ಓದಿದ್ದು - ಆದದ್ದು : ೨

ಓದಿದ್ದು - ಆದದ್ದು : ೨

ಬರಹ

ಲ. ನಾ. ಭಟ್ಟರು - ಏನು ಓದಿದೆ?

ನಾನು - ಆಫೀಸಿಗೆ ಬರುವಾಗ ಹೋಗುವಾಗ ಸಿಗುವುದು ಸರಾಸರಿ ೩ ಘಂಟೆ. ಮೊದಲ ಓದು ವಿ.ಕ. ಮಧ್ಯಪುಟ. ನಂತರದ ಕೆಲಸ ಪದಬಂಧ. ಮತ್ತೊಂದಿಷ್ಟು ನೀರಸಾಧಕರು ಎದುರಾದರು.

ಲ. ನಾ. ಭಟ್ಟರು - ಏನಾದೆ?

ನಾನು - ಕಲಿತೆ. ನೀರ ಸಾಧಕರು ಸಾಕಷ್ಟು ಮಾತನಾಡಿದರು. ನಾವೇನು ಮಾಡಿದ್ದೆವು ಎಂದರು. ಅದಕ್ಕೆ ಪರಿಹಾರ ಕಂಡುಕೊಂಡ ಬಗ್ಗೆ ತಿಳಿಸಿದರು. ಇನ್ನೂ ಮಾಡುವ ಕೆಲಸದ ಬಗ್ಗೆ ಸಾಕಷ್ಟು ಹರಟಿದರು. ಭಟ್ಟರೆ, ನೀವು ವಿ.ಕ. ಓದುವಿರೋ ಇಲ್ಲವೋ ನನಗೆ ಗೊತ್ತಿಲ್ಲ. ನೀವುರುವಲ್ಲಿ ಬಹುಶಃ ಸಿಗಲಾರದು. ಇತ್ತೀಚೆಗೆ ನೇತ್ರಾವದಿ ನದಿ ತಿರುವಿನ ಬಗ್ಗೆ ಒಂದು ಸ್ವಾರಸ್ಯಕರ ಚರ್ಚೆ ವಿ.ಕ. ದಲ್ಲಿ ನಡೆಯುತ್ತಿದೆ. ದೂರದ ಲಂಡನ್ ನಲ್ಲಿ ಒಬ್ಬರು ಮೇಧಾವಿ ಮಧು ಸೀತಪ್ಪ, ಇಲ್ಲಿನ ಪ್ರಜ್ಞಾವಂತ ಪ್ರಜೆ ವಿನಾಯಕ ಭಟ್, ಮೂರೂರು ಇವರಿಬ್ಬರ ನಡುವೆ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಮಂಗಳೂರಿನ ತನಕ ಹರಿದು ಅರಬ್ಬೀ ಸಮುದ್ರ ಸೇರುವ ನೇತ್ರಾವದಿ ನದಿಯ ಸ್ವಲ್ಪ ಪ್ರಮಾಣ ತಿರುಗಿಸಿ ನಮ್ಮ ಬಯಲು ನಾಡಿಗೆ ಹರಿಸಬೇಕೆಂಬುದು ಮಧು ಸೀತಪ್ಪನವರ ವಾದ. ಹಾಗೆ ಮಾಡುವುದರಿಂದ ನಾನಾ ತರಹದ ಕಂಡರಿಯದ ಸಮಸ್ಯೆಗಳು ಪಶ್ಚಿಮ ಘಟ್ಟ, ಮತ್ತು ಕರಾವಳಿಯಲ್ಲಿ ಬರಬಹುದೆಂಬುದು ವಿನಾಯಕ ಭಟ್ಟರ ವಾದ. ಇವರಿಬ್ಬರ ಚರ್ಚೆಯಲ್ಲಿ ನಾನು ತಿಳಿದದ್ದು ಬಹಳಷ್ಟು. ಅಂಕಿ ಅಂಶಗಳ ಸಮೇತ ಇಷ್ಟೇ ನೀರನ್ನು ಹೀಗೆಯೇ ತಂತ್ರಜ್ಞಾನ ಉಪಯೋಗಿಸಿ ಬಯಲು ನಾಡಿಗೆ ಹರಿಸಲಾಗುವುದೆಂದು ಮಧು ಸೀತಪ್ಪನವರು ಹೇಳಿದರೆ, ಅತಿ ಹೆಚ್ಚಿನ ಖರ್ಚು ಮಾಡಿ ಅಷ್ಟು ದೊಡ್ಡ ಯೋಜನೆಯಡಿ ನೀರು ಹರಿಸುವಂತಹ ಅಗತ್ಯ ಬಂದಿಲ್ಲ. ಬಯಲು ನಾಡಿನ ಅಸಂಖ್ಯಾತ ಕೆರೆ-ಕಟ್ಟೆಗಳು ಹೂಳು ತುಂಬಿ ಇಂದು ಬತ್ತಿ ಕುಳಿತಿವೆ. ಅದರ ಪುನರಜ್ಜೀವನ ಅಲ್ಲಿನ ಜನರಿಗೆ ತುರ್ತಿನ ಹಾಗೂ ಶಾಶ್ವತದ ಪರಿಹಾರ, ಎಂಬುದು ವಿನಾಯಕ ಭಟ್ಟರ ಮಾತು. ಪಶ್ಚಿಮ ಘಟ್ಟದ ಪ್ರಾಣಿ-ಪಕ್ಷಿ ಸಂಕುಲಗಳಿಗೆ, ನದಿಯ ನೀರಿಗೆ ಅಪಾಯವಾಗದ ಹಾಗೆ ನದಿಯನ್ನು ತಿರುಗಿಸಲಾಗುವುದೆಂದು ಸೀತಪ್ಪನವರೆಂದರೆ, ಒಂದು ವೇಳೆ ಅಪಾಯವಾದರೆ ಅನಂತರೆ ಅದನ್ನ ಸರಿಪಡಿಸಲಾಗುವುದಿಲ್ಲವೆಂಬುದು ವಿನಾಯಕ ಭಟ್ಟರ ವಾದ. ಇವರಿಬ್ಬರ ಚರ್ಚೆಯನ್ನು ಗಮನಿಸುತ್ತಾ, ನೀರಸಾಧಕರು ಓದಿದರೆ ವಿನಾಯಕ ಭಟ್ಟರ ಮಾತಿನಲ್ಲಿ ಸತ್ಯವಿದೆ ಎಂದೆನಿಸುತ್ತದೆ. ನೀರಸಾಧಕರಲ್ಲಿ ಇವರಿಬ್ಬರ ಚರ್ಚೆಗೆ ಉತ್ತರವಿದೆ. ಕೋಲಾರದ ಮುಳಬಾಗಿಲು ತಾಲ್ಲೂಕಿನ ಚಿಕ್ಕ ಹಳ್ಳೀ ಹೊಸ ಕೆರೆಯ ಪುನರುಜ್ಜೀವನ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಾರೋಗೇರಿ, ಕಾಮಧೆನು ಗ್ರಾಮಗಳ ಬಾಂದಾರ, ದೂರದ ಬೆಳಗಾವಿಯ ಸಾಲಿಮಠರ ಬೋರ್ವೆಲ್ ಗೆ ನೀರುಣಿಸುವ ಯಶಸ್ಸು, ಕೋಲಾರದ ಮುಳಬಾಗಿಲು ತಾಲೂಕಿನ ಕುನಿಬಂಡಿ ಮಂದಿಯ, ಬಿಜಾಪುರದ ಯತ್ನಾಳದ ಹಳ್ಳದ ಒಡ್ಡು ಹೀಗೆ ನಾನಾ ತರಹ ನೀರಿನ ಕತೆಗಳಲ್ಲಿವೆ. ಇವ್ಯಾವುವೂ ನದಿ ನೀರನ್ನು ತಿರುಗಿಸಿಯದವಲ್ಲ. ಎಲ್ಲವೂ ಮಳೆಯಾಧಾರಿತ. ಬಿದ್ದ ಅಲ್ಪ ಮಳೆಯನ್ನು ಹಿಡಿದಿಟ್ಟರೆ ಮತ್ತು ಮಿತವ್ಯಯಿಸಿದರೆ, ನಾವೂ ಬೆಳೆದು ಇತರರಿಗೂ ಹಂಚಬಹುದೆಂದು ನೀರಸಾಧಕರು ತೋರಿಸಿಕೊಟ್ಟಿದ್ದಾರೆ. ಭಟ್ಟರೆ ಇನ್ನೊಂದು ವಿಷಯ - ನಾವು ನೀರಿಂಗಿಸಿದರೆ ಅದು ನಮಗೆ ಸಿಗದಿರಬಹುದು, ಆದರೆ ಅದು ನಮ್ಮೂರಿನ ಹತ್ತು ಜನಕ್ಕೆ ಕೊಡದೆ ಹೋಗುವುದಿಲ್ಲ.

-ಮಾಧವ