ಅಗಲಿದ ಫುಟ್ಬಾಲ್ ದಂತಕತೆ -ಡೀಗೊ ಮರಡೋನಾ

ಅಗಲಿದ ಫುಟ್ಬಾಲ್ ದಂತಕತೆ -ಡೀಗೊ ಮರಡೋನಾ

೮೦-೯೦ರ ದಶಕದಲ್ಲಿ ಡೀಗೊ ಮರಡೋನಾ ಎಂದರೆ ಕ್ರೀಡಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತಿತ್ತು. ಮರಡೋನಾ ಫುಟ್ಬಾಲ್ ಆಟದಲ್ಲಿ ತೋರಿದ ಮಾಂತ್ರಿಕತೆಗೆ ಅದು ಸಾಟಿಯಾಗಿತ್ತು. ನಮಗೆ ಸಚಿನ್ ತೆಂಡೂಲ್ಕರ್ ಎಂದರೆ ಹೇಗೆ ಮೈರೋಮಾಂಚನವಾಗುತ್ತದೆಯೋ ಅದೇ ರೀತಿ, ಅರ್ಜೆಂಟೀನಾ ದೇಶದವರಿಗೆ ಮರಡೋನಾ. ಸಚಿನ್ ಹಾಗೂ ಮರಡೋನಾ ಅವರ ಜರ್ಸಿ ನಂಬರ್ ೧೦. ಮರಡೋನಾ ಅವರ ಕಾಲಿನಲ್ಲಿ ನಿಜಕ್ಕೂ ಮಾಂತ್ರಿಕತೆ ಇತ್ತು. ನೀವು ಈಗಲೂ ಯೂಟ್ಯೂಬ್ ಮೊದಲಾದ ಚಾನೆಲ್ ಗಳಲ್ಲಿ ಮರಡೋನಾ ಆಟವನ್ನು ವೀಕ್ಷಿಸಿದರೆ ಈ ವಿಷಯ ನಿಮ್ಮ ಗಮನಕ್ಕೆ ಬಂದೇ ಬರುತ್ತದೆ. ಫುಟ್ಬಾಲ್ ಚೆಂಡಿನ ಮೇಲೆ ಅವರಿಗೆ ಇದ್ದ ಹಿಡಿತ, ವಿರೋಧಿ ತಂಡದ ಆಟಗಾರರನ್ನು ತಪ್ಪಿಸಿ ಗೋಲ್ ಹೊಡೆಯುತ್ತಿದ್ದ ರೀತಿ ಎಲ್ಲರನ್ನೂ ಮಂತ್ರಮುಗ್ಧವನ್ನಾಗಿಸುತ್ತದೆ. 

ಡೀಗೋ ಅರ್ಮಾಂಡೋ ಮರಡೋನಾ ಜನಿಸಿದ್ದು ಅಕ್ಟೋಬರ್ ೩೦, ೧೯೬೦ರಲ್ಲಿ. ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ಬಡ ಕುಟುಂಬವೊಂದರಲ್ಲಿ ೮ನೇ ಮಗುವಾಗಿ ಜನಿಸಿದರು. ಮರಡೋನಾ ಅವರಿಗೆ ಮೂರು ವರ್ಷವಿದ್ದಾಗ ಅವರ ತಂದೆ ಆಡಲು ಕೊಟ್ಟ ಪುಟ್ಬಾಲ್ ಉಡುಗೊರೆ ಅವರ ಭವಿಷ್ಯವನ್ನೇ ಬದಲಾಯಿಸಬಹುದು ಎಂದು ಆಗ ಯಾರೂ ಯೋಚಿಸಿರಲಿಕ್ಕಿಲ್ಲ. ಬಾಲ್ಯದಲ್ಲೇ ಪ್ರತಿಭಾಶಾಲಿಯಾಗಿದ್ದ ಮರಡೋನಾ ೮ನೇ ವರ್ಷದ ಪ್ರಾಯದಲ್ಲೇ ಫುಟ್ಬಾಲ್ ಆಡುವುದರಲ್ಲಿ ಸಾಕಷ್ಟು ಪರಿಣತಿಯನ್ನು ಪಡೆದಿದ್ದರು. ಇದನ್ನು ಗಮನಿಸಿದ ಎಸ್ಟೆಲ್ಲಾ ರೋಜಾ ಕ್ಲಬ್ ಅವರಿಗೆ ವಿಶೇಷ ತರಭೇತಿ ನೀಡಿತು. ನಂತರ ೧೯೭೬ರಿಂದ ೮೧ರವರೆಗೆ ಮರಡೋನಾ ಆರ್ಜೆಂಟಿನೋಸ್ ಜ್ಯೂನಿಯರ್ ತಂಡದ ಪರವಾಗಿ ಆಡಿದರು. ಆ ಸಮಯದಲ್ಲಿ ಅವರು ೧೬೭ ಪಂದ್ಯಗಳನ್ನು ಆಡಿ ೧೧೫ ಗೋಲ್ ದಾಖಲಿಸಿದ್ದರು. ಫುಟ್ಬಾಲ್ ಆಟದಲ್ಲಿ ಆಗುವ ಗೋಲ್ ಗಳ ಸಂಖ್ಯೆ ತುಂಬಾನೇ ಕಮ್ಮಿ. ಬಲಿಷ್ಟ ಎರಡು ತಂಡಗಳು ಆಡುತ್ತಿದ್ದರೆ ಗೋಲ್ ಆಗುವುದೇ ಇಲ್ಲ. ಆದರೆ ಎಲ್ಲರ ಕಣ್ಣು ತಪ್ಪಿಸಿ ಗೋಲ್ ಹೊಡೆಯುವ ಕಲೆ ಮರಡೋನಾಗೆ ಬಾಲ್ಯದಲ್ಲೇ ಸಿದ್ಧಿಸಿತ್ತು. ಅವರ ಈ ಪ್ರತಿಭೆಯಿಂದ ಅವರು ಆ ಸಮಯಕ್ಕೇ ನಾಲ್ಕು ದಶಲಕ್ಷ ಡಾಲರ್ ಗಳಿಗೆ ಜೋಕಾ ಜ್ಯೂನಿಯರ್ ತಂಡಕ್ಕೆ ವರ್ಗಾವಣೆಗೊಳ್ಳುತ್ತಾರೆ. 

೧೯೮೨ರ ವಿಶ್ವ ಕಪ್ ನಂತರ ಅವರು ಸ್ಪೇನ್ ನ ಬಾರ್ಸಿಲೋನಾ ಕ್ಲಬ್ ಗೆ ವಲಸೆ ಹೋಗುತ್ತಾರೆ. ಅವರ ಆಟಕ್ಕೆ ಆಗ ಕೊಟ್ಟ ಸಂಭಾವನೆ ೭.೬ ದಶಲಕ್ಷ ಡಾಲರ್. ಇದು ಆಗಿನ ಕಾಲಕ್ಕೆ ದಾಖಲೆಯ ಮೊತ್ತವಾಗಿತ್ತು. ೧೯೮೩ರಲ್ಲಿ ಮರಡೋನಾ ಆಟದ ಕಾರಣ ಬಾರ್ಸಿಲೋನಾ ತಂಡ ಕೋಪಾ ಡೆಲ್ ರೇ ಕಪ್ ಮತ್ತು ಸ್ಪ್ಯಾನಿಷ್ ಸೂಪರ್ ಕಪ್ ಗೆದ್ದುಕೊಳ್ಳುತ್ತದೆ. ಬಾರ್ಸಿಲೋನಾ - ರಿಯಲ್ ಮ್ಯಾಡ್ರಿಡ್ ತಂಡಗಳ ನಡುವಿನ ಪಂದ್ಯದಲ್ಲಿ ಮರಡೋನಾ ಆಟವನ್ನು ಎದುರಾಳಿ ತಂಡದ ಸದಸ್ಯರೂ ಪ್ರಶಂಸೆ ಮಾಡಿದ್ದರು. ಆ ರೀತಿಯಾಗಿತ್ತು ಅವರ ಆಟ.

ಮರಡೋನಾ ಅವರ ನಿಜವಾದ ಪ್ರತಿಭೆಯ ಅನಾವರಣವಾದದ್ದು ೧೯೮೬ರ ಫುಟ್ಬಾಲ್ ವಿಶ್ವಕಪ್ ಪಂದ್ಯಗಳಲ್ಲಿ. ಆಗ ಮರಡೋನಾ ಅವರೇ ಅರ್ಜೆಂಟೀನಾ ತಂಡದ ನಾಯಕರಾಗಿದ್ದು ವಿಶೇಷ. ಆ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ನಲ್ಲಿ ಅರ್ಜೆಂಟೀನಾ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಆ ಪಂದ್ಯದಲ್ಲಿ ವಿವಾದಾಸ್ಪದವಾದ ‘ಹ್ಯಾಂಡ್ ಬಾಲ್' ಪ್ರಕರಣ ನಡೆಯಿತು. ಮರಡೋನಾ ಆ ಪಂದ್ಯದಲ್ಲಿ ಗೋಲ್ ಬಾರಿಸುವ ಯತ್ನದಲ್ಲಿ ತನ್ನ ಕೈಯನ್ನು ಬಾಲ್ ಗೆ ತಾಗಿಸಿ ಬಿಡುತ್ತಾರೆ ಮತ್ತು ಅದು ಗೋಲ್ ಆಗುತ್ತದೆ. ತೀರ್ಪುಗಾರರು ಅದನ್ನು ಗಮನಿಸದೇ ಗೋಲ್ ನೀಡುತ್ತಾರೆ. ಟಿವಿ ರೀಪ್ಲೇಗಳಲ್ಲಿ ಬಾಲ್ ಮರಡೋನಾ ಕೈ ತಾಗಿತ್ತು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಮರಡೋನಾ ಅವರೂ ಈ ಬಗ್ಗೆ ಸ್ಪಷ್ಟೀಕರಣ ನೀಡಲು ಹೋಗುವುದಿಲ್ಲ.  ಆದರೆ ಅದಾದ ಕೆಲವೇ ನಿಮಿಷಗಳಲ್ಲಿ ಒಂದು ಅದ್ಭುತವಾದ ಆಟದಿಂದ ಮರಡೊನಾ ಮತ್ತೊಂದು ಗೋಲ್ ಹೊಡೆಯಲು ಸಫಲರಾಗುತ್ತಾರೆ. ಇದರಿಂದ ಅರ್ಜೆಂಟೀನಾ ಸೆಮಿ ಫೈನಲ್ ತಲುಪುತ್ತದೆ. ಇಂಗ್ಲೆಂಡ್ ನ ಚಕ್ರವ್ಯೂಹವನ್ನು ಬೇಧಿಸಿದ ಮರಡೋನಾ ಏಕಾಂಗಿಯಾಗಿ ೫೫ ಮೀ ದೂರವನ್ನು ಕ್ರಮಿಸಿ, ಕೇವಲ ಹತ್ತು ಸೆಕೆಂಡ್ ನಲ್ಲಿ ಮಾಂತ್ರಿಕವಾದ ಗೋಲನ್ನು ಹೊಡೆಯುತ್ತಾರೆ. ಇದು ‘ಶತಮಾನದ ಗೋಲ್’ ಎಂದೇ ಖ್ಯಾತಿ ಗಳಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡದ ವಿರುದ್ಧ ಎರಡು ಗೋಲು ದಾಖಲಿಸಿ ಮರಡೋನಾ ತನ್ನ ತಂಡವನ್ನು ಫೈನಲ್ ತಲುಪಿಸುವುದರಲ್ಲಿ ಸಫಲರಾಗುತ್ತಾರೆ. ಫೈನಲ್ ಪಂದ್ಯದಲ್ಲಿ ಪಶ್ಚಿಮ ಜರ್ಮನಿ ತಂಡದ ಎದುರು ಜಯ ಗಳಿಸಿ ಹೊಸ ಇತಿಹಾಸವನ್ನೇ ಬರೆಯುತ್ತಾರೆ ಮರಡೋನಾ. ಇತ್ತಂಡಗಳೂ ೨-೨ ಗೋಲ್ ಗಳಿಂದ ಸಮವಾಗಿದ್ದ ಸಮಯದಲ್ಲಿ ಪಂದ್ಯದ ೮೩ನೇ ನಿಮಿಷದಲ್ಲಿ ಮರಡೋನಾ ಒಂದು ಅದ್ಭುತವಾದ ಗೋಲ್ ದಾಖಲಿಸುತ್ತಾರೆ ಮತ್ತು ತಮ್ಮ ತಂಡವನ್ನು ವಿಶ್ವಕಪ್ ಜಯಿಸುವಂತೆ ಮಾಡುತ್ತಾರೆ. ಇದು ಇವರ ನಾಯಕತ್ವಕ್ಕೆ ಸಂದ ಗೌರವ. ಆ ವಿಶ್ವಕಪ್ ನಲ್ಲಿ ಮರಡೋನಾ ಚಿನ್ನದ ಚೆಂಡು ಪ್ರಶಸ್ತಿಗೂ ಭಾಜನರಾಗಿದ್ದರು. 

ಆದರೆ ನಂತರದ ದಿನಗಳಲ್ಲಿ ಮರಡೋನಾ ಹಲವಾರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಮಾದಕ ದೃವ್ಯ ಸೇವನೆ ಜೊತೆಗೆ ಕುಡಿತವೂ ಅವರ ಆಟವನ್ನು ಹಾಳು ಮಾಡಿತು. ವಿಪರೀತ ಅಶಿಸ್ತಿನಿಂದ ಜೀವನ ಸಾಗಿಸಿದರ ಪರಿಣಾಮ ಅವರ ದೇಹತೂಕವು ಏರಿ ೧೩೦ ಕೆಜಿ ಆಗಿತ್ತು. ನಂತರದ ದಿನಗಳಲ್ಲಿ ಅವರು ಆಸ್ಪತ್ರೆ ಸೇರುವುದು ಬಹುತೇಕ ಸಾಮಾನ್ಯ ಸಂಗತಿಯೇ ಆಗಿ ಹೋಗಿತ್ತು. ವಿಶ್ವ ಶ್ರೇಷ್ಟ ಆಟಗಾರನೊಬ್ಬನ ದುರಂತದ ಬದುಕು ಎಂದರೆ ಇದೇ ಇರಬೇಕು. ಅರ್ಜೆಂಟೀನಾ ವಿಶ್ವಕಪ್ ಆಡುವಾಗಲೆಲ್ಲಾ ಮರಡೋನಾ ಕ್ರೀಡಾಂಗಣದಲ್ಲಿ ಉಪಸ್ಥಿತಿ ಇರುತ್ತಿತ್ತು. ೨೦೦೭ರಲ್ಲಿ ಅವರಿಗೆ ಬೈಪಾಸ್ ಶಸ್ತ್ರಚಿಕಿತ್ಸೆಯೂ ಆಗಿತ್ತು. 

ಬಡ ಕುಟುಂಬದಲ್ಲಿ ಜನಿಸಿದ್ದ ಮರಡೋನಾ ಯಶಸ್ಸಿನ ಉತ್ತುಂಗಕ್ಕೆ ಏರಿದಾಗ ಅದನ್ನು ಜೀರ್ಣಿಸಿಕೊಳ್ಳಲು ಆಗಲಿಲ್ಲ ಎನ್ನುವುದು ಅವರ ಆಪ್ತರ ಅಭಿಮತ. ಶ್ರೀಮಂತಿಕೆಯ ಬಾಳಿನಲ್ಲಿ ಬದುಕಲು ಪ್ರಯತ್ನಿಸಿದ ಮರಡೋನಾ ಅದರಲ್ಲಿ ಸಫಲರಾಗಲಿಲ್ಲ. ಮರಡೋನಾ ನಾಲ್ಕು ಮದುವೆಯಾಗಿದ್ದರು. ಇವರಿಗೆ ಎರಡು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರ ವೃತ್ತಿ ಜೀವನವೂ ಸಾಕಷ್ಟು ವಿವಾದ ಹಾಗೂ ಕಲಹಗಳಿಂದ ತುಂಬಿತ್ತು. ಬ್ರೆಝಿಲ್ ದೇಶದ ಫುಟ್ಬಾಲ್ ದೇವರು ಎಂದೇ ಹೆಸರುವಾಸಿಯಾದ ಪೀಲೆ ಜೊತೆಗೂ ಮರಡೋನಾ ವಾದಗಳನ್ನು ಮಾಡಿದ್ದರು. ಪಂದ್ಯದ ಸಮಯದಲ್ಲೇ ಇವರು ಎದುರಾಳಿ ಆಟಗಾರರ ವಿರುದ್ಧ ಸಾಕಷ್ಟು ಗಲಾಟೆಗಳನ್ನು ಮಾಡುತ್ತಿದ್ದರು. ೧೯೯೪ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾದದ್ದು ಇವರ ವೃತ್ತಿ ಜೀವನವನ್ನೇ ಕೊನೆಗೊಳಿಸುವಂತೆ ಮಾಡಿತು. ಅವರ ೧೭ ವರ್ಷಗಳ ಅಂತರಾಷ್ಟ್ರೀಯ ಪಂದ್ಯಾಟಗಳಲ್ಲಿ ೯೧ ಪಂದ್ಯಗಳಿಂದ ೩೧ ಗೋಲು ಹೊಡೆದದ್ದೇ ಮರಡೋನಾ ಸಾಧನೆ. ಒಟ್ಟಾರೆ ನಾಲ್ಕು ವಿಶ್ವಕಪ್ ಗಳಲ್ಲಿ ಆಡಿದ್ದ, ಮರಡೋನಾ ಒಂದು ಬಾರಿ ವಿಜಯ ಹಾಗೂ ಒಂದು ಸಲ ರನ್ನರ್ ಅಪ್ ತಂಡದ ಸದಸ್ಯರೂ ಆಗಿದ್ದರು.

ಮರಡೋನಾ ಭಾರತ ಭೇಟಿ: ಡೀಗೊ ಮರಡೋನಾ ಭಾರತಕ್ಕೂ ಬಂದಿದ್ದರು. ೨೦೦೮ರಲ್ಲಿ ಕೋಲ್ಕತ್ತಾಗೆ ಕ್ಯಾನ್ಸರ್ ರೋಗಿಗಳ ಸಹಾಯಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಆ ಸಮಯ ಅವರು ತಮ್ಮದೇ ಆದ ವಿಶ್ವಕಪ್ ಎತ್ತಿ ಹಿಡಿದ ಭಂಗಿಯ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ಆ ಸಮಯದಲ್ಲಿ ಅವರಾಡಿದ ಒಂದು ಮಾತು ಬಹು ಮುಖ್ಯವೆನಿಸುತ್ತದೆ. ‘ನಾನೇನೂ ದೇವರಲ್ಲ. ಒಬ್ಬ ಸಾಮಾನ್ಯ ಫುಟ್ಬಾಲ್ ಆಟಗಾರ'. ಆದರೆ ಜನರು ಅವರನ್ನು ಫುಟ್ಬಾಲ್ ದೇವರೆಂದೇ ಕರೆದರು. ೨೦೧೨ರಲ್ಲಿ ಮರಡೋನಾ ಕೇರಳ ರಾಜ್ಯದ ಕಣ್ಣೂರಿಗೂ ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದರು. 

೨೦೦೮ ರಿಂದ ೨೦೧೦ರ ವರೆಗೆ ಇವರು ಅರ್ಜೆಂಟೀನಾ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ೨೦೧೯ರಲ್ಲಿ ವರ ಹೊಟ್ಟೆಯೊಳಗೆ ಸಂಭವಿಸಿದ ರಕ್ತಸ್ರಾವದಿಂದ ಆಸ್ಪತ್ರೆ ಸೇರಿದ್ದರು. ಇತ್ತೀಚೆಗೆ ಮೆದುಳಿನ ಶಸ್ತ್ರಚಿಕಿತ್ಸೆಯೂ ಆಗಿತ್ತು. ಆದರೆ ೨೦೨೦ ನವೆಂಬರ್ ೨೫ರಂದು ಸಂಭವಿಸಿದ ಹೃದಯಘಾತದಿಂದ ಮೆರಡೋನಾ ಅನಿರೀಕ್ಷಿತವಾಗಿ ತಮ್ಮ ೬೦ನೇ ವಯಸ್ಸಿನಲ್ಲಿ ಅಸಂಖ್ಯಾತ ಫುಟ್ಬಾಲ್ ಅಭಿಮಾನಿಗಳನ್ನು ಬಿಟ್ಟು ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ. ಆದರೆ ಅವರ ಆಟದ ಶೈಲಿ ಮತ್ತು ಚಾಣಾಕ್ಷತನ ಸದಾ ಕಾಲ ನೆನಪಿನಲ್ಲಿ ಉಳಿಯಲಿದೆ.      

ಚಿತ್ರ ಕೃಪೆ: ಅಂತರ್ಜಾಲ ತಾಣ