ನಮೀಬಿಯಾದ ನಿಗೂಢ ವೃತ್ತಗಳು

ನಮೀಬಿಯಾದ ನಿಗೂಢ ವೃತ್ತಗಳು

ನಾವು ವಾಸಿಸುತ್ತಿರುವ ಭೂಮಿಯು ಒಂದು ಅದ್ಬುತವಾದ ಗ್ರಹ. ಈ ಗ್ರಹದಲ್ಲಿ ವಿಜ್ಞಾನದ ಊಹೆಗೂ ನಿಲುಕದ ಹಲವಾರು ಸಂಗತಿಗಳನ್ನು ನಾವು ಗಮನಿಸುತ್ತಾ ಬಂದಿದ್ದೇವೆ. ಈಗಾಗಲೇ ನಾನು ‘ಸಂಪದ'ದಲ್ಲಿ ಡೆವಿಲ್ಸ್ ಕೆಟಲ್, ಕಲಾಚಿಯ ನಿದ್ರಾನಗರ, ಮರದ ಮೇಲೆ ಒಂದು ಮರ ಬೆಳೆದ ಪ್ರಸಂಗ, ಹೆಸ್ಡಾಲೆನ್ ಲೈಟ್ಸ್ ಗಳು ಎಂಬ ಅಪರೂಪದ ಊಹೆಗೂ ನಿಲುಕದ ಕೆಲವು ಸಂಗತಿಗಳನ್ನು ಬರೆದಿರುವೆ. ಈ ಸಾಲಿಗೆ ಸೇರುವ ಇನ್ನೊಂದು ಸಂಗತಿಯೆಂದರೆ ನಮೀಬಿಯಾ ದೇಶದ ನಿಗೂಢ ವೃತ್ತಗಳು.

ದಕ್ಷಿಣ ಆಫ್ರಿಕಾದ ನಮೀಬಿಯಾ ದೇಶದಲ್ಲಿರುವ ಮರುಭೂಮಿ ಪ್ರದೇಶವಾದ ನಮೀಬಿ ಎಂಬಲ್ಲಿ ಸಾಮಾನ್ಯವಾಗಿ ಈ ವೃತ್ತಗಳು ಕಂಡು ಬರುತ್ತವೆ. ದಕ್ಷಿಣ ಆಫ್ರಿಕಾದಿಂದ ಅಂಗೋಲಾದವರೆಗೂ ಈ ವೃತ್ತಗಳು ಕಾಣಸಿಗುತ್ತವೆ. ಸುತ್ತಲೂ ಕುರುಚಲು ಹುಲ್ಲಿನಿಂದ ಕೂಡಿದ ವೃತ್ತ, ನಡುವೆ ಖಾಲಿ ಜಾಗ. ಈ ವೃತ್ತಗಳು ೨ ಮೀಟರ್ ನಿಂದ ೧೫ ಮೀಟರ್ ಸುತ್ತಳತೆಯನ್ನು ಹೊಂದಿರುತ್ತವೆ. ಇವುಗಳ ಸಂಖ್ಯೆಗಳು ಒಂದೆರಡಲ್ಲ, ಸಾವಿರಾರು ಸಂಖ್ಯೆಯಲ್ಲಿ ಇಂತಹ ವೃತ್ತಗಳು ಕಂಡು ಬರುತ್ತವೆ. ಇವುಗಳು ಹೇಗೆ ಮತ್ತು ಏಕೆ ನಿರ್ಮಿತವಾಗುತ್ತಿವೆ ಎಂದು ತಿಳಿಸಲು ಇಲ್ಲಿಯವರೆಗೆ ಸರಿಯಾದ ದಾಖಲೆಗಳು ದೊರೆತಿಲ್ಲ. ಇವುಗಳ ಬಗ್ಗೆ ಹಲವಾರು ಸಂಶೋಧನೆಗಳು ನಡೆದಿವೆ. ಆದರೆ ಇಂತಹದ್ದೇ ಕಾರಣಗಳಿಂದಾಗಿ ಇವು ನಿರ್ಮಾಣವಾಗುತ್ತಿವೆ ಎಂದು ಖಡಾಖಂಡಿತವಾಗಿ ಹೇಳುವ ಫಲಿತಾಂಶಗಳು ಸಿಕ್ಕಿಲ್ಲ. ೨೦೧೪ರವರೆಗೆ ನಮೀಬಿ ಮರುಭೂಮಿಯ ಹುಲ್ಲುಗಾವಲಿನಲ್ಲಿ ಕಾಣಸಿಗುತ್ತಿದ್ದ ಈ ನಿಗೂಢ ವೃತ್ತಗಳು ಪಶ್ಚಿಮ ಆಸ್ಟ್ರೇಲಿಯಾದ ಪಿಲಬರಾ ಎಂಬಲ್ಲಿಯೂ ಕಂಡು ಬಂದಿದೆ.

ಮಾಯಾ (Fairy Circles) ವೃತ್ತಗಳನ್ನು ಹಲವಾರು ಮಂದಿ ವಿಜ್ಞಾನಿಗಳು, ಸಂಶೋಧಕರು ಪರಿಶೀಲಿಸಿದ್ದಾರೆ. ಈ ವೃತ್ತಗಳ ಬಗ್ಗೆ ಸ್ಥಳೀಯರಲ್ಲಿ ಹಲವಾರು ರೋಚಕ ಕಥೆಗಳಿವೆ. ಕೆಲವರು ಅವುಗಳು ಬೇರೆ ಗ್ರಹಗಳಿಂದ ಭೂಮಿಯತ್ತ ಬಂದು ಇಳಿದ ಹಾರುವ ತಟ್ಟೆಗಳ (UFO) ಕಾರಣದಿಂದ ನಿರ್ಮಾಣವಾಗಿರಬಹುದೆಂದು ಹೇಳುತ್ತಾರೆ. ಇದು ಹಾಸ್ಯದ ಮಾತಾಯಿತು. ಏಕೆಂದರೆ ಇಷ್ಟೊಂದು ಅಸಂಖ್ಯಾತ ವೃತ್ತಗಳು ನಿರ್ಮಾಣವಾಗಬೇಕಾದರೆ ಪ್ರತೀ ದಿನ ನೂರಾರು ಹಾರುವ ತಟ್ಟೆಗಳು ಬರಬೇಕಿತ್ತು. ಬಂದವುಗಳನ್ನು ಯಾರಾದರೂ ನೋಡಲೇ ಬೇಕಿತ್ತಲ್ಲವೇ? ಇನ್ನು ಕೆಲವರ ಪ್ರಕಾರ ಅವುಗಳು ನಮೀಬಿಯಾದ ರಾಷ್ಟ್ರೀಯ ಪ್ರಾಣಿ ಒರಿಕ್ಸ್ (Oryx) ನ ಓಡಾಟದ ಗುರುತುಗಳು ಎನ್ನುತ್ತಾರೆ. ಒರಿಕ್ಸ್ ಎಂಬ ಪ್ರಾಣಿಗಳು ಜಿಂಕೆಯಂತೆ ಇರುತ್ತವೆ. ಅವುಗಳು ನೂರಾರು ಸಂಖ್ಯೆಯಲ್ಲಿ ಬಂದು ನಿದ್ರೆ ಮಾಡಿ ಹೊರಳಾಡುವಾಗ ಆದ ವೃತ್ತಗಳು ಎಂದೂ ಹೇಳುತ್ತಾರೆ.

ಈ ರಹಸ್ಯವನ್ನು ಬಯಲು ಮಾಡುವ ನಿಟ್ಟಿನಲ್ಲಿ ಹಲವಾರು ಮಂದಿ ವಿಜ್ಞಾನಿಗಳು ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ. ಕೆಲವು ವಿಜ್ಞಾನಿಗಳು ಒಂದು ರೀತಿಯ ಗೆದ್ದಲುಗಳಿಂದ ಈ ರೀತಿಯ ನಿರ್ಮಾಣವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಗೆದ್ದಲುಗಳು ಭೂಮಿಯ ಒಳಗಡೆ ತಮ್ಮ ಗೂಡುಗಳನ್ನು ನಿರ್ಮಾಣ ಮಾಡಲು ಮಣ್ಣನ್ನು ಕೊರೆಯುವಾಗ ಅದರ ದಾರಿಯಲ್ಲಿ ಸಿಗುವ ಗಿಡಗಳ ಬೇರುಗಳನ್ನೂ ಕತ್ತರಿಸಿ ಹಾಕುವುದರಿಂದ ಗಿಡಗಳು ಸಾಯುತ್ತವೆ. ಗೆದ್ದಲು ಒಂದು ನಿರ್ದಿಷ್ಟ ಸಾಲಿನಲ್ಲೇ ಮಣ್ಣು ಕೊರೆಯುವ ಕಾರಣದಿಂದಾಗಿ ವೃತ್ತ ನಿರ್ಮಾಣವಾಗಿರಬಹುದು ಎಂದು ಅಂದಾಜಿಸಿದ್ದಾರೆ. ಆ ಮಣ್ಣು ಕೊರೆಯುವ ಸಮಯದಲ್ಲಿ ಗೆದ್ದಲುಗಳು ಒಂದು ಬಗೆಯ ವಿಷಕಾರಿ ವಾಯುವನ್ನು ಹೊರಬಿಡುತ್ತದೆಯಂತೆ. ಬೇರು ಕತ್ತರಿಸಿದ ನಂತರ ಆ ಸ್ಥಳದ ಗಿಡಗಳು ಸತ್ತು ಹೋಗಿ ಅಲ್ಲಿ ಖಾಲಿ ಜಾಗ ನಿರ್ಮಾಣವಾಗಿದೆ ಎಂದು ನಂಬಿದ್ದಾರೆ. ಈ ಪ್ರಯೋಗವನ್ನು ಸಿದ್ಧಪಡಿಸಲು ವಿಜ್ಞಾನಿಗಳು ಆ ಗೆದ್ದಲುಗಳನ್ನು ಬೇರೆ ಸ್ಥಳಕ್ಕೆ (ವೃತ್ತಗಳಿಲ್ಲದ) ತೆಗೆದುಕೊಂಡು ಹೋಗಿ, ಅಲ್ಲಿನ ಮಣ್ಣಿನಲ್ಲಿ ಅವುಗಳನ್ನು ಬಿಟ್ಟು ಅಲ್ಲಿ ವೃತ್ತಗಳು ನಿರ್ಮಾಣವಾಗುತ್ತವೆಯೋ ಎಂದು ಪರೀಕ್ಷಿಸಬೇಕಿತ್ತು. 

ಆ ಮರುಭೂಮಿಯ ಹುಲ್ಲುಗಾವಲಿನಲ್ಲಿ ಬೆಳೆಯುವ ಒಂದು ಬಗೆಯ ಹುಲ್ಲಿನ ಕಾರಣದಿಂದಲೂ ವೃತ್ತ ನಿರ್ಮಾಣವಾಗಿರುವ ಸಾಧ್ಯತೆ ಇದೆಯಂತೆ. ಏಕೆಂದರೆ ಕೆಲವು ಹುಲ್ಲುಗಳು ದೊಡ್ಡದಾಗಿಯೂ ಕೆಲವು ಸಣ್ಣದಾಗಿಯೂ ಬೆಳೆಯುತ್ತವೆಯಾದುದರಿಂದ,ಸಣ್ಣ ಗಿಡಗಳು ಬೇಗ ಸಾಯುವುದರಿಂದ ಆ ಜಾಗ ಖಾಲಿಯಾಗಿ ವೃತ್ತ ನಿರ್ಮಾಣವಾಗಿರಬಹುದೆಂದು ಕೆಲವು ವಿಜ್ಞಾನಿಗಳ ಅಂದಾಜು. ಇನ್ನೊಂದು ಗುಂಪಿನ ವಿಜ್ಞಾನಿಗಳು ಬೇರೊಂದು ಪ್ರಯೋಗ ಮಾಡಿ ನೋಡಿದರು. ಅವರು ಆ ಅಸಂಖ್ಯಾತ ವೃತ್ತಗಳಲ್ಲಿನ ಕೆಲವು ಆಯ್ದ ವೃತ್ತಗಳಿಗೆ ನೀರು ಹಾಗೂ ಪೋಷಕಾಂಶಗಳನ್ನು ಸರಬರಾಜು ಮಾಡಿದರು. ಯಾವ ವೃತ್ತದ ಖಾಲಿ ಜಾಗದಲ್ಲಿ ನೀರು ಹಾಕಿದ್ದರೋ ಆ ಜಾಗದಲ್ಲಿ ಮತ್ತೆ ಗಿಡಗಳು ಹುಟ್ಟಿಕೊಂಡವು. ಅವರ ಪ್ರಕಾರ ಖಾಲಿ ಜಾಗಗಳು ಗಿಡಗಳಿಗೆ ಸರಿಯಾದ ಪೋಷಕಾಂಶಗಳು ಸಿಗದೇ ನಿರ್ಮಾಣವಾಗಿವೆಯಂತೆ. ಏಕ ಜಾಗದಲ್ಲಿ ಹಲವಾರು ಜೊತೆ ಹುಲ್ಲುಗಳು ಬೆಳೆದಾಗ ಕೆಲವು ಹುಲ್ಲುಗಳಿಗೆ ಸರಿಯಾದ ಪೋಷಕಾಂಶ, ನೀರು ಸಿಕ್ಕರೆ ಕೆಲವು ಹುಲ್ಲುಗಳಿಗೆ ಜಾಗದ ಕೊರತೆಯಾಗುವುದು ಸಹಜ. ಈ ಪೋಷಕಾಂಶ ಮತ್ತು ನೀರಿನ ಕೊರತೆಯಿಂದ ಆ ಹುಲ್ಲುಗಳು ಬೇಗನೇ ಸತ್ತು ಹೋಗುತ್ತವೆ ಮತ್ತು ಅಲ್ಲಿ ಖಾಲಿ ಜಾಗದ ನಿರ್ಮಾಣವಾಗುತ್ತವೆ. ಆದರೆ ಈ ಖಾಲಿ ಜಾಗಗಳು ವೃತ್ತಾಕಾರದಲ್ಲೇ ಏಕೆ ಆಗುತ್ತವೆ ಎಂಬುದಕ್ಕೆ ಇನ್ನೂ ನಿಖರ ಉತ್ತರ ಸಿಕ್ಕಿಲ್ಲ. ಈ ಎಲ್ಲಾ ಕಾರಣಗಳಿಂದ ನಮೀಬಿಯಾದ ಈ ವೃತ್ತಗಳು ಇನ್ನೂ ತಮ್ಮ ನಿಗೂಢತೆಯನ್ನು ಕಾಯ್ದುಕೊಂಡಿವೆ ಎನ್ನುವುದರಲ್ಲಿ ಸಂಶಯವಿಲ್ಲ. ಬಹುಷಃ ಭವಿಷ್ಯದಲ್ಲಿ ಮುಂದೊಂದು ದಿನ ಈ ರಹಸ್ಯವೂ ಬಯಲಾದೀತು ಎಂಬುದು ನಮ್ಮೆಲ್ಲರ ಆಶಾಭಾವ.

ಚಿತ್ರಗಳ ವಿವರ ೧. ನಮೀಬಿಯಾದ ಮರುಭೂಮಿಯಲ್ಲಿ ನಿರ್ಮಾಣವಾದ ಅಸಂಖ್ಯಾತ ವೃತ್ತಗಳು

೨. ಹುಲ್ಲುಗಳಿಂದ ಆವೃತ್ತವಾದ ವೃತ್ತ.

ಚಿತ್ರ ಕೃಪೆ: ಅಂತರ್ಜಾಲ ತಾಣ