ಡಿಜಿಟಲ್ ಯೋಗಕ್ಷೇಮ

ದಿನ ನಿತ್ಯದ ಸ್ಕ್ರೀನ್ ಟೈಮ್

ಸಾಮಾನ್ಯವಾಗಿ ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲ ಗ್ಯಾಜೆಟ್ ಗಳಲ್ಲಿ ನಿಮ್ಮ ದಿನ ನಿತ್ಯದ ಸ್ಕ್ರೀನ್ ಟೈಮ್ ಎಷ್ಟಾಯಿತು ಎಂಬುದರ ಲೆಕ್ಕ ಇಡಬಹುದು. ಅಂದರೆ ನಿಮ್ಮ ಟ್ಯಾಬ್ಲೆಟ್ ಅಥವ ಸ್ಮಾರ್ಟ್ ಫೋನನ್ನು ಎಷ್ಟು ಹೊತ್ತು ದಿಟ್ಟಿಸಿ ನೋಡುತ್ತಿದ್ದಿರಿ ಎಂಬುದರ ಲೆಕ್ಕ. ಮನೆಯಲ್ಲಿ ಮಡದಿ “ನನ್ನ ಮುಖ ನೋಡುವುದಕ್ಕಿಂತ ಹೆಚ್ಚು ನೀವು ಆ ಸ್ಮಾರ್ಟ್ ಫೋನನ್ನು ನೋಡುತ್ತಿರುತ್ತೀರ” ಎಂಬ ಆಪಾದನೆ ಮಾಡಿದರೆ, ಮಡದಿಯ ಮುಖವನ್ನು ನೋಡಿದ ಲೆಕ್ಕ ಗೊತ್ತಿಲ್ಲ, ಆದರೆ ಸ್ಮಾರ್ಟ್ ಫೋನನ್ನು ಎಷ್ಟು ಹೊತ್ತು ಎವೆಯಿಕ್ಕದೆ ನೋಡುತ್ತಿದ್ದಿರಿ ಎಂಬುದರ ಖರೆ ಲೆಕ್ಕ ನಿಮಗೆ ಈಗ ಸಿಗುತ್ತದೆ. 

ದಿನಕ್ಕೆ ನಿರ್ದಿಷ್ಟ ಸಮಯದವರೆಗೂ ಬಳಸಿದ ನಂತರ ಗ್ಯಾಜೆಟ್ಟು ತಾನಾಗಿಯೇ ನಿಮಗೆ “ಈಗ ನೀವು ಇದನ್ನು ಇಷ್ಟು ಹೊತ್ತು ಬಳಸಿದ್ದೀರಿ. ಈಗ ನಿಲ್ಲಿಸಲೇ?” ಎಂದು ಮತ್ತಷ್ಟು ಬಳಸುವ ಮುನ್ನ ತಿಳಿಸಬಲ್ಲುದು. 

ವಿಶೇಷವಾಗಿ ಮಕ್ಕಳಿಗೆ ಕೊಡುವ ಗ್ಯಾಜೆಟ್ಟುಗಳಲ್ಲಿ ಸ್ಕ್ರೀನ್ ಟೈಮ್ ಅನ್ನು ಮಿತಿಯಲ್ಲಿಡಬಹುದು. ಮಕ್ಕಳ ಎಳೆಯ ಕಣ್ಣುಗಳಿಗೆ ಹೆಚ್ಚಿನ ಒತ್ತಡ ಉಂಟು ಮಾಡುವ ಬಹುತೇಕ ಬ್ಯಾಕ್ ಲಿಟ್ ಎಲ್ ಇ ಡಿ ಸ್ಕ್ರೀನುಗಳಿರುವ ಗ್ಯಾಜೆಟ್ ಗಳನ್ನು ಮಿತಿಯಾಗಿ ಬಳಸಿದಲ್ಲಿ ಉತ್ತಮ. 

 

ಮಕ್ಕಳಿಗಷ್ಟೇ ಅಲ್ಲ, ಎಲ್ಲರಿಗೂ ಅನ್ವಯವಾಗುವ ಸಲಹೆ - ರಾತ್ರಿಯ ಹೊತ್ತು ಮಲಗುವ ಮುನ್ನ ಕೆಲವು ಗಂಟೆಗಳ ಕಾಲ ಗ್ಯಾಜೆಟ್ ಗಳನ್ನು ಬಳಸಬೇಡಿ ಎಂಬುದು. ಇದನ್ನು ಕಾರ್ಯರೂಪಕ್ಕೆ ತರುವುದು ಇತ್ತೀಚೆಗೆ ಬಹಳ ಕಷ್ಟಕರವಾದ ವಿಷಯ. ರಾತ್ರಿಯ ಹೊತ್ತು ಎನೋ ಒಂದು ಫೋನು ಬಂದರೂ ಆಯಿತು. ಆ ಫೋನ್ ಕಾಲ್ ಗೆ ಉತ್ತರ ಕೊಟ್ಟು ನಾವು ಫೋನನ್ನು ಸುಮ್ಮನೆ ವಾಪಸ್ ಇಡುತ್ತೇವೆಯೇ? “ನೋಡೋಣ, ಸುದ್ದಿ ಏನು?” - ನ್ಯೂಸ್ ಆಪ್ ತೆಗೆದಿಟ್ಟುಕೊಂಡು ಓದುತ್ತೇವೆ. “ಫೇಸ್ ಬುಕ್ ಒಮ್ಮೆ ಒಂದಷ್ಟು ನಿಮಿಷ ನೋಡಿಬಿಡೋಣ” - ಅಲ್ಲಿಂದ ಹತ್ತಿಪ್ಪತ್ತು ನಿಮಿಷವಾದರೂ ಫೇಸ್ಬುಕ್ ಅಥವ ಟ್ವಿಟರ್ ನೋಡುತ್ತೇವೆ. ಹೀಗೆ ಗ್ಯಾಜೆಟ್ ಗಳು ತುಂಬಿರುವ ಜೀವನದಲ್ಲಿ ರಾತ್ರಿಯ ಹೊತ್ತು ಮಲಗುವ ಮುನ್ನ ಅವುಗಳಿಂದ ದೂರವಿರುವುದು ಕಷ್ಟದ ವಿಷಯವೇ. ಆದರೆ ಇದಕ್ಕೂ ಒಂದು ಪರಿಹಾರ ಇದೆ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಡಿವೈಸುಗಳಲ್ಲಿ “ನೈಟ್ ಲೈಟ್” ಅಥವ ರಾತ್ರಿಯ ಹೊತ್ತು ಪರದೆಯ ಹೊಳಪನ್ನು ಕ್ಷೀಣವಾಗಿಸುವ ಸವಲತ್ತು ಲಭ್ಯವಿದೆ. ಇದರಿಂದ ಕಣ್ಣಿನ ಮೇಲೆ ಹೆಚ್ಚು ಪ್ರಖರವಾದ ಬೆಳಕು ಬೀಳದು. ಬಹಳಷ್ಟು ಹೊತ್ತು ಪ್ರಖರವಾದ ಬೆಳಕು ಕಣ್ಣಿನ ಮೇಲೆ ಬಿದ್ದಲ್ಲಿ ನಿದ್ರೆ ಅಸ್ತವ್ಯಸ್ಥಗೊಳ್ಳುವ ಸಾಧ್ಯತೆ ಹೆಚ್ಚು ಎಂಬುದು ತಿಳಿದಿರುವ ವಿಷಯ. 

ಈ ನೈಟ್ ಲೈಟ್ ವ್ಯವಸ್ಥೆ ಬಂದ ಹೊಸತರಲ್ಲಿ ಮಡದಿಯ ಫೋನು ತೆಗೆದುಕೊಂಡು ಅದರಲ್ಲಿ ರಾತ್ರಿ ಹತ್ತರ ನಂತರ ಬೆಳಕು ಕ್ಷೀಣವಾಗುವಂತೆ ಮಾಡಿಟ್ಟಿದ್ದೆ. ಅವಳು “ನನ್ನ ಮೊಬೈಲ್ ಏನೋ ಆಗಿದೆ. ಸರಿ ಮಾಡಿಕೊಡಿ” ಎಂದು ವಾಪಸ್ ಕೊಟ್ಟಿದ್ದಳು! 

 - ಮುಂದುವರೆದ ಭಾಗ ಸಂಪದದಲ್ಲಿ ಮುಂಬರುವ ದಿನಗಳಲ್ಲಿ ಪೋಸ್ಟ್ ಮಾಡಲಾಗುವುದು. 

(ಈ ಸರಣಿಯ ಪರಿಷ್ಕೃತ ಆವೃತ್ತಿ ೨೦೨೦ರ ವಿಜಯವಾಣಿ ಯುಗಾದಿ ಸಂಚಿಕೆಯಲ್ಲಿ ಪ್ರಕಟವಾಗಿದೆ) 

ಡಿಜಿಟಲ್ well being ಅಥವಾ ಡಿಜಿಟಲ್ ಯೋಗಕ್ಷೇಮ

ಮನೆಯಲ್ಲಿ ನಿತ್ಯವೂ ನಮ್ಮಲ್ಲಿ ಜಗಳ ಬರುವುದೇ “ನೀವು ಟ್ವಿಟ್ಟರ್ ನೋಡುವುದನ್ನು ಬಿಟ್ಟು ನನ್ನ ಕೆಲಸ ಮಾಡಿ”, “ನೀನು ಫೇಸ್ಬುಕ್ ನೋಡುವುದನ್ನು ಬಿಟ್ಟು ಕೆಲಸ ಮಾಡು” ಎಂಬ ವಿಷಯಗಳಿಂದಲೇ. ದಿನವಿಡೀ ಕೆಲಸ ಮಾಡಿ ಒಂದಷ್ಟು “ರೆಶ್ಟ್” ತೆಗೆದುಕೊಳ್ಳಲೆಂದೇ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ನೋಡುವ ಕಾಲ ಇದು. ಕೆಲಸದ ನಡುವೆ “ಬ್ರೇಕ್" ತೆಗೆದುಕೊಳ್ಳುವ ಹುಡುಗರು ವಿಶ್ರಾಂತಿಗೆಂದು ಗೇಮ್ಸ್ ಆಡುತ್ತ ಕುಳಿತುಕೊಳ್ಳುವ ಕಾಲ ಇದು! ಹೀಗಿರುವಾಗ ಮೊಬೈಲ್ ಫೋನುಗಳ, ಗ್ಯಾಜೆಟ್ ಗಳ ಅತಿಯಾದ ಬಳಕೆಯಿಂದ ಆಗುವ ಹಾನಿಯನ್ನು ತಡೆಯುವುದು ತೀರ ಕಷ್ಟದ ವಿಷಯ. ಗ್ಯಾಜೆಟ್ ಗಳ ಅತಿಯಾದ ಬಳಕೆಯಿಂದಾಗಿ ಕೈ ನಡುಕ ಬರುವುದು, ಬೆರಳುಗಳು ಝುಳ್ ಎನ್ನುವುದು, ಅಂಗೈ ಬಲಹೀನ ಎನಿಸುವುದು - ಇವೆಲ್ಲ ಸಾಮಾನ್ಯ. ಹೀಗೆ ಆಗುವೆ ತೊಂದರೆಗಳನ್ನು ತಡೆಯಲು ಇಂಜಿನೀಯರುಗಳು ತಲೆ ಕೆಡಿಸಿಕೊಂಡು ತಂತ್ರಜ್ಞಾನದ ಮೂಲಕವೇ ಸಮತೋಲನ ಕಂಡುಕೊಳ್ಳುವ ಹಲವು ವಿಧಾನಗಳನ್ನು ರೂಪಿಸಿದ್ದಾರೆ. 

ಉದಾಹರಣೆಗೆ, ನೀವು ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಅಥವ ಟಿಕ್ ಟಾಕ್ ನೋಡುತ್ತ ದಿನದ ಎಷ್ಟು ಹೊತ್ತು ಕಳೆದಿರಿ ಎಂಬುದನ್ನು ಈಗ ಆಂಡ್ರಾಯ್ಡಿನಲ್ಲಿ ಡಿಜಿಟಲ್ ವೆಲ್ ಬೀಯಿಂಗ್ ಮೂಲಕ ತಿಳಿದುಕೊಳ್ಳಬಹುದು. ಎನೋ ಕೆಲಸದ ನಡುವೆ ಆಗೀಗ ಸ್ವಲ್ಪ ಹೊತ್ತು ನೋಡಿದೆ ಎಂದುಕೊಂಡಿರುತ್ತೀರಿ. ನಿಜವಾಗಿ ನಿಮ್ಮ ದಿನದ ಎಷ್ಟು ಹೊತ್ತು ಇದಕ್ಕಾಗಿ ಖರ್ಚಾಗಿದೆ ಎಂಬುದನ್ನು ತಿಳಿದುಕೊಂಡಾಗ ನಿಮಗೆ ಆಶ್ಚರ್ಯವಾಗದೇ ಇರದು. 

ಈಗ “ನಾನು ಹೆಚ್ಚು ಹೊತ್ತು ಫೇಸ್ಬುಕ್ ನೋಡುವುದೇ ಇಲ್ಲ!” ಎಂದು ಖಡಾಖಂಡಿತವಾಗಿ ವಾದ ಮಾಡುವ ಹೆಂಡತಿಗೆ ಇದೆಲ್ಲದರ ಲೆಕ್ಕ ಇಡುವ ಆಪ್ ತೋರಿಸಿ “ಇಗೋ, ಇಲ್ಲಿದೆ ಪುರಾವೆ” ಎಂದು ಹೇಳುತ್ತಿರುತ್ತೇನೆ. ಆದರೆ ಅವಳೂ ಬುದ್ಧಿವಂತೆ, ಲೆಕ್ಕ ಇಡುವ ಆಪ್ ಸಂಪೂರ್ಣ ತೆಗೆದುಹಾಕಿಬಿಡುತ್ತಾಳೆ - ಅಲ್ಲಿಗೆ ಲೆಕ್ಕದ ಕಥೆ ಮುಗಿಯಿತು. “ಯೋಗಕ್ಷೇಮಂ ವಹಾಮ್ಯಹಂ” ಎಂದು ಹೇಳಿದ ಆ ಭಗವಂತನೇ ಇನ್ನು ಇವರ ಆರೋಗ್ಯದ ರಕ್ಷಣೆ ಮಾಡಬೇಕು. ಡಿಜಿಟಲ್ ಯುಗದ ಅತೀವ ಆಕರ್ಷಣೆಯ ನಡುವೆ, ಅವಿಶ್ರಾಂತ ನಿತ್ಯಜೀವನದ ನಡುವೆ, ಆರೋಗ್ಯದ ಚಿಂತೆ ಮಾಡುವುದು, ಫೇಸ್ಬುಕ್-ಟ್ವಿಟ್ಟರ್-ವಾಟ್ಸಾಪ್ ಮುಂತಾದವುಗಳನ್ನು ಮಿತಿಯಾಗಿ ಬಳಸುವುದು ನಿಜಕ್ಕೂ ಕಷ್ಟದ ಸಂಗತಿಯೇ. 

 

ಬ್ಲಾಕ್ ಅಂಡ್ ವೈಟ್ ಫೋನು 

ಬ್ಲಾಕ್ ಅಂಡ್ ವೈಟ್ ಟಿವಿ ನೆನಪಿದೆಯೇ? ನಂತರ ಬಂದ ಕಲರ್ ಟಿವಿ ಕಣ್ಣಿಗೆ ಕೊಟ್ಟಷ್ಟು ತ್ರಾಸ ಬ್ಲಾಕ್ ಅಂಡ್ ವೈಟ್ ಟಿವಿ ಕೊಡುತ್ತಿರಲಿಲ್ಲ. ಆದರೆ ಕಲರ್ ಟಿವಿನೇ ಎಲ್ಲರಿಗೂ ಅಚ್ಚುಮೆಚ್ಚು. ಹಾಗೆಯೇ ಕಲರ್ ಟಿವಿ ಎದುರಿದ್ದರೆ ಬ್ಲಾಕ್ ಅಂಡ್ ವೈಟ್ ಟಿವಿಯನ್ನು ಯಾರೂ ಬಳಸುತ್ತಿರಲಿಲ್ಲ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಸ್ಮಾರ್ಟ್ ಫೋನುಗಳಲ್ಲಿ ಈಗ “ಗ್ರೇ ಸ್ಕೇಲ್” ಆಯ್ಕೆ ಲಭ್ಯವಿದೆ. ಇದನ್ನು ಎನೇಬಲ್ ಮಾಡಿದರೆ ಸ್ಮಾರ್ಟ್ ಫೋನು ಬಳಕೆ ಕಡಿಮೆ ಆಕರ್ಷಕವಾದೀತು. ಇದರಿಂದ ಬಳಕೆಯೂ ಕಡಿಮೆಯಾದೀತು. 

ಆದರೆ ಗೊತ್ತಿಲ್ಲದೆ ಇದನ್ನು ಆನ್ ಮಾಡಿಟ್ಟುಕೊಂಡರೆ ಫೋನು ಹಾಳಾಯಿತು ಎನಿಸುವ ಪ್ರಮೇಯವೂ ಎದುರಾಗಬಹುದು. ಹೀಗಾಗಿ ಸ್ವೈಪ್ ಮಾಡಿದ ಕೂಡಲೆ ಈ ಆಯ್ಕೆ ಕಾಣದು. ತಕ್ಷಣ ಸಿಗುವ ಬಟ್ಟನುಗಳ ಕಾನ್ಫಿಗರೇಶನ್ ಎಡಿಟ್ ಮಾಡಿದಾಗ ಇದು ಕಾಣುತ್ತದೆ. ಅಲ್ಲಿಂದ ಡ್ರಾಗ್ ಎಂಡ್ ಡ್ರಾಪ್ ಮಾಡಿ ಈ ಆಯ್ಕೆಯನ್ನು ಹಾಕಿಕೊಳ್ಳಬುಹುದು. 

 - ಮುಂದುವರೆದ ಭಾಗ ಸಂಪದದಲ್ಲಿ ಮುಂಬರುವ ದಿನಗಳಲ್ಲಿ ಪೋಸ್ಟ್ ಮಾಡಲಾಗುವುದು. 

(ಈ ಸರಣಿಯ ಪರಿಷ್ಕೃತ ಆವೃತ್ತಿ ೨೦೨೦ರ ವಿಜಯವಾಣಿ ಯುಗಾದಿ ಸಂಚಿಕೆಯಲ್ಲಿ ಪ್ರಕಟವಾಗಿದೆ) 

ರಾತ್ರಿಯ ಹೊತ್ತು ಮಕ್ಕಳಿಗೆ ಕಥೆ ಹೇಳಲೆಂದು ಹಿಂದಿನ ಕಾಲದಲ್ಲಿ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಈಗ ಮೊಬೈಲು ಫೋನುಗಳನ್ನು ಇಟ್ಟುಕೊಳ್ಳುತ್ತಾರೆ. ಮೊನ್ನೆ ನಲ್ಮೆಯ ಮಡದಿ ಹೀಗೆಯೇ ಮಕ್ಕಳಿಗೆ ಕಥೆ ಹೇಳಲೆಂದು ಮೊಬೈಲ್ ಹಿಡಿದುಕೊಂಡವಳು ಕಥೆ ಹೇಳುತ್ತ ಹಾಗೆಯೇ ನಿದ್ರೆ ಹೋಗಿಬಿಟ್ಟಿದ್ದಳು. ಮಕ್ಕಳೂ ನಿದ್ರೆ ಹೋಗಿದ್ದರು. ಆದರೆ ಮೊಬೈಲು ಮಾತ್ರ ಇವರುಗಳ ನಡುವೆ ಸಿಕ್ಕಿಹಾಕಿಕೊಂಡು ಕಾದು ಕೆಂಡದಂತೆ ಬಿಸಿಯಾಗಿತ್ತು. ನಾನು ನೋಡದೇ ಹೋಗಿದ್ದರೆ ಅದು ಬಹುಶಃ “ಭಡ್" ಅಂದಿರುತ್ತಿತ್ತೋ ಏನೋ. ಸ್ವಲ್ಪದರಲ್ಲಿ ಬದುಕಿಕೊಂಡೆವು. ಹಿಂದಿನ ಕಾಲದವರಿಗೆ ಈ ಸಮಸ್ಯೆ ಇರಲಿಲ್ಲ. ಪುಸ್ತಕದ ಮೇಲೆ ಮಲಗಿ ಹೊರಳಾಡಿದರೂ ಕೂಡ ಬೆಳಗಾಗುವವರೆಗೂ ಜಡವಾಗಿ ಬಿದ್ದಿರುತ್ತಿದ್ದವು ಎನಿಸುತ್ತದೆ, ಹೀಗಾಗಿ ಇದರ ಬಗ್ಗೆ ಯಾರಾದರೂ ಬರೆದಿದ್ದು ಓದಿ ಕಾಣೆ. ಹಿಂದಿನ ಕಾಲದವರಿಗೆ ರಾತ್ರಿಯ ಹೊತ್ತೂ ರಿಂಗಣಿಸುವ ವಾಟ್ಸಾಪ್ ಫಾರ್ವರ್ಡುಗಳ ತೊಂದರೆ ಇರಲಿಲ್ಲ. ಬೆಳಗಾಗಿ "ಗುಡ್ ಮಾರ್ನಿಂಗ್”, ರಾತ್ರಿಗೆ "ಗುಡ್ ನೈಟ್” ಸಂದೇಶಗಳನ್ನು ಕಳುಹಿಸುವ ಹಲವರು ತಮಗೆ “ನೈಟ್” ಆಗುವ ಸಮಯ ಬೇರೆಯವರಿಗೆ "ಮಿಡ್ ನೈಟ್" ಆಗಿರುತ್ತದೆ ಎಂಬ ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಮಲಗುವ ಮುನ್ನ ಸಿಕ್ಕಿದ ಯಾವುದೋ ಒಂದು ಫೋಟೋ ತೆಗೆದುಕೊಂಡು ಮನಸ್ಸಿಗೆ ಬಂದದ್ದನ್ನೆಲ್ಲ ಟೈಪಿಸಿ ಅಲ್ಲಿಗೆ  “ಗುಡ್ ನೈಟ್” ಎಂದು ಒತ್ತಿಬಿಡುತ್ತಾರೆ. ಮುಂಚಿನ ಸ್ಮಾರ್ಟ್ ಫೋನುಗಳಲ್ಲಿ ಈ ರೀತಿ ರಾತ್ರಿಯ ಹೊತ್ತು ಎದುರಾಗುವ ತೊಂದರೆಗಳಿಗೆ ನೇರ ಸಮಾಧಾನ ಇರಲಿಲ್ಲ. ಆಗೆಲ್ಲ ಫೋನನ್ನು ಸೈಲೆಂಟ್ ಮೋಡ್ ನಲ್ಲಿ ಇಡುವುದು ಮರೆತಿರೋ, ಅಂದಿಗೆ ಅದು ನಿದ್ರೆಯಿಲ್ಲದ "ಗುಡ್ ನೈಟ್” ಏ. ಈಗ ಬರುವ ಸ್ಮಾರ್ಟ್ ಫೋನುಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ. ಈಗ "ಡಿ ಎನ್ ಡಿ” ಕಾಲ. 

 

ಡು ನಾಟ್ ಡಿಸ್ಟರ್ಬ್

ಈಗ ಬಹುತೇಕ ಸ್ಮಾರ್ಟ್ ಫೋನುಗಳಲ್ಲಿ ಸ್ಕ್ರೀನಿನ ಮೇಲ್ಭಾಗದಿಂದ ಸ್ವೈಪ್ ಮಾಡಿದರೆ ಕಾಣುವ ಆಯ್ಕೆಗಳಲ್ಲಿ “ಡು ನಾಟ್ ಡಿಸ್ಟರ್ಬ್” ಎಂಬುದೂ ಒಂದು ಇರುತ್ತದೆ. ಇದನ್ನು ಸ್ವಿಚ್ ಆನ್ ಮಾಡಿದರೆ ನಿಮ್ಮ ಸ್ಮಾರ್ಟ್ ಫೋನು ಗಲಾಟೆ ಮಾಡದೆ ಸುಮ್ಮನೆ ಕುಳಿತಿರುತ್ತದೆ. ಈಗಷ್ಟೇ ಈ ಲೇಖನವನ್ನು ಬರೆಯುವ ಮುನ್ನ ನನ್ನ ಎರಡೂ ಫೋನುಗಳಲ್ಲಿ ಡು ನಾಟ್ ಡಿಸ್ಟರ್ಬ್ ಗುಂಡಿಯನ್ನು ಒತ್ತಿ ಈಗ ಬರೆಯುತ್ತ ಕುಳಿತಿರುವೆ. ತುಂಬಾ ಮಂದಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹೀಗೊಂದು ಸವಲತ್ತು ಇರುವುದರ ಬಗ್ಗೆ ಗೊತ್ತಿರುವುದಿಲ್ಲ. ಆದರೆ ಇದರ ಬಗ್ಗೆ ಗೊತ್ತಿರುವ ಹಲವರು ಇದನ್ನು ಬಳಸುವುದಿಲ್ಲ. ಈಗಲೂ ಸೈಲೆಂಟ್ ಮೋಡ್ ನಲ್ಲಿ ಇಟ್ಟುಕೊಳ್ಳುವವರು ಕೆಲವರಾದರೆ, ಕೆಲವರು “ಇಲ್ರೀ, ಅದನ್ನು ಒತ್ತಿ ಆಮೇಲೆ ಮರೆತುಬಿಡುತ್ತೀನಿ. ಆಮೇಲೆ ಯಾವ ಕಾಲ್ ಬಂದರೂ ಗೊತ್ತಾಗುವುದಿಲ್ಲ” ಎನ್ನುವವರು ಇದ್ದಾರೆ. ಒಂದು ದಿನ ನನಗೂ ಹಾಗೆಯೇ ಆಗಿಹೋಯ್ತು. ಯಾವುದೋ ಇಂಪಾರ್ಟೆಂಟ್ ಮೀಟಿಂಗ್ ಎಂದು ಡಿ & ಡಿ ಇಟ್ಟು ಅದನ್ನು ತೆಗೆಯುವುದನ್ನು ಮರೆತುಬಿಟ್ಟೆ. ಎಷ್ಟೋ ಹೊತ್ತಿನ ನಂತರ ನೆನಪಾಗಿ ಫೋನ್ ಚೆಕ್ ಮಾಡುವಷ್ಟರಲ್ಲಿ ಹತ್ತಾರು ಮಿಸ್ಡ್ ಕಾಲ್ ಗಳು ಜಮಾಯಿಸಿದ್ದವು. ಮನೆಯಲ್ಲಿ ಏನೋ ತೊಂದರೆಯಾಗಿ ಮಡದಿ ಹಲವು ಬಾರಿ ಫೋನ್ ಮಾಡಲು ಪ್ರಯತ್ನಿಸಿದ್ದಳು. ವಾಪಸ್ ಫೋನು ಮಾಡುತ್ತಲೇ “ಎಷ್ಟು ಬಾರಿ ಫೋನ್ ಮಾಡುವುದು? ಫೋನ್ ಎತ್ತಿಕೊಳ್ಳುವುದೇ ಇಲ್ಲ” ಎಂದು ಗುಡುಗಿದಳು! 

ಈಗ ಅದಕ್ಕೂ ಒಂದು ಪರಿಹಾರ ಸಿಕ್ಕಿತು - ನನ್ನ ಬಳಿ ಇರುವ ಸ್ಮಾರ್ಟ್ ಫೋನಿನಲ್ಲಿ ಅದೊಂದು ಫೀಚರ್ ಇದೆ. ಅದರ ಮುಖ ಕೆಳಗೆ ಮಾಡಿ ಇಟ್ಟರೆ ತಾನಾಗಿಯೇ ಡು ನಾಟ್ ಡಿಸ್ಟರ್ಬ್ ಮೋಡ್ ಆನ್ ಆಗಿಬಿಡುತ್ತದೆ. ಈ ವಿಷಯವನ್ನೂ ನೆನಪಿಟ್ಟುಕೊಳ್ಳುವುದು ಕಷ್ಟ. ಒಮ್ಮೆ ಕಾರಿನಲ್ಲಿ ಬ್ಲೂಟೂತ್ ಆನ್ ಮಾಡಿದ್ದರೂ ಮರೆತು ಫೋನು ಮುಖ ಕೆಳಗಾಗಿ ಇಟ್ಟುಕೊಂಡಿದ್ದೆ - ಫೋನ್ ಕಾಲ್ ಗಳೇ ಬರಲಿಲ್ಲ. ಎಷ್ಟೋ ಹೊತ್ತಿನ ನಂತರ “ಇದೇನು, ಇಷ್ಟೊಂದು ಮಿಸ್ಡ್ ಕಾಲ್ಸ್ ಇವೆ. ಯಾಕೆ ರಿಂಗ್ ಆಗಲಿಲ್ಲ?” ಎಂದು ಸ್ವಲ್ಪ ಹೊತ್ತು ತಲೆ ಕೆಡಿಸಿಕೊಂಡಿದ್ದೆ. 

 - ಮುಂದುವರೆದ ಭಾಗ ಸಂಪದದಲ್ಲಿ ಮುಂಬರುವ ದಿನಗಳಲ್ಲಿ ಪೋಸ್ಟ್ ಮಾಡಲಾಗುವುದು. 

(ಈ ಸರಣಿಯ ಪರಿಷ್ಕೃತ ಆವೃತ್ತಿ ೨೦೨೦ರ ವಿಜಯವಾಣಿ ಯುಗಾದಿ ಸಂಚಿಕೆಯಲ್ಲಿ ಪ್ರಕಟವಾಗಿದೆ)