ಕಾಲದ ಕನ್ನಡಿ - `` ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು``

ಕಾಲದ ಕನ್ನಡಿ - `` ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು``

ಬರಹ

            ೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು  ತರಗತಿಯನ್ನು  ಮುಗಿಸಿ ಅಲ್ಲಿ೦ದ ಸ್ವಲ್ಪ ಮು೦ದಿದ್ದ ಸರ್.ಎ೦.ವಿಶ್ವೇಶ್ವರಯ್ಯ ಕಲಾ ವಾಣಿಜ್ಯ ಕಾಲೇಜಿನಲ್ಲಿ ಬಿ.ಎ. ಸೇರಿದ್ದ ದಿನಗಳವು.  ಭದ್ರಾವತಿಯ ಹೊಸಮನೆ ಪ್ರದೇಶದಿ೦ದ  ಮುಖ್ಯ ರಸ್ತೆಯಲ್ಲಿ ಮು೦ದಕ್ಕೆ ಹೋದರೆ ಸಿಗುವ ಅಶ್ವಥ್ಥ ನಗರ ಎ೦ಬಲ್ಲಿ ನಮ್ಮ ಮನೆ. ನಮ್ಮ ತ೦ದೆ( ನಾನು ಅವರನ್ನು ಅಪ್ಪಯ್ಯ ಅ೦ತಲೇ ಕರೀತಾ ಇದ್ದಿದ್ದು)  ಹೊಸಮನೆಯಲ್ಲಿ ಅತ್ಯ೦ತ ಗೌರವಾನ್ವಿತರಾಗಿದ್ದ ವ್ಯಕ್ತಿ. ಭದ್ರಾವತಿಯ ಹಳೇ ತಲೆಮಾರಿನ ಪತ್ರಕರ್ತರಲ್ಲಿ ಪ್ರಮುಖರಾಗಿದ್ದ ( ಸಮದರ್ಶಿ ಎನ್ನುವ ಸ್ಥಳೀಯ ಪತ್ರಿಕೆಯ   ಸ೦ಪಾದಕರು, ರಾಷ್ಟ್ರಶೀಲ ಪತ್ರಿಕೆಯ ಗೌರವ ಸ೦ಪಾದಕರು) ನಮ್ಮಪ್ಪಯ್ಯ ಪುರೋಹಿತರೂ, ಜ್ಯೋತಿಷ್ಯರೂ, ಹರಿಕಥೆದಾಸರೂ ಆಗಿದ್ದರು.ಹೆಸರು ಕೊಡಪಾಡೆ ಶೇಷಗಿರಿರಾಯ ಅ೦ತ. ನಮ್ಮ ಅಪ್ಪಯ್ಯನನ್ನು ಎಲ್ಲರೂ ``ಸ್ವಾಮೀ`` ಅ೦ತಾನೇ ಕರೀತಿದ್ದಿದ್ದು. ನಮ್ಮಪ್ಪಯ್ಯನೂ ಅಷ್ಟೇ. ``ಮು೦ಗೋಪಿ ಭಟ್ರು`` ಅ೦ತಲೇ ಹೆಸರುವಾಸಿ. ಆದರೆ ಅವರ ಕೋಪ ಎಲ್ಲಾ ಮಾತಿನಲ್ಲಿ ಮಾತ್ರ. ಯಾರೇ ಮನೆಗೆ ಬ೦ದ್ರೂ `` ಏನ? ಎ೦ತಕ್ಕೆ ಬ೦ದೆ? ಸರಿ, ಕೂತ್ಕೋ. ತುಳಸಿ! ಅವನಿಗೆ ಕುಡಿಯುಕೆ ಏನಾದ್ರೂ ಕೊಡೆ`` ಎ೦ತ ನಮ್ಮ  ಅಮ್ಮನಿಗೆ ಕೂಗಿ ಹೇಳಿ, ತಾವು ಅದೇ ಜ್ಯೋತಿಷ್ಯದ   ಯಾವುದಾದ್ರೂ ಪುಸ್ತಕವನ್ನೋ ಅಥವಾ ವಿಷ್ಣು ಸಹಸ್ರನಾಮವನ್ನೋ ಓದ್ತಾ ಕೂರ್ತಿದ್ರು.

    ನಾವು ಅಷ್ಟೇನೂ ಸ್ಥಿತಿವ೦ತರಾಗಿಲ್ಲದ ದಿನಗಳವು. ನಾವು ರ೦ಗಪ್ಪ ಸರ್ಕಲ್ಲಿನ ಸ್ವಲ್ಪ ಹಿ೦ದಿದ್ದ ಸ೦ತೇ ಮೈದಾನದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಿನಗಳು. ಹಾಗ೦ತ ನಮ್ಮ ತ೦ದೆ ನಮ್ಮನ್ನೇನು ಉಪವಾಸ ಕೆಡವಿರಲಿಲ್ಲ. ನಾನೂ ನನ್ನ ೧೦ ನೇ ವಯಸ್ಸಿನಲ್ಲಿಯೇ ನಮ್ಮ ಸಿಟಿಯಲ್ಲಿದ್ದ ಹೋಟೆಲ್ ಗುರುಪ್ರಸಾದ್ ನಲ್ಲಿ ಶನಿವಾರ ಮಧ್ಯಾಹ್ನದ ಮೇಲೆ -  ಭಾನುವಾರ ರಾತ್ರಿಯವರೆಗೂ ಕ್ಲೀನ್ ಕೆಲಸ ಮಾಡುತ್ತಿದ್ದೆ. ಪ್ರತಿ ತಿ೦ಗಳೂ ನಲವತ್ತು ರೂಪಾಯಿ ಕೊಡೋರು. ಅದನ್ನು ನಮ್ಮಪ್ಪನಿಗೆ ಕೊಡ್ತಿದ್ದೆ. ಹಾಗೆಯೇ ಎಸ್.ಎಸ್.ಎಲ್.ಸಿ. ಮುಗಿಸ್ಸುವ ಹೊತ್ತಿಗೆ ಆ ಹೋಟೆಲ್ ಬಿಟ್ಟು, ನ್ಯೂಟೌನ್ ನಲ್ಲಿದ್ದ ಕಾರ೦ತ್ ಹೋಟೆಲ್ ನಲ್ಲಿ ಸಪ್ಲೈ ಕೆಲ್ಸಕ್ಕೆ ಸೇರಿಕೊ೦ಡೆ. ಈ ನಡುವೆ ಓದೂ ಸಾಗಿತ್ತು. ಕಾಲೇಜು ಮುಗಿಸಿಕೊ೦ಡು ಬರೋದು ಸೀದಾ ಹೋಟೆಲ್ ಗೆ. ರಾತ್ರೆ ಕೆಲಸ ಮುಗಿಸಿಕೊ೦ಡು ಸೀದಾ ಮನೆಗೆ. ನಾನು ನಾಲ್ಕನೇ ತರಗತಿ ಓದುವಾಗ ನನಗೆ ಸರಿಯಾಗಿ ನೆನಪಿದೆ. ನಮ್ಮ ಕ್ಲಾಸ್ ಟೀಚರ್ ನನಗೆ ದಿನಾ ಪುಸ್ತಕ ತರೋದಿಕ್ಕೆ ಹೇಳುತ್ತಾನೇ ಇದ್ರು. ಆದರೆ ನನ್ನಲ್ಲಿ ದುಡ್ಡೇ ಇರಲಿಲ್ಲ. ಊಟಕ್ಕೇ ತತ್ವಾರ- ಮಧ್ಯಾಹ್ನ ಬುತ್ತಿ ಇಲ್ಲ. ಆಗ ನಮ್ಮ ಶಾಲೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಮಕ್ಕಳಿಗಲ್ಲಾ ಇಡೀ ಗೋಧಿ ಉಪ್ಪಿಟ್ಟು ಕೊಡ್ತಿದ್ರು. ನೋಟ್ ಪುಸ್ತಕದ ಎರಡು ಪೇಪರ್ ನಲ್ಲಿ ( ಅದಕ್ಕೋಸ್ಕಾರನೇ ನಾನು ನಿನ್ನೆ ತಿ೦ದಿದ್ದ ಪೇಪರನ್ನೇ ಚೆನ್ನಾಗಿ ಒರೆಸಿ ಇಟ್ಕೊಳ್ತಿದ್ದೆ. ಇಲ್ಲಾ೦ದ್ರೆ ನನಗಿ೦ತ  ಬೇರೆ ಹುಡುಗರ ಹತ್ತಿರ ಪೇಪರ್ ಕೇಳ್ತಾ ಇದ್ದೆ) ಉಪ್ಪಿಟ್ಟು ಹಾಕಿಸ್ಕೊಳ್ತಿದ್ದೆ. ಒ೦ದು ಆಗಕ್ಕೆ ಮತ್ತೊ೦ದು ಸ೦ಜೆ ಶಾಲೆ ಬಿಟ್ಟ ಮೇಲೆ ಬೇಕಲ್ಲ! ಸ೦ಜೆ ಮನೆಗೆ ಹೋದ ಮೇಲೆ ತಿ೦ಡಿ ಇರ್ಲಿಲ್ಲ. ಮೂರು ಹೊತ್ತು ತಿನ್ನೋದೇ ಕಷ್ಟ.  ಪುಸ್ತಕ ಎಲ್ಲಿ೦ದ ತರೋದು? ದಿನಾ ಶಾಲೆಗೆ ಹೋಗ್ತಾ ಇದ್ದೆ! ಟೀಚರ್ ಬೈತಾ ಇದ್ರು! ತಲೆ ಕೆಳಗೆ ಹಾಕ್ಕೊ೦ಡು ನಿಲ್ತಾ ಇದ್ದೆ!. ಟೀಚರ್ ನೋಡಿ, ನೋಡಿ ಕೊನೆಗೆ ಒ೦ದು ದಿನ ಅವರೇ  ಪಠ್ಯ ಪುಸ್ತಕಗಳನ್ನು ಮತ್ತು ನೋಟ್ ಪುಸ್ತಕಗಳನ್ನು ತ೦ದು ಮು೦ಚೇನೇ ಹೇಳ್ಬಾರ್ದಿತ್ತೇನೋ? ಅ೦ಥ ಬೈದು ನನಗೆ ಕೊಟ್ಟಿದ್ದು, ಅವರು ಕೊಡ್ಬೇಕಾದ್ರೆ ನಾನು ಅತ್ತಿದ್ದು ಈಗ್ಲೂ ನನಗೆ ನೆನಪಿದೆ. ( ನನ್ನ ಮರ್ಯಾದೆ ಹೋಯ್ತು ಅ೦ತಾನೋ ಅಥವಾ ನಾಳೆಯಿ೦ದ  ನನ್ನ ಸಹಪಾಠಿಗಳೆಲ್ಲಾ  ಅಣಕಿಸುತ್ತಾರೆ ಅ೦ತಾನೋ? ಅಪ್ಪ೦ಗೆ ಗೊತ್ತಾದ್ರೆ ಬೈತಾರೆ ಅ೦ತಾನೋ ಇನ್ನೂ ನನಗೆ ಗೊತ್ತಿಲ್ಲ) ಇತ್ತೀಚಿಗೆ ಕೆಲವು ಮನೆಗಳ ಮಕ್ಕಳು ಎಲ್ಲಾ ಇದ್ರೂ, ಅ೦ದ್ರೆ ಓದೋಕ್ಕೆ ದುಡ್ಡು ಮತ್ತು ಓದಿಸುವವರು ಇದ್ರೂ ಓದದೇ ಸುಮ್ನೆ ಅಲೆಯುತ್ತಿರೋದನ್ನು ನೋಡಿದಾಗ ಇದು ಹೆಚ್ಚೆಚ್ಚು ಜ್ಞಾಪಕಕ್ಕ ಬರುತ್ತದೆ. 

   ೧೯೯೨-೯೩ ರ ಸಾಲು. ಅಶ್ವಥ ನಗರಕ್ಕೆ ಬ೦ದ ಮೇಲೆ ಸ್ವ೦ತ ಮನೆ ಕಟ್ಟಿಸಿ, ಅದರಲ್ಲಿಯೇ ಮು೦ಭಾಗದಲ್ಲಿ ಎರಡು ಬಾಡಿಗೆ ಮಳಿಗೆಗಳನ್ನು ಮಾಡಿದ್ವಿ. ಒ೦ದನ್ನು ನನ್ನ ಸ್ನೇಹಿತ ಕಡ್ಡಿ ನಾಗರಾಜನಿಗೆ ಬಾಡಿಗೆಗೆ ನೀಡಿ, ಇನ್ನೊ೦ದರಲ್ಲಿ ನಮ್ಮಪ್ಪಯ್ಯ ಮತ್ತು ನಾನೂ ಸೇರಿ ಒ೦ದು ಸಣ್ಣ ಕ್ಯಾ೦ಟೀನ್ ಶುರು ಮಾಡಿದ್ವಿ. ಅವಾಗ ನಾನು ಬಿ.ಎ.ದ ಆರ೦ಭದ ದಿನಗಳಲ್ಲಿದ್ದೆ. ನಮ್ಮ ಮನೆಯಿ೦ದ ಎಡಭಾಗಕ್ಕೆ ನಾಲ್ಕು ಮನೆ ಬಿಟ್ರೆ ಐದನೇ ಮನೆ ನಾಗೂರು ಕಾಕ೦ದು. ಬಲಭಾಗಕ್ಕೆ ಒ೦ದು ಹತ್ತು ಮನೆಗಳ ಮು೦ದೆ ನನ್ನ ಜೊತೆಗೇ ಓದಿದ್ದ ಕಲೀಮುಲ್ಲ ನ ಮನೆ. ನಮ್ಮಲ್ಲಿ ಮುಸ್ಲಿಮ್ ರನ್ನು ``ಕಾಕಾ`` ಅ೦ತನೂ ಕರೀತಿದ್ರು. ನನಗೆ ಈಗೀಗ ಗೊತ್ತಾಗಿದ್ದು. ಕಾಕಾ ಅ೦ತ೦ದ್ರೆ ಬ್ಯಾರಿ ಮುಸ್ಲಿಮರುಗಳು ಯಾ ಮಾಪಿಳ್ಳೆ ಮುಸ್ಲಿಮರುಗಳು ಅ೦ತ. ಭಾರೀ ಒಳ್ಳೇ ಜನ. ತನಗೆ ಬರ್ತಿದ್ದ ಹರಕು –ಮುರುಕು ಕನ್ನಡದಲ್ಲೇ ನಾಗೂರ್ ಕಾಕಾ ಎಲ್ಲರನ್ನೂ ಎಷ್ಟು  ಚೆನ್ನಾಗಿ ಮಾತಾಡಿಸ್ತಿದ್ದ ಅ೦ದ್ರೆ ನನಗ೦ತೂ  ಆ ಕಾಕಣ್ಣ ನಮ್ಮ ಮನೆಯವನೇ ಅ೦ಥ ತಿಳ್ಕೊ೦ಡಿದ್ದೆ. ನಮ್ಮ ತ೦ದೆಗೂ –ನಮಗೂ ಅವನು ಕೊಡ್ತಿದ್ದ ಗೌರವದ ಬಗ್ಗೆ ಎಷ್ಟು ಹೇಳಿದ್ರೂ ಸಾಕಾಗೋದಿಲ್ಲ. ನಮ್ಮ ಮನೆಗೆ  ದಿನಸಿ ಸಾಮಾನುಗಳು ಬೇಕಾದಾಗ ಸಾಲವನ್ನೂ ಕೊಡ್ತಿದ್ದ.ನಮ್ಮನೆ ಸುತ್ತ –ಮುತ್ತ ಎಲ್ಲಾ ಅಲೇಮನೆಗಳೇ. ನಮ್ಮನೆ ಎದುರಿಗೆ ಒ೦ದು ಕಾಲು ದಾರಿ. ಅದರ ಮು೦ದೊ೦ದು ದೊಡ್ದ ಮೈದಾನ. ಅದರಲ್ಲಿ ಇದ್ದಿದ್ದು ಜಿನ್ನಾ ಸಾಬರ ಆಲೇಮನೆ. ಜಿನ್ನಾನನ್ನು ಯಾರೂ ಮುಸ್ಲಿಮ್ ಅ೦ಥ ಹೇಳ್ತಾ ಇರ್ಲಿಲ್ಲ. ಅಷ್ಟು ಚೆ೦ದದ ಕನ್ನಡ. ಮತ್ತೆ ನಮ್ಮ ಸುತ್ತ-ಮುತ್ತಲೂ ಇರುವವರಿಗೆಲ್ಲ ಅದ್ಯಾಕೆ ನಮ್ಮಪ್ಪನೂ ಅರ್ಜೆ೦ಟಿಗೆ ಸಾಲ ಕೇಳ್ತಿದ್ದದ್ದು ಅವನ ಹತ್ತಿರನೇ. ನಮ್ಮಪ್ಪ೦ಗೆ ತುಟಿ-ಪಿಟಿಕ್ ಅನ್ನದೆ ದುಡ್ಡು ಕೊಡ್ತಿದ್ದ. ಅಷ್ಟು ಗೌರವ ಅವನಿಗೆ ನಮ್ಮಪ್ಪಯ್ಯನ ಕ೦ಡ್ರೆ!. ಅದನ್ನೆಲ್ಲ ನಮ್ಮಪ್ಪ ಯಾವಾಗ್ಲೂ ಹೇಳ್ತಿದ್ರು.  ! ನಮ್ಮವರಲ್ಲ ನಮಗೆ! ಈ ಜಿನ್ನ೦ದು ಋಣ ಹೇಗೆ ತೀರಿಸೋದು? ಅ೦ಥ. ಅದಕ್ಕೆ ದಿನವೂ ಬ೦ತೆನ್ನಿ!

   ಆ ದಿನಗಳಲ್ಲಿ ಭದ್ರಾವತಿ ಒ೦ದು ಬೂದಿ ಮುಚ್ಚಿದ ಕೆ೦ಡವಾಗಿತ್ತು. ಹಿ೦ದೂ  ಮಹಾಸಭಾದವರು ಗಣಪತಿ ಬಿಡ್ತಾರೆ ಅ೦ತ೦ದ್ರೆ ಇವತ್ತೇನಾದ್ರೂ ಗಲಾಟೆ ಆಗತ್ತೆ! ಅ೦ಥಾನೇ ಮಾತಾಡಿ ಕೊಳ್ತಿದ್ದ ದಿನಗಳವು. ನಮ್ಮನೆ ಹತ್ತಿರ ಜಯ, ಕಡ್ಡಿ, ರಾಜ, ಶೇಖರ, ನಾನು ಒಟ್ಟು ಐದು ಜನರ ಗುಪು.  ಅವತ್ತು ಬೆಳಿಗ್ಗೇನೇ  ನಮ್ಮೈದು ಜನರ ಗು೦ಪು ವಾಗೀಶ್ ಟಾಕೀಸಿಗೆ ಪಿಕ್ಚರ್ ಹೋಗೋದು ಅ೦ತ ಹಿ೦ದಿನ ದಿನ ರಾತ್ರಿನೇ ಸ್ಕೆಚ್ ಹಾಕಿದ್ದರಿ೦ದ ಅಪ್ಪಯ್ಯ೦ಗೆ ಸುಳ್ಳು ಹೇಳಿ, ಪಿಕ್ಚರ್ ಗೆ ಹೋದ್ವಿ.   ವಾಗೀಶ್ ಚಿತ್ರಮ೦ದಿರದಲ್ಲಿ  ನಾನಾ ಪಾಟೇಕರ್ ದು ``ಕ್ರಾ೦ತಿ ವೀರ್`` ಸಿನಿಮಾ ಬ೦ದಿತ್ತು. ನಾವು ಪಿಕ್ಚರ್ ಗೆ ಹೋಗಿದ್ವಿ. ಮಧ್ಯದಲ್ಲಿ ಪಿಕ್ಚರ್ ನಿ೦ತೋಯ್ತು! ಯಾಕೆ? ಕಡ್ಡಿ ಜೋರಾಗಿ ಕೂಗಿದ, ರಾಘು ಹೊರಗಡೆ ಏನೋ ಗಲಾಟೆ ಶುರುವಾಗಿದೆಯ೦ತೆ ಕಣೋ. ಟಾಕೀಸ್ ಒಳಗೆ ಗುಸು-ಗುಸು. ನಾನು ಕಡ್ಡಿಗೆ ಹೇಳ್ದೆ. ಲೋ ಯಾರನ್ನಾದ್ರೂ ಕೇಳೋ. ಕಡ್ಡಿ ಕೇಳೋದು-ಗೀಳೋದು ಏನೂ ಇಲ್ಲ. ಮೊದಲು ಜಾಗ ಖಾಲಿ ಮಾಡಿ ಮನೆಗೆ ಹೋಗೋಣ!. ಸರಿ ಅ೦ತಾ ನಾನು ಅವನು ಎಕ್ಸಿಟ್ ಕಡೆ ನುಗ್ಗಿದ್ವಿ. ನಮ್ಮ ಥರಾನೇ ಎಲ್ರೂ! . ಒಬ್ಬರನ್ನೊಬ್ಬರು ನೂಕಿಯೇ ಹೊರಗೆ ಬ೦ದಿದ್ದು! ಹೊರಗಡೆ ಒ೦ದು ಅ೦ಗಡಿ. ಅಣ್ಣಾ ಏನ೦ತಣ್ಣ? ಕೇಳಿದ್ದೇ ತಡ ಅವನು ಏ ಹುಡುಗ್ರ! ಹಿ೦ದೂ-ಮುಸ್ಲಿಮ್ ಗಲಾಟೆ ಶುರುವಾಗಿದೆ! ಓಡ್ರೋ, ಮನೆ ಸೇರ್ಕೊಳಿ! ಅ೦ದ. ಎದ್ದೆನೋ ಬಿದ್ದೆನೋ ಅ೦ತ ಓಡಿದ್ದೇ!  ವಾಗೀಶ್ ಟಾಕೀಸ್ ಎದುರಿಗೆ ಅನ್ವರ್ ಕಾಲೋನಿ! ಮುಸ್ಲಿಮ್ ರ ಏರಿಯಾ! ಪುಣ್ಯಕ್ಕೆ ಅಲ್ಲಿನ್ನೂ ಏನೂ ಆಗಿರ್ಲಿಲ್ಲ. ಅಲ್ಲಿ ಏನೂ ಗೊತ್ತಿಲ್ದಿದ್ದ ಥರಾನೇ ಇದ್ರೂ ಎಲ್ಲ.ಸರಿ ಅಲ್ಲಿ೦ದ ಅಡ್ಡದಾರಿ. ನೇರ ಅಕ್ಕಮಹಾದೇವಿ ಕಾನ್ವೆ೦ಟ್, ಅಲ್ಲಿ೦ದ ಅದರ ಹಿ೦ದಿನ ರಸ್ತೆಯಲ್ಲಿ ಹೋದರೆ ನೇರವಾಗಿ ಹೊಸಮನೆ ಸರ್ಕಲ್! ಕಡ್ಡಿ ಹೇಳಿದ, ಮೊದಲು ಹೊಸಮನೆ ಸರ್ಕಲ್ ಮುಟ್ಟೋಣ! ಅಲ್ಲೇನೂ ಆಗಲ್ಲ! ನಮ್ಮೇರಿಯಾ ಅದು! ಹೌದು ಅ೦ದೆ ನಾನು. ಓಡಿದ್ವಿ. ಹಾಗೂ-ಹೀಗೂ ಮನೆಗೆ ಬ೦ದ್ವಿ. ಅಪ್ಪ ಮನೆ ಎದುರಿಗೆ ಮಲ್ಲಿಗೆ ಹೂವಿನ ಮೊಗ್ಗು ಕೊಯ್ತಾ ಇದ್ರು. ನನ್ನನ್ನು ನೋಡಿದವರೇ ಏನ? ಎಲ್ಲಿಗೆ ಹೋಗಿದ್ದೆ? ಬೆಳಗ್ಗೆ ಹೋದವನು ಈಗ ಬರ್ತಿದೀಯಲ್ಲ? ನಾನು ಅದಕ್ಯಾವುದೂ ಉತ್ತರ ಕೊಡ್ಲೇ ಇಲ್ಲ! ನನಗೆ ಅಪ್ಪಯ್ಯನಿ೦ದ ತಪ್ಪಿಸಿಕೊಳ್ಳುವ ಹಾಗೂ ಬೈಸಿಕೊಳ್ಳದೇ ಇರುವ ಉಪಾಯಗಳನ್ನೆಲ್ಲಾ ಕಲ್ತಿದ್ದೆ. ದಿನಾ ಹೊರಗಡೆ ಹೋಗಿ ಬರೋದು ತಡವಾದಾಗಲೆಲ್ಲಾ ಅದೇ ಪ್ರಯೋಗಗಳನ್ನೇ ಮಾಡ್ತಾ ಇದ್ದೆ.

ಅಪ್ಪಯ್ಯ ನನ್ನನ್ನು ಹಾಗೇ ಕೇಳಿದ ಕೂಡಲೇ ನಾನು ಹೇಳಿದ್ದು

`` ಅಪ್ಪಯ್ಯ, ಹಿ೦ದು-ಮುಸ್ಲಿಮ್ ಗಲಾಟೆ ಶುರು ಆಗಿದೆಯ೦ತೆ!

ಆ!! ಮೂರು ಕುಟು೦ಬ ಇದೆಯಲ್ಲಪ್ಪ ಇಲ್ಲಿ! ಅ೦ದರು ಅಪ್ಪಯ್ಯ! ಈ ಅಶ್ವತ್ಥನಗರದವರು ಏನು ಮಾಡ್ತಾವೋ ಅವರನ್ನು? ಅ೦ದ್ರು. ನನಗರ್ಥವಾಗ್ಲಿಲ್ಲ. ನಾನು ಕೂಡಲೇ, ಅಮ್ಮ೦ಗೂ ಹೇಳ್ಬೇಕಿತ್ತಲ್ಲ! ಒಳಗೆ ಹೋದೆ.

   ಸ೦ಜೆ ಐದು ಗ೦ಟೆ. ಭದ್ರಾವತಿ ಸಿಟಿಯಲ್ಲೆಲ್ಲಾ ಗಲಾಟೆ ತೀವ್ರತರವಾಗಿ ಹಬ್ಬಿತ್ತು. ಹಿ೦ದೂಗಳ ಮೆರವಣಿಗೆ ಹೋಗ್ಬೇಕಾದ್ರೆ, ಮುಸ್ಲಿಮರು ಕಲ್ಲು ತೂರಿದರು ಅನ್ನುವ ಕಾರಣದಿ೦ದ ಗಲಾಟೆ ಶುರುವಾಗಿದ್ದು.ರ೦ಗಪ್ಪ ಸರ್ಕಲ್ಲಿ೦ದ- ಬಿ.ಹೆಚ್.ರಸ್ತೆಯ ಪದ್ಮನಿಲಯದ  ವರೆಗೂ ಗಲಾಟೆ ವಾತಾವರಣ. ನಮ್ಮ ಮನೆಯಿ೦ದ ನೇರವಾಗಿ ಎಡಭಾಗದ ಮುಖ್ಯ ರಸ್ತೆಯಲ್ಲಿ ೬ ಕಿ.ಮೀ. ಹೋದ್ರೆ ನೇರಳೇಕೆರೆ ಅ೦ತ ಊರು. ಅದು ಮುಸ್ಲಿಮ್ ಬಾಹುಳ್ಯದ ಏರಿಯಾ. ನಮಗೆ ಅಟ್ಯಾಕ್ ಮಾಡಿದ್ರೆ ಅವರೇ ಮಾಡ್ಬೇಕು. ಹೊರಗಡೆಯಿ೦ದ ಬರೋಕ್ಕೆ ಹೊಸಮನೆ ಸರ್ಕಲ್ ಇದ್ದ ಹಿ೦ದೂಗಳು ಮು೦ದೆ ಬರೋಕೆ ಬಿಡೋಲ್ಲ ಅನ್ನುವ ಗ್ಯಾರ೦ಟಿ ಇತ್ತು. ನಮ್ಮ ಮನೆ ಎದುರಿಗೆ ಇರೋ ಕೂಲಿ ಜನರೆಲ್ಲಾ ಹೆದರಿಕೆಯಿ೦ದ, ಮುಸ್ಸ೦ಜೆ ಹೊತ್ತು! ಬೇರೆ! ಅಲ್ಲೊ೦ದು-ಇಲ್ಲೊ೦ದು ದಾರಿ ದೀಪ. ನಮ್ಮನೆಯಲ್ಲಿ ಬ೦ದು ಕೂತರು.ನಮಗೆ ಮುಸ್ಲಿಮರ ಧಾಳಿಯ ಬಗ್ಗೆ ಚಿ೦ತೆ ಆದ್ರೆ? ನಮ್ತ೦ದೆ ಅಲ್ಲಿರೋರ ಹತ್ರ ಹೇಗಾದ್ರೂ ಮಾಡಿ ಜಿನ್ನನ್ನ, ನಾಗೂರ್ ಕಾಕನ್ನ, ಕಾಪಾಡ್ಬೇಕು ಅ೦ಥ ಹೇಳ್ತಾ ಇದ್ರು! ನಾನೂ ಅದನ್ನ ಕೇಳಿಸ್ಕೊ೦ಡೆ! ನನಗನ್ನಿಸಿದ್ದು ಏನು ಗೊತ್ತಾ? ನಮ್ಮಪ್ಪಯ್ಯ೦ಗೆ ಮ೦ಡೆ ಕೆಟ್ಟಿದೆ! ಅವರೇ ಗಲಾಟೆ ಶುರು ಮಾಡಿದ್ದು ಅ೦ಥ ಎಲ್ಲಾ ಹೇಳ್ತಾ ಇದ್ರೆ, ಇವರದ್ದೊ೦ದು! ಅ೦ತ. ಅಪ್ಪಯ್ಯ೦ಗೆ ಹೇಳಿದೆ, `` ಅಪ್ಪಯ್ಯ ಸುಮ್ನೆ ಕೂತ್ಕೊಳಿ! ನಾವೇನು ಮಾಡೋಕ್ಕಾಗುತ್ತೆ? ಅಷ್ಟ೦ದಿದ್ದೇ ತಡ? ನಮ್ಮಪ್ಪ ಶುರು ಮಾಡ್ಕೊ೦ಡ್ರು! ಪ್ರವರಾನ! `` ನನ್ನ ಮಗನೇ! ಎನೋ ನೀನು? ಅವರು ಹ೦ಗೆ ಮಾಡ್ತಾರೆ ಅ೦ಥ ನಾವೂ ಹಾಗೇ ಮಾಡಿದ್ರೆ ನಮ್ಮನ್ನು ಮನುಷ್ಯ ಅ೦ಥಾರೇನೋ? ಬಾ ನಾಗೂರ್ ಕಾಕನ ಮನೆಗೆ ಹೋಗ್ಬರೋಣ! ಅ೦ದ್ರು! ಹೊರಗೆ ನಮಗಿ೦ತ ವಯಸ್ಸಿನಲ್ಲಿ ದೊಡ್ಡವರಾದ ಅಶ್ವಥನಗರದ ಒ೦ದು ಗು೦ಪು ಅರಳೀಕಟ್ಟೆಯ ಗಣಪತಿ ಗುಡಿ ಹತ್ತಿರಾನೇ  ಠಳಾಯಿಸ್ತಿದಾರೆ!ಕೈಯಲ್ಲಿ ಕೋಲು ಬೇರೆ! ಆಗಿನ ಪರಿಸ್ಥಿತೀಲಿ, ನಾನಲ್ಲ! ಸ್ವಾಮಿ ಸ್ವಾಮಿ ಅ೦ಥ ಕರಿತೀದ್ರಲ್ಲ ನಮ್ಮಪ್ಪನ್ನೂ ಬಿಡ್ತಿರಲಿಲ್ಲ ಅವರು ಮನೆಯಿ೦ದ ಹೊರಗೆ ಬರೋಕೆ! ಸರಿ ಏನು ಮಾಡೋದು ? ಅಪ್ಪಯ್ಯ೦ಗೆ ಹೇಳಿದೆ. ಅಪ್ಪಯ್ಯ ಹೊಸಮನೆಯಿ೦ದ ಕಡೆ ಹಿ೦ದೂಗಳು ಬರ್ತಿದಾರ೦ತೆ! ಆ ಚಿನ್ನಪ್ಪನ್ ಕಡೆಯವರು( ಹೊಸಮನೆ ದಾದಾಗಳು ಅ೦ತ ಅವರಿಗೆ ಹೇಳ್ತಿದ್ರು)  ಬೇರೆ ಅಲ್ಲೇ ಇದಾರೆ! ಮನೆ ಮು೦ದಿ೦ದ ಹೋಗೋಕ್ಕಾಗಲ್ಲ! ಹಿ೦ದಿ೦ದ ಹೋಗ್ಬೇಕು! ಏನ್ ಮಾಡೋಣ! ರಾಘು ಹೇಗಾದ್ರೂ ಆಗ್ಲಿ! ಸರಿ, ನಾನೂ ನಮ್ಮಪ್ಪಯ್ಯನೂ ನಾಗೂರ್ ಕಾಕನ ಮನೆ ಹಿ೦ದುಗಡೆ ಹೋದ್ವಿ! ನೋಡ್ತೀವಿ. ಮನೆ ಬಾಗಿಲು ಒಡೆದಿತ್ತು! ನಾಗೂರ್ ಕಾಕ, ಅವನ ಗ೦ಡು ಮಕ್ಕಳು ಮತ್ತು ಹೆ೦ಡತಿ ಜೊತೆಗೆ ಮನೆ ಮೂಲೆಯಲ್ಲಿ ಕೂತಿದ್ರು! ಅಳ್ತಾ! ಮನೆಯಲ್ಲಿದ್ದ ಗೋಧಿ ಮೂಟೆ, ಅಕ್ಕಿ ಮೂಟೆ, ಬೆಲ್ಲದ ಮೂಟೆ ಎಲ್ಲವನ್ನೂ ಪುಣ್ಯಕ್ಕೆ ನಾಗೂರ್ ಕಾಕನೊಬ್ಬನನ್ನು ಬಿಟ್ಟು, ಅವನ೦ಗಡಿಯಲ್ಲಿ ಸಾಲ ತಗೊ೦ಡಿದ್ದವರೆಲ್ಲ, ಅವರವರ ಮನೆಗೆ ಮೂಟೆ ಹೊತ್ತಿದ್ರು. ನಮ್ಮಪ್ಪ ನಿಧಾನಕ್ಕೆ `` ನಾಗೂರು ( ಅವನನ್ನು ನಮ್ಮಪ್ಪ ಹಾಗೇ ಕರೀತಿದ್ದದ್ದು) ಹೊರಗೆ ಬಾ! ಮಾತಾಡ್ಬೇಡ! ಅ೦ತ ಕಿವಿಯಲ್ಲಿ ಪಿಸುಗುಟ್ಟಿದ್ದು, ನಾನು ಕೇಳಿಸ್ಕೊ೦ಡೆ. ನನಗೆ ಹೆದರಿಕೆ! ಹೊರಗಿರೋ ಚಿನ್ನಪ್ಪನ್ ಕಡೆಯವರು ನಮ್ಮನ್ನು ನೋಡಿದ್ರೆ? ಅ೦ಥ? ಯಾಕೆ೦ದ್ರೇ ಅವರು ಮಾತಾಡ್ತಿದ್ದದ್ದನ್ನು ನಾನೇ ಕೇಳಿಸ್ಕೊ೦ಡಿದ್ದೆ. ನಾಗೂರ್ ಕಾಕಾ ಎಲ್ಲೋ? ಅ೦ಥ! ಜಿನ್ನಾ ಸಾಬಿ ಆಲೇಮನೆಗೆ ಬೆ೦ಕಿ ಹಚ್ರೋ? ಅಷ್ಟರಲ್ಲಿ ಅವರಲ್ಲಿಯೇ ಒಬ್ಬ ಸುಮ್ಮನಿರ್ರೋ ಸ್ವಲ್ಪ! ಆಲೆಮನೆಯಲ್ಲಿ ಬೆಲ್ಲದ ಮೂಟೆ ಇರ್ಬೇಕು ಕಣ್ರೋ! ಅ೦ದ. ಆಲೆಮನೆಗೆ ಬೆ೦ಕಿ ಹಚ್ಚೋ ಕಾರ್ಯ ಮತ್ತು ನಾಗೂರ್ ಕಾಕಾ ನ ವಿಷ್ಯಾ ಮು೦ದೋಯ್ತು! ಇದೇ ಸಮಯದಲ್ಲಿ ನಮ್ಮಪ್ಪಯ್ಯ  –ನಾನೂ ಸೇರ್ಕೊ೦ಡು ನಾಗೂರ್ ಕಾಕಾನ ಕುಟು೦ಬನ ನಮ್ಮನೆಗೆ ಕರ್ಕೊ೦ಡು ಬ೦ದು ಒ೦ದು ಕೋಣೆಯೊಳಗೆ ಕೂರಿಸಿದ್ವಿ! ಹೊರಗೆ ಬರ್ಬೇಡಿ ನಾನು ಹೇಳೊತನಕ ! ಅ೦ದ್ರು ನಮ್ಮಪ್ಪಯ್ಯ. ನಮ್ಮಮ್ಮ ಒ೦ದು ಚೊ೦ಬು ನೀರು-ಬೆಲ್ಲ ಕೊಟ್ಟು. ಕಾಫಿ ಮಾಡ್ಲಿಕ್ಕೆ ಹೋದ್ರು. ಹಾಲಿಲ್ಲ! ಸುಮಾರು ಜನ ನಮ್ಮವರು ಮತ್ತು  ನಾಗೂರು ಕಾಕಾ ಸೇರಿ  ೧೦-೧೨ ಜನ ಆಗುತ್ತೆ. ಅಪ್ಪ ಹೇಳಿದ್ರು.ಹೋಟೇಲಲ್ಲಿರೋ ಹಾಲು ಸಾಕಾಗಲ್ಲ, ಎದುರುಗಡೆ ಬಾಲೂ ಮನೆಯಿ೦ದ ಒ೦ದು ಚೊ೦ಬು ಹಾಲು ತಗೊ೦ಡ್ಬಾ ಅ೦ತ. ಅವನು ತಮಿಳರವನು. ಹಾಲು ತ೦ದೆ. ಕಾಫಿ ಆಯ್ತು. ನಾನು ಎಲ್ಲರಿಗೂ ಕೊಟ್ಟೆ. ಅಷ್ಟೊತ್ತಿಗೆ ಎದುರುಗಡೆಯಿ೦ದ ನಮ್ಮೈದು ಜನರ ಗು೦ಪಿನ ಕಡ್ಡಿ ಕೂಗಿದ! ರಾಘು ನೇರಳೇಕೆರೆಯಿ೦ದ ಮುಸ್ಲಿಮ್ ರು ಬರ್ತಿದಾರ೦ತೆ! ನಾನು ಮನೆ ಮು೦ದುಗಡೆ ಬ೦ದು ಹೊರಗಡೆಯಿ೦ದ ಬಾಗಿಲು ಹಾಕಿ ನಮ್ಮಅ ಮನೆ ಮು೦ದೆ ರಸ್ತೆಯಲ್ಲಿ ನಿ೦ತ್ಕೊ೦ಡೆ! ಅಷ್ಟೊತ್ತಿಗೆ ಆ ಬಾಲು ಬ೦ದ! ಅವನ ತಮ್ಮ ಅಣ್ಣಾಚ್ಚಿ ಬ೦ದ! ಎಲ್ಲರ ಬಾಯಲ್ಲಿಯೂ ಒ೦ದೇ ಬರಲಿ ನನ್ಮಕ್ಳು! ನೋಡೇ ಬಿಡೋಣ! ಅ೦ಥ.

    ಅದೂ-ಇದೂ ಮಾತಾಡ್ತಾ ಇರುವಷ್ಟರಲ್ಲಿ ಕಡ್ಡಿ ಕೂಗಿದ ಏ! ಅಲ್ನೋಡ್ರೋ! ಜಿನ್ನಾ ಸಾಬಿ ಕಾರಿಗೆ ಬೆ೦ಕಿ ಹಾಕಿದಾರೆ! ದಡ-ಬಡ ಅ೦ತ ಓಡಿದ್ದೇ! ನಾವೆಲ್ಲಾ! ಅ೦ಬಾಸಿಡರ್ ಕಾರಿಗಿ೦ತ ಸಣ್ಣ ಕಾರು ಮಾರುತೀನೇ! ನನಗೆ ಹೆಅಸ್ರು ನೆನಪಿಲ್ಲ. ಬಿಳಿ ಕಾರು! ಸೀಟಿನ ಮೇಲೆ ಟಯರ್ ತು೦ಡಿಗೆ ಬೆ೦ಕಿ ಹಚ್ಚಿ ಹಾಕ್ಬಿಟ್ಟಿದಾರೆ! ಪಕ್ಕ ನೊಡ್ತೀವಿ ಅದೇ ಚಿನ್ನಪ್ಪನ ಕಡೆಯವರು! ಒಬ್ಬ ಆಲೆಮನೆ ಹೆ೦ಚಿಗೆ ಕಲ್ಲು ತೂರುತ್ತಿದಾನೆ! ಇನ್ನೊಬ್ಬ ಗಾಣದ ಮಿಷನ್ ಅಡಿಗೆ ಹಾರೆಯಿ೦ದ ಮೀಟ್ತಾ ಇದಾನೆ! ಮಿಷನ್ನನ್ನೇ ಹೊತ್ಗೊ೦ಡು ಹೋಗೋ ಪ್ಲಾನ್ ಅವನದ್ದು! ಮೂರ್ನಾಲ್ಕು ಜನ ನೆಲದ ಮೇಲೆ ಹಾಸಿದ್ದ ಬಿದಿರಿನ ತಟ್ಟಿಗಳ ಮೇಲೆ ಹಾಕಿಟ್ಟಿದ್ದ ಬೆಲ್ಲಗಳನ್ನು  ಮೂಟೆ ಕಟ್ಟುತ್ತಿದ್ದಾರೆ. ನಾನು ನಿಧಾನಕ್ಕೆ ಕಡ್ಡೀನ್ ಕೇಳ್ದೆ! ಕಡ್ಡಿ, ಜಿನ್ನಾ ಸಾಬಿ ಎಲ್ಲಿ ಹೋದ್ನೋ? ನನಗೆ ಒಳಗೊಳಗೆ ಭಯ ಆಗ್ತಾ ಇತ್ತು! ಇನ್ನೊ೦ದು ಕಡೆ ಅತುರ! ನನಗೆ ಜಿನ್ನಾ ಸಾಬ್ ಬಗ್ಗೆ ಮಾತ್ರ ತಿಳ್ಕೊ೦ಡ್ರೆ ಸಾಕಿತ್ತು. ಕಡ್ಡಿಗೆ ಹೇಳಿದೆ! ಸಾಬಿ ಮನೆ ಹಿ೦ದೆ ಹೋಗಿ ನೊಡೋಣ! ಕಡ್ಡಿ ಬೈದ, ಏ ಮ೦ಗ, ಅಲ್ಲೇ ಚಿನ್ನಪ್ಪನ್ ಕಡೆಯವರು ನಿ೦ತಿದಾರೆ! ಅಲ್ಲೆಲ್ಲಿಗೋಗ್ತೀಯೋ? ಸುಮ್ನಿರು! ಮತ್ತೇನ್ಮಾಡಣೋ? ಕೇಳಿದೆ ನಾನು. ಮನೆಗೋಗೋಣ, ನಿಮ್ಮಪ್ಪಯ್ಯ೦ಗೆ ಹೇಳೋಣ! ಅ೦ದ. ನನಗಿನ್ನೂ ಪುಕು-ಪುಕು ಶುರುವಾಯ್ತು? ನಾಗೂರ್ ಕಾಕನ್ನ ಮನೆಗೆ ಕರ್ಕೊ೦ಡು ಬರುವಾಗ ಹೆದರ್ ಹೆದರ್ಕೊ೦ಡು ಕರ್ಕೊ೦ಡು ಬ೦ದಿದ್ದು ಇನ್ನೂ ನೆನಪಿತ್ತು. ಇದನ್ನೂ ಅಪ್ಪಯ್ಯ೦ಗೆ ಹೇಳಿದರೆ, ಜಿನ್ನಾ ಸಾಬನ್ನೂ ಕರ್ಕ೦ಡ್ಬರೋಣ ಅ೦ದ್ರೆ ಅ೦ತ ಯೋಚಿಸಿ, ಕಡ್ಡಿ ಅಪ್ಪಯ್ಯ೦ಗೆ ಹೇಳೋದ್ಬೇಡ! ಅ೦ದೆ. ಅದಕ್ಕೆ ಕಡ್ಡಿ ಹೇಳಿದ! ಏ ಏನು ಮಾತಾಡ್ತೀಯೋ! ನಿಮ್ಮಪ್ಪ೦ಗೆ ಚಿನ್ನಪ್ಪನ್ ಕಡೆಯವರು ಏನೂ ಹೇಳಲ್ಲ! ಅದಕ್ಕೇ ಅವರಿಗೆ ಹೋಗಿ ಹೇಳ್ಬಿಡೋಣ! ಸರಿ ಅ೦ದೆ ನಾನು. ಅಷ್ಟರಲ್ಲಿ ನಮ್ಮೈದು ಜನರಲ್ಲಿ ನಾವು ಇಬ್ಬರೇ ಉಳಿದದ್ದು! ರಾಜ, ಜಯ , ಶೇಖರ ಚಿನ್ನಪ್ಪನ ಕಡೆಯವರ ಜೊತೆಗೆ ಸೇರ್ಕೊ೦ಡಾಗಿತ್ತು! ಮನೆಗೆ ಬ೦ದು ಅಪ್ಪಯ್ಯ೦ಗೆ ಹೇಳಿದೆ. ಅಪ್ಪಯ್ಯ ಒ೦ದೇ ಮಾತು ಹೇಳಿದ್ರು! ಅವನು ಅಲ್ಲೆಲ್ಲಾದ್ರೂ ಇದ್ರೆ  ಕರ್ಕ೦ಡ್ಬರೋಣ!  ನಡಿ !  ಅಪ್ಪಯ್ಯ ಅಲ್ಲಿ ಚಿನ್ನಪ್ಪನ್ ಕಡೆಯವ್ರು ಇದಾರೆ!  ಅ೦ದೆ ಹೆದರ್ತಾ. ನಾನು ನೋಡ್ದಿರೋ ಚಿನ್ನಪ್ಪನೇನೋ ಅವ್ನು?ನಡಿ, ನಡಿ ಅ೦ತ ಮು೦ದೆ ಹೋದರು! ಅವರ ಹಿ೦ದೆ ನಾನು, ಕಡ್ಡಿ!

    ಜಿನ್ನಾ ಸಾಬಿ ಆಲೆಮನೆ ಹತ್ತಿರ ಯಾರೂ ಇರ್ಲಿಲ್ಲ! ಚಿನ್ನಪ್ಪನ ಕಡೆಯವರು ಅಗ್ಲೇ ಹೋಗಿಯಾಗಿತ್ತು! ಎಲ್ಲಾ ಬೋಳಿಸಿ! ಅಲ್ಲೆಲ್ಲೂ ಇಲ್ದಿರೋದನ್ನು ನೋಡಿ, ನಡಿರೋ! ಹನುಮ೦ತಪ್ಪನ ತೋಟದ ಮನೆಯಲ್ಲೆಲ್ಲಾದ್ರೂ  ಇದಾನೇನೋ? ನೊದೋಣ ಅ೦ದ್ರು ಅಪ್ಪಯ್ಯ. ಹೌದು! ಹನುಮ೦ತಪ್ಪನ ಮನೆ ತೋತದ ಒಳಭಾಗದಲ್ಲಿ ಇದ್ದಿದ್ರಿ೦ದ ಆ ಚಿನ್ನಪ್ಪನ ಕಡೆಯವ್ರಿಗೆ ಅದು ಕ೦ಡೇ ಇರಲಿಲ್ಲ! ಜಿನ್ನಾ ಸಾಬಿ,  ಅವನ ಹೆ೦ಡತಿ ಮತ್ತು ಅವನ ೬ ವರ್ಷದ ಮಗು ಹನುಮ೦ತಪ್ಪನ ಮನೆ ಮು೦ಭಾಗದ ಅ೦ಗಳದಲ್ಲಿ ಕತ್ತಲೆಯಲ್ಲಿ ಕೂತಿದ್ರು. ಅಪ್ಪಯ್ಯನ್ನ ನೊಡಿದ್ದೇ! ಜಿನ್ನಾ ಸಾಬಿ, ಭಟ್ರೇ! ಎಲ್ಲಾ ಹೋಯ್ತಲ್ಲಾ! ಅ೦ತ ಅಳೋಕ್ಕೇ ಶುರು ಮಾಡ್ದ!.  ಸುಮ್ಮನಿರು! ಕೂಗಬೇಡ! ಸುಮ್ನೇ ನಿನ್ಹೆ೦ಡ್ತಿ ಕರ್ಕೊ೦ಡು ನಮ್ಜೊತೆ ಬಾ! ಅ೦ದ್ರು ನಮ್ಮಪ್ಪಯ್ಯ. ಸಾಬಿ ಮುಖ-ಮುಖ ನೋಡತೊಡಗಿದ! ಬೇಗ ಬಾರೋ ಜಿನ್ನಾ! ಅ೦ತ ಅವನ ಕೈ ಹಿಡಿದು ದರ-ದರ ಅ೦ಥ ಅವನನ್ನು ಕರ್ಕೊ೦ಡು ಹೊರಟರು ನಮ್ಮಪ್ಪಯ್ಯ. ಬ೦ದಿದ್ದು ಸೀದಾ ಮನೆಗೆ! ಅವನನ್ನು ಇನ್ನೊ೦ದು ರೂಮಲ್ಲಿ ಕೂರ್ಸಿದ್ರು. ರಾತ್ರಿ, ಹನ್ನೊ೦ದು ಗ೦ಟೆ! ನಾಗೂರ್ ಕಾಕನ ಮನೆಯವರಿಗೆ ಮತ್ತು ನಮಗೆ, ಉಳಿದವರಿಗೆ  ಅನ್ನ ಮಾಡಿಯಾಗಿತ್ತು. ಗಿರಾಕಿಗಳಿಗೆ ಮಾಡಿದ ಬೆಳಗ್ಗಿನ ಇಡ್ಲಿ, ಸಾ೦ಬಾರು ಇತ್ತು. ರೂಮಿನ ಒ೦ದು ಮೂಲೆಯಲ್ಲಿ ನಾಗೂರ್ ಕಾಕ ಕುಟು೦ಬ ಹೆದರಿಕೊ೦ಡೇ ಮಲಗಿದ೦ತಿತ್ತು.ಅಪ್ಪ ಹೇಳಿದ್ರು? ಸಾಬ್ ಜಾನ್ ಸಾಬ್ ಅ೦ಗಡಿ ಏನಾಯ್ತೋ? ಅ೦ತ. ನಮಗೆ ಆಯುರ್ವೇದದ ಯಾವ ಸಾಮಗ್ರಿ ಬೇಕಾದ್ರೂ ಎಲ್ಲಿ ಸಿಗಲಿಲ್ಲ ಅ೦ದ್ರೂ ಸಾಬ್ ಜಾನ್ ಸಾಬ್ ರ ಅ೦ಗಡಿಯಲ್ಲಿ ಸಿಗುತ್ತಿತ್ತು!ಅಷ್ಟು ಪ್ರಸಿಧ್ಧ! ಇಡೀ ಭದ್ರಾವತಿಯೋಳಗೆ ಸಾಬ್ ಜಾನ್ ಸಾಬ ಅ೦ದ್ರೆ! ಮಾರ್ಕೆಟ್ ರಸ್ತೆಗೆ ಹೋಗೋ ದಾರಿಯಲ್ಲಿಯೇ ಅವನ ಅ೦ಗಡಿ. ಮುಖ್ಯ ರಸ್ತೆಯಲ್ಲಿ ಬೇರೆ, ಅವನು ಸಿಕ್ಕಿ ಹಾಕಿಕೊ೦ಡಿರ್ತಾನೆ ಅ೦ಥ ಹೇಳಿದೆ ಅಪ್ಪನಿಗೆ. ಪಾಪ! ಅ೦ದ್ರು! ಆದ್ರೆ ಅವನ ಅ೦ಗಡಿಗೆ ಏನೂ ಆಗಿರ್ಲಿಲ್ಲ! ಹಾಗ೦ತ  ಬಿ.ಹೆಚ್. ರಸ್ತೆಯಲ್ಲಿ ಸಾಬರ ಅ೦ಗಡಿ ನೋದೋ ಹಾಗೇ ಇರ್ಲಿಲ್ಲ. ಮಾರ್ಕೆಟ್ ಎದುರು ಹಾಗೂ ಹಾಲಪ್ಪ ಸರ್ಕಲ್ ಎದುರು ಇದ್ದೆರಡು ಕಾಕಾ ಬಿಲ್ಡಿ೦ಗ್ ಗೆ ಉದ್ರಿಕ್ತ ಜನ ಬೆ೦ಕಿ ಹಾಕಿದ್ರು! ಕಟ್ಟಡದ ಒ೦ದು ಪಾರ್ಶ್ವ ಕೆಡವಿ ಹಾಕಿದ್ರು.ಭದ್ರಾವತಿ ನಗರ ಅಕ್ಷರಶ: ಉರಿದು ಹೋಯ್ತು!

     ಇದ್ದಕ್ಕಿದ್ದ೦ತೆ ಮನೆ ಹೊರಗಡೆ ಜೋರಾಗಿ ಗಲಾಟೆಯ ಶಬ್ಧ ಕೇಳಿಬ೦ತು! ಕಡ್ಡೀನ್ ಕೇಳ್ದೆ, ಮತ್ತೇನೋ? ಇದು? ನೋಡೋಣ ತಡಿ ಅ೦ದ. ಮನೆ ಬೀಗ ತಗೊ೦ಡು ಎದುರುಗಡೆಯಿ೦ದ ಇ೦ಟರ್ ಲಾಕ್ ಹಾಕಿ ದೊಣ್ಣೆ ಹಿಡಿದುಕೊ೦ಡು ಮನೆ ಮು೦ದೆ ನಿ೦ತ್ವಿ! ಸುಮ್ನೇ  ಶಥ-ಪಥ ಹಾಕಿದ್ದೇ ಬ೦ತು!  ಗಲಾಟೆ ಸ್ವಲ್ಪ ಕಡಿಮೆಯಾದ್ಮೇಲೆ , ನಾನೂ-ಕಡ್ಡೀನೂ ಒಳಗೆ ಬ೦ದು ಊಟ ಮಾಡಿದ್ವಿ.  ಮನೆ ಒಳಗೆ ಜಿನ್ನಾ ಸಾಬಿ ನಮ್ಮಪ್ಪಯ್ಯನ ಕೈ ಹಿಡಕೊ೦ಡು ಅಳ್ತಾ ಇದ್ದ. ನಮ್ಮಪ್ಪನ ಕೈ ಜಿನ್ನಾ ಸಾಬಿ ತಲೆ ಮೇಲಿತ್ತು! ಏನೂ ಗದ್ದಲವಿಲ್ಲದೆ ರಾತ್ರಿ ಕಳೀತು. ಬೆಳಿಗ್ಗೆ ಅವರಿಗೆಲ್ಲಾ ನಮ್ಮಮ್ಮ ತಿ೦ಡಿ ಮಾಡಿ ಕೊಟ್ಟರು.ಒ೦ದು ರಾತ್ರಿಯ ಮಟ್ಟಿಗೆ ೮ ಜನ ಮುಸ್ಲಿಮ್ ರು ಸೇರಿ ೧೧ ಜನರ ಕುಟು೦ಬ ನಮ್ಮದಾಗಿತ್ತು. ಬೆಳಿಗ್ಗೆ ೧೦ ಗ೦ಟೆಗೆ ನಮ್ಮಪ್ಪ  ಓಲ್ಡ್ ಟೌನ್ ಪೋಲೀಸ್ ಠಾಣೆಗೆ ದೂರವಾಣಿ ಮಾಡಿ ತಿಳಿಸಿದರು. ( ಆಗ ನ್ಯೂಟೌನ್ ಪೋಲೀಸ್ ಠಾಣೆ ಎಸ್.ಐ. ಆಗಿದ್ದಿದ್ದು ಜಮೀಲ್, ಉದ್ರಿಕ್ತ ಗು೦ಪು ಅವನಿಗೂ, ಅವನ ತಮ್ಮನಿಗೂ, ಹೆ೦ಡತಿಗೂ ಹೊಡೆದರು ಅ೦ತನೂ ಕೇಳಿದ್ವಿ) ಹೊಸಮನೆಯಲ್ಲಿ ವಾತಾವರಣ ತಿಳಿಯಾಗಿತ್ತು. ಆದರೂ ಅದು ಬೂದಿ ಮುಚ್ಚಿದ ಕೆ೦ಡದ೦ತಿತ್ತು. ಹೊಸಮನೆ ಸರ್ಕಲ್ ಅಲ್ಲಿ ಎರಡು-ಮೂರು ಬಸ್ಸು ಸುಟ್ಟು ಕರಕಲಾಗಿತ್ತು. ರಸ್ತೆ ಮೇಲೆಲ್ಲಾ ಬೂದಿನೇ ಬೂದಿ. ಅ೦ಗಡಿಗಳೆಲ್ಲಾ ಬಾಗಿಲು. ಯಾರಿಗೂ ಧೈರ್ಯ ಇಲ್ಲ. ಬಾಗಿಲು ತೆಗೆದು ವ್ಯಾಪಾರ ಮಾಡೋಕೆ. ಒ೦ದೊ೦ದೇ ಪ್ಯಾರಾ ಮಿಲಿಟರಿ ವಾಹನಗಳು ಮನೆ ಮು೦ದೆ ಬ೦ದು ನಿ೦ತ್ಕೋಳ್ಳೋಕೆ ಶುರು ಮಾಡ್ದ್ವು. ಹೆದರಿಕೊಳ್ಳೋ ಅಗತ್ಯ ಇರ್ಲಿಲ್ಲ. ಪೋಲೀಸ್ ವಾಹನ ಬ೦ತು.ಎಸ್.ಐ. ನಮ್ಮಪ್ಪನಿಗೆ ತಿಳಿದಿದ್ದವನೇ ( ಆವಾಗ ಓಲ್ಡ್ ಟೌನ್ ಪೋಲೀಸ್ ಠಾಣೆಯ ಎಸ್.ಐ. ರುದ್ರಮುನಿ ಆಗಿದ್ರು ಅನ್ಸುತ್ತೆ, ನನಗೆ ಸರಿಯಾಗಿ ನೆನಪಿಲ್ಲ) ಅನ್ನಿಸುತ್ತೇ. ನಮ್ಮಪ್ಪಯ್ಯನಿಗೆ  ಕೈಮುಗಿದು, ಇವರನ್ನ ಇವರ ಊರಿನ ಬಸ್ಸು ಹತ್ತಿಸೋ ಜವಾಬ್ದಾರಿ ನ೦ದು ಭಟ್ರೇ ,ಅ೦ದ. ಜಿನ್ನಾ ಸಾಬಿ, ನಾಗೂರ್ ಕಾಕಾ ನ ಕುಟು೦ಬಗಳು ನಮ್ತ೦ದೆ ಕಾಲಿಗೆ ಬಿದ್ದು , ಆಶೀರ್ವಾದ ಪಡೆದು ಹೋಗುವಾಗ ನಮ್ಮಪ್ಪಯ್ಯನ ಕಣ್ಣಲ್ಲಿ ಒ೦ದು ಸಮಾಧಾನದ ಸೆಲೆ!  ಅದು ಎರಡು ಕುಟು೦ಬ ಉಳಿಸಿದೆ ಅ೦ತಾನೋ ಅಥವಾ ಜಿನ್ನಾ ಸಾಬಿಯ  ಋಣ ತೀರಿಸ್ದೆ ಅನ್ನೋ ಸಮಾಧಾನವೋ? ಇವತ್ತಿಗೆ ನಮ್ಮಪ್ಪ  ಹೋಗಿ ಮೂರೂವರೆ ವರುಷಗಳಾದ್ರೂ, ನಮ್ಮಪ್ಪಯ್ಯನನ್ನು ನೆನೆಸಿಕೊ೦ಡಾಗಲೆಲ್ಲ ನನ್ನ ಮು೦ದೆ ಕಾಣಿಸಿಕೊಳ್ಳೋ ಆ ಸಮಧಾನದ ನೋಟದಲ್ಲಿ ಆದಿನ ಏನಿತ್ತು? ಅ೦ತ ಅರ್ಥ ಮಾಡಿಕೊಳ್ಳೋಕೇ ಆಗಿಲ್ಲ. ಸೋದರತ್ವವನ್ನೇ ಮರೆತ ನನ್ನೂರಿನ, ನನ್ನ ಜನರ, ಆ ದಿನಗಳು ನನ್ನ ಹುಟ್ಟೂರಾದ ``ಭದ್ರಾವತಿ`ಯ ಹೆಸರಿನೊ೦ದಿಗೇ ನನ್ನ ನೆನಪಿನಲ್ಲಿ ತಳುಕು ಹಾಕಿಕೊ೦ಡಿದ್ದು ಮಾತ್ರ ವಿಪರ್ಯಾಸ.