ನೂಪುರ ನಾದ (ಪರಿವರ್ಧಿನಿ ಷಟ್ಪದಿ)

ನೂಪುರ ನಾದ (ಪರಿವರ್ಧಿನಿ ಷಟ್ಪದಿ)

ಕವನ

ನೂಪುರ ನಾದವ ಕೇಳಲು ಕರ್ಣದಿ

ಗೋಪುರದಲ್ಲಿಯ ಶುಭ್ರದಿ ಬೆಳಕದು

ಕೋಪದ ಸೂಚಕ ಹುಬ್ಬನು ಹಾರಿಸಿ

ಕಂಡಳು ತೋಷದಲಿ|

ಲೋಪವ ಕಾಣದೆ ಮನದಲಿ ಹೊಗಳಲು

ರೂಪವ ಹೊಗಳಲು ಷಟ್ಪದಿ ಸಾಲದು

ಪೋಪದೆ ಸೆಳೆದಳು ಮೋಹದ ಚಣದಲಿ

ನಲ್ಲನ ತಬ್ಬುತಲಿ||

 

ಲಸಿತದ ಕಾಲಿನ ಢಾಳದ ಗೆಜ್ಜೆಯು

ಹುಸಿಯನು ಮಾಡದೆ ಸಾಗಲು ತೋಷವು

ಬಿಸಿಯುಸಿರನು ತಾ ಬಿಡುತಲಿ ರಂಗದ

ಮೇಲಿನ ವಾದ್ಯದಲಿ|

ದೆಸೆಯದು ಕಾಣದೆ ವಲ್ಲಭ ಬಂದನು

ಹಸಿರಿನ ಸಿರಿಯಲಿ ಚೆಲುವಿನ ರೂಪವ

ರಸಮಯ ಚಣವನು ಸವಿಯುತ ಹೊರಟನು

ನಲ್ಲನು ನೋಟದಲಿ||

 

ವಿಧವಿಧ ಭಂಗಿಯ ನೃತ್ಯದ ರಂಗದಿ

ತದನನ ತೊಂತನ ತಬಲದ ನಾದದಿ

ಚದುರೆಯ ವಿರಹದ ಬೇಗುದಿ ಕಾಣಲು

ಕುಣಿತದ ಗತ್ತಿನಲಿ|

ವದನದ ಕಾಂತಿಯ ಕುಂದದ ಕಳೆಯದು

ಹದದಲಿ ಮೋಹದ ಸೆಳೆಯುವ ಕಿರುನಗೆ

ನದಿಯಲಿ ತೇಲುವ ನೌಕೆಯ ತೆರದಲಿ

ವೇಗದ  ಭರದಲ್ಲಿ||

-ಶಂಕರಾನಂದ ಹೆಬ್ಬಾಳ 

 

ಚಿತ್ರ್