ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ಅನುಭವವಾಗಿದೆಯೇ?

4.75

ದೇವರಿಗೆ ನಾಮಗಳು ಹಲವು. ದೆವ್ವಗಳಿಗೂ ಸಹ. ಪಿಶಾಚಿ, ಮೋಹಿನಿ, ಗಾಳಿ, ಭೂತ, ಜಿನ್ ( ಕುಡಿಯುವ ಜಿನ್ ಅಲ್ಲ), ಸೈತಾನ್,  ghost, apparition....ಇನ್ನೂ ಏನೇನೋ. ನನಗಂತೂ ಅದರ ಅನುಭವ ನೇರವಾಗಿ ಆಗಿಲ್ಲದಿದ್ದರೂ ಆಗಾಗ ಯಾರೋ ಬಂದು ಹಿಂದೆ ನಿಂತ ಹಾಗೆ, ಅಥವಾ ದೂರದಲ್ಲಿ ನಡೆದಾಡುವ ಹಾಗೆ ತೋರುತ್ತದೆ. ಚಿಕ್ಕಂದಿನಿಂದ ನನ್ನ ತುಂಟಾಟಕ್ಕೆ ಕಡಿವಾಣ ಹಾಕಲು ಚಿಕ್ಕಮ್ಮಂದಿರು ಈ ದೆವ್ವದ ಭಯ ಕೂರಿಸಿ ಬದುಕಿನುದ್ದಕ್ಕೂ ನರಳುವಂತೆ ಮಾಡಿದ್ದಾರೆ. ನನ್ನ ಭಯ ಒಂದು ರೀತಿಯ claustrophobic ( ಅಂದರೆ ಕೋಣೆಯಲ್ಲೋ, ಮನೆಯಲ್ಲೋ ಇದ್ದಾಗ ಮಾತ್ರ ತೋರುವ ಭಯ) ಎನ್ನಬಹುದು.  ಹೊರಹೋದರೆ, ರಾತ್ರಿ ಎಷ್ಟೇ ಹೊತ್ತಾದರೂ, ನನಗೇನೂ ಅನ್ನಿಸುವುದಿಲ್ಲ. ಮನೆಯೊಳಕ್ಕೆ ಹೊಕ್ಕ ಕೂಡಲೇ ಆವರಿಸುತ್ತದೆ "ಗಾಳಿ". ಅಥವಾ ಗಾಳಿಯ ಭಯ.

omme nanna ಪತ್ನಿಯನ್ನು ಕರೆತರಲು ಕಾರಿನಲ್ಲಿ ಹೊರಟೆ. ತಮ್ಮನಿಗೆ ಏನೋ ಕೆಲಸವಿದ್ದುದರಿಂದ ನೀನೆ ಡ್ರೈವ್ ಮಾಡ್ ಕೊಂಡು ಹೋಗು ಎಂದು ಹೇಳಿದ. ಭಾರತದಲ್ಲಿ ನಾನು ಡ್ರೈವ್ ಮಾಡಿರೋದು ಕಡಿಮೆಯೇ. ಕುಡಿದೋ, ನಿರ್ಲಕ್ಷ್ಯದಿಂದಲೋ ವಾಹನ ಚಲಾಯಿಸುವವರ ಗಾಡಿಗೆ ಸಿಕ್ಕಿ sandwich ಆಗೋದು ನನಗಷ್ಟು ಇಷ್ಟವಿಲ್ಲ. ಸರಿ ಸಂಜೆಗೆ ಹೊರಟೆ. ನಮ್ಮ ಮನೆಯಿಂದ ಸುಮಾರು ೧೦೦ ಕಿ. ಮೀ ಅತ್ತೆಯ ಮನೆ. ಘಾಟಿ ಸಹ ಸಿಗುತ್ತದೆ. ಆದ್ರೆ ಬಹು ಸುಂದರವಾದ ದಾರಿ. ಮರಳು ನೋಡಿ ನೋಡಿ ಬೇಸತ್ತ ನನಗೆ ಸಿಗುವ ಪ್ರಕೃತಿಯ  ಸೊಬಗು. ಸ್ವಲ್ಪ ದೂರ ಹೋದ ಕೂಡಲೇ ಸೂರ್ಯಾಸ್ತದ ಪ್ರಾರ್ಥನೆಯ ಸಮಯ ಆದ್ದರಿಂದ ರಸ್ತೆಯಲ್ಲಿ ಸಿಕ್ಕ ಮಸೀದಿಗೆ ಹೋಗಿ ಪ್ರಾರ್ಥನೆ ಮುಗಿಸಿ ಸ್ವಲ್ಪ ದೂರ ಹೋಗುತ್ತಲೇ ಯಾರೋ ಮಾತಾಡುತ್ತಿರುವ ಶಬ್ದ. ಹಿಂದಿನ ಸೀಟಿನಿಂದ. ಅಮ್ಮಾ, ಅಯ್ಯೋ, ಗಂಟಲು ಒಣಗಿ ಹೃದಯ ಬಾಯಿಗೆ. ಎಲ್ಲಿಂದ ಹತ್ತಿರಬೇಕು ಮೋಹಿನಿ. ಹೌದು ಮಸೀದಿಯ ಹತ್ತಿರ ನಿಲ್ಲಿಸಿದ್ದೆನಲ್ಲ, ಅಲ್ಲೇ ಹತ್ತಿರಬೇಕು. ಆದರೆ ಮಸೀದಿಯ ಹತ್ತಿರ ಮೋಹಿನಿ ಇರೋಲ್ಲ. ಜಿನ್ ಗಳಿರುತ್ತವಂತೆ. ಚಿಕ್ಕಮ್ಮಂದಿರು ದೆವ್ವದ ಭಯದ ಜೊತೆ ಭಾಗ್ಯಕ್ಕೆ ಒಂದಿಷ್ಟು ಮಂತ್ರಗಳನ್ನೂ ಹೇಳಿಕೊಟ್ಟಿದ್ದರು. ಅವನ್ನು ಪಠಿಸುತ್ತಾ ಇದ್ದಾಗ ಮತ್ತೊಮ್ಮೆ ಶಬ್ದ. ಈಗ ತಿಳಿಯಿತು ಈ ಸ್ವರಗಳ ಗುಟ್ಟು. FM radio ಆನ್ ಮಾಡಿ ಇಟ್ಟಿದ್ದರಿಂದ ಎಲ್ಲಿನದೋ ಸ್ಟೇಶನ್ ಆಗಾಗ ಈ ಶಬ್ದಗಳನ್ನು ಬಿತ್ತರಿಸುತ್ತಿತ್ತು. ಬದುಕಿದೆಯಾ ಬಡಜೀವವೇ ಎನ್ನುತ್ತಾ ವೇಗವಾಗಿ ಕಾರನ್ನು ಚಲಾಯಿಸಿ ನನ್ನ ಅತ್ತೆ ಮನೆ ಸೇರಿಕೊಂಡೆ.  

ಭೂತದ ವಿಷಯ ಬಂದಾಗ ಹಲವರು ವಿವಿಧ "ಭೂತಮಯ" ವರದಿಗಳನ್ನು ನೀಡುತ್ತಾರೆ. ಬೀದಿಯಲ್ಲಿ ಯಾವುದೋ ಮಗು ಅಳುತ್ತಿರುವ ಸದ್ದು, ಇದ್ದಕ್ಕಿದ್ದಂತೆ ರೇಡಿಯೋ ಆನ್ ಆಗೋದು, ಹೊಳೆ ಸಾಲಿನಿಂದ ಬಿಳಿ ಸೀರೆ ಉಟ್ಟು, ಒದ್ದೆಯಾದ ಉದ್ದದ ಕೂದಲನ್ನು ಇಳಿಬಿಟ್ಟು ನಡೆಯುತ್ತಿದ್ದ ವಿಷಯ, ಹೀಗೆ ಹತ್ತು ಹಲವು ಕುತೂಹಲಕರ ಸುದ್ದಿಗಳು ಕೇಳಲು ಸಿಗುತ್ತವೆ.   

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದುವರೆಗೂ ನನಗೆ ಅನುಭವ ಆಗಿಲ್ಲ ಮತ್ತು ಆಗುವುದೂ ಇಲ್ಲ. ಊರಿಲ್ಲಿ ಇದ್ದಾಗ ಅಮವಾಸ್ಯೆಯೋ, ಹುಣ್ಣಿಮೆಯೋ ಎನ್ನದೆ ಬ೦ದೂಕು ಹಿಡಿದು ಹಲವಾರು ರಾತ್ರಿ ಓಡಾಡಿದ್ದೇನೆ. ಸ್ಮಶಾನ ಹತ್ತಿರ ಭಯವಾಗಿದ್ದೂ ಉ೦ಟು, ಅದರೆ ಯಾವುದೇ ದೆವ್ವ, ಭೂತದ ಪರಿಚಯವಿಲ್ಲ. ಸಾಮಾನ್ಯವಾಗಿ ನಮ್ಮೂರಿನ ಕಡೆ ಹೊಲ ಗದ್ದೆಗಳಿಗೆ ನೀರನ್ನು ಹಾಯಿಸಲು ಹೋಗುತ್ತಿದ್ದೆವು, ಅರೆಕಲ್ಲಿನ ಜಾಗಗಳಲ್ಲಿ ಬೆ೦ಕಿ ಕಾಯಿಸುತ್ತ, ಹರಟುತ್ತಲೋ, ಸರದಿಯ ಪ್ರಕಾರ ಪುಟ್ಟ ಲ್ಯಾಟಿನ್ ಹಿಡಿದು ಗದ್ದೆಯ ಬದುವುನಲ್ಲಿ ಸಾಗಿ ನೀರವ ರಾತ್ರಿಯಲ್ಲಿ ನೀರನ್ನು ಹಾಯಿಸುತ್ತ ಒಬ್ಬರ ಗದ್ದೆಯ ನ೦ತರ ಇನ್ನೊಬ್ಬರ ಗದ್ದೆ. ಹೀಗೆ ಸಾಗಿತ್ತಿತ್ತು ನಮ್ಮ ಹಳ್ಳಿಯ ಜೀವನ. ನಮ್ಮ ಗೆಳೆಯರ ಬಳಗ ಕೂಡ ನ೦ಬುತ್ತಿರಲಿಲ್ಲ. ಭಯ ಇದ್ದುದು ಮಾತ್ರ ಹಾವುಗೆಳಿಗೆ ಅಸ್ಟೆಯ. ಇದು ಚಿಕ್ಕ ಮಕ್ಕಳನ್ನು ನಿಯ೦ತ್ರಿಸಲೋ ಅಥವ ಜ್ಯೋತಿಷಿ ಎನಿಸಿಕೊ೦ಡವರು ತಮ್ಮ ಬೇಳೆ ಬೇಯಿಸಿಕೊಳ್ಳಲೋ ಅಥವ ಇನ್ಯಾರನ್ನೋ ಭಯಪಡಿಸಲು ಬಳಸುವ ತ೦ತ್ರ ಎನ್ನಬಹುದು. ಹಳ್ಳಿ ರಾತ್ರಿಗಳ ಹೆಚ್ಚಿನ ಮಾಹಿತಿಗೆ "ಶಿಕಾರಿಯ ದಿನಗಳು" ಲೇಖನ ಓದಿ. http://sampada.net/a... http://sampada.net/a...

ಪ್ರಿಯ ಅಬ್ದುಲ್, ನಮ್ಮ ಊರಲ್ಲಿ, ಅದರಲ್ಲೂ ನಮ್ಮ ತಂದೆಯವರ ಹತ್ತಿರ ದೆವ್ವ ಭೂತಗಳ ಹಲವಾರು ಸ್ವಾರಸ್ಯಕರ ಕತೆಗಳಿವೆ. ನಾನು ಅವುಗಳನ್ನು ಆನಂದಿಸಿದ್ದೇನೆ ಹೊರತು ನಂಬಿಲ್ಲ. ದೆಹಲಿಯಲ್ಲಿ ಒಮ್ಮೆ ನನ್ನ ಸಹೋದ್ಯೋಗಿ ರಾತ್ರಿ ಹೊತ್ತು ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಪಕ್ಕದ ಬೀಗ ಹಾಕಿರುವ ಲ್ಯಾಬ್ ನ ಒಳಗೆ ಒಬ್ಬ ಹುಡುಗಿ ಕುಳಿತಿದ್ದಾಳೆ ಎಂಬಂತೆ ಭಾಸವಾಯಿತಂತೆ. ಒಬ್ಬಳು ಹುಡುಗಿ ಅದೇ ಕಟ್ಟಡದಲ್ಲಿ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ವಿಷಯ ಕೇಳಿದ್ದ ಅವನು ತಾನು ಮಾಡುತ್ತಿದ್ದ ಕೆಲಸವನ್ನು ಅಷ್ಟಕ್ಕೇ ಬಿಟ್ಟು ಅಲ್ಲಿಂದ ಪಲಾಯನಗೈದಿದ್ದ. ಮರುದಿನ ರಾತ್ರಿ ನಾನು ಬಹಳ ಹೊತ್ತು ಕಾಯ್ದರೂ (ರಾತ್ರಿ ಸುಮಾರು ೯ ರಿಂದ ೪ ರವರೆಗೆ ಎಂದು ನೆನಪು; ನಂತರ ನಿದ್ದೆ ತಡೆದುಕೊಳ್ಳಲು ಆಗದೆ ಹಾಸ್ಟೆಲಿಗೆ ಹಿಂತುರಿಗಿದ್ದೆ) ನನಗೆ ಯಾವ ಹುಡುಗಿಯ ದೆವ್ವವಾಗಲೀ, ಹುಡುಗಿಯಾಗಲೀ, ಕಾಣಿಸಲಿಲ್ಲ. ಮಧ್ಯದಲ್ಲೊಮ್ಮೆ, ಗ್ರೌಂಡ್ ಫ್ಲೋರ್ನಿಂದ ಒಮ್ಮೆಲೇ ಶೀಟಿಯ ಶಬ್ದ ಕೇಳಿದಾಗ ಕೊಂಚ ಗಾಬರಿಗೊಂಡಿದ್ದು ನಿಜ. ಅಲ್ಲಿಗೆ ಹೋಗಿ, 'ಶೀಟಿ ಓದಿದ್ದು ಸೆಕ್ಯೂರಿಟಿ ಗಾರ್ಡ್' ಎಂದು ದೃಢಪಡಿಸಿಕೊಂಡ ಮೇಲೆ ಸಮಾಧಾನವಾಗಿತ್ತು. ಅದರ ನಂತರವೂ ಎಷ್ಟೋ ರಾತ್ರಿಗಳನ್ನು ನಾನೂ ನನ್ನ ಬೇರೆ ಸಹೋದ್ಯೋಗಿಗಳೂ ಅಲ್ಲೇ ಕಳೆದಿದ್ದಿದೆ. ಯಾರಿಗೂ ದೆವ್ವ ಕಾಣಿಸಿಲ್ಲ.

ನನ್ನ ಭೂತಮಯ ಪ್ರಬಂಧ ಪ್ರಕಟಿಸಿ ಹಲವು ದಿನಗಳಾದರೂ ಯಾವ ಪ್ರತಿಕ್ರಿಯೆಯೂ ಕಾಣದಾದಾಗ ನಾನಂದುಕೊಂಡೆ, ಪುಕ್ಕಲ ನಾನು ಮಾತ್ರ ಅಲ್ಲ, ಸಂಪದಿಗರೂ ಸಹ ಅಂತ. ಏಕಾಏಕಿ ಭೂತದಂತೆ ಬಂದೆರಗಿದವು ಪ್ರತಿಕ್ರಿಯೆಗಳು. ಎಲ್ಲರಿಗೂ ಸವಿನಯ ವಂದನೆಗಳು.

ಇದ್ದ ಬದ್ದ ದೆವ್ವಗಳೆಲ್ಲಾ ಮನುಷ್ಗ್ಯರ ವರ್ತನೆಗಳೆಲ್ಲಾ ತಮಗಿಂತ ಕ್ರೂರವಾದುದೂ ಹಾಗು ವಿಚಿತ್ರ ವಾದುದೂ ಆಗಿರುವುದನ್ನು ನೋಡಿ ಕಂಬಿ ಕಿತ್ತಿವೆ. ಹಾಗಾಗಿ ದೆವ್ವವೂ ಇಲ್ಲ ಭೂತ ಪ್ರೇತಗಳೂ ಇಲ್ಲ

ರೂಪಾ, ಸಕತ್ತಾಗಿ ಹೇಳಿದಿರಿ. ಕಥೆಯೊಂದನ್ನು ಕೇಳಿ. ಹುಣಿಸೇ ಮರವೊಂದರಲ್ಲಿ ದೆವ್ವವಿದೆ ಎಂಬ ಮಾತು ಹಳ್ಳಿಯಲ್ಲಿ ಚಾಲ್ತಿಯಲ್ಲಿತ್ತು. ಇಬ್ಬರು ಹೀಗೇ ಚರ್ಚೆಗೆ ಇಳಿದರು. ಒಬ್ಬ-" ರಾತ್ರಿ ೧೨ ಗಂಟೆಯಲ್ಲಿ ನೀನೊಬ್ಬನೇ ಹೋಗಿ ಈ ಮೊಳೆಯನ್ನು ಹುಣಿಸೇ ಮರಕ್ಕೆ ಹೊಡೆದು ಬಾ. ನಿನಗೆ ೧೦೦ ರೂ ಬಹುಮಾನ." ಪುಕ್ಕಲುತನವಿದ್ದರೂ ಹೊರಗೆ ನಾಟಕವಾಡುತ್ತಿದ್ದ ಇನ್ನೊಬ್ಬ ತನ್ನ ಮರ್ಯಾದೆ ಉಳಿಸಿಕೊಳ್ಳಬೇಕಲ್ಲಾ! ಒಪ್ಪಿದ. ಅಮಾಸ್ಯೆ ರಾತ್ರಿ ೧೨ ಗಂಟೆ. ಇವನಿಗೆ ಹೆದರಿಕೆಇದ್ದರೂ ಸ್ವಾಭಿಮಾನಕ್ಕೆ ಅಂಜಿ ಮೊಳೆ ಹಾಗೂ ಸುತ್ತಿಗೆ ತೆಗೆದುಕೊಂಡು ಹೋದ. ಹುಣಿಸೇ ಮರದ ಸ್ವಲ್ಪ ದೂರದಲ್ಲಿ ಒಬ್ಬ ನಿಂತ. ಇನ್ನೊಬ್ಬ ಮರದ ಹತ್ತಿರ ಮೆಲ್ಲ ಮೆಲ್ಲಗೆ ಹೋದ ಕೈ ನಡುಗುತ್ತಿದ್ದರೂ ಮೊಳೆ ಹೊಡೆದು ಹೊಂದಿರುಗಿ ಹೊರಡಲು ಹೆಜ್ಜೆ ಇಡುತ್ತಾನೆ. ಇವನ ಪಂಚೆ ಹಿಡಿದು ದೆವ್ವ ಎಳೆಯುತ್ತಿದೆ.....ಕಿಟಾರನೆ ಕಿರಚಿಕೊಳ್ಳುತ್ತಾನೆ. ದೂರದಲ್ಲಿ ನಿಂತಿದ್ದವ ಟಾರ್ಚ್ ಹಿಡಿದು ಹತ್ತಿರ ಧಾವಿಸುತ್ತಾನೆ. ಇವನ ಮಿತ್ರ ನಡುಗುತ್ತಾ ಬಿದ್ದಿದ್ದಾನೆ. ಏನಾಗಿತ್ತಪ್ಪ ಅಂದ್ರೆ ಹೆದರಿಕೆಯಲ್ಲಿ ಅವನ ಪಂಚೆಯನ್ನೂ ಸೇರಿಸಿ ಮೊಳೆ ಹೊಡೆದಿದ್ದ. ಇದು ತಮಾಶೆಗಾಗಿ ಕಥೆ. ಈಗ ನಿನ್ನೆ ತಾನೆ ಕಂಡ ಒಬ್ಬ ಮನೋ ರೋಗಿಯ ವಿಷಯ ಕೇಳಿ. ನಾನು ಯಾವ ನಿರ್ಧಾರಕ್ಕೂ ಬಂದಿಲ್ಲ. ನೀವು ಯಾವ ನಿರ್ಧಾರಕ್ಕಾದರೂ ಬರಬಹುದು. ಬೆಂಗಳೂರಿನ ಪ್ರಖ್ಯಾತ ಆಯುರ್ವೇದ ವೈದ್ಯರೊಡನೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಕಥೆ ಕೇಳಿ. ಅನೇಕ ರೋಗಿಗಳಿಗೆ ಯೋಗ ಚಿಕಿತ್ಸೆ ಕೊಡುತ್ತಿದ್ದವರ ಪಜೀತಿ ಇದು.ಕಳೆದ ಆರು ತಿಂಗಳಿನಿಂದ ಏನೋ ಭೀತಿ. ಮಂಕಾಗಿ ಕೆಲಸಕ್ಕೂ ಹೋಗುತ್ತಿರಲಿಲ್ಲವಂತೆ .ಈಗ ಒಂದು ವಾರದ ಮುಂಚೆ ತೌರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆಕೆಯಾಡಿದ ಮಾತು " ..........ನ್ನು ತೆಗೆದು ಕೊಂಡಾಯ್ತು, ..........ನ್ನು ತೆಗೆದು ಕೊಂಡಾಯ್ತು,...............ನ್ನು ತೆಗೆದು ಕೊಂಡಾಯ್ತು,ಇವಳನ್ನೂ ತೆಗೆದುಕೊಳ್ಳದೆ ಬಿಡುವುದಿಲ್ಲ.ಪಾಪ! ಆ ಮಹಿಳೆ ನಲುಗಿ ಹೋಗಿದ್ದಾಳೆ. ಮಾನಸಿಕ ಚಿಕಿತ್ಸೆ ಎಲ್ಲಾ ಕೊಡಿಸಿಯಾಗಿದೆ.ಅವರ ಸೋದರತ್ತೆ ಒಬ್ಬರ ಪ್ರೇತ ಹಾಗೆ ಮಾಡುತ್ತಿದೆ. ಎಂದು ಅವರ ಮನೆಯಲ್ಲಿ ಕಂಗಾಲಾಗಿದ್ದಾರೆ. ನನ್ನ ಕಿವಿಗೆ ಬಿದ್ದಿದ್ದನ್ನು ತಿಳಿಸುವ ಪೋಸ್ಟ್ ಮನ್ ಕೆಲಸವನ್ನಷ್ಟೇ ನಾನು ಮಾಡಿರುವೆ. ಕಾರಣ ಆಕೆಯ ಜೀವದ ವಿಚಾರ! ನಾನು ಸಲಹೆಕೊಡುವಂತಿಲ್ಲ.ಪಾಪ! ಆಕೆಯನ್ನು ನೋಡಿದರೆ ಸಂಕಟವಾಗುತ್ತೆ. ಮುಗ್ಧವ್ಯಕ್ತಿಯೇನಲ್ಲಾ. ಪ್ರಖ್ಯಾತ ವೈದ್ಯರೊಡನೆ ಗೌರವಯುತವಾಗಿ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದವರು. ಈ ಘಟನೆ ಬಗ್ಗೆ ನನಗೆ ಯಾವ ಪ್ರಿಜುಡೀಸ್ ಇಲ್ಲ. ಈ ಘಟನೆ ಹೇಳಿದ ತಕ್ಷಣ " ನೀವು ನಂಬುತ್ತೀರಾ? ಅನ್ನೋ ಪ್ರಶ್ನೆ ಬರುತ್ತೆ. ನಾನು ನಂಬಿಲ್ಲ. ಆದರೆ ಆಕೆಯ ಪರಿಸ್ಥಿತಿ ನೋಡಿದಾಗ ಅಯ್ಯೋ ಎನಿಸುತ್ತೆ.ಈ ಘಟನೆ ಬರೆಯ ಬಾರದೆಂದು ಕೊಂಡಿದ್ದೆ. ಕಾರಣ ಇನ್ನು ಚರ್ಚೆ ಶುರುವಾಗುತ್ತೆ. ನಾನೇನೂ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ಆ ತಾಯಿಯ ಜೀವ ಉಳಿದರೆ ಸಾಕು.

ಅಬ್ದುಲ್, ಒಂದು ಒಳ್ಳೆಯ ಚರ್ಚೆಯನ್ನೇ ಹುಟ್ಟು ಹಾಕಿದ್ದೀರಿ. ಇದುವರೆಗೂ ಲಘುವಾಗಿ ಸುಪ್ರೀತ್ ಜೊತೆ ಚರ್ಚಿಸುತ್ತಿದ್ದೆ. ಈಗ ಸೀದಾ ವಿಷಯಕ್ಕೆ ಬರೋಣ. ಒಮ್ಮೆ ಹೀಗಾಯ್ತು. ನಾನು ನಂದಿ ಬೆಟ್ಟದ ತಪ್ಪಲಿನಲ್ಲಿದ್ದ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿದ್ದ ದೊಡ್ಡದೊಂದು ಬಂಡೆಕಲ್ಲಿನ ಹತ್ತಿರ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನಗಳಲ್ಲಿ, ಹತ್ತಿರ ಯಾರೂ ಸುಳಿಯುತ್ತಿರಲಿಲ್ಲ. ಸುಮಾರು ಇಪ್ಪತ್ತಕ್ಕಿಂತಲೂ ಹೆಚ್ಚು ನೌಕರರು, ಅಪ್ಪಿ ತಪ್ಪಿ ಆ ಕಡೆ ಹೋದವರು ಚಳಿ ಜ್ವರ ಹಿಡಿದು ಮಲಗಿದ್ದರು. ಅವರ ಪ್ರಕಾರ ಆ ಬಂಡೆಕಲ್ಲಿನ ಮೇಲೆ ಒಬ್ಬ ಯುವತಿ, ತಲೆಯಿಲ್ಲದವಳು, ಕುಳಿತು ಅಳುತ್ತಿರುವುದು ಅವರ ಅನುಭವಕ್ಕೆ ಬಂದಿತ್ತಂತೆ. ಅದನ್ನು ಪರೀಕ್ಷಿಸಲು ಒಂದು ಅಮಾವಾಸ್ಯೆಯ ರಾತ್ರಿಯಲ್ಲಿ ನಾನು ನನ್ನ ಜೊತೆಗೆ ಮೂರು ನಾಯಿಗಳ ಜೊತೆ ಹೋದಾಗ ಆ ನಾಯಿಗಳು ಆ ಕಲ್ಲು ಬಂಡೆಯ ಹತ್ತಿರ ಬರುತ್ತಿದ್ದಂತೆ ಜೋರಾಗಿ ಬೊಗಳ ತೊಡಗಿ ನನ್ನನ್ನು ಮುಂದೆ ಹೋಗದಂತೆ ತಡೆದಿದ್ದವು. ಆದರೂ ಭಂಡ ಧೈರ್ಯದಿಂದ ಹೋಗಿ ಆ ಕಲ್ಲನ್ನು ಮುಟ್ಟಿ ಪರೀಕ್ಷಿಸಿದರೆ, ಆ ನೌಕರರು ಹೇಳಿದ ಜಾಗದಲ್ಲಿ ತಣ್ಣಗೆ ಕೊರೆಯುತ್ತಿತ್ತು. ಬೇರೆಲ್ಲಾ ಭಾಗವೂ ಮಾಮೂಲಿನಂತಿತ್ತು. ಒಮ್ಮೆ ಹೀಗೇ ಕಾರ್ಖಾನೆಗೆ ಬಂದ ಚಿಕ್ಕಬಳ್ಳಾಪುರದ ಪೊಲೀಸ್ ಇನ್ಸ್ಪೆಕ್ಟರ್ ಜೊತೆ ಮಾತಾಡುವಾಗ ಅವರು ಹೇಳಿದ್ದು, ಆ ಬಂಡೆಕಲ್ಲಿನ ಮೇಲೆ, ಆ ಕಾರ್ಖಾನೆ ಪ್ರಾರಂಭವಾಗುವುದಕ್ಕಿಂತಲೂ ಮುಂಚೆ, ಒಬ್ಬ ಯುವತಿಯನ್ನು ಬಲಾತ್ಕಾರ ಮಾಡಿ, ತಲೆಯ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಿ ಕೊಂದಿದ್ದರಂತೆ. ಗುರುತು ಸಿಕ್ಕದ ಆ ಯುವತಿಯ ಕೊಲೆ ಕೇಸು "ಗುರುತಿಸಲಾಗದ, ವಾರಸುದಾರರಿಲ್ಲದ ಕೇಸು" ಎಂದು ಮುಕ್ತಾಯವಾಗಿತ್ತು. ಇದು ಅಲ್ಲಿ ನನಗಾದ ಅನುಭವ. ಇಂತಹ ಇನ್ನೂ ಸಾಕಷ್ಟಿವೆ. ನನ್ನ "ಕಣಿವೆಪುರದ ಕಥೆಗಳು" ಮಾಲಿಕೆಯಲ್ಲಿ ಅದನ್ನು ಮುಂದುವರಿಸುತ್ತೇನೆ. ನನ್ನ ಪ್ರಕಾರ ದೇವರು ಇದ್ದಾನೆ ಎಂದನ್ನುವುದಾದರೆ ದೆವ್ವಗಳೂ ಇವೆ.

ಅಬ್ಬಾ ದೆವ್ವಗಳ ಬಗ್ಗೆ ಇಷ್ಟೊಂದು ಸುದೀರ್ಘ ಚರ್ಚೆ!!. ನಮ್ಮೂರಲ್ಲಿಯೂ(ಕೇರಳ) ದೆವ್ವ ಇದೆ ಅಂತಾ ಹೇಳ್ತಾರೆ. ಯಾರಿಗಾದರೂ ದೆವ್ವದ ಕಾಟ ಇದ್ದರೆ ಆ ದೆವ್ವವನ್ನು ಮಾಟ ಮಂತ್ರ ಎಲ್ಲಾ ಮಾಡಿ ಕೊನೆಗೆ ಕುಪ್ಪಿ(ಗಾಜಿನ ಬಾಟಲಿ)ಯೊಳಗೆ ಹಾಕುತ್ತಾರಂತೆ. ಇಲ್ಲದಿದ್ದರೆ ಅವುಗಳನ್ನು ಮಂತ್ರಶಕ್ತಿಯಿಂದ ವಶೀಕರಿಸಿ ಕಾಸರಕನ ಮರಕ್ಕೆ ಆಣಿ ಹೊಡೆದು ಬಿಡುತ್ತಾರಂತೆ. ಇಂತಹಾ ಹಲವಾರು ಕಥೆಗಳು ಈಗಲೂ ನಮ್ಮೂರಲ್ಲಿ ಪ್ರಚಲಿತವಾಗಿದ್ದರೂ ನನಗೆ ಈ ವರೆಗೆ ದೆವ್ವದ ಅನುಭವ ಆಗಿಲ್ಲ. :) -ರಶ್ಮಿ.

ಅಬ್ಬ.. ನಾಸ್ತಿಕರಾದ ಸುಪ್ರೀತ್ ಅವರನ್ನು ಆಸ್ತಿಕರನ್ನಾಗಿ ಮಾಡಲು ಎಷ್ಟೊಂದು ಜನ ಕಷ್ಟ ಪಡ್ತಿದ್ದಾರೆ?? ಅವರನ್ನು ಅವರಷ್ಟಕ್ಕೆ ಯಾಕೆ ಬಿಡಬಾರದು?