ಗುಬ್ಬಿ ಹಬ್ಬ: ಮಾರ್ಚ್ ೨೦

ಗುಬ್ಬಿ ಹಬ್ಬ: ಮಾರ್ಚ್ ೨೦

ಅದೊಂದು ಕಾಲವಿತ್ತು - ಮನೆಯೊಳಗೆ ಮತ್ತು ಮನೆಯ ಹೊರಗೆ ಗುಬ್ಬಿಗಳ ಚಿಂವ್ ಚಿಂವ್ ಸದ್ದು ಆಗಾಗ ಕೇಳುತ್ತಿದ್ದ ಕಾಲ. ಮನೆಯ ಮೂಲೆಗಳಲ್ಲಿ, ಜಂತಿಗಳಲ್ಲಿ, ಗೋಡೆಗೆ ಆನಿಸಿದ್ದ ಫೋಟೋಗಳ ಹಿಂಭಾಗದಲ್ಲಿ ಗುಬ್ಬಿಗಳು ಗೂಡುಕಟ್ಟಿ ಬಾಳುತ್ತಿದ್ದವು. ಹಗಲಿನಲ್ಲಿ ಅಂಗಳದಲ್ಲಿ ಗುಬ್ಬಿಗಳ ಆಟವೇ ಆಟ. ಈಗ ಮನುಷ್ಯರೊಂದಿಗೆ ಈ ಪುಟ್ಟ ಪಕ್ಷಿಗಳ ಸಹಜೀವನ ಕೇವಲ ನೆನಪು.

ಯಾಕೆ ಹೀಗಾಯಿತು? ಈಗ ಹುಲ್ಲಿನ ಮತ್ತು ಹಂಚಿನ ಚಾವಣಿಯ ಮನೆಗಳೇ ಅಪರೂಪ. ಆದ್ದರಿಂದ ಗುಬ್ಬಿಗಳಿಗೆ ಮನೆಯೊಳಗೆ ಗೂಡು ಕಟ್ಟಲು ಅವಕಾಶವೇ ಇಲ್ಲವಾಗಿದೆ. ಅದಲ್ಲದೆ, ಹೊಲದ ಬೆಳೆಗಳಿಗೆ ಮಾರಕ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ. ಧಾನ್ಯಗಳನ್ನು ತಿನ್ನುವ ಗುಬ್ಬಿಗಳು ಆ ವಿಷದಿಂದಾಗಿ ಸಾಯುತ್ತಿವೆ.

ಮುಂಚೆ ಕಿರಾಣಿ ಅಂಗಡಿಗಳಲ್ಲಿ, ಜೀನಸು ಅಂಗಡಿಗಳಲ್ಲಿ ದವಸಧಾನ್ಯಗಳನ್ನು ಗೋಣಿಯಿಂದ ತೆಗೆದು, ತೂಕ ಮಾಡಿ ಮಾರುವಾಗ ಧಾನ್ಯಗಳು ನೆಲಕ್ಕೆ ಚೆಲ್ಲುತ್ತಿದ್ದವು. ಅವನ್ನು ತಿನ್ನಲು ಅಲ್ಲಿ ಗುಬ್ಬಿಗಳ ಗುಂಪು ಕಾದಿರುತ್ತಿತ್ತು. ಈಗ ಹೆಚ್ಚುಕಡಿಮೆ ಎಲ್ಲ ಧಾನ್ಯಗಳು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಪ್ಯಾಕಾಗಿ ಬರುತ್ತವೆ. ಹಾಗಾಗಿ, ಧಾನ್ಯ ನೆಲಕ್ಕೆ ಚೆಲ್ಲುವ ಪ್ರಶ್ನೆಯೇ ಇಲ್ಲ. ಇದರಿಂದಾಗಿ ಅಲ್ಲಿಯೂ ಗುಬ್ಬಿಗಳು ಕಾಣೆ. ಮಾತ್ರವಲ್ಲ, ನಗರಗಳಲ್ಲಿ ಮಾಲ್‌ಗಳ ಸಂಖ್ಯೆ ಹೆಚ್ಚಾಗಿ, ಜನರಲ್ಲಿ ಮಾಲ್‌ಗಳಿಗೆ ಹೋಗಿ ಖರೀದಿಸುವ ಅಭ್ಯಾಸ ಬೆಳೆದಂತೆ, ಕಿರಾಣಿ ಅಂಗಡಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಹವಾನಿಯಂತ್ರಣ ವ್ಯವಸ್ಥೆಯಿರುವ ಮಾಲ್‌ಗಳ ಒಳಕ್ಕೆ ಗುಬ್ಬಿಗಳು ಪ್ರವೇಶಿಸಲು ಆಸ್ಪದವೇ ಇಲ್ಲ.

ಗುಬ್ಬಿಗಳ ಉಳಿವಿಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆ “ನೇಚರ್ ಫಾರೆವರ್”. ಇದು ಮಹಾರಾಷ್ಟ್ರದ ನಾಸಿಕ್ ನಗರದ ಮಹಮ್ಮದ್ ದಿಲಾವರ್ ಎಂಬ ಪರಿಸರ ರಕ್ಷಣಾ ಕಾರ್ಯಕರ್ತ ಸ್ಥಾಪಿಸಿದ ಸಂಸ್ಥೆ. ಇದುವೇ ಪ್ರತಿ ವರುಷ ಮಾರ್ಚ್ ೨೦ನೇ ದಿನವನ್ನು “ಗುಬ್ಬಿ ದಿನ”ವಾಗಿ ಆಚರಿಸಲು ಆರಂಭಿಸಿತು. ಇದರೊಂದಿಗೆ ೨೦೧೦ರಲ್ಲಿ ಫ್ರಾನ್ಸಿನ ಸಂಸ್ಥೆಯೊಂದು ಜೊತೆಗೂಡಿದ ಕಾರಣ ಗುಬ್ಬಿ ದಿನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿತು. ಈಗ ಜಗತ್ತಿನ ವಿವಿಧ ದೇಶಗಳಲ್ಲಿ ಗುಬ್ಬಿಗಳ ರಕ್ಷಣೆಯ ತುರ್ತಿನ ಬಗ್ಗೆ ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗುಬ್ಬಿ ಹಬ್ಬ ಆಚರಿಸಲಾಗುತ್ತಿದೆ. ಅಹ್ಮದಾಬಾದಿನಲ್ಲಿ ಪ್ರಧಾನ ಕಚೇರಿ ಹೊಂದಿರುವ “ನೇಚರ್ ಫಾರೆವರ್” ಗುಬ್ಬಿಗಳ ಉಳಿವಿಗಾಗಿ ಅತ್ಯುತ್ತಮ ಕೆಲಸ ಮಾಡಿದ ವ್ಯಕ್ತಿಗೆ “ವಾರ್ಷಿಕ ಗುಬ್ಬಚ್ಚಿ ಪ್ರಶಸ್ತಿ”ಯನ್ನೂ ನೀಡುತ್ತಿದೆ.

ಭಾರತದಲ್ಲಿ ಗುಬ್ಬಚ್ಚಿಗಳ ಸಂಖ್ಯೆ ಇಳಿಮುಖವಾಗಿಲ್ಲ ಎಂಬುದೊಂದು ಆಶಾದಾಯಕ ಸುದ್ದಿ. ಇದಕ್ಕೆ ಆಧಾರ ಡಿಸೆಂಬರ್ ೨೦೧೯ರಲ್ಲಿ ಬಿಡುಗಡೆಯಾದ ಭಾರತದ ಹಕ್ಕಿಗಳ ಸ್ಥಿತಿಗತಿಯ ಗಣತಿಯ ವರದಿ. ಇದು “ಇ ಬರ್ಡ್ ಪೋರ್ಟಲ್”ನಲ್ಲಿ ೧೫,೦೦೦ ಪಕ್ಷಿವೀಕ್ಷಕರು ಸಂಗ್ರಹಿಸಿದ ಮಾಹಿತಿ ಆಧರಿಸಿ ರಚಿಸಲಾದ ವರದಿ. ಇದರಲ್ಲಿ ಭಾರತದ ೮೮೭ ಪಕ್ಷಿಗಳ ಸ್ಥಿತಿಗತಿ ಪರಿಶೀಲಿಸಲಾಗಿದೆ. ಅವುಗಳಲ್ಲಿ ಗುಬ್ಬಿ ಸಹಿತ ೧೨೬ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿಲ್ಲ ಅಥವಾ ಏರಿಕೆಯಾಗಿದೆ.

ಈ ಹಕ್ಕಿಗಣತಿಯ ಕೆಲಸದಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟಾರಿ ಸೊಸೈಟಿ (ಬಿಎನ್‌ಎಚ್‌ಎಸ್), ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ, ಪ್ರಕೃತಿ ಸಂರಕ್ಷಣಾ ಪ್ರತಿಷ್ಠಾನ,ರಾಷ್ಟ್ರೀಯ ಜೀವವಿಜ್ನಾನಗಳ ಕೇಂದ್ರ, ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ವಲ್ಡ್ ವೈಡ್ ಫಂಡ್ ಫಾರ್ ನೇಚರ್ ಇಂಡಿಯಾ ಇತ್ಯಾದಿ ಸಂಘಸಂಸ್ಥೆಗಳು ಭಾಗವಹಿಸಿದ್ದವು.

ಗುಬ್ಬಿಗಳ ಉಳಿವಿಗೆ ನಾವೇನು ಮಾಡಬಹುದು? ಮನೆಯ ಹೊರಗೆ ಒಂದು ಗುಬ್ಬಿಗೂಡು ನೇತು ಹಾಕಿ. ಇದನ್ನು ಯಾವುದೇ ಪುಟ್ಟ ಮರದ ಪೆಟ್ಟಿಗೆಯಿಂದ ನಾವೇ ರಚಿಸಬಹುದು. ಗಮನಿಸಿ: ಬೇಸಿಗೆ ಗುಬ್ಬಿಗಳ ವಂಶಾಭಿವೃದ್ಧಿಯ ಸಮಯ. ಆಹಾರ, ನೀರು ಮತ್ತು ಗೂಡು ಅವಕ್ಕೆ ಬೇಕೇಬೇಕು. ಅದಕ್ಕಾಗಿ, ತಾರಸಿಯಲ್ಲಿ ಪುಟ್ಟ ಪಾತ್ರೆಯಲ್ಲಿ ನೀರು ಹಾಕಿಡಿ (ನೀರನ್ನು ೨-೩ ದಿನಕ್ಕೊಮ್ಮೆ ಹೊಸದಾಗಿ ಹಾಕಿ). ತಾರಸಿಯಲ್ಲಿ ಒಂದಷ್ಟು ಕಾಳು ಚೆಲ್ಲಿ. ಅನಂತರ, ದಿನದಿನವೂ ನಿಮ್ಮ ಆಸುಪಾಸಿನಲ್ಲೇ ಗುಬ್ಬಿಗಳ ಆಟ ನೋಡುತ್ತಾ, ಚಿಂವ್ ಚಿಂವ್ ಕೇಳುತ್ತಾ ಆನಂದಿಸಿ.