ವೈದ್ಯೋ ನಾರಾಯಣೋ ................. ಯಮಃ ?

ವೈದ್ಯೋ ನಾರಾಯಣೋ ................. ಯಮಃ ?

    ಅರೇ ಇದೆಲ್ಲಾ ಯಾಕೆ ನೆನಪಿಗೆ ಬರುತ್ತಾ ಇದೆ ಇವತ್ತು ಅರ್ಥವಾಗಲಿಲ್ಲ. ನಾನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಬೋನ್ಸಾಯ್ ಆಲ ಇನ್ನಿಲ್ಲವಾಗಿತ್ತು.ಎಷ್ಟುದಿನದಿಂದ ಅದರ ಬೇರು ಒಳಗೊಳಗೇ ಕೊಳೆಯುತ್ತಿತ್ತೋ ಗೊತ್ತಾಗಲೇ ಇಲ್ಲ.ನಲುವೂ ನೀರೂ ಸರಿಯಾಗಿಯೇ ಕ್ಲುಪ್ತ ಸಮಯದಲ್ಲಿ ಹಾಕುತ್ತಿದ್ದೆ. ಎರಡು ವರ್ಷಕ್ಕೊಮ್ಮೆ ಅದರ ಕುಂಡ ಸಹಾ ಬದಲಿಸುತ್ತಿದ್ದೆ, ಕಾಲಕಾಲಕ್ಕೆ ಔಷಧ ಸಹಾ, ಆದರೂ ಏನಾಯಿತೋ ಗೊತ್ತಿಲ್ಲ, ಬೇರು ಕೊಳೆತು...... ಅಕಾಸ್ಮಾತ್ತಾಗಿ ಇವತ್ತೇ ಗೊತ್ತಾಯ್ತು, ಮೊದಲೇ ಗೊತ್ತಾಗಿದ್ದರೆ ಏನಾದ್ರೂ ಮಾಡಬಹುದಿತ್ತೊ ಏನೊ. ಕಳೆದ ಸಾರಿ ಅಪ್ಪಯ್ಯ ಬಂದಾಗ ಎಂದಿದ್ದರು, ಮಗಾ ಗಿಡಗಳು ಅಂತೇವೆ ನಾವು ಆದರೆ ಅವುಗಳಿಗೂ ಪ್ರಾಣ ಇದೆಯಲ್ಲಾ, ಆರೈಕೆಯ ನೋವು, ನಲಿವು, ಸಂತೋಷ ಅವಕ್ಕೂ ಇದೆ ನಮ್ಮ ಹಾಗೆ, ಆದರೆ ಇವೆಲ್ಲ ಆಯುಷ್ಯ ಇರುವವರೆಗೆ ಮಾತ್ರ, ಅನಂತರ ಇವೆಲ್ಲಾ ಗೌಣ" ಎಂದಿದ್ದರು. ಈಗ ಅದನ್ನು ಇಟ್ಟುಕೊಳ್ಳಲು ಮನಸ್ಸಾಗಲಿಲ್ಲ,ಹೊರಗಡೆ ತೆಗೆದುಕೊಂಡು ಹೋಗಿ ಬಯಲಿನಲ್ಲಿನ ಕಸದ ತೊಟ್ಟಿಗೆಸೆದೆ, ಮಣ್ಣಿನ ಕುಂಡ ಒಡೆದು ಅದರ ಮಣ್ಣಿನೊಳಗಿಂದ ನೋಡನೋಡುತ್ತಿರುವಂತೆ ಒಂದು ದೊಡ್ಡ ಬಿಳಿ ಹುಳಹೊರಬಿತ್ತು. ಆಶ್ಚರ್ಯಯಾಯಿತು! ಇದೆಲ್ಲಿಂದ ಬಂತು? ನಾನಿದುವರೆವಿಗೂ ಇಂತಹ ಹುಳವನ್ನು ನೋಡಿರಲಿಲ್ಲ, ಈ ಬಿಳಿ ಹುಳವೇ ಕೊಂದಿತಾ ನನ್ನ ಆಲವನ್ನು. ಪಾಪ ಮರಕ್ಕಂತೂ ಗೊತ್ತೇ ಆಗಲಿಲ್ಲ, ನನಗೂ, ಆದರೆ ....?               

                                       ಬೆಳಿಗ್ಗೆ ಎದ್ದ ಕೂಡಲೇ ಇವತ್ತು ಏನೋ ಒಂದು ಅನಾಹುತವಾಗುತ್ತದೆ ಅಂತ ಮನಸ್ಸಿಗನ್ನಿಸಿತ್ತು. ಹಲಕೆಲವೊಮ್ಮೆ ವಿಚಿತ್ರ ಪೃಕ್ಷುಬ್ದತೆಯುಂಟಾಗುತ್ತದೆ. ಅದಕ್ಕೆ ಇದಮಿಥ್ಥಂ ಅಂತ ಹೇಳಲು ಬಾರದಾದರೂ, ಮನಸ್ಸಿಗೆ ಮುಂದಿನ ಸನ್ನಿವೇಶಕ್ಕೆ ಅಣಿಯಾಗಲು ಸಿಧ್ಧತೆಗಾಗಿಯೇನೋ ಅನ್ನಿಸುತ್ತೆ. ಬೆಳ್ಳ್ಂಬೆಳ್ಳಗ್ಗೆ ಟೆಲಿಫೋನ್ ರಿಂಗಾಯಿತು ಅದೂ ಉದ್ದದ ಕ್ರಮಬದ್ದ ಗುಣಿಗುಣಿಸುವಿಕೆಯಿಂದ ಅದು ಎಸ್ ಟಿ ಡಿ ಅಂತ ಗೊತ್ತಾಯಿತು. ಎತ್ತಿ ನೋಡಿದರೆ ಸಣ್ಣಣ್ಣಯ್ಯ ಬೆಂಗಳೂರಿನಿಂದ ಮಾಡ್ದ ಕಾಲ್ ಆಗಿತ್ತದು. " ಗೋಪೂ ಬೇಜಾರ್ ಮಾಡ್ಕೋಬೇಡ ಒಂದು ಕೆಟ್ಟ ಸಮಾಚಾರ" ಅಂದು ಮಾತು ನಿಲ್ಲಿಸಿದ,"ಹೇಳು ಎದೆ ಗಟ್ಟಿ ಮಾಡ್ಕೋತೇನೆ "ಅಂದೆ.ನೀನು ಈಗಲೇ ಹೊರಡುವುದಾದರೆ ನಮ್ಮಲ್ಲಿಗೆ ಬರಲು ಎಷ್ಟು ಹೊತ್ತು ಹಿಡಿಯಬಹುದು?"ಎಂದ. ಸುತ್ತಿ ಬಳಸಿ ಮಾಡಬೇಡ, ಸರಿಯಾಗಿ ಹೇಳು" ಎಂದೆ. " ಇವತ್ತು ಬೆಳಿಗ್ಗ್ಯೆ ಚಿಕ್ಕಪ್ಪಯ್ಯ ಐದೂವರೆಗೆ  ತೀರಿ ಹೋದರು, ಹೆಣವನ್ನು ಇಡಬೇಕೋ ಅಥವಾ ಕಾರ್ಯ ಮುಂದುವರಿಸ ಬೇಕೋ ಆಲೋಚನೆ ಮಾಡಿ ಹೇಳು, ನಾನು ಇಡಲಾ" ಕೇಳಿದ. ಒಂದು ಕ್ಷಣ ನನ್ನ ಎಲ್ಲಾ ಅಂಗಗಳು ನಿಂತು ಹೋದುವೇನೋ ಅನ್ನಿಸಿತು.ಮರುಕ್ಷಣ ಸಾವರಿಸಿಕೊಂಡು "ಇಲ್ಲ ಮುಂದುವರಿಸಲಿ,ನಾನು ಬರುವವರೆಗೆ ಇಡುವುದರಲ್ಲಿ ಅರ್ಥವಿಲ್ಲ"ಎಂದುಬಿಟ್ಟೆ.ಪ್ರಯತ್ನ ಪೂರ್ವಕವಾಗಿ ಆ ಶಬ್ದವನ್ನು ಸೇರಿಸಲಿಲ್ಲ.ನನ್ನ ಮನಸ್ಸು ಇಂದಿಗೂ ಅಪ್ಪಯ್ಯನ ಮಟ್ಟಿಗೆ ಆ ಶಬ್ದವನ್ನು ಒಪ್ಪದು. ಇಲ್ಲಿಂದ ಯಾವ ಫ್ಲೈಟೂ ಈಗ ಬೆಂಗಳೂರಿಗೆ ಇಲ್ಲ, ನಾವು ಟ್ರೈನ್ ಹತ್ತಿ ಈಗ ಹೊರಟರೂ ನಾಡಿದ್ದು ಬೆಳಿಗ್ಗೆಯೇ ತಲುಪುವುದು, ಜೀವಂತ ವ್ಯಕ್ತಿಯಾದರೆ ಮುಖ ನೋಡಬೇಕು ಎನ್ನುವುದಕ್ಕೆ ಅರ್ಥವಿರುತ್ತದೆ,ದೇಹವನ್ನು ಎಷ್ಟು ಹೊತ್ತು ಇಡುವುದು ಅನ್ನಿಸಿ ಹಾಗೆ ಹೇಳಿದ್ದೆನಾದರೂ,ನನ್ನೆದೆಯ ಯಾವುದೋ ಒಂದು ಭಾಗ ಯಾರೋ ಎಳೆದು ಕತ್ತರಿಸಿದ ಹಾಗಾಗಿ ಏನು ಮಾಡಲೂ ತೋಚದೆ ಕುಕ್ಕರಿಸಿಬಿಟ್ಟೆ. ಇವಳು ಕೂಡಾ ನನ್ನನೋಡಿ ವಿಷಯ ಅರ್ಥವಾಗಿ ಅಳಲು ತೊಡಗಿದಳು.ಅವಳನ್ನು ಸಮಾಧಾನ ಮಾಡಲೂ ತೋಚಲಿಲ್ಲ, ನನ್ನ ಜೀವನದ ಅತ್ಯಂತ ಶೋಚನೀಯ ಪರಿಸ್ಥಿತಿಯುಳ್ಳ ಕ್ಷಣವಾಗಿತ್ತದು.

                                         ಜೀವ ತೊರೆದ ಮೇಲೆ ಎಲಿಗೆ ಹೋಗುತ್ತೆ? ಇದ್ರ ಉತ್ತರ ಇಂದಿಗೂ ಯಕ್ಷ ಪ್ರಶ್ನೆಯೇ. ಎಂತಹ ವಿಚಿತ್ರ ಅಲ್ಲವಾ ಇದು? ನಿನ್ನೆಯವರೆಗೆ ಎಲ್ಲರ ಜತೆ ಆಡುತ್ತಿದ್ದ ನಲಿಯುತ್ತಿದ್ದ ನಗುತ್ತಿದ್ದ ವ್ಯಕ್ತಿ ಒಮ್ಮೆಲೇ ಕಣ್ಮರೆಯಾಗಿ ಎಕಾಏಕಿ ಎಂದೂ ವಾಪಾಸ್ಸು  ಬರದೇ ಇರುವಂತಹ ಸ್ಥಿತಿ, ಈ ಕ್ಷಣದ ನಂತರ ಅವರು ಒಂದು ನೆನಪು ಮಾತ್ರ, ನಮ್ಮ ನೋವಿಗೆ ನಲಿವಿಗೆ, ಕಾರಣೀಭೂತವಾದ ವ್ಯಕ್ತಿ ಹೀಗೆ ಇನ್ನು ಸಿಗುವುದೇ ಇಲ್ಲ ಎಂದರೆ, ಇದರಷ್ಟು ಭೀಕರ ಇನ್ನೇನಿದೆ? ಆ ಖಾಲೀ ಸ್ಥಾನ ಎಂದೆಂದಿಗೂ ಯಾರಿಂದಲೂ ತುಂಬಲು ಸಾಧ್ಯವೇ ಇಲ್ಲ, ಎನ್ನುವ ಚಿರ ಸತ್ಯ ಎಂದಿಗೂ ಅರಗಿಸಿಕೊಳ್ಳಲಾಗದ್ದು.ಯಾಕೆಂದ್ರೆ ನಾವೀ ಭುವಿಯ ಮೇಲೆ ಇರುವವರೆಗೆ ಆ ಸ್ಥಾನ ನಿರ್ವಾತವೇ ಆಗಿರುತ್ತದೆ, ಎನ್ನುವ ನೋವು ವಿವರಿಸಲೂ ಅಸಾಧ್ಯ. ದೇಹಕ್ಕಾದ ನೋವಿಗೆ  ಮಾಸಲು ಮದ್ದಿದೆ, ಆದರೆ ಮನಸ್ಸಿನ ನೋವು ಮಾಸಲು ಮದ್ದು....... ಸಮಯವಂತೆ!!!! ಆದರೆ ಈ ಕ್ಷಣದ ಸಮಯವೇ.... ದುಸ್ತರ, ಕಳೆಯಲು..ಮುಂದೆ

                                               ಬರೇ ಹದಿನೈದು ದಿನದ ಹಿಂದಿನ ಕಥೆಯಾಗಿತ್ತದು.ನಾನು ಆ ದೊಡ್ಡ ಆಸ್ಪತ್ರೆಯ ರೂಮಿನಲ್ಲಿ ಅಪ್ಪಯ್ಯನಿಗೆದುರಾಗಿ ಕುರ್ಚಿಯಲ್ಲಿ ಕುಳಿತಿದ್ದೆ.ಅವ್ರು ಬೆಡ್ ಮೇಲಿದ್ದರು. "ಗೋಪೂ" ಅವರು ಪ್ರೀತಿಯಿಂದ ಕರೆಯುವುದೇ ಹಾಗೆ, "ಗೊತ್ತಾ ನಾನು ವೀಳ್ಯದೆಲೆ ತಿನ್ನುವುದು ಬಿಟ್ಟೇ ಬಿಟ್ಟೆ" ಎಂದರು.ನನಗಾಶ್ಚರ್ಯವಾಯಿತು." ಹೌದಾ ಅದು ಹ್ಯಾಗೆ ಮರಾಯರೆ?" ಕೇಳಿದೆ.ಯಾಕೆಂದರೆ ಇದು ಅವರ ಅನೂಚಾನ ಚಟವಾಗಿತ್ತು,ಚಿಕ್ಕಂದಿನಲ್ಲಿ ಅವರ ಬಾಯಿಯಿಂದಲೇ ಕೇಳಿದ್ದೆ. ಈ ವೀಳ್ಯದೆಯ ಅಭ್ಯಾಸ ಹ್ಯಾಗೆ ಶುರುವಾಯಿತು ಅಂತ.ನಾವೆಲ್ಲ ದೊಡ್ಡವರಾದ ಹಾಗೆ ನಮಗೆ ಗೃಹಿಕೆ ಬರುವುದರೊಳಗಾಗಿ ಅವರ ಮೊದಲ ಅಭ್ಯಾಸ ಬೀಡಿ ಸೇದುವುದು ಬಿಟ್ಟಿದ್ದರು.ಕಾರಣ ! ತಾನು ಬೀಡಿ ಸೇದಿ ತನ್ನ ಮಕ್ಕಳಿಗೆ ಇದು ಒಳ್ಳೆಯದಲ್ಲ ಅಂತ ಹೇಗೆ ಹೇಳೋಕಾಗುತ್ತೆ? ಅಂತ. ಇವರು ಮಾಸ್ತರರಾದ್ದರಿಂದ ಅವರಲ್ಲಿ ಆ ಒಂದು ಆದರ್ಶವಿತ್ತು. ಆಗ ಶುರುವಾದ ಈ ಅಭ್ಯಾಸವನ್ನು ಹೇಗೆ ಮತ್ತು ಏಕಾಏಕಿ ಬಿಟ್ಟರೆಂದರೆ."ಹೌದಾ, ಡಾಕ್ಟರರು ಇದು ಇನ್ನು ನಿಮ್ಮ ದೇಹಕ್ಕೆ ತುಂಬಾ ಕೆಟ್ಟದ್ದು ಮಾಡಬಹುದು, ತಂಬಾಕು ಒಳ್ಳೆಯದಲ್ಲವೇ ಅಲ್ಲ, ಇದನ್ನು ಬಿಡಿ, ಅಂದರು , ನೋಡಿ ಇಂದಿನಿಂದ ಇದನ್ನು ಬಿಟ್ಟೆ ಎಂತ ಹೇಳಿ, ಮತ್ತು ಆ ಹೊತ್ತಿನಿಂದ ಅದನ್ನು ಬಿಟ್ಟೇ ಬಿಟ್ಟೆ" ಎಂದರು. "ತುಂಬಾ ಸಂತೋಷ, ನೀವಾದುದಕ್ಕೆ ಹೀಗೆ ನಿರ್ಧಾರ ತಗೊಂಡು, ಅದನ್ನ,ಅಮಲಿನಲ್ಲಿ ತಂದಿರಿ, ಸಾಮಾನ್ಯವಾಗಿ ಎಲ್ಲರಿಂದ ಇದು ಸಾಧ್ಯವಿಲ್ಲ".ಎಂದು ತಗೊಳ್ಳಿ ನಿಮ್ಮ ಮಾತ್ರೆಯ ಸಮಯವಾಯಿತು ಎಂದು ಹೇಳಿ ಮಾತ್ರೆ ತಿನ್ನಿಸಿದೆ.ಆ ಸಂಜೆಯೇ ಅಲ್ಲಿಂದ ಡಿಸ್ಚಾರ್ಜ ಮಾಡಿಸಿ  ಮನೆಗೆ ಕರಕೊಂಡು ಬಂದೆವು.

                                             ಅವರಿಗೆ ಮೂತ್ರದಲ್ಲಿ ಕಲ್ಲಾಗಿತ್ತು, ಯಾವಾಗಲೂ ತೊಂದರೆಯಾಗುತ್ತಿತ್ತು ಮೂತ್ರ ಮಾಡಲು, ಅದಕ್ಕೆಂದೇ ಸಿಟಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಡಾಕ್ಟರರು ಕೂಡಾ ಫಾರಿನ್ ರಿಟರ್ನ್ ಅಂತೆ. ಎಲ್ಲಾ ಸುಸೂತ್ರವಾಗಿ ನೆರವೇರಿತು. ಅಪ್ಪಯ್ಯ ಅಮ್ಮನಿಗೇ ಹೇಳಿದ್ದರು. ನೀನು ಮಾಡುವಷ್ಟೇ ಮುತುವರ್ಜಿಯಿಂದ ಗೋಪು ಕೆಲಸ ಮಾಡುತ್ತಿದ್ದ, ನಾನು ಏಳುವ ಮೊದಲು ಏಳುತ್ತಿದ್ದ, ನಾನು ಮಲಗಿದ ಮೇಲೆ ಮಲಗುತ್ತಿದ್ದ. ರಾತ್ರೆ ನಾನೇನಾದರೂ ಮಗ್ಗುಲು ಬದಲಿಸಿದರೂ ಆತ ಎದ್ದು ಏನು ಬೇಕು ಎಂದು ಕೇಳುತ್ತಿದ್ದ, ಎಂದು ಒಳ್ಳೆಯ ಸರ್ಟಿಫಿಕೇಟ್ ಕೂಡಾ ಕೊಟ್ಟಿದ್ದರು. ಮಗನಿಗೆ ಇದಕ್ಕಿಂತ ಬೇರೆ ಸರ್ಟಿಫಿಕೇಟ್ ಬೇಕೇ? ಅವರು ಸರಿಯಾಗಿ ಗೋಪೂ ಇನ್ನು ನೀನು ಕೆಲಸಕ್ಕೆ ಹೋಗಬಹುದು ಎಂದ ಮೇಲೆಯೇ ನಾನು ಹೊರಟಿದ್ದು.  ಅಷ್ಟೆಲ್ಲ ಸರಿಯಾದವರು ಹೀಗೆ ಒಮ್ಮೆಲೇ ತೀರಿ ಹೋದರು ಎಂದರೆ?

                                            ಈಗ ನನ್ನಲ್ಲಿದ್ದ ಇಂಜಿನಿಯರ್ ಜಾಗೃತನಾದ. "ಅಮ್ಮಿ ನೀನು ಹೋಗಿ ಸ್ಕೂಲಿಂದ ಮಾಣಿಯನ್ನ ಕರ್ಕೊಂಡು ಬಾ, ಅವನ ಟೀಚರಿಗೆ ಹೇಳು ಹೀಗೆ ಆಗಿದೆ, ಇನ್ನು ಹದಿನೈದು ದಿನ ಅವನು ಬರಲ್ಲ. ಊರಿಗೆ ಹೋಗ್ತಾ ಇದ್ದೇವೆ ಅಂತ .ನಾನು ಆಫೀಸಿಗೆ ಹೋಗಿ ಬಾಸ್ ಗೆ ವಿಷಯ ತಿಳಿಸಿ ರಜೆತಗಂಡು ಬರ್ತೇನೆ. ಕೂಡಲೇ ಹೊರಟರೆ ಸೂಪರ್ ಫಾಸ್ಟ್ ಸಿಗಬಹುದು" ಎಂದೆ. ಮುಂದಿನ ಅರ್ಧ ಘಂಟೆಯಲ್ಲಿ ನಾವು ಮೂವರೂ ರೈಲು ನಿಲ್ದಾಣದಲ್ಲಿದ್ದೆವು.

                                          ಒಮ್ಮೆ ಓಡುತ್ತಿರುವ ರೈಲಿನ ಕಿಟಕಿಯಿಂದ ನೋಡಿದಾಗ ಹಸುರಿದ್ದ ಮರಗಿಡಗಳೆಲ್ಲ ಬಿರು ತಲೆಗೂದಲಿನ, ನಿಂತ ಪ್ರತಿಮೆಯ ಹಾಗೆ ಕಂಡು ಬಂದವು.ದೂರದಲ್ಲಿ ಅನಾಥವಾಗಿ ಬಿದ್ದಒಂದು ಹಳೆಯ ಗುಡಿಸಲು ಒಮ್ಮೊಮ್ಮೆ ಗುಡಿಸಲ ಅವಷೇಶವಾಗಿಯೂ ಮಗದೊಮ್ಮೆ ಯಾವುದೋ ಡೈನಾಸೋರ್ ನ ಅಸ್ಥಿಪಂಜರದಂತೆ ಕಂಡು ಬಂದಿತು. ಚಿಗುರ ಹಸಿರು ವಸಂತ ಗರಬಡಿದಿತ್ತು.

            ************************                         ****************************                   ************************

 

                                   " ಕಿಡ್ನಿ ಕಳವು ಜಾಲ ಪತ್ತೆ  ತಪ್ಪಿತಸ್ಥರು ಜೈಲಿಗೆ" ಪೇಪರಿನ ಈ ತಲೆಬರಹವನ್ನು ನೋಡಿ ದಂಗಾದೆ.ಯಾಕೆಂದರೆ ಜೈಲಿಗೆ ಹೋದ ಡಾಕ್ಟರಪ್ಪ ಬೇರೆಯಾರೂ ಅಲ್ಲ, ಹದಿನೈದು ವರ್ಷಗಳ ಹಿಂದೆ ಸಿಟಿ ಆಸ್ಪತ್ರೆಯಲ್ಲಿ ಯಾವ ಡಾಕ್ಟರು ನನ್ನ ಅಪ್ಪಯ್ಯನ ಆಪರೇಷನ್ ಮಾಡಿದರೋ ಅದೇ ಹೆಸರು, ಆದರೆ ಇದು ಕಾಕತಾಳೀಯವಲ್ಲ.

                                  "ನಿನಗೆ  ಗೊತ್ತಿಲ್ವಾ, ಅಪ್ಪಯ್ಯ ಸತ್ತದ್ದಲ್ಲ, ಅದೊಂದು ಕೊಲೆ. ಆ ಡಾಕ್ಟರ್ ಇದ್ದಾನಲ್ಲ ಇಂಗ್ಲೇಂಡ್ ರಿಟರ್ನ್ಡ್... ಅವನೇ ಕೊಲೆ ಮಾಡಿದ್ದು. ಅಲ್ಲದಿದ್ದರೆ ಮೂತ್ರದಲ್ಲಿ ಕಲ್ಲಿದ್ದರೆ ಯಾರೂ ಸಾಯಲ್ಲ, ಅದೂ ಅದನ್ನ ತೆಗೆದ ಹದಿನೈದು ದಿನಗಳಲ್ಲಿ. ಆ ಕಳ್ಳ ಕೊಲೆಗಡುಕ ಡಾಕ್ಟರ್ ಅವರ ಕಿಡ್ನಿಯನ್ನು ತೆಗೆದು ಮಾರಿದ್ದಾನೆ. ನಾವು ಬಡಪಾಯಿಗಳು ನಮಗೆ ಗೊತ್ತಾಗಲಿಲ್ಲ, ಗೊತ್ತಾಗುವದೂ ಇಲ್ಲ ಇದು ಬಿಡು .ಅಲ್ಲದಿದ್ದರೆ ಆಪರೇಷನ್ ಆಗಿ ಹದಿನೈದು ದಿನ ಕೂಡಾ ಸರಿಯಾಗಿ ಬದುಕಲಿಲ್ಲ ಅವರು.." ಹೇಳ ಹೇಳುತ್ತಾ ಅವನ ಕಂಠ ಬಿಗಿಯಿತು.
                                 "ದೇವರು ದೊಡ್ಡವ. ಹದಿನೈದು ವರುಷದ ಮೇಲಾದರೂ ನ್ಯಾಯ ಕೊಟ್ಟ. ಆ ಕಳ್ಳ ಡಾಕ್ಟರ್ ಜೈಲಿಗೆ ಹೋದ. ಆದರೆ ನಮ್ಮ ಈ ಖಾಲೀತನ ಹೇ ಗೆ ತುಂಬುತ್ತೆ ಹೇಳು?. ನಮ್ಮ ತಂದೆಯವರದ್ದು ತೆಗೆದ ಹಾಗೆ ಎಷ್ಟು ಜನರ ಕಿಡ್ನಿ ತೆಗೆದು ಮಾರಿದ್ದಾನೋ ಆತ......" ಅಣ್ಣಯ್ಯ ಹೇಳುತ್ತಲೇ ಹೋದ. ನಾನು ನಿಂತಲ್ಲೇ ಶಿಲೆಯಾದೆ."ವೈದ್ಯೋ ನಾರಾಯಣ ಹರಿ" ಅಂತಾರೆ. ಆದರೆ ಪಾಪ ನಮ್ಮ ಅಪ್ಪಯ್ಯನಿಗೆ ಈ ವೈದ್ಯನೇ ಯಮನಾದ. ಇವನಂತಹ ವೈದ್ಯರಿಗೆ ತಂದೆ ಮಗ ತಾಯಿ ಎಂತ ಇಲ್ಲವಲ್ಲ ಯಾರಾದರೇನು ತನ್ನ ಹೊಟ್ಟೆ ತುಂಬಿಸಿಕೊಂಡರೆ ಸಾಕು , ನನ್ನ ಬೋನ್ಸಾಯ್ ಆಲವನ್ನು ತಿಂದ ಬಿಳಿ ಹುಳದ ಹಾಗೆ ಸಮಾಜವನ್ನು ಒಳಗೊಳಗೇ ತಿಂದು ತೇಗುವರು.

Rating
No votes yet

Comments