ಆನಂದಮಯ ಜೀವನಕ್ಕೆ ಮುಗ್ಧಮನದ ಅವಶ್ಯಕತೆ

ಆನಂದಮಯ ಜೀವನಕ್ಕೆ ಮುಗ್ಧಮನದ ಅವಶ್ಯಕತೆ

ಬರಹ
ಆನಂದಮಯ ಜೀವನಕ್ಕೆ ಮುಗ್ಧಮನದ ಅವಶ್ಯಕತೆ

ಮಗುವು ಮುಗ್ಧವಾಗಿ ಜನಿಸುತ್ತದೆ. ಆದರೆ ಸಮಾಜದೊಡನೆ ಬೆರೆತಂತೆಲ್ಲಾ ತನ್ನ ಮುಗ್ಧತೆಯನ್ನು ಹತ್ತಿಕ್ಕುತ್ತಾ, ಕುಟಿಲತೆಯನ್ನು ರೂಢಿಸಿಕೊಳ್ಳುತ್ತಾ ಹೋಗುತ್ತದೆ. ನಾಗರೀಕ ಸಮಾಜವು ಮುಗ್ಧತೆಯನ್ನು ಪ್ರೋತ್ಸಾಹಿಸುವುದಿಲ್ಲ. ಇಲ್ಲಿ ಕಪಟತೆಯ ಸೋಗುಗಳಿಗೇ ಪ್ರಾಧಾನ್ಯತೆ ಹೆಚ್ಚು! ಆದರೆ ಆಧ್ಯಾತ್ಮಿಕ ಜಗದಲ್ಲಿ ಮುಗ್ಧತೆಯು ಒಂದು ವಿಶಿಷ್ಟ ಸ್ಥಾನವನ್ನು ಹೊಂದಿದೆ. ನಮ್ಮ ತೋರಿಕೆಯ ಹಾವಭಾವಗಳಿಂದ ಇತರರನ್ನು ವಂಚಿಸಬಹುದು; ಆದರೆ ಎಲ್ಲವನ್ನೂ ಬಲ್ಲ ಪರಮಾತ್ಮನು ನಮ್ಮ ನಾಟಕಗಳಿಗೆ ಮರುಳಾಗುವವನೇ?
ಮುಗ್ಧರಾದ ಮಹಾತ್ಮರಿಗೆ ಮೋಸ ಮಾಡುವುದು ಬಹುಸುಲಭ. ಆದರೆ ಅದರ ಪರಿಣಾಮವನ್ನು ಜೀರ್ಣಿಸಿಕೊಳ್ಳುವುದು ಅಸಂಭವ. ಏಕೆಂದರೆ ತಮ್ಮೆಲ್ಲಾ ರಕ್ಷಣೆಯ ಭಾರವನ್ನು ಭಗವಂತನಿಗೊಪ್ಪಿಸಿ, ಲೋಕದ ಗೊಡವೆಗೇ ಹೋಗದೇ, ಬ್ರಹ್ಮಾನಂದದಲ್ಲಿ ಲೀನವಾಗಿರುವ ಅವರನ್ನು ಪರಮಾತ್ಮನೇ ಕಾಯುತ್ತಿರುತ್ತಾನೆ. ಉದಾಹರಣೆಗೆ, ಭಕ್ತಪ್ರಹ್ಲಾದನನ್ನು ಹರಿದ್ವೇಷಿಯಾದ ಹಿರಣ್ಯಕಶಿಪುವು ನಾನಾತರಹದ ಯಾತನೆಗೀಡುಮಾಡಿದನು. ಅವನನ್ನು ವಿಷಸರ್ಪಗಳ ಜೊತೆ ಇಡಲಾಯಿತು; ಸಮುದ್ರಕ್ಕೇ ತಳ್ಳಲಾಯಿತು; ಭಯಾನಕವಾದ ಆಯುಧಗಳಿಂದ ಹಿಂಸಿಸಲಾಯಿತು. ಕೊನೆಗೆ ಇದರ ಪರಿಣಾಮವೆಂದರೆ, ರಕ್ಕಸನಾದ ಹಿರಣ್ಯಕಶಿಪುವೇ ನರಸಿಂಹನಿಂದ ಹತನಾದನೇ ಹೊರತು ಪ್ರಹ್ಲಾದನ ಹಿರಿಮೆಗೇನೂ ಧಕ್ಕೆಯುಂಟಾಗಲಿಲ್ಲ.
ಮನಸ್ಸು ಸರಳವಾಗಿದ್ದಾಗ ಜ್ಞಾನವನ್ನು ಹೊಂದುವುದು ಸುಲಭ. ಅದು ಸದ್ವಿಚಾರಗಳನ್ನು ಬಹುಬೇಗ ಗ್ರಹಿಸುತ್ತದೆ. ತದನಂತರ ಸನ್ಮಾರ್ಗದಲ್ಲಿ ನೆಡೆಯಲು ಅದು ಸಾಧಕನಿಗೆ ದಾರಿದೀಪವಾಗಿ ಪರಿಣಮಿಸುತ್ತದೆ. ಲೌಕಿಕ ವಿಷಯಗಳಿಂದ ವಿಚಲಿತನಾಗದೇ, ಅದಕ್ಕಿಂತಲೂ ಉನ್ನತವಾದ ಆಧ್ಯಾತ್ಮಿಕ ಸತ್ಯವನ್ನು ಹೊಂದಲು ಪ್ರೇರೇಪಣೆ ದೊರೆಯುತ್ತದೆ. ಹೀಗಾಗಿ ಆಧ್ಯಾತ್ಮಿಕ ಮಾರ್ಗದಲ್ಲಿ ಮುಗ್ಧಮನಸ್ಸನ್ನು ಹೊಂದಿರುವುದು ಅತ್ಯಾವಶ್ಯಕ. ಅದಿಲ್ಲವಾದಲ್ಲಿ ಎಲ್ಲವನ್ನೂ ಸಂದೇಹಿಸುವ ಕಲುಷಿತ ಮನಸ್ಸಿನಿಂದಾಗಿ, ನಾವು ಸತ್ಯವನ್ನು ಎಡತಾಕಿದರೂ ಅದರಿಂದ ದೂರವಾಗುವ ಸಾಧ್ಯತೆಗಳಿವೆ.
ಪರಿಶುದ್ಧವಾದ ಮುಗ್ಧಭಕ್ತಿಗೆ ಭಗವಂತನ ಅನುಗ್ರಹ ಶತಃಸಿದ್ಧ. ಇಲ್ಲವಾದಲ್ಲಿ ಕಾಡಿನಲ್ಲಿ ಅಲೆದಾಡುತ್ತಿದ್ದ, ಪೂಜಾವಿಧಾನಗಳನ್ನರಿಯದ ಕಣ್ಣಪ್ಪನಿಗೆ ಶಿವನ ಅನುಗ್ರಹ ಲಭಿಸುತ್ತಿತ್ತೇ? ಬಾಲ್ಯಸಹಜವಾದ ಆಟಪಾಠಗಳಲ್ಲಿ ನಿರತನಾಗಬೇಕಿದ್ದ ಧೃವನು ಮುಗ್ಧತೆಯಿಂದ ಬೇಡಿದಾಗ ವಿಷ್ಣುವಿನ ಸಾಕ್ಷಾತ್ಕಾರವಾಗುತ್ತಿತ್ತೇ? ಕಾಳಿಕಾದೇವಿಯನ್ನು ತನ್ನ ತಾಯಿಯೆಂದು ನಂಬಿ ಬೇರಾವುದರ ಗೊಡವೆಗೂ ಹೋಗದೇ ಶ್ರೀ ರಾಮಕೃಷ್ಣ ಪರಮಹಂಸರಿಗೆ ಸಿದ್ಧಿ ಲಭಿಸುತ್ತಿತ್ತೇ? ಇಂಥಹಾ ಸಾವಿರಾರು ನಿದರ್ಶನಗಳು ನಮ್ಮ ಪುರಾಣಪುಣ್ಯಕಥೆಗಳಲ್ಲಿವೆ. ಇದೇ ಹಾದಿಯಲ್ಲಿ ಎಲ್ಲೋ ಓದಿದ್ದ ಮೂವರು ಭಕ್ತರ ಕಥೆಯೊಂದು ನೆನಪಾಗುತ್ತಿದೆ [ಕೃಪೆ - ಓಶೋ]. ಅದೆಂದರೆ:
ಗ್ರಾಮವೊಂದರಲ್ಲಿ ಮೂವರು ಮನುಷ್ಯರು ವಾಸವಾಗಿದ್ದರು. ಅವರು ಯಾವ ಧರ್ಮಕ್ಕೆ ಸೇರಿದವರೆಂದು ಅವರಿಗೂ ತಿಳಿದಿರಲಿಲ್ಲ. ಹೀಗಾಗಿ ಅವರಿಗೆ ಪೂಜಾವಿಧಾನಗಳೊಂದೂ ತಿಳಿದಿರಲಿಲ್ಲ. ಆದರೆ ದಿನವೂ ಶ್ರದ್ಧಾಪೂರ್ವಕವಾಗಿ ಅವರೊಂದು ವಿಚಿತ್ರ ಪ್ರಾರ್ಥನೆಯನ್ನು ನೆರವೇರಿಸುತ್ತಿದ್ದರು: “ನಾವು ಮೂವರು, ನೀವು ಮೂವರು. ನಮ್ಮ ಮೂರು ಜನರ ಮೇಲೆ ನಿಮ್ಮ ಮೂವರ ಕೃಪೆ ಎಂದೆಂದಿಗೂ ಇರಲಿ.” ಇದನ್ನೇ ಇವರು ಭಕ್ತಿಯಿಂದ ಅನೇಕ ವರ್ಷಗಳ ಕಾಲ ಮಾಡುತ್ತಿದ್ದರು. ಹೀಗಿದ್ದಾಗ ಇವರಿದ್ದಲ್ಲಿಗೆ ಮತಪ್ರಚಾರಕನೊಬ್ಬನು ಬಂದನು. ಅವನಿಗೆ ಇವರ ಪ್ರಾರ್ಥನೆಯು ಅಸಂಬದ್ಧವಾಗಿ ತೋರಿತು. ಇವರಿಗೆ ಸರಿಯಾದ ಮಾರ್ಗದರ್ಶನ ನೀಡಿ ತನ್ನ ಮತಕ್ಕೆ ಸೆಳೆಯಬೇಕೆಂದು ನಿರ್ಧರಿಸಿ ಮತಪ್ರಚಾರಕನು ಇವರಿಗೆ ಇವರು ಮಾಡುತ್ತಿರುವ ಪ್ರಾರ್ಥನೆಯು ತಪ್ಪೆಂದು ಹೇಳಿ ಜರಿದನು. ಅಲ್ಲದೇ ಇವರಿಗೆ ದೇವರನ್ನು ಆರಾಧಿಸುವ ಸರಿಯಾದ ದಾರಿ ತೋರಿಸುವೆನೆಂದು ಹೇಳಿ, ತನ್ನ ಮತದ ಸಾಂಪ್ರದಾಯಿಕ ಕ್ರಮವನ್ನೂ, ಪೂಜಾಮಂತ್ರಗಳನ್ನೂ ಕಲಿಸಿಕೊಟ್ಟನು. ಅವರು ಅದನ್ನೇ ಉರುಹೊಡೆಯತೊಡಗಿದರು. ತೃಪ್ತಿಯಿಂದ ಮತಪ್ರಚಾರಕನು ತನ್ನ ಕೆಲಸ ಸಾಧಿಸಿತೆಂದು ಬಗೆದು ಅಲ್ಲಿಂದ ಹೊರಡಲಾರಂಭಿಸಿದನು. ಆಗ ಇವರಿಗೆ ಅವನು ಕಲಿಸಿದ ಮಂತ್ರದ ಭಾಗವೊಂದು ಮರೆತುಹೋಯಿತಾದ್ದರಿಂದ ಅವನಿಂದಲೇ ಅದರ ಬಗ್ಗೆ ಸರಿಯಾಗಿ ಕೇಳಬೇಕೆಂದು ಅವನಿದ್ದಲ್ಲಿಗೆ ಓಡಲಾರಂಭಿಸಿದರು. ಅದಾಗಲೇ ಅವನು ದೋಣಿಯಲ್ಲಿ ಸಾಗುತ್ತಾ ನದಿಯ ಮಧ್ಯಭಾಗದಲ್ಲಿದ್ದನು. ಮೂವರೂ ನೀರಿನ ಮೇಲೆಯೇ ಓಡಿಬಂದು ಅವನಿಗೆ ತಮ್ಮ ಸಂದೇಹವನ್ನು ತಿಳಿಸಿದರು! ಇವರ ಮುಗ್ಧತೆಯ ಶಕ್ತಿಗೆ ಬೆರಗಾದ ಮತಪ್ರಚಾರಕನು ಅವರಿಗೆ ಕೈಜೋಡಿಸಿ ಇಂತೆಂದನು: “ಅಣ್ಣಂದಿರಾ! ನಿಮ್ಮ ಮುಗ್ಧ ಮನಸ್ಸಿನ ಪ್ರಾರ್ಥನೆಯು ಪ್ರಭಾವಶಾಲಿಯಾದುದು. ಅದರ ಮುಂದೆ ನನ್ನ ಗ್ರಂಥಗಳ ಪಾಂಡಿತ್ಯವೇನೂ ಅಲ್ಲ. ನಿಮಗಾಗಲೇ ಭಗವಂತ ಒಲಿದಿದ್ದಾನೆ. ನಿಮ್ಮ ಹಳೆಯ ಪ್ರಾರ್ಥನೆಯನ್ನೇ ಮುಂದುವರೆಸಿರಿ. ನಿಮಗೆ ತಿಳಿಹೇಳುವಂತಹುದೇನೂ ನನ್ನಲ್ಲಿ ಇಲ್ಲ.”
ಮೇಲ್ನೋಟಕ್ಕೆ ನೋಡಿದಾಗ ಮುಗ್ಧತೆ ಮತ್ತು ಅಮಾಯಕತೆಎರಡೂ ಒಂದೇ ತರಹ ಕಾಣಿಸುತ್ತದೆ. ಆದರೆ ಇವೆರಡರಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಜಗದ ಎಲ್ಲವನ್ನೂ ತಿಳಿದು ಇದರಲ್ಲಿ ಏನೂ ಇಲ್ಲವೆಂದರಿಯುವುದು ಮುಗ್ಧತೆ. ಏನನ್ನೂ ತಿಳಿಯದೇ ಜಡವಾಗಿರುವುದು ಅಮಾಯಕತೆ. ಸಾಧುಪುರುಷರು ಮಗುವಿನಂತಿರುತ್ತಾರೆ ಎಂಬ ಹೇಳಿಕೆಯು ಗೂಢವಾದುದು. ಅದರ ಅಕ್ಷರಶಃ ಅರ್ಥವನ್ನು ಗ್ರಹಿಸಿ ತಪ್ಪು ತಿಳಿಯಬಾರದು. ಉದಾಹರಣೆಗೆ, ಸತ್ವ ಮತ್ತು ತಮಸ್ಸುಗಳೆರಡೂ ಒಂದೇ ಸ್ಥಿತಿಯಂತೆ ಭಾಸವಾಗುತ್ತವೆ. ಆದರೆ ಅವೆರಡರ ನಡುವಿನ ಅಂತರ ಅನಂತವಾದುದಾಗಿರುತ್ತದೆ.
ಜ್ಞಾನವನ್ನು ಹೊಂದಲು ಮನಸ್ಸು ಪರಿಶುದ್ಧವಾಗಿರಬೇಕು; ಪೂರ್ವಾಗ್ರಹಗಳಿಂದ ಮುಕ್ತವಾಗಿರಬೇಕು. ಆಗ ಹಸಿಗೋಡೆಯ ಮೇಲೆ ಸಣ್ಣ ಕಲ್ಲುಗಳನ್ನೆಸೆದಾಗ ಅವುಗಳು ಅದಕ್ಕೆ ಅಂಟಿಕೊಳ್ಳುವಂತೆ, ಕಲಿಯುತ್ತಿರುವ ವಿಚಾರವು ಮನಸ್ಸಿನ ಆಳಕ್ಕಿಳಿಯುತ್ತದೆ. ಹೀಗಿರುವುದರಿಂದಲೇ ವಯಸ್ಕರಿಗಿಂತ ಸುಲಭವಾಗಿ ಮಕ್ಕಳು ಹೊಸತನ್ನು ಕಲಿಯುತ್ತಾರೆ. ಅವರಿಗೆ ಎಲ್ಲವೂ ಹೊಸತಾಗಿ, ಸೊಗಸಾಗಿ ಕಾಣಿಸುತ್ತಿರುತ್ತವೆ. ನಮಗಾದರೋ, ಬೇಡದ ಎಲ್ಲಾ ವಿಚಾರಗಳು ತಲೆಯಲ್ಲಿ ತುಂಬಿಕೊಂಡು ಭಗವಂತನು ದಯಪಾಲಿಸಿರುವ ಬದುಕನ್ನು ಆನಂದಿಸುವ, ಆಸ್ವಾದಿಸುವ ಉತ್ಸಾಹ ಕುಗ್ಗಿರುತ್ತದೆ.
ಹಾಗಾಗಿ ತೆರೆದ ಮನಸ್ಸನ್ನು ಹೊಂದಲು ನಿರಂತರವಾಗಿ ಪ್ರಯತ್ನಿಸೋಣ. ಮನಸ್ಸಿಗೆ ಅಂಟಿರುವ ಲೌಕಿಕ ಕಶ್ಮಲಗಳನ್ನು ತೊಡೆದುಹಾಕುವುದರತ್ತ ಗಮನ ಹರಿಸೋಣ. ತನ್ಮೂಲಕ ಮುಗ್ಧರಾಗಿ ಜ್ಞಾನಸಂಪಾದನೆಯಲ್ಲಿ ತೊಡಗೋಣ. ಸರ್ವಶಕ್ತನು ನಮ್ಮನ್ನು ನಿಟ್ಟಿನಲ್ಲಿ ಪ್ರೇರಿಸಲಿ ಎಂದು ಪ್ರಾರ್ಥಿಸೋಣ. ಅಲ್ಲವೇ?
**********************************

 

[http://ppsringeri.blogspot.com/2010/03/blog-post.html]