ಕೃಷ್ಣಾರ್ಪಣ!?

ಕೃಷ್ಣಾರ್ಪಣ!?

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀರಾಮ ದಿವಾಣ
ಪ್ರಕಾಶಕರು
ದಿವಾಣಶ್ರೀ ಪ್ರಕಾಶನ, ಕಡೆಕಾರ್, ಉಡುಪಿ-೫೭೬೧೦೩
ಪುಸ್ತಕದ ಬೆಲೆ
ರೂ. ೪೦.೦೦, ಮುದ್ರಣ : ೨೦೦೩ ಡಿಸೆಂಬರ್

ಪತ್ರಕರ್ತ ಲೇಖಕ ಶ್ರೀರಾಮ ದಿವಾಣರ ಮೊದಲ ಪ್ರಕಟಿತ ಲೇಖನಗಳ ಸಂಗ್ರಹ ಪುಸ್ತಕ ಇದು. ‘ಬರೆದದ್ದನ್ನೆಲ್ಲ ಪ್ರಕಟಿಸಬಾರದು, ಮುದ್ರಿಸಬಾರದು. ಆದರೆ ಆಯ್ದ ಲೇಖನಗಳನ್ನಾದರೂ ಪ್ರಕಟಿಸಬಹುದಲ್ವಾ?’ ಎಂಬ ಮಾತುಗಳನ್ನು ಹೇಳಿದವರು ನೇರ ನಡೆ-ನುಡಿಯ ನಿರ್ಭೀತ ಸಾಹಿತಿ, ಬೆಂಗಳೂರಿನ ‘ಪುಸ್ತಕ ಮನೆ'ಯ ಶ್ರೀ ಹರಿಹರ ಪ್ರಿಯರು. ಇವರ ಈ ಮಾತಿನಿಂದ ಪ್ರೇರಣೆಗೊಂಡು ಶ್ರೀರಾಮ ದಿವಾಣರು ‘ಕೃಷ್ಣಾರ್ಪಣ' ಎಂಬ ಕೃತಿಯನ್ನು ಹೊರ ತಂದಿದ್ದಾರೆ. 

ಎಪ್ಪತ್ತೆರಡು ಪುಟಗಳ ಈ ಪುಸ್ತಕದಲ್ಲಿ ಒಟ್ಟು ೩೧ ಲೇಖನಗಳಿವೆ. ಆರಂಭದ ಎಂಟು ಲೇಖನಗಳು ಮಂಗಳೂರಿನ ‘ಮಂಗಳೂರು ಮಿತ್ರ' ಸಂಜೆ ದಿನ ಪತ್ರಿಕೆಯಲ್ಲಿ ಬೆಳಕು ಕಂಡಿವೆ. ನಂತರದ ಒಂದು ಲೇಖನ ‘ ಈ ನಾಡಿನ ಮುಂಗಾರು' ವಾರ ಪತ್ರಿಕೆಯಲ್ಲೂ, ಮೂರು ಲೇಖನಗಳು ‘ಕರಾವಳಿ ರಿಪೋರ್ಟರ್' ವಾರ ಪತ್ರಿಕೆಯಲ್ಲೂ ಪ್ರಕಟವಾಗಿವೆ. ಉಳಿದಂತೆ ಹತ್ತೊಂಬತ್ತು ಲೇಖನಗಳು ಉಡುಪಿಯ ‘ಉಡುಪಿ ನ್ಯೂಸ್' ವಾರ ಪತ್ರಿಕೆಯಲ್ಲಿ ಪ್ರಕಟವಾದವುಗಳು. ಎಲ್ಲಾ ಲೇಖನಗಳು ಸದಭಿರುಚಿಯನ್ನು ಹೊಂದಿವೆ. ಜನಜಾಗೃತಿಗಾಗಿ ಈ ಲೇಖನಗಳು ಎಂಬ ಧ್ಯೇಯವು ಓದುವಾಗಲೇ ನಮಗೆ ತಿಳಿಯುತ್ತದೆ. 

ಮೊದಲ ಲೇಖನವಾದ ‘ಬೆದರಿಕೆಗಳೆಂಬ ಬ್ರಹ್ಮಾಸ್ತ್ರ' ಲೇಖಕರು ತಮ್ಮ ಪತ್ರಕರ್ತನ ಜೀವನದ ಒಂದು ಪ್ರಸಂಗವನ್ನು ಹಾಗೂ ಪ್ರತೀ ಪತ್ರಕರ್ತನ ಜೀವನದಲ್ಲಿ ಬರುವ ಈ ಬೆದರಿಕೆಗಳು ಎಂಬ ಬ್ರಹ್ಮಾಸ್ತ್ರಗಳಿಗೆ ಉತ್ತರ ನೀಡುತ್ತಾ ಹೋಗುತ್ತಾರೆ. ಈ ಲೇಖನದಲ್ಲಿ ಅವರೇ ಒಂದೆಡೆ ಬರೆಯುತ್ತಾರೆ-

‘ಪ್ರಸ್ತುತ ನಾನೀಗ ಎದುರಿಸುತ್ತಿರುವ ಕೆಲವು ಚಿತ್ರ-ವಿಚಿತ್ರ ಬೆದರಿಕೆಗಳ ಬಗ್ಗೆ ಒಂದಿಷ್ಟಾದರೂ ಮಾತನಾಡಬೇಕೆನಿಸುತ್ತದೆ. ಇದುವರೆಗೆ ಮನದ ಮೂಲೆಯಲ್ಲಿ ಮೌನವಾಗಿ ಅಡಗಿದ್ದ ಈ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನಲ್ಲಾ. ಈ ಕ್ಷಣ ನಾನು ಬಹಳಷ್ಟು ರೋಮಾಂಚನಗೊಳ್ಳುತ್ತಿದ್ದೇನೆ. ಸಂತೃಪ್ತಿ ಪಡುತ್ತಿದ್ದೇನೆ.

ಹಾಂ! ಇದು ಬ್ಲೂ ಫಿಲಂ ಜಾಲದ ಕಥೆ : ವ್ಯಥೆ, ಹೌದು ಅವರು ; ಅವರ ಕಾರ್ಯ ಸಾಧನೆಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರಂತೆ. ಎಷ್ಟು ಲಕ್ಷಗಳನ್ನು ಬೇಕಾದರೂ ಸುರಿಯಬಲ್ಲರಂತೆ. ಅದಕ್ಕಾಗಿ ನಾನು ನನ್ನ ತನವನ್ನೆಲ್ಲಾ ಬಿಟ್ಟು ಪತ್ರಿಕಾಧರ್ಮವನ್ನು ಉಲ್ಲಂಘಿಸುವುದರ ಜೊತೆಗೆ ತಗ್ಗಬೇಕು ; ಬಗ್ಗಬೇಕು.

ಅದಕ್ಕೂ ಇಪ್ಪತ್ತನಾಲ್ಕು ಗಂಟೆಗಳ ಸಮಯಾವಕಾಶವಿದೆ. ತಪ್ಪಿದರೆ ನನಗೆ ತೊಂದರೆ ತಪ್ಪಿದ್ದಲ್ಲ. ಹೇಗೆ ಈ ತೊಂದರೆಗಳನ್ನು ತಪ್ಪಿಸುವುದು? ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ. ಉಳಿಯುತ್ತಿದೆ. 

ಬೆದರಿಕೆ ಒಡ್ಡುವವರನ್ನು ಬೆದರಿಸುವಷ್ಟು ತಾಕತ್ತಾಗಲಿ, ಶಕ್ತಿಯಾಗಲಿ ನನ್ನಂತಹವನಲ್ಲಿಲ್ಲ. ಹುಟ್ಟಿದ ನಾವು ಒಂದಲ್ಲ ಒಂದು ದಿನ ಸಾಯಲೇ ಬೇಕಾದವರು. ಇಂದೋ, ನಾಳೆಯೋ ಎಂಬುದು ಮಾತ್ರ ಸಾಯುವವರೆಗೂ ಪ್ರಶ್ನೆಯಾಗಿಯೇ ಉಳಿಯುವಂತದ್ದಾಗಿದೆ. ಈ ಮಧ್ಯೆ ನಾವು ಯಾಕಾಗಿ ಸೋತು ಸಾಯಬೇಕು? ನನಗೆ ತೊಂದರೆ ಕೊಡುವುದರಿಂದ ಮಾತ್ರವೇ ಆ ದೊಡ್ಡವರು ಎನ್ನಿಸಿಕೊಂಡವರು ಹೇಳುವ ಸಮಾಜ ಉದ್ಧಾರವಾಗುವುದಿದ್ದರೆ, ನನಗೆ ಸಾಯಲೇನೂ ನೋವಿಲ್ಲ. ನಾನು ತೊಂದರೆ ಅನುಭವಿಸಿದರೆ ಮಾತ್ರ ಅಂತಹ ಪ್ರತಿಷ್ಟಿತರು ಜೀವನದಲ್ಲಿ ಯಶಸ್ಸು ಗಳಿಸುವುದಾದಲ್ಲಿ ತಲವಾರಿಗೆ ತಲೆ ಕೊಡಲು ನನಗೆ ಒಂದಿಷ್ಟೂ ದುಃಖವಿಲ್ಲ.’

ಇಂತಹ ನೇರ ನುಡಿಯ ಹಲವಾರು ಲೇಖನಗಳು ಈ ಪುಸ್ತಕದಲ್ಲಿದೆ. ದೇವಸ್ಥಾನ, ಊಟ ಮತ್ತು ಜನಿವಾರದ ಕಥೆ, ವ್ಯಥೆ, ಕುಡುಕ ಗಂಡಂದಿರು ಹೆಂಡತಿಯನ್ನು ಹಿಂಡುವ ಬಗ್ಗೆ..., ಪವಾಡ, ಮೂಢ ನಂಬಿಕೆ ಮತ್ತು ಬಾಬಾ ದರ್ಶನ, ಪತ್ರಕರ್ತರಿಗೂ ಬೇಕು ನೀತಿಸಂಹಿತೆ, ನ್ಯಾಯಾಲಯದ ಅರ್ಥ ಶಿಕ್ಷೆ, ಧರ್ಮಗುರುಗಳು ಮತ್ತು ದಾಂಪತ್ಯ, ಲೇಖನಿಗೆ ಪಕ್ಷವೂ ಇಲ್ಲ, ಜಾತಿಯೂ ಇಲ್ಲ ಮುಂತಾದ ಲೇಖನಗಳು ಮಾಹಿತಿಪೂರ್ಣವಾಗಿವೆ. ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡುವ ಪತ್ರಕರ್ತನ ಅಂತರಂಗ ಯಾರು ಬಲ್ಲರು? ಶ್ರೀರಾಮರು ನಿಜಕ್ಕೂ ಈ ನಿಟ್ಟಿನಲ್ಲಿ ಅಪಾರ ಸಾಹಸ ಕಾರ್ಯಗಳನ್ನು ಮಾಡಿದ್ದಾರೆ ಎಂದು ಪುಸ್ತಕ ಓದಿದ ಎಲ್ಲರಿಗೂ ಅನಿಸುತ್ತದೆ.