ಎಚ್.ಐ.ವಿ. ಸೋಂಕಿನ ವಿರುದ್ಧ ಜಾಗೃತಿಗಾಗಿ ವಿಶ್ವ ಏಡ್ಸ್ ದಿನ

ಎಚ್.ಐ.ವಿ. ಸೋಂಕಿನ ವಿರುದ್ಧ ಜಾಗೃತಿಗಾಗಿ ವಿಶ್ವ ಏಡ್ಸ್ ದಿನ

ಎರಡು ದಶಕಗಳ ಹಿಂದೆ ಏಡ್ಸ್ ಮತ್ತು ಎಚ್.ಐ.ವಿ. ಪಾಸಿಟಿವ್ ಎಂದರೆ ಬೆಚ್ಚಿ ಬೀಳುತ್ತಿದ್ದ ಜನರು ಈಗ ಆ ಕಾಯಿಲೆ (ಕೊರತೆ) ಬಹುತೇಕ ಸಾಮಾನ್ಯ ರೋಗದಂತೇ ಕಾಣಲು ಪ್ರಾರಂಭಿಸಿದ್ದಾರೆ. ಸಮಯ ಕಳೆದಂತೆ ರೋಗ ಹರಡುವ ವೈರಸ್ ಬಲಹೀನವಾದಂತೆ ಕಾಣಿಸುತ್ತಿದೆ. ಈಗಲೂ ಈ ವೈರಸ್ ನಿವಾರಣೆಗೆ ಖಚಿತವಾದ ಮದ್ದು ಅಥವಾ ಲಸಿಕೆ ಇಲ್ಲ. ಆದರೆ ಎಚ್ ಐ ವಿ ಪಾಸಿಟಿವ್ ಆದ ತಕ್ಷಣ ಮರಣ ಸಂಭವಿಸುವುದಿಲ್ಲ. ಆ ವೈರಸ್ ನಮ್ಮ ದೇಹದಲ್ಲಿದ್ದರೂ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಂಡು ಸಾಮಾನ್ಯ ಜೀವನ ಸಾಗಿಸಬಹುದು. ಡಿಸೆಂಬರ್ ೧, ಅಂತರಾಷ್ಟ್ರೀಯ ಏಡ್ಸ್ ದಿನ.  ಆ ಕಾರಣದಿಂದ ಈ ಕಾಯಿಲೆಯ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣ.

೧೯೮೮ರ ಸಮಯ ವಿಶ್ವ ಆರೋಗ್ಯ ಸಂಸ್ಥೆ (WHO)ಯು ಈ ಕಾಯಿಲೆಯ ತೀವ್ರತೆಯನ್ನು ಗಮನಿಸಿ ಡಿಸೆಂಬರ್ ೧ ನ್ನು ಅಂತರಾಷ್ಟ್ರೀಯ ಏಡ್ಸ್ ದಿನ ಎಂದು ಘೋಷಿಸಿತು. ಅಂದಿನಿಂದ ಪ್ರತೀ ವರ್ಷ ಈ ದಿನದಂದು ಈ ಮಾರಣಾಂತಿಕ ಕಾಯಿಲೆಯಿಂದ ಸಮಾಜವನ್ನು ಮುಕ್ತಗೊಳಿಸಲು ಸರಕಾರ ಮತ್ತು ಸಮಾಜ ಸೇವಾ ಸಂಸ್ಥೆಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ನಾವು ಕಾಲೇಜಿನಲ್ಲಿದ್ದ ಸಮಯದಲ್ಲಿ (೧೯೯೩-೯೮) ಈ ಕಾಯಿಲೆಯು ತುಂಬಾನೇ ತೀವ್ರವಾಗಿತ್ತು. ಆಗ ಕಾಲೇಜುಗಳಲ್ಲಿ ಈ ವಿಷಯದ ಬಗ್ಗೆ ಸಮಾಲೋಚನೆಗಳು, ವಿಚಾರ ವಿನಿಮಯ, ವೈದ್ಯರೊಂದಿಗೆ ಮಾತುಕತೆ ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದವು. ಮೊದಲೆಲ್ಲಾ ತನಗೆ ಎಚ್ ಐ ವಿ ಪಾಸಿಟಿವ್ ಎಂದು ಗೊತ್ತಾದ ಕೂಡಲೇ ಆ ವ್ಯಕ್ತಿ ಭಯದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ. ಅವನಿಗೆ ಆಪ್ತ ಸಮಾಲೋಚನೆ ಮಾಡಿಸುವವರು ಯಾರೂ ಸಹ ಆಗ ಲಭ್ಯವಿರಲಿಲ್ಲ. ಎಚ್ ಐ ವಿ (Human Immunodeficiency Virus) ಎಂಬುದು ನಮ್ಮ ದೇಹದಲ್ಲಿನ ಜೀವ ರಕ್ಷಕ ವ್ಯವಸ್ಥೆಯನ್ನು ಹಾಳು ಮಾಡುವ ವೈರಸ್. ಇದು ಹಂತ ಹಂತವಾಗಿ ಮನುಷ್ಯನನ್ನು ಕೊಲ್ಲುತ್ತಾ ಹೋಗುತ್ತದೆ. ನಮ್ಮ ದೇಹದಲ್ಲಿ ಜೀವ ನಿರೋಧಕ ಶಕ್ತಿಗಳು ನಾಶವಾದ ಬಳಿಕ ಆ ವ್ಯಕ್ತಿ ಏಡ್ಸ್ (Acquired immune Dediciency Syndorme-AIDS) ಈ ಹಂತಕ್ಕೆ ತಲುಪುತ್ತಾನೆ. ಆಗ ಅವನಿಗೆ ಸಾವು ಬರುತ್ತದೆ. ಆದರೆ ಹೆಚ್ ಐ ವಿ ಪಾಸಿಟಿವ್ ಹಂತದಿಂದ ಏಡ್ಸ್ ಹಂತಕ್ಕೆ ತಲುಪಲು ಹತ್ತಾರು ವರ್ಷಗಳೇ ಹಿಡಿಯಬಹುದು. ಈಗಂತೂ ಹಲವಾರು ಮದ್ದುಗಳ ಅನ್ವೇಷಣೆಯೂ ಆಗಿರುವುದರಿಂದ ಓರ್ವ ಹೆಚ್ ಐ ವಿ ಪಾಸಿಟಿವ್ ಹೊಂದಿದ ವ್ಯಕ್ತಿ ಕೆಲವೊಂದು ಜಾಗರೂಕತೆಯನ್ನು ತೆಗೆದುಕೊಂಡರೆ ಹಲವಾರು ವರ್ಷಗಳ ತನಕ ಸಾಮಾನ್ಯ ವ್ಯಕ್ತಿಯಂತೆ ಬದುಕಬಹುದು. ಇದು ಒಬ್ಬರಿಂದ ಮತ್ತೊಬ್ಬರಿಗೆ ಸೊಳ್ಳೆಗಳಿಂದ, ಪರಸ್ಪರ ಮುಟ್ಟುವುದರಿಂದ ಹರಡುವುದಿಲ್ಲ. ಹಾಗಾದರೆ ಇದು ಹೇಗೆ ತಗುಲುವ ಸಾಧ್ಯತೆ ಇದೆ, ಬನ್ನಿ ನೋಡುವ.

*ಸೋಂಕು ತಗುಲಿದ ವ್ಯಕ್ತಿಯ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಇದು ಹರಡುವುದು ಸಾಮಾನ್ಯ. ತಮ್ಮ ತಮ್ಮ ಸಂಗಾತಿ ಜೊತೆ ನಿಷ್ಟೆಯಿಂದ ಇರುವುದೇ ಇದಕ್ಕೆ ಉತ್ತಮ ಪರಿಹಾರ. ಬಹುತೇಕ ಪ್ರಕರಣಗಳು ಈ ಕಾರಣದಿಂದಲೇ ಹರಡಿವೆ.

*ರಕ್ತದಾನದ ಮೂಲಕವೂ ಹರಡುವ ಸಾಧ್ಯತೆ ಇದೆ. ರಕ್ತದಾನಿಗಳು ಎಚ್ ಐ ವಿ ಪಾಸಿಟಿವ್ ಆಗಿದ್ದು ಅದನ್ನು ಸರಿಯಾಗಿ ಪರೀಕ್ಷಿಸದೇ ಯಾವುದಾದರೂ ರೋಗಿಗೆ ರಕ್ತ ನೀಡಿದರೆ ಅವನಿಗೆ ಸೋಂಕು ತಗುಲುತ್ತದೆ.

*ಗರ್ಭಿಣಿ ತಾಯಿಯಿಂದ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಇದನ್ನು ಈಗ ಬಹಳಷ್ಟು ಮಟ್ಟಿಗೆ ತಡೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಆದರೂ ತಾಯಿಯಿಂದ ಮಗುವಿಗೆ ಹರಡುವ ಸಾಧ್ಯತೆ ಇದ್ದೇ ಇರುತ್ತದೆ.

* ಈ ಮೇಲಿನ ಕಾರಣಗಳಲ್ಲದೇ ಸಂಸ್ಕರಿಸದೇ ಬಳಸಿದ ಇಂಜಕ್ಷನ್ ಸಿರಿಂಜ್ ಗಳು, ಸಂಸ್ಕರಿಸದೇ ಬಳಸಿದ ಕ್ಷೌರದ ಸಾಮಾಗ್ರಿಗಳು ಮೊದಲಾದ ಕಾರಣಗಳಿಂದಲೂ ಹೆಚ್ ಐ ವಿ ತಗಲುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. 

ಓರ್ವ ವ್ಯಕ್ತಿ ಎಚ್ ಐ ವಿ ಪಾಸಿಟಿವ್ ಆಗಿದ್ದು ಕ್ರಮೇಣ ಅವನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿ ಆಗಿ ಅವನಿಗೆ ಜ್ವರ, ಕೆಮ್ಮು, ಕ್ಷಯ, ಬಾಯಿ ಹಾಗೂ ಗಂಟಲಿನಲ್ಲಿ ಹುಣ್ಣುಗಳು, ದೇಹದಲ್ಲಿ ತುರಿಕೆ, ದೇಹದ ತೂಕದಲ್ಲಿ ಗಮನಾರ್ಹ ಇಳಿಕೆ, ತೀವ್ರವಾಗಿ ದಣಿಯುವುದು, ನಿರಂತರ ಭೇಧಿ, ನೆನಪಿನ ಶಕ್ತಿ ಕುಂದುವುದು ಮೊದಲಾದ ಲಕ್ಷಣಗಳು ಕಾಣಿಸುತ್ತವೆ. ಮದ್ದು ತೆಗೆದುಕೊಂಡ ಬಳಿಕವೂ ಅವುಗಳು ಗುಣವಾಗುವುದಿಲ್ಲ. ಇವುಗಳು ಕ್ರಮೇಣ ಆ ವ್ಯಕ್ತಿಯನ್ನು ರೋಗ ಪೀಡಿತನನ್ನಾಗಿ ಮಾಡಿ ಸಾವಿನತ್ತ ಸೆಳೆಯುತ್ತವೆ. 

ಈ ಕಾಯಿಲೆಯ ಪ್ರಮುಖ ಸಮಸ್ಯೆಯೆಂದರೆ ಪ್ರಾಥಮಿಕ ಹಂತದಲ್ಲಿ ಯಾರೊಬ್ಬರಿಗೂ ತಿಳಿಯುವುದಿಲ್ಲ. ಕಾಯಿಲೆ ಉಲ್ಭಣವಾದಾಗ ಮಾತ್ರ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಇದು ಬಹಿರಂಗವಾಗುತ್ತದೆ. ಆ ವ್ಯಕ್ತಿಯು ಸಾಮಾಜಿಕವಾಗಿ ಹೊರಗುಳಿಯಬೇಕಾದ ಪರಿಸ್ಥಿತಿ ಬರುತ್ತದೆ. ಈ ಕಾಯಿಲೆ ಬಹುತೇಕ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಲೇ ಬರುವುದರಿಂದ ಆ ವ್ಯಕ್ತಿ ಇದನ್ನು ತನ್ನ ಸಂಗಾತಿಗೂ ಹರಡುವ ಸಾಧ್ಯತೆ ಇದೆ. ಮೊದಮೊದಲು ಈ ಕಾಯಿಲೆ ಬಂದವರು ಯಾರಿಗೂ ಹೇಳದೇ ಮುಚ್ಚಿಟ್ಟು ಇನ್ನಷ್ಟು ಮಂದಿಗೆ ಹರಡುತ್ತಿದ್ದರು. ಆದರೆ ಈಗ ಜನರಲ್ಲಿ ಜಾಗೃತಿಯಾಗಿದ್ದು, ಅವರು ನಿಯಮಿತವಾಗಿ ವೈದ್ಯಕೀಯ ಸೌಲಭ್ಯವನ್ನು ಬಳಸಿಕೊಂಡು ಹಲವಾರು ವರ್ಷಗಳ ಕಾಲ ಸಹಜ ಬದುಕು ಸಾಗಿಸುತ್ತಿದ್ದಾರೆ.

ಎಚ್ ಐ ವಿ ಯನ್ನು ಎಲಿಸಾ (ELISA - Enzyme Linked Immunosorbent Assay) ಹಾಗೂ ವೆಸ್ಟರ್ನ್ ಬ್ಲಾಟ್ ಮೊದಲಾದ ಪರೀಕ್ಷಾ ವಿಧಾನಗಳಿಂದ ಕಂಡು ಹಿಡಿಯಬಹುದು. ಪಾಸಿಟಿವ್ ಎಂದು ತಿಳಿದು ಬಂದರೂ ಈಗಿನ ಉತ್ತಮ ವೈದ್ಯಕೀಯ ಚಿಕಿತ್ಸೆಯಿಂದ ಪೀಡಿತ ವ್ಯಕ್ತಿ ಹಲವಾರು ವರ್ಷಗಳ ತನಕ ನೆಮ್ಮದಿಯಿಂದ ಬದುಕ ಬಹುದು. ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷ ‘ಎಚ್ ಐ ವಿ ಸೋಂಕು ನಿರ್ಮೂಲನೆ; ಪರಿಣಾಮಕಾರಿ ವಿಧಾನದಿಂದ ಕ್ಷಿಪ್ರವಾಗಿ ಸೋಂಕು ಮುಕ್ತರಾಗಿ' ಎಂಬ ಘೋಷವಾಕ್ಯವನ್ನು ಪ್ರಕಟಿಸಿದ್ದಾರೆ. ವಿಶ್ವ ಏಡ್ಸ್ ದಿನದಂದು ನಾವೂ ಈ ರೋಗಿಗಳನ್ನು ತಿರಸ್ಕರಿಸದೇ ಮುಖ್ಯ ಸಮಾಜವಾಹಿನಿಯಲ್ಲಿ ಬದುಕಲು ಅನುವು ಮಾಡಿಕೊಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕಾಗಿದೆ.     

ಚಿತ್ರ ಕೃಪೆ: ಅಂತರ್ಜಾಲ ತಾಣ