ಬದುಕಿನ ನೃತ್ಯ ನಿಲ್ಲಿಸಿದ ‘ಮಾಸ್ಟರ್ ಜೀ’ ಸರೋಜ್ ಖಾನ್

ಬದುಕಿನ ನೃತ್ಯ ನಿಲ್ಲಿಸಿದ ‘ಮಾಸ್ಟರ್ ಜೀ’ ಸರೋಜ್ ಖಾನ್

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ‘ತೇಜಾಬ್' ಚಿತ್ರದಲ್ಲಿನ ಏಕ್ ದೋ ತೀನ್ ಎಂಬ ಹಾಡಿನ ನೃತ್ಯಕ್ಕೆ ಮನಸೋತಿರುವಿರಾ? ನಟಿ ಶ್ರೀದೇವಿಯ ಮಿ.ಇಂಡಿಯಾ ಚಿತ್ರದಲ್ಲಿನ ‘ಹವಾ ಹವಾಯಿ’ ಎಂಬ ನೃತ್ಯ ನಿಮ್ಮನ್ನೂ ನರ್ತಿಸುವಂತೆ ಮಾಡಿದೆಯಾ? ಆ ನೃತ್ಯ ಕಲಿಸಿದವರು ಯಾರಿರಬಹುದು ಎಂದು ಕುತೂಹಲ ನಿಮ್ಮನ್ನು ಕಾಡಿರಬಹುದಲ್ವೇ? ಆ ಸೂಪರ್ ನೃತ್ಯಗಳ ನಿರ್ದೇಶಕಿಯ ಹೆಸರೇ ಸರೋಜ್ ಖಾನ್. ಸರೋಜ್ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ ‘ಮಾಸ್ಟರ್ ಜೀ’ ಎಂದೇ ದೊಡ್ಡ ಹೆಸರು ಪಡೆದವರು. ಇಂದು, ಜುಲೈ ೩, ೨೦೨೦ರಂದು ತಮ್ಮ ೭೨ನೇ ವಯಸ್ಸಿನಲ್ಲಿ ಬದುಕಿನ ‘ನೃತ್ಯ'ವನ್ನು  ನಿಲ್ಲಿಸಿದರು. ಆದರೆ ಅವರು ಚಿತ್ರರಂಗದಲ್ಲಿ ಸಾಗಿ ಬಂದ ಹಾದಿಯ ಬಗ್ಗೆ ವಿಶ್ಲೇಷಣೆ ಮಾಡಲು ಇದು ಸರಿಯಾದ ಸಮಯ.

ಸರೋಜ್ ಖಾನ್ ಎಂದರೆ ಏನಪ್ಪಾ ಈ ಹೆಸರು ಎಂದು ಅಂದು ಕೊಳ್ಳ ಬೇಡಿ. ಅವರ ನಿಜವಾದ ನಾಮಧೇಯ ನಿರ್ಮಲಾ ನಾಗಪಾಲ್. ಮದುವೆಯ ನಂತರ ಸರೋಜ್ ಖಾನ್ ಆದರು. ೧೯೪೮ ನವೆಂಬರ್ ೨೨ರಂದು ಮುಂಬಯಿಯಲ್ಲಿ ಜನಿಸಿದರು. ತಮ್ಮ ೪೦ ವರ್ಷಗಳ ಸುದೀರ್ಘವಾದ ವೃತ್ತಿ ಜೀವನದಲ್ಲಿ ಸುಮಾರು ೨೦೦೦ಕ್ಕೂ ಅಧಿಕ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ ಎಂದರೆ ಅದೊಂದು ದಾಖಲೆಯೇ ಸರಿ. ಸರೋಜ್ ಖಾನ್ ಅವರಿಗೆ ತಮ್ಮ ವೃತ್ತಿಯ ಮೇಲಿದ್ದ ಬದ್ಧತೆ ಮತ್ತು ಪ್ರೀತಿ ಮೆಚ್ಚುವಂತದ್ದು. ಬಾಲಿವುಡ್ ನ ಖ್ಯಾತ ನಟಿಯರಾದ ಶ್ರೀದೇವಿ, ಮಾಧುರಿ ದೀಕ್ಷಿತ್ ಅವರ ಅದ್ಭುತ ನೃತ್ಯದ ಹಿಂದಿನ ಶಕ್ತಿಯೇ ಸರೋಜ್ ಖಾನ್. 

ಬಾಲ್ಯದಿಂದಲೂ ಪ್ರತಿಭಾವಂತ ಕಲಾವಿದೆಯಾಗುವ ಗುಣಗಳು ಸರೋಜ್ ಖಾನ್ ಅವರಲ್ಲಿ ಕಂಡು ಬಂದವು. ತಮ್ಮ ಮೂರನೇ ವಯಸ್ಸಿನಲ್ಲಿಯೇ ಬಾಲನಟಿಯಾಗಿ ‘ನಜರಾನಾ’ ಎಂಬ ಚಿತ್ರದಲ್ಲಿ ನಟಿಸಿದ್ದಳು. ಹಲವಾರು ಚಿತ್ರಗಳಲ್ಲಿ ನೃತ್ಯ ಮಾಡುವ ಸಹಕಲಾವಿದೆಯಾಗಿಯೂ ನಟಿಸಿದ್ದಿದೆ. ಸರೋಜ್ ಖಾನ್ ಅವರ ಬದುಕಿನ ದುರಂತವೆಂದರೆ ಅವರ ಮದುವೆ. ಅವರಿಗೆ ನೃತ್ಯ ಕಲಿಸುತ್ತಿದ್ದ ನೃತ್ಯ ನಿರ್ದೇಶಕರಾದ ಬಿ.ಸೋಹನ್ ಲಾಲ್ ಅವರು ಸರೋಜ್ ಖಾನ್ ಅವರನ್ನು ಮದುವೆಯಾಗುವಾಗ ಅವರಿಗೆ ಕೇವಲ ೧೩ ವರ್ಷ. ಸೋಹನ್ ಲಾಲ್ ಗೆ ೪೩. ತಮಗಿಂತ ೩೦ ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾದ ಬಳಿಕ ಇನ್ನೊಂದು ಶಾಕಿಂಗ್ ಸಮಾಚಾರ ಸರೋಜ್ ಖಾನ್ ಅವರಿಗೆ ಕಾದಿತ್ತು, ಅದೇನೆಂದರೆ ಈ ಮೊದಲೇ ಸೋಹನ್ ಲಾಲ್ ಮದುವೆಯಾಗಿದ್ದು, ನಾಲ್ಕು ಮಕ್ಕಳೂ ಇದ್ದಾರೆ ಎಂದು. ಆದರೆ ಈ ಎಲ್ಲಾ ದುಃಖಗಳನ್ನು ಬದಿಗಿಟ್ಟು, ಸರೋಜ್ ಖಾನ್ ಅವರು ತಮ್ಮ ವೃತ್ತಿ ಜೀವನವನ್ನು ರೂಪಿಸತೊಡಗಿದರು. 

ಚಿತ್ರರಂಗದಲ್ಲಿ ಮೊದಲಿಗೆ ಸಹಾಯಕ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದ ಸರೋಜ್ ೧೯೭೪ರಲ್ಲಿ ತೆರೆಕಂಡ ‘ಗೀತಾ ಮೇರಾ ನಾಮ್' ಚಿತ್ರದಲ್ಲಿ ಸ್ವತಂತ್ರವಾಗಿ ನಿರ್ದೇಶಕಿಯಾಗಿ ನೃತ್ಯವನ್ನು ಹೇಳಿಕೊಟ್ಟರು. ಸ್ವತಂತ್ರವಾಗಿ ನೃತ್ಯ ನಿರ್ದೇಶಕಿಯಾದರೂ, ಅವರ ಕೆಲಸವನ್ನು ಮೆಚ್ಚಿ ಕೊಂಡರೂ ಅವಕಾಶಗಳ ಬಾಗಿಲು ಅವರಿಗೆ ಬೇಗನೇ ತೆರೆದುಕೊಳ್ಳಲಿಲ್ಲ. ಹಲವಾರು ವರ್ಷಗಳ ಕಾಲ ಸಣ್ಣ ಪುಟ್ಟ ನಿರ್ದೇಶನಕಗಳನ್ನೇ ಮಾಡಿ ಕಾಲ ಕಳೆದರು. ಆದರೆ ೧೯೮೭ರಲ್ಲಿ ಶ್ರೀದೇವಿ ನಟಿಸಿದ ಮಿ.ಇಂಡಿಯಾ ಚಿತ್ರದ ಹವಾ ಹವಾಯಿ ಹಾಡಿನ ನೃತ್ಯ ಸರೋಜ್ ಖಾನ್ ಅವರಿಗೆ ದಿನ ಬೆಳಗಾಗುವಷ್ಟರಲ್ಲಿ ಖ್ಯಾತಿಯನ್ನು ತಂದುಕೊಟ್ಟಿತು. ಮತ್ತೆ ಸರೋಜ್ ಖಾನ್ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಆ ಸಮಯದಲ್ಲಿ ಶ್ರೀದೇವಿ ಹಾಗೂ ಮಾಧುರಿ ದೀಕ್ಷಿತ್ ಹಿಂದಿ ಚಿತ್ರರಂಗದ ಸಾಮ್ರಾಜ್ಞಿಗಳಾಗಿದ್ದರು. ಅವರಿಬ್ಬರ ಬಹುತೇಕ ಚಿತ್ರಗಳಲ್ಲಿ ಸರೋಜ್ ಖಾನ್ ಅವರದ್ದೇ ನೃತ್ಯ ನಿರ್ದೇಶನ. ಶ್ರೀದೇವಿ ನಟನೆಯ ನಗೀನಾ, ಚಾಂದನಿ ಮಾಧುರಿ ದೀಕ್ಷಿತ್ ನಟನೆಯ ತೇಜಾಬ್, ಬೇಟಾ ಚಿತ್ರಗಳಲ್ಲಿನ ಹಾಡಿನ ನೃತ್ಯಗಳು ಇವರಿಗೆ ದೊಡ್ಡ ಹೆಸರು ಹಾಗೂ ಪ್ರಶಸ್ತಿಗಳನ್ನು ತಂದು ಕೊಟ್ಟವು. ಮಾಧುರಿ ದೀಕ್ಷಿತ್ ಜೊತೆಗೆ ಇವರ ನೃತ್ಯ ನಿರ್ದೇಶನದಲ್ಲಿ ತುಂಬಾ ಹೊಂದಾಣಿಕೆ ಇತ್ತು. ತಮ್ಮ ಪ್ರಿಯ ನಟಿ ಮಾಧುರಿ ದೀಕ್ಷಿತ್ ಗೆ ೨೦೧೪ರಲ್ಲಿ  ಗುಲಾಬ್ ಗ್ಯಾಂಗ್ ಚಿತ್ರಕ್ಕಾಗಿ ನೃತ್ಯ ನಿರ್ದೇಶನ ಮಾಡುತ್ತಾರೆ. ಸರೋಜ್ ಖಾನ್ ತಮ್ಮ ಜೀವಿತಾವಧಿಯಲ್ಲಿ ಬಹಳಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಫಿಲಂ ಫೇರ್ ಪ್ರಶಸ್ತಿ, ನಂದಿ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಕೇವಲ ಹಿಂದಿ ಮಾತ್ರವಲ್ಲ, ಕೆಲವು ತಮಿಳು ಚಿತ್ರಗಳಿಗೂ ಇವರು ನೃತ್ಯ ನಿರ್ದೇಶನ ಮಾಡಿದ್ದಾರೆ.

ಸರೋಜ್ ಖಾನ್ ಕೇವಲ ಹಿರಿ ತೆರೆಯಲ್ಲಿ ಮಾತ್ರವಲ್ಲದೇ ಕಿರು ತೆರೆಯ ಹಲವಾರು ರಿಯಾಲಿಟಿ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಸಲಹೆ, ಸಹಕಾರ ನೀಡಿದ್ದಾರೆ. ನಾಚ್ ಬಲಿಯೇ, ಭೂಗೀ ವೂಗೀ ಮುಂತಾದ ಪ್ರಸಿದ್ಧ ದೂರದರ್ಶನದ ಕಾರ್ಯಕ್ರಮಗಳಿಗೆ ಇವರು ತೀರ್ಪುಗಾರರಾಗಿ ಸ್ಪರ್ಧಾರ್ಥಿಗಳಿಗೆ ಸ್ಪೂರ್ತಿ ತುಂಬಿದ್ದರು. ಸರೋಜ್ ಖಾನ್ ಜೀವದ ಬಗ್ಗೆ ‘ದಿ ಸರೋಜ್ ಖಾನ್ ಸ್ಟೋರಿ' ಎಂಬ ಸಾಕ್ಷ್ಯ ಚಿತ್ರವೂ ೨೦೧೨ರಲ್ಲಿ ತೆರೆಕಂಡಿತ್ತು. 

ಸರೋಜ್ ಖಾನ್ ಅವರ ಪ್ಲಸ್ ಪಾಯಿಂಟ್ ಏನೆಂದರೆ ಅವರು ನೃತ್ಯ ಹೇಳಿಕೊಡುವ ರೀತಿ ಹಾಗೂ ನೃತ್ಯದ ಹೆಜ್ಜೆಗಳು ಸುಲಭವಾಗಿ ಕಲಾವಿದರಿಗೆ ಅರ್ಥವಾಗುವಂತಿರುತ್ತಿತ್ತು. ಇಂದು ಸರೋಜ್ ಖಾನ್ ನಮ್ಮೊಂದಿಗೆ ಇಲ್ಲ., ಆದರೂ ಅವರ ಅಸಂಖ್ಯಾತ ನೃತ್ಯಗಳು ನಮ್ಮ ಜೊತೆ ಜೀವಂತವಾಗಿರುತ್ತದೆ. ಇವರು ತಮ್ಮ ಮೂವರು ಮಕ್ಕಳು ಹಾಗೂ ಪತಿ ಸೋಹನ್ ಲಾಲ್ ಅವರನ್ನು ಅಗಲಿದ್ದಾರೆ.ತೆರೆಯ ಮರೆಯಲ್ಲಿ ಕೆಲಸ ಮಾಡಿದವರನ್ನು ನಾವು ಹೆಚ್ಚಾಗಿ ಮರೆಯುತ್ತೇವೆ. ಆದರೆ ಅದೃಷ್ಟವಶಾತ್ ಸರೋಜ್ ಖಾನ್ ಚಿತ್ರರಂಗದಲ್ಲಿ ಓರ್ವ ಸೆಲೆಬ್ರಿಟಿಯೇ ಆಗಿದ್ದರು. ಆದುದರಿಂದ ಅವರು ಸದಾ ಕಾಲ ನಮ್ಮ ಮನದಾಳದಲ್ಲಿ ಅಜರಾಮರ.

ಚಿತ್ರ: ಅಂತರ್ಜಾಲ ಕೃಪೆ