ನನ್ನ ಸಮಸ್ಯೆಗೆ ಉತ್ತರ ಕೊಡುವಿರಾ?

5

ಸಾಧಿಸಿದ್ದಾದರೂ ಏನು? ಕಳೆದುಕೊಂಡದ್ದು ಎಷ್ಟೊಂದು? ನಷ್ಟ ಯಾರಿಗೆ? ಇದೆಲ್ಲ ಯಾರ ಒಳಿತಿಗಾಗಿ? ಇವೆಲ್ಲ ಪ್ರಾರಂಭವಾದದ್ದು ಹೇಗೆ ಯಾರಿಂದ?

ಕಳೆದ ವಾರ ಮುಂಬಯಿ ಲೋಕಲ್ ಟ್ರೈನ್‍ಗಳಲ್ಲಿ ೭ ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟವಾಗಿದ್ದು ಇಡೀ ಜಗತ್ತಿಗೇ ತಿಳಿದಿದೆ. ಇದರ ಬಗ್ಗೆ ರಾಜಕೀಯ ವ್ಯಕ್ತಿಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿದ್ದಾರೆ. ಕೆಲವು ಇವರದಲ್ಲ ಎಂದರೆ ಇನ್ನು ಕೆಲವರು ಇವರದೇ ಕೃತ್ಯ ಎಂದು ಹೇಳುತ್ತಿದ್ದಾರೆ. ಒಬ್ಬರಿಗೊಬ್ಬರು ಬೆರಳು ತೋರುತ್ತಾ ಕಿತ್ತಾಡುವುದರಲ್ಲಿ ಮೂಲ ವಿಷಯವನ್ನೇ ಸಾರ್ವಜನಿಕರಿಂದ ಮರೆಸುತ್ತಾರೆ. ಆಗಿಂದಾಗ್ಯೆ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತವೆ ಮತ್ತು ಇಂತಹ ಕೃತ್ಯಗಳಿಂದ ರಾಜಕೀಯ ಲಾಭ ಪಡೆಯಲು, ಸಾರ್ವಜನಿಕರ ಆಕ್ರೋಶವನ್ನು ಮತವನ್ನಾಗಿ ಪರಿವರ್ತಿಸಲು ರಾಜಕಾರಣಿಗಳು ಕಾಯುತ್ತಲೇ ಇರುತ್ತಾರೆ. ನೊಂದವರ ಬಗ್ಗೆ ಸಾರ್ವಜನಿಕರಷ್ಟೇ ಸಾಂತ್ವನ ನೀಡುತ್ತಿರುವುದು. ಮುಂಬಯಿಯಲ್ಲಿ ಸಾರ್ವಜನಿಕರು ಮಾನವೀಯತೆಯನ್ನು ತೋರಿದಾಗ ರಾಜಕಾರಣಿಗಳ್ಯಾರೂ ಕಾಣಸಿಗಲೇ ಇಲ್ಲ. ಬದಲಾಗಿ ದೇಶದ ರಾಜಕಾರಣಿಗಳೆಲ್ಲರೂ ತೀರ್ಥಯಾತ್ರೆಗೆ ಅಥವಾ ಪಿಕ್‍ನಿಕ್‍ಗೆ ಬಂದಂತೆ ಬಂದು ಸುತ್ತಾಡಿ, ಮಾಧ್ಯಮದ ಚಿತ್ರಗಳಲ್ಲಿ ದೇಶದಲ್ಲೆಲ್ಲಾ ಬಿತ್ತರಿಸುವಂತೆ ಮಾಡಿಕೊಳ್ಳುವುದೂ ಸಾಮಾನ್ಯವಾದ ದೃಶ್ಯ. ಅವರ ಓಡಾಟಕ್ಕಾಗಿ ವಿಶೇಷ ವಾಹನ ವ್ಯವಸ್ಥೆ, ಅವರ ರಕ್ಷಣೆಗೆ ವಿಶೇಷ ವ್ಯವಸ್ಥೆ, ಅವರ ಹಿಂಬಾಲಕರಿಗೂ ಇದೇ ರೀತಿಯ ವ್ಯವಸ್ಥೆ ಎಂದು ಎಷ್ಟೆಲ್ಲಾ ಖರ್ಚು ಆಗುವುದು. ಈ ಹಣ ಸಾರ್ವಜನಿಕರ ತೆರಿಗೆಯಿಂದಲ್ಲದೇ ಇನ್ನೆಲ್ಲಿಂದ ಬರುವುದು. ಇದೇ ನಾಯಕರುಗಳು ನೊಂದವರಿಗೆ ಕೈ ನೀಡಿ ಸಹಾಯಿಸುವುದು, ಅವರಿಗೆ ಬೇಕಾದ ಔಷಧ ಆರೈಕೆಗಳನ್ನು ಮಾಡಿದರೆ ಎಷ್ಟು ಚೆನ್ನಾಗಿರುತ್ತದೆ. ಇದರಿಂದ ಅವರುಗಳ ಹಿಂಬಾಲಕರುಗಳೂ ಇದೇ ರೀತಿ ಮಾಡುವರು. ಹೀಗಾದರೆ ದೇಶ ಎಂತಹ ಪರಿಸ್ಥಿತಿಯನ್ನೂ ಎದುರಿಸಬಲ್ಲದು. ಸಶಕ್ತವಾಗುವುದರಲ್ಲಿ ಸಂಶಯವೇ ಇಲ್ಲ. ಈ ದೇಶಕ್ಕೆ ಇದೊಂದು ಶಾಪವೆಂದು ತೋರುತ್ತಿದೆ. ರಾಷ್ಟ್ರ ಮತ್ತು ರಾಜ್ಯಗಳನ್ನಾಳುವ, ರಕ್ಷಿಸುವ ಮುಂದಾಳುಗಳು ಸಮಯಕ್ಕೆ ಸರಿಯಾಗಿ ಕಣ್ಮರೆಯಾಗಿರುತ್ತಾರೆ. ನೊಂದವರ ನೋವಿನ ಬಗ್ಗೆ ನೊಂದಿರುವವರಿಗೇ ಚೆನ್ನಾಗಿ ಅರ್ಥವಾಗುವುದು. ಹೀಗಿರುವ ಲಕ್ಷಾಂತರ ಜನಗಳನ್ನು ನೂರಾರು ರಕ್ಷಕರು (ಭಕ್ಷಕರು ಎಂದರೂ ತಪ್ಪಾಗಲಾರದು), ಎಷ್ಟು ಸಮಯ ನಿಯಂತ್ರಿಸಬಲ್ಲರು. ನಿಸ್ತೇಜ ರಾಕ್ಷಸನಂತೆ ಮಲಗಿರುವ ಈ ಲಕ್ಷಾಂತರ ಜನಗಳು ಒಟ್ಟಿಗೇ ತಿರುಗಿಬಿದ್ದರೆ ಈ ರಕ್ಷಕರು ಏನು ಮಾಡಿಯಾರು? ಎಷ್ಟೇ ಆಗಲೀ ರಕ್ಷಕರೂ ಮನುಷ್ಯರೇ. ಹೆಚ್ಚಿನದೇನೆಂದರೆ ಅವರ ಕೈಗಳಲ್ಲಿ ಆಯುಧವಿದ್ದೀತಷ್ಟೆ. ಜನಸಾಮಾನ್ಯ ಇಂತಹವರನ್ನೂ ಎದುರಿಸುವಂತಹ ದಿನ ಬರಬಹುದು. ಸಾವಿಗೆ ಹೆದರದೇ ಇರುವವನು ಏನನ್ನೂ ಮಾಡಬಲ್ಲ, ಏನನ್ನೂ ಎದುರಿಸಬಲ್ಲ.

ಇಷ್ಟಾಗಿ ಈ ಕೃತ್ಯದಿಂದ ಸಾಧಿಸಿದ್ದಾದರೂ ಏನು? ಕಳೆದುಕೊಂಡದ್ದು ಎಷ್ಟೊಂದು? ನಷ್ಟ ಯಾರಿಗೆ? ಇದೆಲ್ಲ ಯಾರ ಒಳಿತಿಗಾಗಿ?
ಈ ಕೃತ್ಯವೆಸಗಿದವರ ವಿಕೃತ ಮನಸ್ಸಿಗೆ ಆನಂದವಾಯಿತೇ? ಇಂತಹ ಅಮಾನವೀಯ ಘನಂದಾರಿ ಕೆಲಸಕ್ಕೆ ಪಾರಿತೋಷಕ ಸಿಕ್ಕಿತೇ? ಈಗೀಗ ಜಗತ್ತಿನ ಎಲ್ಲ ದೇಶಗಳಲ್ಲೂ ಇಂತಹ ಅಮಾನವೀಯ ಘಟನೆಗಳು ಹೆಚ್ಚಾಗುತ್ತಿವೆ. ಹಲವಾರು ವರ್ಷಗಳ ಬೆವರಿನ ಫಲವನ್ನು ಕ್ಷಣಗಳಲ್ಲಿ ಕಳೆದುಕೊಳ್ಳುತ್ತಿದ್ದೇವೆ. ಶ್ರೀಮಂತಿಕೆಯ ಹಾದಿಯಲ್ಲಿ ಸಾಗುತ್ತಿರುವ ದೇಶಗಳು ಕಡು ಬಡತನದ ಹಾದಿಯತ್ತ ಹೊರಟಿವೆ. ಇಲ್ಲಿ ಯಾರಿಗೂ ಲಾಭವಾಗಿಲ್ಲ, ಎಲ್ಲರಿಗೂ ನಷ್ಟವೇ, ಅದೂ ಭರಿಸಲಾರದ ನಷ್ಟ. ಆದರೆ ಇದರಿಂದ ಜನಸಾಮಾನ್ಯರಲ್ಲಿ ಜಾಗೃತಿ ಎಂಬುದೊಂದು ಲಾಭವಾಗುತ್ತಿದೆ. ಸರಕಾರ ಏನೇ ಸಹಾಯ ಮಾಡಲಿ ಮಾಡದಿರಲಿ, ಅದರ ಕಡೆಗೆ ಗಮನವೀಯದೇ, ನೊಂದವರಿಗೆ ಇತರರು ಕೈಲಾದ ಎಲ್ಲ ಸಹಾಯವನ್ನೂ ಮಾಡುತ್ತಿದ್ದಾರೆ. ಎಷ್ಟೋ ಬಾರಿ, ಸರಕಾರವನ್ನು ನಂಬಿ ಪ್ರಯೋಜನವಿಲ್ಲವೆಂದು ಮುಂದಾಗಿಯೇ ಎಲ್ಲ ರೀತಿಯ ಸಹಕಾರವನ್ನೂ ಒದಗಿಸುವ ಸಂದರ್ಭವನ್ನೂ ನೋಡಿದ್ದೇವೆ.

ಬಾಂಬ್ ಸ್ಫೋಟವಾದ ಒಂದು ವಾರಕ್ಕೆ ಸರಿಯಾಗಿ ಕಳೆದ ಮಂಗಳವಾರ ಸಂಜೆ ೬.೨೫ಕ್ಕೆ ಸರಿಯಾಗಿ ಮುಂಬಯಿ ನಗರ ಸ್ತಬ್ಧವಾಗಿ ೨ ನಿಮಿಷಗಳ ಮೌನವನ್ನಾಚರಿಸಿತು. ಜಾತಿ, ಮತ, ಧರ್ಮ, ವಯಸ್ಸು, ಲಿಂಗ ಭೇದವಿಲ್ಲದಂತೆ ಎಲ್ಲರೂ ಒಮ್ಮತದಿಂದ ನಿಂತಲ್ಲಿಯೇ ಇದ್ದಲ್ಲಿಯೇ ಎರಡು ನಿಮಿಷಗಳ ಕಾಲ ಸ್ತಬ್ಧರಾದರು. ಟ್ಯಾಕ್ಸಿಗಳು, ಬಸ್ಸುಗಳು, ಟ್ರೈನುಗಳು, ಅಲ್ಲಲ್ಲಿಯೇ ನಿಂತವು. ಜನಗಳನ್ನು ಒಗ್ಗಟ್ಟಾಗಿಸಲು ಇಂತಹ ಹಲವಾರು ಕೃತ್ಯಗಳ ಅವಶ್ಯವಿದೆಯೇ?

ಇವೆಲ್ಲ ಪ್ರಾರಂಭವಾದದ್ದು ಹೇಗೆ ಯಾರಿಂದ? ಇದನ್ನು ಹುಡುಕುತ್ತಾ ಹೋದರೆ ಅದಕ್ಕೆ ಮೊದಲಿಲ್ಲ ಕೊನೆಯಿಲ್ಲ. ಅನಾದಿಕಾಲದಿಂದ ಧರ್ಮದ ಹೆಸರಿನಲ್ಲಿ ಒಂದು ಪಂಗಡದೊಂದಿಗೆ ಇನ್ನೊಂದು ಪಂಗಡದವರ ಹೊಡೆದಾಟಗಳು ಸಾಗಿಯೇ ಇದೆ. ಅದರ ಹಿಂದೆಯೇ ಇಂತಹ ವಿಧ್ವಂಸಕ ಕೃತ್ಯವನ್ನೆಸಗಿ ಅಮಾಯಕ ಪ್ರಾಣಗಳನ್ನು ಆಹುತಿಗೆ ಈಡು ಮಾಡುತ್ತಿದ್ದಾರೆ. ಇದು ಇಂದು ನಿನ್ನೆಯಿಂದ ನಡೆದು ಬಂದಹದ್ದಲ್ಲ. ಎಲ್ಲ ದೇಶಗಳಲ್ಲೂ ಕಂಡು ಬರುತ್ತಿರುವ ಸಾಮಾನ್ಯ ದೃಶ್ಯಗಳು. ಆದರೆ ನಾವು ಅಥವಾ ನಮ್ಮ ಕುಟುಂಬ ಆ ಅವಘಡಕ್ಕೆ ಆಹುತಿಯಾಗಿಲ್ಲದ ಕಾರಣ ನಮಗಿದೊಂದು ನೋಟದ ದೃಶ್ಯ. ಈಗಿನ ದಿನಗಳಲ್ಲಿ ಇಂತಹ ಕೆಲವು ಘಟನೆಗಳನ್ನು ನೋಡಲು, ಯಾರಿಗೆ ಲಾಭವಾಗಿದೆ ಎಂಬುದನ್ನು ಮನಗಾಣಬಹುದು.
ಬಾಬ್ರಿ ಮಸೀದಿಯ ಧ್ವಂಸ - ಅದೊಂದು ಮಸೀದಿಯಲ್ಲ, ಪಾಳು ಬಿದ್ದ ಕಟ್ಟಡ. ಅದರ ಮೇಲೆ ಯಾರಿಗೂ ಆಸಕ್ತಿ ಇರಲಿಲ್ಲ. ಅದರ ಪಾಡಿಗೆ ಅದು ಇದ್ದು, ಚರಿತ್ರೆಯಲ್ಲಿ ಆದ ಘಟನೆಯನ್ನು ಸಾರಿಹೇಳಲು ನಿಂತಿತ್ತು. ಯಾವುದೋ ಆವೇಶದಲ್ಲಿ, ಯಾರದೋ ಅಣತಿಯಂತೆ ಅದನ್ನು ಕೆಡವಲು ಪ್ರಯತ್ನಿಸಿದರು.
೧೯೯೩ರಲ್ಲಿ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟ. ಇದರ ಹಿಂದೆ ಯಾರ ಕೈವಾಡವಿದೆ, ಯಾರು ತಪ್ಪಿತಸ್ಥರೆಂದು ಇನ್ನೂ ನಿರ್ಣಯ ತೆಗೆದುಕೊಂಡಿಲ್ಲ. ಇಂತಹ ನ್ಯಾಯಾಂಗ ಪದ್ಧತಿ ಇನ್ಯಾವ ದೇಶದಲ್ಲೂ ಇಲ್ಲವೆಂದುಕೊಂಡಿದ್ದೀನಿ. ಪ್ರತಿದಿನವೂ ಹೊಸ ಹೊಸ ಕೇಸುಗಳು ಸೇರುತ್ತಿದ್ದು, ಕೇಸುಗಳ ಸಂಖ್ಯೆ ಮೇರುಶಿಖರಕ್ಕೇರುತ್ತಿಹುದೇ ಹೊರತು ಕೆಳಮುಖ ಕಂಡೇ ಇಲ್ಲ. ಇದಕ್ಕೇ ಇರಬೇಕೇನೋ, ದುರ್ಜನರು ಹೆಚ್ಚಾಗುತ್ತಿರುವುದು, ದೌರ್ಜನ್ಯಗಳು ಹೆಚ್ಚಾಗುತ್ತಿರುವುದು.
ಆಗಾಗ್ಯೆ ಭಿವಂಡಿಯಲ್ಲಿ ಕೊಲೆ ಆಸ್ತಿ ಪಾಸ್ತಿಗಳ ನಷ್ಟ. ಈ ಊರೊಂದು ಅದೇನು ಪಾಪ ಮಾಡಿತ್ತೋ ಏನೋ, ಕೋಮು ಕಲಭೆಯ ಹೆಸರಿನಲ್ಲಿ ಆಗಾಗ್ಯೆ ಸಾವು ನೋವುಗಳನ್ನು ಕಾಣುತ್ತಿರುತ್ತದೆ.
ಗೋದ್ರಾ ಹತ್ಯಾಕಾಂಡ - ಗುಜರಾತಿನಲ್ಲಿ ಟ್ರೈನ್‍ ಸುಟ್ಟದ್ದು - ಅಮಾಯಕ ಜನರ ಮಾರಣ ಹೋಮ
೨೦೦೩ ಮತ್ತೆ ಮುಂಬಯಿಯಲ್ಲಿ ಬಾಂಬ್ ಸ್ಫೋಟ.
ಈಗ ೨೦೦೬ರಲ್ಲಿ ಮತ್ತೆ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟ.

ಕೆಲವೊಮ್ಮೆ ಇಂತಹ ಸಂಘಟನೆಯ ಶಾಮೀಲು ಇಲ್ಲ ಎಂದು ಜವಾಬ್ದಾರಿಯುತ ನಾಯಕರ ಸ್ಪಷ್ಟನೆ.
ಹಿಂದೆಯೇ ನಾನೇನೂ ಹಾಗೆ ಹೇಳಲೇ ಇಲ್ಲ - ಮಾಧ್ಯಮದವರ ಕೃತ್ರಿಮತನ ಎಂಬ ಹೇಳಿಕೆ.
ಇಂತಹ ಸನ್ನಿವೇಶವನ್ನು ಉಪಯೋಗಿಸಿಕೊಂಡು ಆಡಳಿತ ಪಕ್ಷವನ್ನು ಉರುಳಿಸಿ ಬೇರಿನ್ನೊಂದು ಪಕ್ಷ ಅಧಿಕಾರಕ್ಕೆ ಬರಲು ಹವಣಿಕೆ. ಯಾರಾದರೂ ನ್ಯಾಯ ಒದಗಿಸಿ, ಇಂತಹ ಕೃತ್ಯಗಳಿಗೆ ಕಾರಣಕರ್ತರನ್ನು ಸದೆಬಡಿದದ್ದಿದೆಯೇ? ಸಾರ್ವಜನಿಕರಿಗೆ ಮುಕ್ತವಾಗಿ ಜೀವಿಸಲು ಅವಕಾಶವನ್ನು ಮಾಡಿಕೊಡುತ್ತಿರುವರೇ? ಇವೆಲ್ಲದರಲ್ಲೂ ರಾಜಕೀಯ ನಾಯಕರ ಕೈವಾಡವನ್ನು ನೋಡಬಹುದು. ಸಾರ್ವಜನಿಕರು ರಾಜಕೀಯ ನಾಯಕರುಗಳಾಡುವ ಪಗಡೆಯಾಟದ ಕಾಯಿಗಳೇ?

ಇದೇ ತರಹದ ಕೃತ್ಯ ಇತರ ದೇಶಗಳಲ್ಲಿ ನಡೆದಾಗ ಆಯಾ ದೇಶದ ಸರಕಾರ ಏನು ಮಾಡುವುದು? ಈ ದೇಶಗಳಲ್ಲಿ ಎಲ್ಲ ರಾಜಕೀಯ ಪಂಗಡಗಳದ್ದೂ ಒಂದೇ ನಿಲುವು.

ಜಾತಿ ಮತ ಧರ್ಮ ಹುಟ್ಟಿನಿಂದ ಬರುವುದೇ? ಜಾತಿ ಮತ ಧರ್ಮಗಳು ಹುಟ್ಟಿಕೊಂಡಿದ್ದು ಹೇಗೆ? ಅವುಗಳ ಮೂಲ ತತ್ವಗಳೇನು? ಯಾರೂ ಅಹಿಂಸತಾವಾದದ ಮೂಲಕ ಬೆಳೆಯಬೇಕೆಂದು ಹೇಳಲಿಲ್ಲ. ಆಯಾ ಕಾಲಕ್ಕೆ ಸ್ಥಳಕ್ಕೆ ಅನುಗುಣವಾಗಿ ಜಾತಿ ಮತ ಧರ್ಮಗಳು ಹುಟ್ಟಿಕೊಂಡವು.

ಈ ಉಗ್ರಗಾಮಿಗಳನ್ನು ಹಿಡಿಯಲು ದೇಶದ ಹೊರಗೇ ಏಕೆ ಹೋಗುತ್ತಿರಬೇಕು. ಈ ಕೃತ್ಯವಾದ ಕೆಲವೇ ಕ್ಷಣಗಳಲ್ಲಿ ಎಲ್ಲ ಹಾದಿಗಳನ್ನೂ ಮುಚ್ಚಿ ಒಳಗೆ ಅಡಗಿರುವವರನ್ನು ಮತ್ತು ಕೃತ್ಯವೆಸಗಿ ಓಡಿ ಹೋಗಲು ಪ್ರಯತ್ನಿಸುತ್ತಿರುವವರನ್ನು ಹಿಡಿಯಲಾಗುವುದಿಲ್ಲವೇ? ಇವರನ್ನು ಬೆಳೆಯಲು ಅನುವು ಮಾಡಿಕೊಡುವವರನ್ನು ಬಲಿ ಹಾಕಲಾಗುವುದಿಲ್ಲವೇ?

ಎಲ್ಲರೂ ಸಾರ್ವಜನಿಕರ ಅಸಹಾಯಕತೆಯನ್ನು capitalise ಮಾಡಿಕೊಳ್ಳುತ್ತಿದ್ದಾರೆ. ಮಾಧ್ಯಮದಲ್ಲಿ ಈ ದೃಶ್ಯಗಳನ್ನು ಮತ್ತೆ ಮತ್ತೆ ತೋರಿಸುವುದರಿಂದ ಘಾಸಿಗೊಂಡವರ ಮನಕ್ಕೆ ಇನ್ನೂ ಹೆಚ್ಚಿನ ನೋವುಂಟಾಗುವುದಲ್ಲವೇ? ಮಾಧ್ಯಮದವರು popularity ಪಡೆದುಕೊಳ್ಳಲು ಇದೇ ಸುಸಮಯಕ್ಕಾಗಿ ಕಾಯುತ್ತಿದ್ದಾರೆ. ಒಬ್ಬರನ್ನು ತುಳಿದು ಇನ್ನೊಬ್ಬರು ಬದುಕುವ ಸನ್ನಿವೇಶ ಬಂದಿದೆಯೇ? ಅಂದರೆ ಮತ್ತೆ ಆ ಹಳೆಯ barbaric eraಗೆ ಹೋಗುತ್ತಿದ್ದೇವೆಯೇ?

ಕೆಲವು ದೇಶಗಳಲ್ಲಿ ಇಂತಹ ದುಷ್ಕೃತ್ಯಗಳನ್ನು ಎಸಗಿದವರಿಗೆ ಸಾರ್ವಜನಿಕವಾಗಿ ಅದೇ ರೀತಿಯ ಚಿತ್ರಹಿಂಸೆಗೆ ಗುರಿಮಾಡಬೇಕು. ಇದು ಅಹಿಂಸೆಗೆ ವಿರುದ್ಧವಾದುದೇನೋ ಸರಿ. ಇದರಿಂದ ಇತರರಿಗೆ ಪಾಠ ಕಲಿಸಬಹುದು. ಹಲವಾರು ಬಾರಿ ನಾವು ಇಂತಹ ಶಿಕ್ಷೆ ಅಮಾನವೀಯವೆಂದರೂ ಇದರ ಅವಶ್ಯಕತೆ ಈಗ ಇದೆ ಎನ್ನಿಸುವುದಿಲ್ಲವೇ. The punishment should be deterrent to others, and see that no one else would ever involve in this type of mischief.

ಮೇಲೆ ಹೇಳಿದುವೆಲ್ಲವೂ ಉತ್ತರಿಸಲಾಗುವ, ಉತ್ತರಿಸಬಾರದ ಪ್ರಶ್ನೆಗಳೇ? ಒಂದರೆ ಕ್ಷಣ ಇದರ ಬಗ್ಗೆ ಯೋಚಿಸಿ. ಈ ವಿಷವರ್ತುಲದಿಂದ ಆಚೆಗೆ ಬರಲು ನಾವೇನಾದರೂ ಮಾಡಲಾದೀತೇ? ನನಗಂತೂ ಯಾವುದಕ್ಕೂ ಉತ್ತರ ಹೇಳಲಾಗುತ್ತಿಲ್ಲ. ನೀವ್ಯಾರಾದರೂ ಉತ್ತರಿಸುವಿರಾ? ಪ್ರಜೆಗಳಾದ ನಾವುಗಳು ಇಂತಹ ಕೃತ್ಯಗಳನ್ನು ದಮನಿಸಿ, ದೇಶೋನ್ನತಿಗೆ ಏನು ಮಾಡಬಹುದು ಎಂಬುದನ್ನೂ ಸೂಚಿಸುವಿರಾ?

Forums: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ ಪ್ರಶ್ನೆಗಳು ನಿಮ್ಮೊಬ್ಬರದೇ ಆಗಿರದೆ, ಅದು ನಮ್ಮ ದೇಶದ ಸಮಸ್ಯಗಳಲ್ಲಿ ಒಂದಾಗಿದೆ. ಆದರೆ ಇದನ್ನು ಸರಿಪಡಿಸಬೇಕಾದವರು ಅದರ ಸ್ವರೂಪವನ್ನು ಗಣನೆಗೆ ತೆಗೆದುಕೊಂಡಂತೆ ನಿಮಗೆ ಕಾಣಿಸುತ್ತದೆಯೆ ? ಯೋಚಿಸಿ. ದೆಹಲಿ 'ಪಾರ್ಲಿಮೆಂಟ್ ಭವನ'ವನ್ನು ನುಚ್ಚು ನೂರು ಮಾಡಲು ಹೊರಟ ತಂಟೆಕೋರರಿಗೆ ಇನ್ನೂ ಶಿಕ್ಷೆಯಾಗಿದೆಯೇ ? ರಾಷ್ಟ್ರಪತಿಗಳು ಇನ್ನೂ ಯಾಕೆ ಸುಮ್ಮನೆ ಕಾದು ಕುಳಿತಿದ್ದಾರೆ ? ಏಕೆ, ಎಕೆ, ಏಕೆ ? ?

ಇದು ನನ್ನ ಉತ್ತರ. ಮತ್ತು ನನ್ನಂತಹ ನಾಗರೀಕರ ಮತ್ತು ಬಾಂಬ್ ಸ್ಫೋಟದಲ್ಲಿ ತಮ್ಮ ಅಣ್ಣ,ತಂಗಿ, ಗಂಡ,ಹೆಂಡತಿ,ತಾಯಿ,ಮಕ್ಕಳನ್ನು,ಮಿತ್ರರನ್ನು ಕಳೆದುಕೊಂಡವರ ಆಕ್ರಂದನದ ದನಿ. ಇನ್ನೂ ನಿಮಗೆ ಉತ್ತರ ಬೇಕೆ ? ? ?