ಭಾರತಕ್ಕೆ ವಾಪಸ್ ಬರುವಾಗ, ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಿಂದ, ಮುಂಬೈನಗರಕ್ಕೆ ಆಗಮಿಸಿದೆವು !

ನಾವು ಭಾರತವನ್ನು ಜುಲೈ, ೪ ರಂದು ಬಿಟ್ಟು, ಮುಂಬೈನ ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾಂಟಿನೆಂಟಲ್ ಏರ್ಲೈನ್ಸ್ ನಲ್ಲಿ ಯಾನಮಾಡಿ ೧೬/೧/೨ ಗಂಟೆಯನಂತರ ನ್ಯೂವಾರ್ಕ್ ತಲುಪಿದೆವು. ಜುಲೈ ೪ ಅಮೆರಿಕದ ಸ್ವಾತಂತ್ರ್ಯದಿನೋತ್ಸವದ ದಿನ ! ಮತ್ತೆ ಅಲ್ಲಿಂದ ೯ ಗಂಟೆಯ ವಿಮಾನಯಾನದ ಬಳಿಕ, ’ಲಾಸ್ ಎಂಜಲೀಸ್’ ಏರ್ಪೋರ್ಟ್ ತಲುಪಿದೆವು. ಅಲ್ಲಿಂದದ ನಮ್ಮ ಮಗನ ಜೊತೆ, ೧ ಗಂಟೆಯ ಡ್ರವ್ ನಂತರ, ಕ್ಯಾಲಿಫೋರ್ನಿಯದ ’ಆರೇಂಜ್ ಕೌಂಟಿ’ ಯ, ಅವನ ಮನೆಯನ್ನು ಸೇರಿದೆವು. ಅಲ್ಲಿ ಇದ್ದದ್ದು ಎರಡೂವರೆ ತಿಂಗಳು. ಅದರಲ್ಲಿ, ಕ್ಯಾಲಿಫೋರ್ನಿಯದಲ್ಲಿ ಸುಮಾರು ೨೮ ದಿನ, ಕೊಲಂಬಿಯದಲ್ಲಿ ೧೮ ದಿನ, ಚಿಕಾಗೋನಲ್ಲಿ ೫ ದಿನ, ಉಳಿದ ದಿನಗಳನ್ನು ಇಲಿನಾಯ್, ಸ್ಯಾನ್ ಫ್ರಾನ್ಸಿಸ್ಕೊ, ಸಿಯಾಟಲ್, ಕಾಸ್ತಮೆಸ, ಸಾಂಟಕ್ಲಾರ ಗಳಲ್ಲಿ ಕಳೆದೆವು. ಅಕ್ಕ ವಿಶ್ವಕನ್ನಡ ಸಮ್ಮೇಳನದ ನಮ್ಮ ಸವಿ-ನೆನಪುಗಳು ಇನ್ನೂ ಹಸಿರಾಗಿವೆ.

ಈ ಸಮಯದಲ್ಲಿ ಎಷ್ಟ್ಟುಸಾಧ್ಯವೋ ಅಷ್ಟು ಸ್ಥಳಗಳನ್ನು ನಮ್ಮ ಮಗನ ಕೆಲಸದ ಸಮಯದಲ್ಲಿ ಸಿಕ್ಕ ಬಿಡುವಿನ ವೇಳೆಯದಿನಗಳಲ್ಲಿ ಮಾತ್ರ ನೋಡಿ ಆನಂದಿಸಿದೆವು. ಅವುಗಳಲ್ಲಿ ಸಮುದ್ರತಟಗಳು, ಮಾಲ್ ಗಳು, ಕೆಲವು ಫುಟ್ಬಾಲ್ ಸ್ಟೇಡಿಯಮ್ ಗಳು, ನದಿತೀರಗಳು, ಉತ್ತಮ ರೆಸ್ಟೊರೆಂಟ್ ಗಳು ಸೇರಿವೆ. ಕೆಲವನ್ನು ಸಂಪದೀಯರ ಮಧ್ಯೆ ಹಂಚಿಕೊಂಡಿದ್ದೇನೆ. ಕೆಲವು ನಗರಗಳಾದ ಸಿಯಾಟಲ್, ಸ್ಯಾನ್ ಫ್ರಾನ್ಸಿಸ್ಕೊ, ಗಳ ಬಗ್ಗೆ ಚಿತ್ರಗಳನ್ನು ಪಟ್ಟಿಮಾಡಿ ತೋರಿಸಿದ್ದೇನೆ.

ಡಿಸ್ನಿಲ್ಯಾಂಡ್ ನಮಗೆ ಮುದಕೊಟ್ಟ ತಾಣಗಳಲ್ಲೊಂದು. ಕೆಲವು ಜಲಪಾತಗಳು, ಗುಹೆಗಳು, ಜಲಾಶಯಗಳನ್ನು ವಿವರಿಸಿದ್ದೇನೆ. ಚಿಕಾಗೋ ನಗರದ ಬಗ್ಗೆ, ಕೆಲವು ತಿಳಿದ ಮಾಹಿತಿಗಳನ್ನು ಒದಗಿಸಿದ್ದೇನೆ. ’ಅಕ್ಕಾ ವಿಶ್ವಕನ್ನಡ ಸಮ್ಮೇಳನದ ಬಗ್ಗೆ, ಹಾಗೂ ನಮ್ಮ ಕನ್ನಡಿಗರ ಸಾಧನೆಗಳ ಬಗ್ಗೆ, ಹಲವಾರು ಲೇಖನಗಳು ಮೂಡಿಬಂದಿವೆ. ಅದರಲ್ಲಿ ’ಕರ್ಣಾಟಕ ಭಾಗವತ,’ ನನ್ನನ್ನು ಸೆಳೆಯಿತು. ಅದೊಂದು ಅದ್ಭುತ ಗ್ರಂಥ. ಸಂಶೋಧನೆ, ಸಂಪಾದನೆ, ಹಾಗೂ ಸಂಪೂರ್ಣ ಗ್ರಂಥರಚನೆಯ ಕಾರ್ಯ, ಅದರ ಹಿಂದಿನ ಸುಮಾರು ಹದಿನೈದು ವರ್ಷಗಳ ನಿರಂತರಪರಿಶ್ರಮ, ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಇರುವ ಕಳಕಳಿ, ನನ್ನನ್ನು ಮೂಕನನ್ನಾಗಿ ಮಾಡಿತ್ತು.

ತಮ್ಮ ಬಿಡುವಿಲ್ಲದ ಅದ್ಯಾಪನ, ಸಂಶೋಧನೆಗಳ ವೃತ್ತಿಜೀವನದಲ್ಲಿ ಭಾಗವತಕ್ಕಾಗಿ, ಅಮೂಲ್ಯಸಮಯವನ್ನು ವಿನಿಯೋಗಿಸಿ, ಕೊನೆಯಲ್ಲಿ ಸಫಲತೆಯನ್ನು ಪಡೆದು ಕನ್ನಡಿಗರಿಗೆಲ್ಲಾ ಕಳಸಪ್ರಾಯರಾದ, ಡಾ. ಚಂದ್ರಶೇಖರ್ ನನಗೆ ಬಹುಪ್ರಿಯರಾದರು ! ಚಿಕಾಗೋ ನಗರದಲ್ಲಿ ಅವರಿಗೆ, ಸನ್ಮಾನಮಾಡಲಾಯಿತು. ಇದು ಕನ್ನಡಿಗರೆಲ್ಲಾ ಹೆಮ್ಮಪಡುವ ಸಂಗತಿ. ಇನ್ನೊಂದು ವಿಷಯ. ನನ್ನ ಅದೃಷ್ಟಕ್ಕೆ, ಅವರು ನನ್ನ ಸೋದರರೂ ಹೌದು !! ಇದು ನನ್ನ ಜೀವನದಲ್ಲಿನ ಒಂದು ಮರೆಯಲಾರದ ಘಟನೆ !

ನಮ್ಮ ಹಿರಿಯಣ್ಣನವರ ಮಗಳು, ಪಕ್ಕದ ಇಲಿನಾಯ್ ರಾಜ್ಯದ ನಾರ್ಮಲ್ ಬ್ಲೂಮಿಂಗ್ಟನ್ ನಲ್ಲಿ ಇದ್ದವಳು, ನಮ್ಮನ್ನು ಅವರ ಮನೆಗೆ ಕರೆದುಕೊಂಡುಹೋಗಿ. ಮಾಡಿದ ಆತಿಥ್ಯ, ನಮಗೆ ವಿದೇಶದಲ್ಲಿನ ಒಂದು ಹೊಸ ಅನುಭವವನ್ನು ದೊರಕಿಸಿತು. ಅವರ ಮಗಳು, ಮುದ್ದು ಗೌರಿ, ನಮ್ಮ ಕಣ್ಮಣಿಯಾಗಿದ್ದಳು. ಅವಳ ಮುಗ್ಧಮಾತುಗಳು ನಮ್ಮ ಕಿವಿಯಲ್ಲಿ ಇಂಪಾದ ಸಂಗೀತವನ್ನು ಪ್ರತಿಧ್ವನಿಸುತ್ತಿವೆ !

ಅಲ್ಲಿ ನಾವು ನೋಡಿದ ಅಮೆರಿಕದ ಟೆಲಿವಿಶನ್ ಕಾರ್ಯಕ್ರಮಗಳಲ್ಲಿ, ದ ಗ್ರೇಟ್ ಅಮೆರಿಕನ್ ವೀಡಿಯೋಸ್ ಇಷ್ಟವಾಯಿತು. ಜೆಫ್ ಡನ್ಹ್ಯಾಮ್ ರವರ ಪಪಟ್ ಶೋ, ನಮಗೆ ಅತ್ಯಂತ ಮುದನೀಡಿದ ಶೊಗಳಲ್ಲೊಂದು ! ಅದರ ಬಗ್ಗೆ ನನ್ನ ಮುಂದಿನಲೇಖನ, ಅಣಿಯಾಗುತ್ತಿದೆ. ಅಮೆರಿಕದಲ್ಲಿನ ಕೆಲವು ಸಾರ್ವಜನಿಕ ಸಂಸ್ಥೆಗಳಾದ ಪೋಸ್ಟ್ ಆಫೀಸ್, ವೃದ್ಧರದಿನದಲ್ಲಿ ಇರುವ ವ್ಯವಸ್ಥೆ, ಸಾರ್ವಜನಿಕ ಪುಸ್ತಕಸಂಗ್ರಹಾಲಯ, ಪುಟ್ಟಮಕ್ಕಳ ಕ್ರಷ್, ಅಂಗವಿಕಲರು, ವೃದ್ದರು, ಸ್ತ್ರೀಯರು, ಮಕ್ಕಳ ಬಗ್ಗೆ, ಇನ್ನೂ ಅನೇಕ ಸಂಗತಿಗಳನ್ನು ಪಟ್ಟಿಮಾಡಿ, ನಮ್ಮ ಸಂಪದೀಯರ ಜೊತೆ ಹಂಚಿಕೊಂಡಿದ್ದೇನೆ. ಹಲವಾರು ಸಹೃದಯರು ನನ್ನ ಲೇಖನಗಳಿಗೆ ಸ್ಪಂದಿಸಿ, ಒಳ್ಳೆಯಮಾತಾಡಿದ್ದಾರೆ. ಅವರಿಗೆಲ್ಲಾ ನನ್ನ ವಿನಯಪೂರ್ಣ ಪ್ರಣಾಮಗಳು.

ಅಮೆರಿಕದೇಶದ ಪಶ್ಚಿಮದ ತಟದಿಂದ ಅಂದರೆ, ಕ್ಯಾಲಿಫೋರ್ನಿಯದಿಂದ, ಹೆಚ್ಚುಕಡಿಮೆ, , ಮದ್ಯ-ಪೂರ್ವತಟದವರೆಗೆ,ಅಂದರೆ. ಚಿಕಾಗೋನಗರದ ವರೆಗೆ, ಮಾಡಿದ ಪ್ರಯಾಣ ನಮಗೆ ನಿಜಕ್ಕೂ ನೀಡಿದ ಅನುಭವ ಅವರ್ಣನೀಯವಾಗಿತ್ತು ! ಅಮೆರಿಕದಿಂದ ವಾಪಸ್ ಬರುವಾಗ, ಯೂರೋಪಿನ, ಜರ್ಮನಿಯಲ್ಲಿ, ಸ್ವಲ್ಪ ಕಾಲ ತಂಗಿದ್ದು, ಮುಂಬೈಗೆ ಹೊರಟು ಬಂದೆವು.

ಲುಫ್ತಾನ್ಝ ಏರ್ ಲೈನ್ಸ್ ನಲ್ಲಿ ಪ್ರಯಾಣಬೆಳಸಿ ಸೆಪ್ಟೆಂಬರ್, ೧೮ ರಂದು ಮುಂಬೈನಗರದ ಸಹಾರ ಏರ್ಪೋರ್ಟ್ ನಲ್ಲಿ ಇಳಿದು, ಮನೆಸೇರಿದೆವು.