ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ

5

ಇತ್ತೀಚೆಗೆ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್‍, ಪತ್ರಿಕಾಗೋಷ್ಠಿಯೊಂದರಲ್ಲಿ, ಕನ್ನಡ ಚಿತ್ರರಂಗದ ಬಹಳ ಪ್ರಸ್ತುತ ಸಮಸ್ಯೆಯಾದ ಮಾರುಕಟ್ಟೆ ವಿಸ್ತರಣೆಯ ಬಗ್ಗೆ, ಉತ್ತಮ ಚರ್ಚೆಯೊಂದನ್ನು ಪ್ರಾರಂಭಿಸಿದ್ದರು. ( http://www.prajavani.net/Content/Jun152007/cinema2007061432731.asp )

೭೩ ವರ್ಷಗಳ ಹಿಂದೆ, ಪರಪ್ರಾಂತ್ಯದ ನಗರವಾದ ಚೆನ್ನೈಯಲ್ಲಿ, ನಿರ್ಮಾಣವಾದ ಚಲನಚಿತ್ರಗಳಿಂದ ಪ್ರಾರಂಭವಾಯಿತು ಕನ್ನಡ ಚಿತ್ರರಂಗದ ಪಯಣ. ಭಾರತಕ್ಕೆ ಸ್ವತಂತ್ರ ಬರುವವರೆಗೂ, ಚೆನ್ನೈ ನಗರವೇ ಕನ್ನಡ ಚಿತ್ರ ನಿರ್ಮಾಣದ ಪ್ರಮುಖ ಕೇಂದ್ರವಾಗಿತ್ತು. ಹೀಗೆ, ಪರಭಾಷೆಯ, ಹಂಗಿನಲ್ಲೇ ಆರಂಭವಾದ ಕನ್ನಡ ಚಿತ್ರಗಳು, ಇಂದಿಗೂ, ಆ ಪ್ರಭಾವಗಳನ್ನು ಸಂಪೂರ್ಣವಾಗಿ ಕಳಚಿಕೊಳ್ಳಲು ಸಾಧ್ಯವಾಗಿಲ್ಲ. ಕೆಲವೇ ಕೆಲವು , ಪ್ರಬುದ್ಧ ನಿರ್ದೇಶಕರನ್ನು ಬಿಟ್ಟರೆ, ಒಟ್ಟಾರೆ ಕನ್ನಡ ಚಿತ್ರರಂಗ ಇನ್ನೂ ಶೈಶವಾವಸ್ಥೆಯಲ್ಲೇ ಇದೆ.

ಗಲ್ಲಾಪೆಟ್ಟಿಗೆಯಲ್ಲಿ ರಾರಾಜಿಸುವ, ಪರಭಾಷೆಗಳಿಂದ ಭಟ್ಟಿ ಇಳಿಸಿದ ರಿಮೇಕ್ ಚಿತ್ರಗಳು, ಪ್ರಯೋಗಶೀಲತೆಯಿಲ್ಲದ, ಜಾಳು ನಿರೂಪಣೆಯ ಚಿತ್ರಗಳು, ಕನ್ನಡ ಸಂಸ್ಕೃತಿಯ ಕಿಂಚಿತ್ ಗಂಧವೂ ಇಲ್ಲದ ಚಿತ್ರಗಳು... ಒಟ್ಟಾರೆಯಾಗಿ, ಕನ್ನಡ ಚಿತ್ರರಂಗ ಕನ್ನಡ ಸಂಸ್ಕೃತಿಯ ಭಾಗವಾಗುವಲ್ಲಿ ಸಂಪೂರ್ಣವಾಗಿ ಎಡವಿದೆ.

ತೆರೆಯ ಮೇಲಿನ ಪಾತ್ರಗಳು, ಉಲಿಯುವ ನುಡಿ ಕನ್ನಡವಾದಾಕ್ಷಣ ಅದು ಕನ್ನಡ ಚಿತ್ರವೆನಿಸಿಕೊಳ್ಳಲಾರದು. ಅದು ನಮ್ಮ ಜೀವನವಿಧಾನದ ಪ್ರತಿಬಿಂಬವಾಗಿರಬೇಕು, ಆಗಲೇ ಅದು ಜನರಿಗೆ ಹತ್ತಿರವಾಗಲಿಕ್ಕೆ ಸಾಧ್ಯ.

ಇದಕ್ಕೆ, ಮೂಲಭೂತ ಕಾರಣವೇ ಬೇರೊಂದಿದೆ. ಅದೇನೆಂದರೆ, ಒಟ್ಟಾರೆಯಾಗಿ, ಕನ್ನಡ ಜನಾಂಗ ಒಂದು ದನಿಯಲ್ಲಿ ಮಾತನಾಡುವ, ಒಂದು ಸಮುದಾಯವಾಗಿ ಗುರುತಿಸಿಕೊಳ್ಳುವಲ್ಲಿ, ಇತರ ಭಾಷಾ ಸಮುದಾಯಗಳ ತುಲನೆಯಲ್ಲಿ, ಬಹಳ ಬಹಳ ಹಿಂದಿದೆ, ಎನ್ನುವುದಕ್ಕಿಂತಲೂ ಸೋತಿದೆ ಎನ್ನುವುದೇ ಸತ್ಯಕ್ಕೆ ಹೆಚ್ಚು ಹತ್ತಿರವಾಗುವ ಮಾತಾದೀತು. ೫೦ ವರ್ಷಗಳಾದರೂ, ಇಂದಿಗೂ ಅಸ್ತಿತ್ಷದಲ್ಲಿರುವ, ಪ್ರಾಂತೀಯತೆ, ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ಕಂಟಕಪ್ರಾಯವಾಗಿದೆ. ಪ್ರಾದೇಶಿಕ ಅಸಮಾನತೆಯ ಬಗೆಗೆ ಮಾತನಾಡದಿದ್ದರೇ ಒಳಿತು.

ಆಗಾಗ ಮನಸ್ಸಿನೊಳಗೆ, ಸುಳಿಯುತ್ತ, ಸಂಕಟಕ್ಕೆ ಕಾರಣವಾಗುವ ಈ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಲು ಒಂದು ಕಾರಣವಿದೆ.
ವಾರದ ಹಿಂದಷ್ಟೇ (೧೫, ಜೂನ್, ೨೦೦೭) ರಂದು ಅದ್ಧೂರಿ ಪ್ರಚಾರದೊಂದಿಗೆ ಇಡೀ ದೇಶದ ಪ್ರಮುಖ ಮಹಾನಗರಗಳೂ ಸೇರಿದಂತೆ, ಪ್ರಪಂಚದಾದ್ಯಂತ ಬಿಡುಗಡೆಯಾದ, ತಮಿಳು ಚಿತ್ರ ’ಶಿವಾಜಿ’, ತದನಂತರದ ವಿದ್ಯಮಾನಗಳು.

ಭಾಷಾ ಮತ್ಸರ, ಸಿನಿಕತನವೆಂದು ತೋರಿದರೂ, ನಿಜವಾಗಿಯೂ ನನ್ನ ಸಂಕಟಕ್ಕೆ ಕಾರಣಗಳನ್ನು ಮುಂದಿಟ್ಟರೆ ಹೆಚ್ಚು ಸೂಕ್ತ.
ಶಿವಾಜಿ ಚಿತ್ರ ಬಿಡುಗಡೆಯಾಗಿದ್ದು, ಒಂದೆರಡು ಮಹಾನಗರಗಳಲ್ಲಿ ಮಾತ್ರವಲ್ಲ, ಪುಣೆ, ಸೂರತ್, ದೆಹಲಿ, ಬರೋಡಾ, ಸೊಲ್ಲಾಪುರದಂಥ ತಮಿಳು ಭಾಷೆಯ ಗಂಧ ಗಾಳಿಯೂ ಇಲ್ಲದಂಥ ನಗರಗಳಲ್ಲಿ. ಪ್ರತಿಯಾಗಿ, ಪುಣೆ, ಸೊಲ್ಲಾಪುರ ನಗರಗಳಲ್ಲಿ, ಕನ್ನಡಿಗರು ಜನಸಂಖ್ಯೆಯ ಪ್ರಮುಖ ಭಾಗವಾಗಿದ್ದಾರೆ.

ಹಾಗಿದ್ದರೆ, ಕನ್ನಡಿಗರು ತಮಿಳು ಚಿತ್ರಗಳನ್ನು ಪ್ರೋತ್ಸಾಹಿಸುತ್ತಿದ್ದಾರೆಯೇ..? ಹೌದೆಂಬುದು ನನ್ನ ಅನಿಸಿಕೆ. ಪುಣೆಯಲ್ಲಿ, ಶಿವಾಜಿಯ ಪ್ರಥಮ ದಿನದ ಪ್ರಥಮ ಪ್ರದರ್ಶನವನ್ನು, ಮಲ್ಟಿಪ್ಲೆಕ್ಸಿನಲ್ಲಿ ನೋಡುವ ನನ್ನ ಕನ್ನಡಿಗ ರೂಂ ಮೇಟ್ ಗಳಿಂದ ಹಿಡಿದು, ೩ ಕೋಟಿ ರೂಪಾಯಿಗಳಿಗೆ, ಈ ಚಿತ್ರದ ಕರ್ನಾಟಕ ಪ್ರದರ್ಶನದ ಹಕ್ಕುಗಳನ್ನು ಪಡೆದ, ಕನ್ನಡದ ಚಲನಚಿತ್ರ ವಾಣಿಜ್ಯ ಮಂಡಳದ ಅಧ್ಯಕ್ಷರಾಗಿದ್ದ (ಇವರು ಈಗಲೂ ಅಧ್ಯಕ್ಷ ಪದವಿಯಲ್ಲಿದ್ದಾರೋ ಗೊತ್ತಿಲ್ಲ) ಮಹಾಶಯರವರೆಗೂ ಕನ್ನಡ-ತಮಿಳರ ದಂಡು ದಿನೇ ದಿನೇ ವೃದ್ಧಿಸುತ್ತಿದೆ. ಎಷ್ಟೆಂದರೆ, ಇಂದು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ತಮಿಳು, ತೆಲುಗು ಬಾರದಿದ್ದಲ್ಲಿ, ಆ ವ್ಯಕ್ತಿಯನ್ನು ಅನ್ಯಗ್ರಹ ಜೀವಿಯಂತೆ ನೋಡುವ ಕಾಲ ಬಂದೊದಗಿದೆ.

ಇನ್ನಾವುದೇ ಭಾಷಾ ಸಮುದಾಯದಲ್ಲೂ ಕಾಣಸಿಗದ ಈ ಉದಾರ ಮನೋಭಾವ ಕನ್ನಡಿಗರಿಗೆ ಪ್ರಾಪ್ತವಾಗಿದ್ದು ಹೇಗೇ ಇದ್ದರೂ, ಅದನ್ನು ಶಪಿಸುವ ಕಾಲ ಬಂದಿದೆ. ನಮ್ಮ ಉದಾರತೆಯೇ, ನಮ್ಮ ಸಂಸ್ಕೃತಿಯ ಬೆಳವಣಿಗೆಗೆ, ಉರುಳಾದರೆ, ಅಂತಹ ಉದಾರತೆಗೆ ಅರ್ಥವೇನು..?
ಇಷ್ಟಾಗ್ಯೂ, ಭಾಷಾಭಿಮಾನವು ಅಂಧಾಭಿಮಾನವಾಗಿ ಮಾರ್ಪಾಡಾಗುವ, ತಮಿಳುನಾಡಿನಂಥಹ ಪರಿಸ್ಥಿತಿ ನಮ್ಮಲ್ಲಿಲ್ಲ.. ಹೀಗಿದ್ದರೂ, ನಾವುಗಳು, ಅಭಿಮಾನಿಗಳು, ಸ್ವಾಭಿಮಾನಿಗಳಾಗಲೂ ಏಕೆ ಹೆದರುತ್ತೇವೆ ?

ದುರಭಿಮಾನಿಗಳೆಂದು ಜರೆಯಲ್ಪಟ್ಟು, ಅವಕಾಶಗಳಿಂದ ವಂಚಿತರಾಗುವ, ಪೂರ್ವಾಗ್ರಹ ಪೀಡಿತ ಆಲೋಚನೆಗಳಿಂದಯಿಂದ ಕನ್ನಡ ಮನಸ್ಸುಗಳು ನರಳುತ್ತಿವೆ ಎಂಬುದು ನನ್ನ ಗುಮಾನಿ.. ಈ ರೋಗಕ್ಕೆ ಸೂಕ್ತ ಮದ್ದು ತಕ್ಷಣಕ್ಕೆ ಕಾಣುತ್ತಿಲ್ಲ.

ಇಷ್ಟೆಲ್ಲ ವಿಶ್ವಾಸ ಕುಂದಿಸುವ ಬೆಳವಣಿಗೆಗಳ ನಡುವೆಯೂ, ಅಸೆಯನ್ನು ಜೀವಂತವಾಗಿಡುವ, ಸಣ್ಣ ವರ್ತಮಾನವೊಂದಿದೆ. ಅದೇನೆಂದರೆ, ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ, ಅತ್ಯಂತ ಯಶಸ್ವಿ ಕನ್ನಡ ಚಿತ್ರವೆನ್ನಿಸಿಕೊಂಡಿರುವ, ’ಮುಂಗಾರು ಮಳೆ ’ , ೧೧ ಜೂನ್, ೨೦೦೭ ರಂದು ಪುಣೆಯ, ಅತ್ಯಂತ ಪ್ರಮುಖವೆನಿಸಿದ, ಈ-ಸ್ಕ್ವೇರ್‍ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡು, ಜನಭರಿತ ಯಶಸ್ವಿ ಪ್ರದರ್ಶನದ ನಂತರ, ಮೂರನೇ ವಾರದಲ್ಲಿ, ಪುಣೆಯ ೬ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇವುಗಳಲ್ಲಿ ನಾಲ್ಕು ಮಲ್ಟಿಪ್ಲೆಕ್ಸ್ ಗಳು!!!

ಇನ್ನು ಮುಂದಿನ ದಿನಗಳಲ್ಲಿ ಇದೇ ರೀತಿಯ ಯಶಸ್ಸು, ಭಾರತದ ಇತರ ನಗರಗಳಲ್ಲೂ, ಕನ್ನಡ ಚಿತ್ರಗಳಿಗೆ ಲಭಿಸೀತು ಎಂಬ ಪುಟ್ಟ ಆಶಾವಾದವನ್ನು ಪ್ರಕಟಿಸುವುದೇ ಈ ಲೇಖನಕ್ಕೆ ಮೂಲ ಪ್ರೇರಣೆ.

ಮೇಲೆ ಪ್ರಸ್ತಾಪಿಸಿರುವ, ಕೆಲ ವಿಚಾರಗಳ ಬಗೆಗೆ, ಆರೋಗ್ಯಕರ ಪ್ರತಿಕ್ರಿಯೆಗಳು ಬಂದರೆ, ಈ ಚರ್ಚೆಯನ್ನು ಆರಂಭಿಸಿದ ಉದ್ದೇಶವೂ ಸಫಲವಾದೀತು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]೩ ಕೋಟಿ ರೂಪಾಯಿಗಳಿಗೆ, ಈ ಚಿತ್ರದ ಕರ್ನಾಟಕ ಪ್ರದರ್ಶನದ ಹಕ್ಕುಗಳನ್ನು ಪಡೆದ, ಕನ್ನಡದ ಚಲನಚಿತ್ರ ವಾಣಿಜ್ಯ ಮಂಡಳದ ಅಧ್ಯಕ್ಷರಾಗಿದ್ದ (ಇವರು ಈಗಲೂ ಅಧ್ಯಕ್ಷ ಪದವಿಯಲ್ಲಿದ್ದಾರೋ ಗೊತ್ತಿಲ್ಲ) ಮಹಾಶಯರವರೆಗೂ[/quote]

ಇಂತವರು ದಿಟವಾಗಿ ಮೂರು ಬಿಟ್ಟು ನಿಂತವರು. 'ಶಿವಾಜಿ' ಸಿನಿಮಾ ಡೈರೆಕ್ಟರ್ ಶಂಕರ್. ಕನ್ನಡದ ಚರಿತೆಯ ಪ್ರಮುಖ ನಾಯಕರನ್ನು ನಗೆಪಾಡು ಮಾಡಲೆಂದೇ ತಯಾರು ಮಾಡಿದ 'ಇಂಸೆ ಅರಸನ್' ಎಂಬ ಸಿನಿಮಾ ಮಾಡಿದವ. ಅವನ ಈ ಸಿನಿಮಾವನ್ನು ಕನ್ನಡಿಗರು ಒಕ್ಕೊರಲಿನಿಂದ ತಡೆಯಬೇಕಿತ್ತು.

ಕನ್ನಡ ಚಿತ್ರರಂಗದ ಎಲ್ಲರೂ ಇದನ್ನು ಮಾಡಬೇಕಿತ್ತು. ಬಿಟ್ಟು ಅವರೇ ಪ್ರೋಮೋಟ್ ಮಾಡೋದಾ? ಈ ಸಿನಿಮಾವನ್ನು ಹೊಗಳಿ ಹೊಗಳಿ ಬರೆಯುತ್ತಿರುವ ಕನ್ನಡ ಪೇಪರಿನವರಿಗೆ ಆ ಎಚ್ಚರ ಇದೆಯಾ? ಇದಕ್ಕೆ ವಿಜಯ-ಕರ್ನಾಟಕ(ಸಮಸ್ತ ಕನ್ನಡಿಗರ ಹೆಮ್ಮೆ ಅಂತ ಬರೆದುಕೊಳ್ಳುವ ಪೇಪರ್ ಇದು), ಹಾಯ್ ಬೆಂಗಳೂರು ಇವ್ಯಾವು ಹೊರತಾಗಿಲ್ಲ.

ಮನರಂಜನೆ ಆತ್ಮಾಭಿಮಾನಕ್ಕಿಂತ ಹೆಚ್ಚಾಯಿತೆ?? ಚಿ!! ನಾಚಿಕೆಕೇಡು.

ಕನ್ನಡ ಚಿತ್ರಗಳಿಗೆ ತಮ್ಮದೇ ಆದ ಅನನ್ಯತೆ ಇದೆಯೇ? ಇವನ್ನು ಟಿ.ವಿ.ಯಲ್ಲಿ ನೋಡುವಾಗ ಮ್ಯೂಟ್ ಮಾಡಿಬಿಟ್ಟರೆ ಯಾವ ಭಾಷೆಯದ್ದೆಂದು ಊಹಿಸುವುದು ಕಷ್ಟ. ಆದರೆ ಯಾವುದೇ ಮಲಯಾಳಂ, ತಮಿಳು ಸಿನಿಮಾಗಳನ್ನು ನೋಡಿ. ಅದೆಷ್ಟೇ ಕಮರ್ಷಿಯಲ್ ಆಗಿದ್ದರೂ ಅದರಲ್ಲಿ ಆ ನೆಲದ, ಆ ಭಾಷೆಯ ಸಂಸ್ಕೃತಿ ಸ್ವಲ್ಪವಾದರೂ ಇರುತ್ತದೆ. ಕನ್ನಡ ಸಿನಿಮಾ ಕನಿಷ್ಠ ಕನ್ನಡದ ಬೇರೆ ಬೇರೆ ಡಯಲೆಕ್ಟುಗಳನ್ನಾದರೂ ಬಳಸುತ್ತದೆಯೇ? ಇಲ್ಲ ಅದೇ ಹಳೇ ಮೈಸೂರು ಕನ್ನಡ. ಉಳಿದ ಭಾಗದ ಕನ್ನಡಗಳೆಲ್ಲವೂ ತಮಾಷೆಗೆ ಇಲ್ಲವೇ ವಿಲನ್ ಗೆ.

ಇನ್ನು ಈ ಚಿತ್ರಗಳು ಬಳಸುವ ಹಳೇ ಮೈಸೂರು ಕನ್ನಡವಾದರೂ ಯಾವುದು? ಇತ್ತೀಚೆಗೆ ನಗರಗಳ ಸ್ಲ್ಯಾಂಗ್ ಬಳಕೆಯಾಗುತ್ತಿದೆ. ಇಲ್ಲದಿದ್ದರೆ ಅದೇ ಬ್ರಾಹ್ಮಿನಿಕಲ್ ಟರ್ಮಿನಾಲಜಿಯ ಭಾಷೆ. ಒಂದು ಸಂಸ್ಕೃತಿ. ದಲಿತ ಬಂಡಾಯದ ಲೇಖಕರು ಬರದೇ ಹೋಗಿದ್ದರೆ ಕನ್ನಡ ಸಾಹಿತ್ಯ ನಿಜವಾದ ಅರ್ಥದಲ್ಲಿ ಬೂಸಾ ಆಗಿರುತ್ತಿತ್ತು. ಈಗ ಸಿನಿಮಾ ಮಾತ್ರ ಬೂಸಾ ಆಗಿದೆ.
ರಮೇಶ್ ಸಮಗಾರ

""ದಲಿತ ಬಂಡಾಯದ ಲೇಖಕರು ಬರದೇ ಹೋಗಿದ್ದರೆ ಕನ್ನಡ ಸಾಹಿತ್ಯ ನಿಜವಾದ ಅರ್ಥದಲ್ಲಿ ಬೂಸಾ ಆಗಿರುತ್ತಿತ್ತು""
ಶತಮಾನದ ಸಂದೇಶ. ಕಣ್ತೆರೆಸಿದ್ದಕ್ಕೆ ಚಿರ ಋಣಿ....ಇಷ್ಟು ದಿನ ತುಂಬಾ ಬೂಸಾ ಓದಿದಕ್ಕೆ ದಿಗಿಲಾಗ್ತ ಇದೆ.

ಸಂದೀಪ್ ಐತಾಳ