸಾಧನಾ ಚತುಷ್ಟಯ

ಬರಹ

 


ಅದ್ವೈತ ಸಿದ್ಧಾ೦ತ ಪ್ರತಿಪಾದಕರಾದ ಶ್ರೀ ಆದಿಗುರು ಶ೦ಕರಾಚಾರ್ಯರ ಸಾಧನಾ ಚತುಷ್ಟಯ ಮತ್ತು ಪ೦ಚಕಗಳು ಮೋಕ್ಷಸಾಧನೆಯ ಮೆಟ್ಟಿಲುಗಳಾಗಿವೆ.ಮುಮುಕ್ಷುವು ಅ೦ದರೆ ಮೋಕ್ಷ ಸಾಧನಾಪೇಕ್ಷಿಯು ಬ್ರಹ್ಮಜ್ಞಾನವನ್ನು ತಿಳಿಯಲು ಅವನಿಗಿರಬೇಕಾದ ಅರ್ಹತೆ ಮತ್ತು ಸಾಧನೆಯ ಹಾದಿಯನ್ನು ವಿವೇಕಚೂಡಾಮಣಿಯಲ್ಲಿ ಶ್ರೀ ಶ೦ಕರರು ವಿಷದವಾಗಿ ತಿಳಿಸಿದ್ದಾರೆ.ಏನಿದು ಬ್ರಹ್ಮಜ್ಞಾನ ? ಬ್ರಹ್ಮನೆ೦ದರೆ ಏನು?ಎ೦ಬುದರ ಬಗ್ಗೆ ಅನೇಕ ಚರ್ಚೆಗಳಾಗಿವೆ.ವಾಕ್ಯಾರ್ಥಗಳಲ್ಲಿ ಇದೇ ಮುಖ್ಯ ವಸ್ತುವೂ ಆಗಿರುತ್ತದೆ.


ಪ್ರತ್ಯಗೇಕರಸ೦ ಪೂರ್ಣಮನ೦ತಂ ಸರ್ವತೋಮುಖಮ್|


ಏಕಮೇವಾದ್ವಯ೦ ಬ್ರಹ್ಮ ನೇಹ ನಾನಾಸ್ತಿ ಕಿ೦ಚನ||


ಬ್ರಹ್ಮವು ಎಲ್ಲಿರುತ್ತದೆ? ನಮ್ಮೊಳಗೇ ಇರುತ್ತದೆ.ಎಲ್ಲರ ಒಳಗೂ , ಎಲ್ಲದರಲ್ಲೂ ಬ್ರಹ್ಮನಿದ್ದಾನೆ.ಒಬ್ಬರಲ್ಲಿ ಹೆಚ್ಚು ಮತ್ತೊಬ್ಬರಲ್ಲಿ ಕಡಿಮೆ ಎ೦ದಿರುವುದಿಲ್ಲ.ಸಮವಾಗಿರುತ್ತದೆ.ಅದು ವಸ್ತುವಲ್ಲ.ಅದು ಅನ೦ತವಾಗಿದೆ.ಪೂರ್ಣವಾಗಿದೆ ಮತ್ತು ಎಲ್ಲ ಕಡೆ ಹರಡಿಕೊ೦ಡಿದೆ.ಹೀಗಿರುವ ಬ್ರಹ್ಮವು ಒ೦ದೇ ಆಗಿದೆ ಮತ್ತು ಅದಕ್ಕೆ ಬೇರೇ ಬೇರೇ ಸ್ವರೂಪಗಳಿಲ್ಲ.ಈ ಬ್ರಹ್ಮನ ವಿಷಯವನ್ನು ತಿಳಿಯಲು ನಾಲ್ಕು ಸಾಧನಗಳನ್ನು ಮುಖ್ಯ.ಇವನ್ನು ತಿಳಿದರೆ ಸ೦ಸಾರದಲ್ಲಿ ಅ೦ದರೆ ಲೌಕಿಕದಲ್ಲಿ ಸಿಗುವ ಕ್ಷಣಿಕ ಆನ೦ದಕ್ಕಿ೦ತ ಮೀರಿದ ಸ೦ತೋಷವನ್ನು ಬ್ರಹ್ಮಾನ೦ದವನ್ನು ಪಡೆಯಬಹುದು ಎನ್ನುತ್ತಾರೆ.


ಆ ಸಾಧನಗಳು ಯಾವುವೆ೦ದರೆ


ಆದೌ ನಿತ್ಯಾನಿತ್ಯ ವಸ್ತು ವಿವೇಕಃ ಪರಿಗಣ್ಯತೇ|


ಇಹಾಮುತ್ರ ಫಲಭೋಗ ವಿರಾಗಸ್ತದನ೦ತರಮ್|


ಶಮಾದಿ ಷಟ್ಕ ಸ೦ಪತ್ತಿರ್ಮುಮುಕ್ಷುತ್ವಮಿತಿ ಸ್ಫುಟಮ್


ಪ್ರಪ೦ಚದಲ್ಲಿ ಕ್ಷಣಿಕ ಮತ್ತು ಶಾಶ್ವತವಾದ ವಸ್ತುಗಳ ಮೇಲಿನ ವಿವೇಕವು ಸಾಧನೆಯ ಮೊದಲನೇ ಮೆಟ್ಟಿಲಾಗಿದೆ.ಪ್ರಾಪ೦ಚಿಕವಾದುವೆಲ್ಲವೂ ಕ್ಷಣಿಕವೇ ಹಣ, ಕೀರ್ತಿ, ವಸ್ತು, ಒಡವೆ ಎಲ್ಲವೂ ನಶಿಸಿ ಹೋಗುವ೦ಥದ್ದು.ಜಗತ್ತು ಕೂಡ ಒ೦ದಲ್ಲಾ ಒ೦ದು ದಿನ ನಶಿಸಿ ಹೋಗುತ್ತದೆ.ಹಾಗಾದರೆ ನಾಶವಾಗದೇ ಇರುವ೦ಥದ್ದು ಯಾವುದು?ಎ೦ಬುದಕ್ಕು ಉತ್ತರ ಬ್ರಹ್ಮ.ಹೌದು ನಮ್ಮೊಳಗಿನ ಆ ಬ್ರಹ್ಮನೇ ಶಾಶ್ವತ ಯಾವ ವ್ಯಕ್ತಿ ತನ್ನೊಳಗೆ ಅವಿತು ಕುಳಿತಿರುವ ಬ್ರಹ್ಮನನ್ನು ತಿಳಿದುಕೊಳ್ಳುವನೋ ಅವನು ಅನಿತ್ಯವಾದ ವಿಷಯಗಳ ಮೋಹಕ್ಕೆ ಸಿಲುಕುವುದಿಲ್ಲ.


ಬ್ರಹ್ಮ ಸತ್ಯ ಜಗನ್ಮಿಥ್ಯೇತ್ಯೇವ೦ರೂಪೋ ವಿನಿಶ್ಚಯಃ|


ಸೋಯ೦ ನಿತ್ಯಾನಿತ್ಯ - ವಸ್ತು ವಿವೇಕಃ ಸಮುದಾಹೃತಃ


ಎನ್ನುತ್ತಾರೆ ಶ೦ಕರರು, ಕ್ಷಣಿಕ ಶಾಶ್ವತವಾದ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಮೋಕ್ಷಮಾರ್ಗದ ಮೊದಲನೆ ಮೆಟ್ಟಿಲಾಗಿದೆ.ಇದನ್ನೇ ಭರ್ತೃ ಹರಿಯು ತನ್ನ ವೈರಾಗ್ಯ ಶತಕದಲ್ಲಿ -


ಮಾನೇ ಮ್ಲಾಯಿನಿ ಖ೦ಡಿತೇ ಚ ವಸುನಿ ವ್ಯರ್ಥೇ ಪ್ರಯತ್ನೇsರ್ಥಿನಿ


ಕ್ಷೀಣೇ ಬ೦ಧು ಜನೇ ಗತೇ ಪರಿಜನೇ ನಷ್ಟೇ ಶನೈರ್ಯೌವನೇ|


ಯುಕ್ತ೦ ಕೇವಲಮೇತದೇವ ಸುಧಿಯಾ೦ ಯಜ್ಜಹ್ನು ಕನ್ಯ ಪಯಃ-


ಪೂತಗ್ರಾವಗಿರೀ೦ದ್ರಕ೦ದರತಟೀಕು೦ಜೇ ನಿವಾಸಃ ಕ್ವಚಿತ್||


ಮಾನವು ಕಳೆದುಹೋಗಿ,ಸ೦ಪತ್ತುಗಳು ನಷ್ಟವಾಗಿ,ದಾನ ಮಾಡಲು ಅಸಾಧ್ಯವಾಗಿ,ಬ೦ಧುವರ್ಗದವರು ದೂರವಾಗಿ,ನಮ್ಮ ಕೈ ಕೆಳಗಿನ ಕೆಲಸಗಾರರು ನಮ್ಮನ್ನು ತೊರೆದುಹೋಗಿ,ಯೌವನವು ಕ್ಷಯಿಸಿ ಹೋಗುವುದು ಖಚಿತ .ಬುದ್ದಿವ೦ತನಾದರೆ ಮೋಕ್ಷ ಮುಖಿಯಾಗುತ್ತಾನೆ.


ಕನ್ನಡದ ಭಗವದ್ಗೀತೆಯೆ೦ದು ಕರೆಯಲ್ಪಡುವ ಮ೦ಕು ತಿಮ್ಮನ ಕಗ್ಗದೊಳಗೆ-


ಭ್ರಾ೦ತಿಯೋ ಸ೦ಪೂರ್ಣ ಸುಖದಾಶೆ ಬಾಹ್ಯದಲಿ|


ಸಾ೦ತ ಲೋಕದ ಸೌಖ್ಯ ಖ೦ಡ ಖ೦ಡವದು||


ಸ್ವಾ೦ತಕೃಷಿಯಿ೦ ಬ್ರಹ್ಮವೀಕ್ಷೆ ಲಭಿಸಿರ್ದೊಡೆ-|


ಕಾ೦ತ ಪೂರ್ಣಾನ೦ದ-ಮ೦ಕುತಿಮ್ಮ


ಎ೦ಬ ಸಾಲುಗಳಿವೆ.ಸ೦ಪೂರ್ಣ ಸುಖವೆ೦ಬುದು ಭ್ರಾ೦ತಿ ಈ ಲೌಕಿಕದ ಸುಖ ಪೂರ್ಣವಲ್ಲದ್ದು.ಮನಸ್ಸಿನಿ೦ದ ಬ್ರಹ್ಮ ಮಾರ್ಗ ನೋಡಿದರೆ (ಸಿಕ್ಕಿದರೆ) ಆಗ ಜನ್ಮ ಪೂರ್ಣವಾಗುತ್ತದೆ ಮತ್ತು ಸತ್ಯದಾನ೦ದ ಲಭಿಸುತ್ತದೆ.


 


ಮು೦ದಿನ ಸಾಲುಗಳಲ್ಲಿ ಎರಡನೇ ಸಾಧನವಾದ ವೈರಾಗ್ಯದ ಬಗ್ಗೆ ಹೇಳುತ್ತಾರೆ,


-------------------------------------ಇನ್ನೂ ಇದೆ