' ಸ್ಯಾಂಟಾಕ್ಲಾರಾ’ ಊರಿನ ಸೆಂಟ್ರೆಲ್ ಪಾರ್ಕ್ ನ, ಫುಟ್ಬಾಲ್ ಗ್ರೌಂಡ್ ನಲ್ಲಿ ಕಳೆದ ಸಂತಸದ ಕ್ಷಣಗಳು !

ಇಲ್ಲಿ ಬಂದುಕೂತು ಕಳೆದ ಕ್ಷಣಗಳು ಮರೆಯಲಾರದ ಅನುಭವವನ್ನು ಮತ್ತೆ ನಮ್ಮ ಮನದಾಳದಿಂದ ಹೊರತೆಗೆದವು ! ನಮ್ಮ ಮಗನಿಗೆ ಮುಂಬೈನ , ದಾದರ್ ನ ಆಂಟೋನಿಯೊ ಡ’ಸಿಲ್ವ ಪ್ರಾಥಮಿಕಶಾಲೆಯಲ್ಲಿ ಓದಿದ ದಿನಗಳ ನೆನಪಿನಸುರುಳಿಗಳು ಬಂದು ಗೋಳುಹೊಯ್ಕೊಂಡಿದ್ದು ಇಲ್ಲೇ ! ನಾನು ಅವರ ಶಾಲೆಯ ಸ್ಪೋರ್ಟ್ಸ್ ಟೀಚರ್, ಜಸ್ವಂತ್ ಸಿಂಗ್ ರವರಿಗೆ ಹೇಳಿ, ನಮ್ಮ ಮಗನನ್ನು ಆಟದಮೈದಾನದಿಂದ ಬಿಡಿಸಿಕೊಂಡು ಕರೆದುಕೊಂಡು ಹೋಗಿದ್ದೆ. ಶಾಲೆಯ ಪರೀಕ್ಷೆಯಲ್ಲಿ, ಆಬಾರಿ ಕಡಿಮೆ ಅಂಕಗಳು ಬಂದಿದ್ದರಿಂದ ಈ ಶಿಕ್ಷೆ ಕೊಡಬೇಕಾಗಿತ್ತು. ಆಟದಲ್ಲೇನೋ ಅವನು ಶಾಲೆಯನ್ನೇ ಪ್ರತಿನಿಧಿಸಿದ್ದ. ಆದರೆ ನಾನು, ನನ್ನ ಹೆಂಡತಿ, ಈ ಕಟು-ನಿರ್ಧಾರ ತೆಗೆದುಕೊಳ್ಳದೆ ವಿಧಿಯಿರಲಿಲ್ಲ. ಚಿಕ್ಕಹುಡುಗನ ಮನಸ್ಸನ್ನು ನೋಯಿಸಿದ ಬೇನೆ, ನಮ್ಮ ಮನಸ್ಸಿನಲ್ಲಿ ಹೆಪ್ಪುಗಟ್ಟಿತ್ತು.

ಹಾ ! ಫುಟ್ ಬಾಲ್ ಲೈನ್ ನಿಂದ ಹೊರಗೆ ಹಲವುಬಾರಿಬಂತು. ನಾವು ಮೂ‍ವರೂ ಒಂದೊಂದುಬಾರಿ, ಬಾಲ್ ತಡೆದು ಆಟಗಾರರಕಡೆ, ಎಸೆದೆವು. ಚಿಕ್ಕಮಕ್ಕಳು ಅವರ ಅಣ್ಣಂದಿರಿಗೆ ಪ್ರಾತ್ಸಾಹಕೊಡಲು ಕೂಗಿದ ಧ್ವನಿ ಮುಗಿಲಿಗೇರಿತ್ತು. ನಾವೂ ಆ ಹುಚ್ಚು-ಹೊಳೆಯಲ್ಲಿ ಮಿಂದು ಕೂಗಿದ್ದೇ ಕೂಗಿದ್ದು. ಮಕ್ಕಳ ಪೋಷಕರು, ತಂದೆ-ತಾಯಂದಿರು, ಗೆಳೆಯರು, ಪುಟ್ಟಮಕ್ಕಳು ಎಲ್ಲರಿಗೂ ಸಂಭ್ರಮವೋ ಸಂಭ್ರಮ !

-ಚಿತ್ರ ನಾನೇ ತೆಗೆದದ್ದು.