ಜನಸಾಮಾನ್ಯರ ದನಿಯಾದ ಹಲ್ದಾರ್ ನಾಗ್ ಎಂಬ ಕವಿ

ಜನಸಾಮಾನ್ಯರ ದನಿಯಾದ ಹಲ್ದಾರ್ ನಾಗ್ ಎಂಬ ಕವಿ

ಕೆಲವು ವರ್ಷಗಳ ಹಿಂದೆ ಭರತಬಾಲಾ ನಿರ್ದೇಶನದಲ್ಲಿ ‘ವರ್ಚುವಲ್ ಭಾರತ್’ ಎಂಬ ಸಂಸ್ಥೆ ಸಾವಿರ ಚಿತ್ರಗಳ ಪ್ರಯಾಣ (A 1000 film journey, one story at a time) ಎಂಬ ಕಿರು ಸಾಕ್ಷ್ಯ ಚಿತ್ರಗಳ ಸರಣಿಯನ್ನು ಪ್ರಾರಂಭಿಸಿತ್ತು. ಈ ಸರಣಿಯಲ್ಲಿ ಹಲವಾರು ಎಲೆ ಮರೆಯ ಕಾಯಿಗಳಂತಿರುವ ಸಾಧಕರ ಬದುಕನ್ನು ಹೊರ ಜಗತ್ತಿಗೆ ತೆರೆದಿಡುವ ಪ್ರಯತ್ನ ಮಾಡಿತ್ತು. ಅವರು ಗುರುತಿಸಿದ ಓರ್ವ ವ್ಯಕ್ತಿಯೇ ಹಲ್ದಾರ್ ನಾಗ್ ಅಥವಾ ಹಲ್ದೋರ್ ನಾಗ್.

ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರ ಬಂದ ಬಳಿಕ ಪದ್ಮ ಪ್ರಶಸ್ತಿಗಳಿಗೆ ಲಾಬಿ ನಡೆಯುವುದು ಸ್ವಲ್ಪ ಆಗಿದೆ ಮತ್ತು ಪ್ರಶಸ್ತಿಯ ಘೋಷಣೆಯ ಬಳಿಕ ಆರೋಪ ಪ್ರತ್ಯಾರೋಪಗಳೂ ಕಮ್ಮಿ ಆಗಿವೆ. ನಮ್ಮ ರಾಜ್ಯದವರೇ ಆದ ಸೂಲಗಿತ್ತಿ ನರಸಮ್ಮ, ಸಾಲು ಮರದ ತಿಮ್ಮಕ್ಕ, ಭಾವೈಕ್ಯತೆಯ ಹರಿಕಾರ ಇಬ್ರಾಹಿಂ ಸುತಾರ್, ತೂಗುವ ಸೇತುವೆಗಳ ಖ್ಯಾತಿಯ ಗಿರೀಶ್ ಭಾರದ್ವಾಜ್, ಹಾಲಕ್ಕಿ ಹಾಡುಗಾರ್ತಿ ಸುಕ್ರಿ ಬೊಮ್ಮನ ಗೌಡ ಹೀಗೆ ಹಲವಾರು ಮಂದಿಯನ್ನು ಅವರ ಸಾಧನೆಯ ಆಧಾರದಲ್ಲೇ ಪದ್ಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಇವರುಗಳ ಆಯ್ಕೆ ವಿಷಯದಲ್ಲಿ ಯಾರದ್ದೂ ತಕರಾರು ಇರಲಿಕ್ಕಿಲ್ಲ. ನಮ್ಮ ಕರ್ನಾಟಕದಂತೆಯೇ ಉಳಿದ ರಾಜ್ಯಗಳಿಂದಲೂ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗಳನ್ನು ಮಾಡಿಯೂ ತೆರೆಮರೆಯಲ್ಲೇ ಉಳಿದ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ಓರ್ವ ವ್ಯಕ್ತಿಯೇ ಒಡಿಶಾ ರಾಜ್ಯದ ಹೆಮ್ಮೆಯ ಕವಿ ಹಲ್ದಾರ್ ನಾಗ್.ಇವರಿಗೆ ೨೦೧೬ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಹಲ್ದಾರ್ ನಾಗ್ ಅವರು ಒಡಿಶಾದ ಬರ್ಗಾರ್ ಜಿಲ್ಲೆಯ ಗೆನ್ಸ್ ಎಂಬ ಊರಿನಲ್ಲಿ ೧೯೫೦ ಮಾರ್ಚ್ ೩೧ ರಂದು ಜನಿಸಿದರು. ಇವರು ಅತೀ ಹಿಂದುಳಿದ ಜನಾಂಗಕ್ಕೆ ಸೇರಿದವರಾಗಿದ್ದರೂ ಬಾಲ್ಯದಿಂದಲೂ ಇವರಿಗೆ ವಿದ್ಯಾರ್ಜನೆ ಮಾಡುವ ಆಶೆ ತುಂಬಾ ಇತ್ತು. ಮನೆಯಲ್ಲಿ ಕಡು ಬಡತನ. ಇವರು ಹುಟ್ಟಿದ ಜಿಲ್ಲೆಯು ಪಶ್ಚಿಮ ಒಡಿಶಾ ವಲಯಕ್ಕೆ ಸೇರಿದ್ದು, ಅಲ್ಲಿಯ ಭಾಷೆ ಸಂಭಾಲಪುರಿ ಅಥವಾ ಕೋಸ್ಲಿ. ಸಂಭಾಲಪುರ ಜಿಲ್ಲೆಯು ಬರ್ಗಾರ್ ಜಿಲ್ಲೆಯ ಪಕ್ಕದ ಜಿಲ್ಲೆ. ಸಂಭಾಲಪುರಿ ಎಂಬುದು ಒಡಿಸ್ಸಾದ ಒಂದು ಗ್ರಾಮೀಣ ಭಾಷೆ. ಈ ಭಾಷೆಯು ನಶಿಸುತ್ತಿರುವ ಭಾಷೆಯಲ್ಲಿ ಸ್ಥಾನ ಪಡೆದಿದೆ. ಹಲ್ದಾರ್ ನಾಗ್ ಅವರು ಸಂಭಾಲಪುರಿ ಅಥವಾ ಕೋಸ್ಲಿ ಭಾಷೆಯಲ್ಲಿ ಕವನಗಳನ್ನು ರಚಿಸಲು ಪ್ರಾರಂಭಿಸಿದರು. ಬಾಲ್ಯದಿಂದಲೇ ಇವರಿಗೆ ಸಾಹಿತ್ಯದ ಮೇಲೆ ಅಪಾರ ಆಸಕ್ತಿ. 

ಬಡತನದ ಬೇಗೆಯಲ್ಲಿ ಬೇಯುತ್ತಾ ಹಲ್ದಾರ್ ತಮ್ಮ ಮೂರನೇ ತರಗತಿಯನ್ನು ಮುಗಿಸುವ ಸಮಯಕ್ಕೇ ಅವರ ತಂದೆಯವರು ನಿಧನರಾಗುತ್ತಾರೆ. ಅವರ ಇಡೀ ಕುಟುಂಬದಲ್ಲಿ ದುಡಿಯುತ್ತಿದ್ದ ಏಕೈಕ ವ್ಯಕ್ತಿ ಹಲ್ದಾರ ಅವರ ತಂದೆಯವರೇ ಆಗಿದ್ದರು. ಇವರ ನಿಧನ ಹಲ್ದಾರ್ ಅವರನ್ನು ಶಾಲೆ ಬಿಡುವಂತೆ ಮಾಡುತ್ತದೆ. ಅವರು ಒಂದು ಸಿಹಿತಿಂಡಿಯನ್ನು ತಯಾರಿಸುವ ಅಂಗಡಿಯಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಇವನ ಕಲಿಯುವಿಕೆಯಲ್ಲಿನ ಆಸಕ್ತಿಯನ್ನು ಗಮನಿಸಿದ ಆ ಊರಿನ ಮುಖಂಡ ಕೆಲಸದ ಜೊತೆ ವಿದ್ಯೆಯನ್ನೂ ಕಲಿ ಎಂದು ಪ್ರೌಢಶಾಲೆಯವರೆಗೆ ಕಲಿಯಲು ಸಹಕಾರ ನೀಡುತ್ತಾರೆ. ವರ್ಷಗಳು ಉರುಳಿದಂತೆ ಹಲ್ದಾರ ಅಡಿಗೆಯ ಕೆಲಸವನ್ನೂ ಕಲಿಯುತ್ತಾರೆ. ತಮ್ಮ ಪರಿಚಿತರಿಂದ ಸಾವಿರ ರೂಪಾಯಿ ಸಾಲ ಪಡೆದು ಒಂದು ಶಾಲಾ ಸಾಮಾಗ್ರಿಗಳ ಅಂಗಡಿಯನ್ನು ಒಂದು ಶಾಲೆಯ ಬಳಿ ತೆರೆಯುತ್ತಾರೆ. 

ಪದ್ಮಶ್ರೀ ಪ್ರಶಸ್ತಿ ದೊರೆತರೂ ಹಲ್ದಾರ್ ನಾಗ್ ಅವರು ಈಗಲೂ ತಮ್ಮ ಅಂಗಡಿಯಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎಂದು ಇರುತ್ತಾರೆ. ಯಾವುದೇ ಹಮ್ಮು ಬಿಮ್ಮು ಇಲ್ಲದ ಇವರು ಸಾಮಾನ್ಯ ವ್ಯಾಪಾರಸ್ಥರಂತೆ ರಥ ಯಾತ್ರೆ, ಊರಿನ ಜಾತ್ರೆಯ ಸಮಯದಲ್ಲಿ ಘುಗುನಿ (ಒಡಿಸ್ಸಾದ ಒಂದು ತಿಂಡಿ) ಹಾಗೂ ಕಡಲೆಯಿಂದ ಮಾಡಿದ ವಿಶೇಷ ತಿಂಡಿಗಳನ್ನು ತಯಾರಿಸಿ ಮಾರುತ್ತಾರೆ. ತಾವು ಈ ಹಿಂದೆ ಕಲಿತ ಅಡುಗೆಯ ಜ್ಞಾನವನ್ನು ಹೀಗೆ ಸದುಪಯೋಗ ಮಾಡುತ್ತಾರೆ.

ಸಂಭಾಲಪುರಿ ಭಾಷೆಯಲ್ಲಿ ಕವನಗಳನ್ನು ರಚಿಸುವ ಇವರದ್ದು ಅಪರೂಪದ ಶೈಲಿ ಎಂದು ಸಾಹಿತ್ಯಕಾರರು ಹೇಳುತ್ತಾರೆ. ಇವರ ಕವನಗಳ ಹಾಗೂ ಸಾಧನೆಗಳ ಬಗ್ಗೆ ಬಿಬಿಸಿಯು ಒಂದು ಸಾಕ್ಷ್ಯ ಚಿತ್ರವನ್ನು ತಯಾರು ಮಾಡಿದೆ. ಧೋಡೋ ಬರ್ಗಾಚ್ (ಹಳೆಯ ಆಲದ ಮರ) ಎಂಬುದು ಇವರ ಪ್ರಥಮ ಕವನ. ಇದು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾದಾಗ ಇವರಿಗೆ ತುಂಬಾನೇ ಸಂತೋಷವಾಗಿತ್ತು. ಇವರ ಕವನಗಳಲ್ಲಿ ಅನ್ಯಾಯದ ವಿರುದ್ಧದ ಹೋರಾಟ, ಸಮಾಜದಲ್ಲಿರುವ ಅಸ್ಪೃಷ್ಯತೆ, ಜಾತಿ ಪದ್ಧತಿ ಬಗ್ಗೆ ಉಲ್ಲೇಖವಾಗಿದೆ. ಇವರ ಆತ್ಮೀಯರೂ, ಕವನಗಳನ್ನು ಮೆಚ್ಚುವವರೂ ಇವರಿಂದ ಇದೇ ರೀತಿಯ ಕವನಗಳ ಅಪೇಕ್ಷೆ ಮಾಡುತ್ತಾರೆ. ಸಾಮಾಜಿಕ ಪಿಡುಗಲ್ಲದೇ ಪರಿಸರ, ಪ್ರಾಣಿ-ಪಕ್ಷಿಗಳ ಬಗ್ಗೆ ಕವನ ಬರೆಯುವುದೆಂದರೆ ಇವರಿಗೆ ಬಹಳ ಇಷ್ಟ.

ಹಲ್ದಾರ್ ನಾಗ್ ಅವರಿಗೆ ೨೦೧೬ರಲ್ಲಿ ಕೋಸ್ಲಿ ಭಾಷೆಗೆ ನೀಡಿದ ಗಮನಾರ್ಹ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಯು ಸಿಕ್ಕಿದಾಗ ಅವರಿಗೇ ಆಶ್ಚರ್ಯವಾಗಿತ್ತಂತೆ. ಪ್ರಶಸ್ತಿಯನ್ನು ನೀಡಿದ ಅಂದಿನ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರು ಇವರ ಬಗ್ಗೆ ಮಾಹಿತಿ ಪಡೆದುಕೊಂಡು ಇವರನ್ನು, ಇವರ ಕವನಗಳನ್ನು ತುಂಬಾ ಪ್ರಶಂಸೆ ಮಾಡಿದರಂತೆ. ಇವರ ಸಾಧನೆಯನ್ನು ಅಭಿನಂದಿಸಿ ಸಂಭಾಲಪುರ ವಿಶ್ವವಿದ್ಯಾನಿಲಯವು ಇವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ನೀಡಿ ಸನ್ಮಾನಿಸಿದೆ.ಇವರ ಹಲವಾರು ಕವನ ಸಂಕಲನಗಳು ಪ್ರಕಟವಾಗಿವೆ. ಕಾವ್ಯಾಂಜಲಿ  ಎಂಬ ಕವನ ಸಂಕಲನವು ಮೂರು ಭಾಗಗಳಲ್ಲಿ ಪ್ರಕಟವಾಗಿದೆ.

ಮೊದಲೇ ತಿಳಿಸಿದಂತೆ ಇವರ ಬಗ್ಗೆ ವರ್ಚುವಲ್ ಇಂಡಿಯಾದವರು ತಯಾರಿಸಿದ ಸಾಕ್ಷ್ಯ ಚಿತ್ರವನ್ನು ನಿರೂಪಣೆ ಮಾಡಿದ್ದಾರೆ ಖ್ಯಾತ ಕವಿ, ಬರಹಗಾರ ಗುಲ್ಜಾರ್ ಇವರು. ಅವರು ಹಲ್ದಾರ್ ನಾಗ್ ಅವರ ಬಗ್ಗೆ ಪ್ರಾರಂಭದಲ್ಲಿ ಹೀಗೆ ಹೇಳುತ್ತಾರೆ ‘ ನಾನು ಹಲ್ದಾರ್ ಅವರಿಗೆ ಕಾಗದ ಬರೆಯುತ್ತಿದ್ದೇನೆ. ಸಂಭಾಲಪುರದ ಮಣ್ಣಿನ ಮಗನಾದ, ಆದಿವಾಸಿ ಕವಿಯಾದ ಇವರ ಭಾಷೆ ಕೋಸ್ಲಿ’. ಇದು ಹಲ್ದಾರ್ ಅವರದ್ದೇ ಕವನದ ಸಾಲುಗಳು. ಅವರದನ್ನು ಮನಮುಟ್ಟುವಂತೆ ಆ ಸಾಕ್ಷ್ಯ ಚಿತ್ರದಲ್ಲಿ ಹೇಳಿಕೊಂಡಿದ್ದಾರೆ.  ಸುಮಾರು ಎಂಟು ನಿಮಿಷದ ಈ ಕಿರು ಚಿತ್ರ ಯೂಟ್ಯೂಬ್ ನಲ್ಲಿ ಸಿಗುತ್ತದೆ. ಬಿಡುವು ಮಾಡಿಕೊಂಡು ಒಮ್ಮೆ ನೋಡಿ. ಮನಮುಟ್ಟುವ ಕವನಗಳನ್ನು (ಭಾಷೆ ನಮಗೆ ಅರ್ಥವಾಗದೇ ಹೋದರೂ, ಭಾವನೆಗಳಿಗೆ ಭಾಷೆಯ ಹಂಗೇಕೆ? ಚಿತ್ರದಲ್ಲಿ ಇಂಗ್ಲೀಷ್ ಸಬ್ ಟೈಟಲ್ ಇದೆ) ಬರೆದ ಹಲ್ದಾರ್ ನಾಗ್ ತುಂಬಾ ಆಪ್ತರಾಗುತ್ತಾ ಹೋಗುತ್ತಾರೆ. ಅವರ ನಿಷ್ಕಲ್ಮಶ ನಗು ಎಲ್ಲವನ್ನೂ ಹೇಳುತ್ತದೆ. ಇದನ್ನು ನಿರೂಪಿಸಿದ ಗುಲ್ಜಾರ್ ಅವರೂ ನಮ್ಮ ಮನಸ್ಸನ್ನು ಆವರಿಸಿ ಬಿಡುತ್ತಾರೆ. ಗುಲ್ಜಾರ್ ಕೊನೆಯಲ್ಲಿ ಹೇಳುತ್ತಾರೆ ‘ನಿಮ್ಮೊಳಗಿನ ಸತ್ಯವನ್ನು ಅರಸಲು, ಮೊದಲು ನಿಮಗೇ ಪತ್ರ ಬರೆಯಿರಿ'. ಹಲ್ದಾರ್ ನಾಗ್ ಮಾಡಿದ್ದು ಇದನ್ನೇ ಅಲ್ಲವೇ? ಇವರ ಕವನಗಳಿಂದ ಪ್ರಭಾವಿತರಾದ ಗುಲ್ಜಾರ್ ಅವರು ಹಲ್ದಾರ್ ಅವರಿಗೆ ನಗದು ಬಹುಮಾನವನ್ನು ಕಳುಹಿಸಿಕೊಟ್ಟು ಅಭಿನಂದಿಸುತ್ತಾರೆ.

ಇಷ್ಟೆಲ್ಲಾ ಸಾಧನೆ ಮಾಡಿದರೂ ಹಲ್ದಾರ್ ನಾಗ್ ಅವರು ಈಗಲೂ ಸಣ್ಣ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾ, ಕವನಗಳನ್ನು ರಚಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಇವರ ಪತ್ನಿಯ ಹೆಸರು ಮಾಲತಿ ನಾಗ್. ಇವರಿಗೆ ಓರ್ವ ಮಗಳು ಇದ್ದಾಳೆ. ಸಾಧನೆಗೆ ಜಾತಿಯ, ಅಂತಸ್ತಿನ ಹಂಗಿಲ್ಲ ಎಂದು ತೋರಿಸಿಕೊಟ್ಟ ಹಲ್ದಾರ್ ನಾಗ್ ಅವರಿಗೆ ಕೋಟಿ ನಮನಗಳು.

ಪೂರಕ ಮಾಹಿತಿ: ವರ್ಚುವಲ್ ಇಂಡಿಯಾದ ಸಾಕ್ಷ್ಯ ಚಿತ್ರ

ಚಿತ್ರ ಕೃಪೆ: ಅಂತರ್ಜಾಲ ತಾಣ