ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆಂಗ್ಲ- ಆಲ್ಫ್ರೆಡ್ ಆಲ್ಡ್ರೆಡ್

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆಂಗ್ಲ- ಆಲ್ಫ್ರೆಡ್ ಆಲ್ಡ್ರೆಡ್

ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಸಹಸ್ರಾರು ಭಾರತಾಂಬೆಯ ವೀರ ಪುತ್ರರ ಬಗ್ಗೆ ನಮಗೆ ತಿಳಿದೇ ಇದೆ. ಅವರೆಲ್ಲರೂ ಭಾರತ ದೇಶದಲ್ಲಿ ಹುಟ್ಟಿ ತಮ್ಮದೇ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಆದರೆ ಯಾರ ಆಕ್ರಮಣದಿಂದ ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು, ಪರತಂತ್ರರಾದೆವೋ ಅವರ ನಾಡಿನಲ್ಲೇ ಹುಟ್ಟಿದ ಓರ್ವ ವ್ಯಕ್ತಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು ಅಚ್ಚರಿಯ ಸಂಗತಿಯೇ ಹೌದು. ಬ್ರಿಟೀಷರು ನಮ್ಮನ್ನು ಆಳುತ್ತಿರುವಾಗ ಅವರಲ್ಲಿ ಹಲವಾರು ಮಂದಿಗೆ ನಮ್ಮವರ ಕರುಣಾಜನಕ ಸ್ಥಿತಿಯ ಬಗ್ಗೆ ಕನಿಕರವಿತ್ತು. ಹಲವಾರು ಮಂದಿ ನೇರವಾಗಿ ಅಲ್ಲವಾದರೂ ಪರೋಕ್ಷ ರೀತಿಯಲ್ಲಿ ಭಾರತದ ಸ್ವಾತಂತ್ರ್ಯದ ಹೋರಾಟಕ್ಕೆ ಬೆಂಬಲ ನೀಡಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಸಿಗಲೇ ಬೇಕು ಎಂದು ತಮ್ಮ ಲೇಖನಗಳ ಹಾಗೂ ವರದಿಗಳ ಮೂಲಕ ಪ್ರತಿಪಾದಿಸಿ ಭ್ರಿಟೀಷರಿಂದಲೇ ಬಂಧನಕ್ಕೆ ಒಳಗಾದವರು ಗಾಯ್ ಆಲ್ಫ್ರೆಡ್ ಆಲ್ಡ್ರೆಡ್ (Guy Alfred Aldred). ಇವರು ಸಾಹಿತಿ, ಪತ್ರಕರ್ತರು ಹಾಗೂ ಲೇಖಕರು ಆಗಿದ್ದರು. ಅವಿವಾಹಿತ ದಂಪತಿಗಳಾದ ಗಾಯ್ ಫಾಕಿಂಗ್ ಮತ್ತು ಆದಾ ಕೆರೋಲಿನ್ ಹೋಲ್ಡ್ ವರ್ಥ್ ಅವರ ಪ್ರೇಮದ ಕೂಸೇ ಆಲ್ಡ್ರೆಡ್. ೧೮೮೬ರಲ್ಲಿ ಜನಿಸಿದ ಇವರ ತಂದೆ ಆಂಗ್ಲರ ನೌಕಾಪಡೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಇವರ ತಂದೆ ತಾಯಿಯ ಪ್ರೇಮ ಸಂಬಂಧ ಬಹುದಿನಗಳ ಕಾಲ ನಡೆಯಲಿಲ್ಲ. ಆಲ್ಡ್ರೆಡ್ ಸಣ್ಣ ಮಗುವಾಗಿರುವಾಗಲೇ ಅವರ ತಂದೆಯು ತಾಯಿಯನ್ನು ತ್ಯಜಿಸಿದರು. ಬಾಲ್ಯದ ಬಹುತೇಕ ಸಮಯ ಆಲ್ಡ್ರೆಡ್ ತನ್ನ ತಾಯಿಯ ತೆಕ್ಕೆಯಲ್ಲೇ ಕಳೆದರು. ತಾಯಿಯ ರಕ್ಷಣೆಯಲ್ಲಿ ಬೆಳೆದ ಆಲ್ಡ್ರೆಡ್ ಅವರು ತಮ್ಮ ತಾಯಿಯಿಂದ ಹೃದಯವಂತಿಕೆ, ಮಾನವೀಯತೆ, ದೈವಭಕ್ತಿ ಮುಂತಾದ ಸದ್ಗುಣಗಳನ್ನು ಕಲಿತುಕೊಂಡರು. ತಾಯಿ ನೀಡಿದ ಸಂಸ್ಕಾರ, ತಪ್ಪು ಕಂಡಾಗ ಅದನ್ನು ಪ್ರತಿಭಟಿಸುವ ಛಾತಿ ಎಲ್ಲವೂ ಬಾಲಕನಾದ ಆಲ್ಡ್ರೆಡ್ ನಲ್ಲಿ ಬೇರು ಬಿಟ್ಟಿತು. ತುಂಬಾನೇ ಸ್ವಾಭಿಮಾನಿಯಾಗಿದ್ದ ಹುಡುಗ ಬಾಲ ಕಾರ್ಮಿಕನಾಗಿ ಸಿಕ್ಕ ಸಿಕ್ಕ ಪುಟ್ಟ ಪುಟ್ಟ ಕೆಲಸ ಮಾಡುತ್ತಾ ದಿನದೂಡುತ್ತಿದ್ದ. ತಾಯಿಯ ಬಡತನವನ್ನು ನೀಗಿಸಲು ಅವನು ಹಲವಾರು ರೀತಿಯಲ್ಲಿ ಸಹಕಾರ ನೀಡಲು ಬಯಸುತ್ತಿದ್ದ. ತನ್ನ ತಾಯಿಯು ಅನ್ಯಾಯದ ವಿರುದ್ಧ ಮಾಡುತ್ತಿದ್ದ ಪ್ರತಿಭಟನೆಗಳಿಗೆ ಹೆಗಲು ನೀಡುತ್ತಿದ್ದ. ಇದರಿಂದ ಸರಕಾರದ ಕೆಂಗಣ್ಣಿಗೂ ಗುರಿಯಾಗಿದ್ದ. 

ದಕ್ಷಿಣ ಆಫ್ರಿಕಾದಲ್ಲಿ ಬೋಯರ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಲ್ಲಿಯ ಭಾರತೀಯರು ಆಂಗ್ಲರಿಗೆ ಸಹಕಾರ ನೀಡಬೇಕು ಎಂದು ಗಾಂಧೀಜಿಯವರು ಕರೆ ನೀಡಿದ್ದು ಹದಿಹರೆಯದ ಆಲ್ಡ್ರೆಡ್ ಅವರಿಗೆ ಪಥ್ಯವಾಗಿರಲಿಲ್ಲ. ಬ್ರಿಟೀಷರು ಬೇರೆ ದೇಶಗಳ ಮೇಲೆ ಆಕ್ರಮಣ ಮಾಡಿ ಅವರ ಸ್ವಾತಂತ್ರ್ಯವನ್ನು ಕಸಿಯುವುದು ಆಲ್ಡ್ರೆಡ್ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ‘ದಿ ಹೆರಾಲ್ಡ್ ಆಫ್ ಲಂಡನ್' ಪತ್ರಿಕೆಯಲ್ಲಿ ಆಫೀಸ್ ಹುಡುಗನಾಗಿ ಕೆಲಸಕ್ಕೆ ಸೇರಿದ್ದು ಅವರ ಬದುಕಿನ ಟರ್ನಿಂಗ್ ಪಾಯಿಂಟ್ ಎಂದು ಹೇಳಬಹುದೇನೋ. ಪತ್ರಿಕೆಯಲ್ಲಿ ಬರುವ ಲೇಖನಗಳನ್ನು ಓದುತ್ತಾ, ತಾನೂ ಯಾಕೆ ಲೇಖನ ಬರೆಯಬಾರದು ಎಂದು ಅನಿಸಿತು. ಅವನ ಈ ಉತ್ಸಾಹಕ್ಕೆ ಪತ್ರಿಕೆಯ ಸಂಪಾದಕರು ಪ್ರೋತ್ಸಾಹ ನೀಡಿದರು. ಇದರಿಂದ ಉತ್ತಮ ಬರಹಗಾರನಾಗಿ ರೂಪುಗೊಂಡ ಆಲ್ಡ್ರೆಡ್ ಅದೇ ಪತ್ರಿಕೆಯ ಉಪ ಸಂಪಾದಕನಾಗುವ ಮಟ್ಟಕ್ಕೆ ಬೆಳೆದು ನಿಂತ. ಪತ್ರಿಕೋದ್ಯಮದ ಒಳ ಹೊರಗುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡ. 

ಈ ನಡುವೆ ರೋಜ್ ವಿಟಾಕಾಫ್ ಎಂಬ ಸಾಮಾಜಿಕ ಕಾರ್ಯಕರ್ತೆಯೊಂದಿಗೆ ಪ್ರೇಮಾಂಕುರವಾಗಿ ಇಬ್ಬರೂ ಜೊತೆಯಾಗಿ ವಾಸಿಸತೊಡಗಿದರು. ಆಲ್ಡ್ರೆಡ್ ಮೊದಲಿನಿಂದಲೂ ಯುದ್ಧ ವಿರೋಧಿ, ಶಾಂತಿ ಪ್ರೇಮಿಯಾಗಿದ್ದರು. ಆ ಕಾರಣದಿಂದ ಹಲವಾರು ಸಲ ಅನೇಕ ಪ್ರತಿಭಟನೆಗಳನ್ನು ನಡೆಸುತ್ತಿದ್ದರು ಮತ್ತು ಜೈಲುವಾಸವನ್ನೂ ಅನುಭವಿಸುತ್ತಿದ್ದರು. 

ಪ್ರಥಮ ಮಹಾಯುದ್ಧದ ಸಮಯದಲ್ಲಿ ಸದೃಢ ಯುವಕ, ಯುವತಿಯರು ಕಡ್ಡಾಯವಾಗಿ ಸೈನ್ಯಕ್ಕೆ ಸೇರಿ ಹೋರಾಡಬೇಕೆಂಬ ಆಂಗ್ಲ ಸರಕಾರದ ಆದೇಶವನ್ನು ಆಲ್ಡ್ರೆಡ್ ವಿರೋಧಿಸಿದ್ದರು. ಕಡ್ಡಾಯವಾಗಿ ಸೈನ್ಯಕ್ಕೆ ಸೇರಬೇಕೆಂಬ ಸರಕಾರದ ಆದೇಶವನ್ನು ವಿರೋಧಿಸಿದ್ದರಿಂದ ಆಲ್ಡ್ರೆಡ್ ಜೈಲುಪಾಲಾಗಬೇಕಾಯಿತು. ಶಿಕ್ಷೆ ಅನುಭವಿಸಿ ಹೊರ ಬಂದ ಸಮಯದಲ್ಲಿ ಭಾರತದ ಜಯಪುರದ ಮಹಾರಾಜರಾದ ಮಾಧವ ಸಿಂಗ್ ಅವರು ಇಂಗ್ಲೆಂಡ್ ನಲ್ಲಿ ಇರುವ ಸಂದರ್ಭದಲ್ಲಿ ಆಲ್ಡ್ರೆಡ್ ಅವರ ಭೇಟಿಯಾಗುತ್ತದೆ. ಮಹಾರಾಜರಿಂದ ಹಿಂದೂ ಧರ್ಮದ ಬಗ್ಗೆ ತಿಳಿದುಕೊಂಡ ಆಲ್ಡ್ರೆಡ್ ದೇವ, ದೇವಿಯರ ಸಿದ್ಧಾಂತದ ಬಗ್ಗೆ ಆಸಕ್ತಿ ಹೊಂದುತ್ತಾರೆ. ತಮ್ಮ ಜೀವನದ ಕೊನೆಯವರೆಗೆ ವೈಚಾರಿಕವಾಗಿ ಹಿಂದು ಆಗಿಯೇ ಉಳಿಯುತ್ತಾರೆ.

ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಡಿಯನ್ನು ಪ್ರಜ್ವಲಿಸುವಂತೆ ಮಾಡಿದವರು ‘ಅಭಿನವ ಭಾರತ’ದ ಸ್ಥಾಪಕರಾದ ವೀರ ವಿನಾಯಕ ದಾಮೋದರ್ ಸಾವರ್ಕರ್ ಅವರು. ಸಾವರ್ಕರ್ ಅವರು ಬ್ಯಾರಿಸ್ಟರ್ ಪದವಿಯನ್ನು ಪಡೆಯಲು ಲಂಡನ್ನಿಗೆ ಬಂದಾಗ ಆಲ್ಡ್ರಿಡ್ ಅವರ ವಿಚಾರ ಧಾರೆಯಿಂದ ಪ್ರಭಾವಿತನಾಗುತ್ತಾರೆ. ಸಾವರ್ಕರ್ ಅವರ ಬೆಂಬಲಿಗ ಹಾಗೂ ಮಿತ್ರರಾಗುತ್ತಾರೆ. ಲಂಡನ್ ನಲ್ಲಿ ಸಾವರ್ಕರ್ ಅವರ ಭಾಷಣದಿಂದ ಪ್ರೇರೇಪಿತರಾಗಿ ಮದನ್ ಲಾಲ್ ಧಿಂಗ್ರಾ ಎಂಬ ಯುವ ಕ್ರಾಂತಿಕಾರಿಯು ಕರ್ಜನ್ ವೈಲಿ ಎಂಬ ಆಂಗ್ಲ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡುತ್ತಾನೆ. ಈ ಹತ್ಯೆಯು ಆಲ್ಡ್ರೆಡ್ ಹಾಗೂ ಸಾವರ್ಕರ್ ಅವರ ಮೈತ್ರಿಯನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ. ಕರ್ಜನ್ ಅವರು ಮಾಡುತ್ತಿದ್ದ ದೌರ್ಜನ್ಯವನ್ನು ತಿಳಿದಿದ್ದ ಆಲ್ಡ್ರೆಡ್ ಅವರ ಹತ್ಯೆಯನ್ನು ಸಮರ್ಥಿಸುತ್ತಾರೆ. ಕೊಲೆ ಮಾಡಿದ ಮದನಲಾಲ್ ಧಿಂಗ್ರಾ ನೇಣುಗಂಬ ಏರುವ ಸಮಯದಲ್ಲಿ ಅವರು ಹತ್ಯೆಯ ಸಮರ್ಥನೆಯಲ್ಲಿ ನೀಡಿದ ಯಾವುದೇ ಹೇಳಿಕೆಗಳನ್ನು ಇಂಗ್ಲೆಂಡ್ ನ ಪತ್ರಿಕೆಗಳು ಪ್ರಕಟಿಸುವುದಿಲ್ಲ. ಆಗ ಆಲ್ಡ್ರೆಡ್ ತಮ್ಮ ಹಾಗೂ ಸಾವರ್ಕರ್ ಅವರ ಸಮರ್ಥನೆಯೊಂದಿಗೆ ಕರಪತ್ರಗಳಲ್ಲಿ ಹೇಳಿಕೆಯನ್ನು ಮುದ್ರಿಸಿ ಯುರೋಪಿನಾದ್ಯಂತ ಪ್ರಚಾರ ಮಾಡುತ್ತಾರೆ. ಇದರಿಂದ ಸಾವರ್ಕರ್ ಜೊತೆ ಆಲ್ಡ್ರೆಡ್ ಅವರೂ ಜೈಲುಪಾಲಾಗುತ್ತಾರೆ. ಬ್ರಿಟೀಷ್ ವ್ಯಕ್ತಿಯೋರ್ವ ಭಾರತದ ಸ್ವಾತಂತ್ರ್ಯ ಯೋಧನ ಜೊತೆ ಜೈಲು ಸೇರಿದ್ದು ಬಹುಷಃ ಅಪರೂಪದಲ್ಲಿ ಅಪರೂಪದ ಘಟನೆಯೇ ಇರಬಹುದು.

ಇದರಿಂದಾಗಿ ಆಲ್ಡ್ರೆಡ್ 'ಇಂಡಿಯನ್ ಸೋಶಿಯಾಲಜಿಸ್ಟ್' ಪತ್ರಿಕೆಯ ಶ್ಯಾಮಾಜಿ ಕೃಷ್ಣವರ್ಮರ ಸಂಪರ್ಕಕ್ಕೆ ಬರುತ್ತಾರೆ. ಆವರ ಆತ್ಮೀಯರೂ ಆಗುತ್ತಾರೆ. ಭಾರತದ ಪರ ಮೃದು ಧೋರಣೆ ಹೊಂದಿದ್ದ ಬ್ರಿಟೀಷ್ ಪತ್ರಕರ್ತರಾದ ಸರ್ ವಾಲ್ಟರ್ ಸ್ಟಿಕ್ ಲ್ಯಾಂಡರ ಪತ್ರಿಕೆಗಳಿಗೆ ವರದಿಗಾರರಾಗಿ ಆಲ್ಡ್ರೆಡ್ ಸೇವೆ ಸಲ್ಲಿಸುತ್ತಾರೆ. ಭಾರತದ ನ್ಯಾಯಬದ್ಧ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಸೂಚಿಸಲು ಆಲ್ಡ್ರೆಡ್ 'ದ ವರ್ಡ್' ಎಂಬ ಪತ್ರಿಕೆಯನ್ನು ಸ್ಥಾಪಿಸುತ್ತಾರೆ ಮತ್ತು ತಮ್ಮ ಬದುಕಿನ ಕೊನೆಯುಸಿರು ಇರುವ ತನಕ ಮುದ್ರಿಸುತ್ತಾರೆ. ಪತ್ರಿಕೆಯ ಮೂಲಕ ಹಣ ಗಳಿಕೆ, ಲಾಭ ಪಡೆಯುವುದು, ಇದು ಯಾವುದೂ ಆಲ್ಡ್ರೆಡ್ ಅವರ ಉದ್ದೇಶವಾಗಿರುವುದಿಲ್ಲ. ಶ್ರೀ ಸಾಮಾನ್ಯನ ಅಧಿಕಾರಕ್ಕಾಗಿ ಹೋರಾಟ ಮಾತ್ರ ಇವರ ಏಕೈಕ ಧ್ಯೇಯೋದ್ದೇಶವಾಗಿತ್ತು. 

ವಾಲ್ಟರ್ ಸ್ಟಿಕ್ ಲ್ಯಾಂಡ್ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿದ್ದ ಬೆಂಬಲವನ್ನು ಗಮನಿಸಿದ ಆಲ್ಡ್ರೆಡ್  ಆ ಪತ್ರಿಕೆಯ ವರದಿಗಾರನಾಗಿ ಸೇವೆ ಸಲ್ಲಿಸಿದ. ಸ್ಟಿಕ್ ಲ್ಯಾಂಡ್ ಆಲ್ಡ್ರೆಡ್ ನನ್ನು ತನ್ನ ಸ್ವಂತ ಮಗನಂತೆಯೇ ನೋಡಿಕೊಳ್ಳುತ್ತಿದ್ದರು. ಸ್ಟಿಕ್ ಲ್ಯಾಂಡ್, ಶ್ಯಾಮಾಜಿ ಹಾಗೂ ಆಲ್ಡ್ರೆಡ್ ಆಗಾಗ ಜೊತೆ ಸೇರಿ ಭಾರತದ ಸ್ವಾತಂತ್ರ್ಯದ ಹೋರಾಟದ ಬಗ್ಗೆ ವಿಚಾರ ವಿಮರ್ಶೆ ಮಾಡುತ್ತಿದ್ದರು. ಸ್ಟಿಕ್ ಲ್ಯಾಂಡ್ ಅವರಿಗೆ ಆಲ್ಡ್ರೆಡ್ ಅವರ ಮೇಲೆ ಪ್ರೀತಿ ಹಾಗೂ ವಿಶ್ವಾಸ ಇದ್ದುದರಿಂದ ತಮ್ಮ ಎಲ್ಲಾ ಸಂಪತ್ತು ಹಾಗೂ ಮುದ್ರಣಾಲಯವನ್ನು ಅವರಿಗೇ ಸಮರ್ಪಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ದಿನಗಳು ಹತ್ತಿರ ಬರುತ್ತಿದ್ದಂತೆ ಆಲ್ಡ್ರೆಡ್ ಅವರ ಸಂತೋಷಕ್ಕೆ ಪಾರವೇ ಇಲ್ಲವಾಯಿತು. ಆದರೆ ಭಾರತವನ್ನು ವಿಭಜಿಸಿ ಪಾಕಿಸ್ತಾನವೆಂಬ ಇನ್ನೊಂದು ದೇಶವನ್ನು ಮಾಡುವುದು ಆಲ್ಡ್ರೆಡ್ ಅವರಿಗೆ ಇಷ್ಟವಿರಲಿಲ್ಲ. ಅದನ್ನು ಅವರು ತಮ್ಮ 'ದ ವರ್ಲ್ಡ್' ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಬರೆಯುವುದರ ಮೂಲಕ ವಿರೋಧಿಸುತ್ತಾರೆ. ಮುಸ್ಲಿಮರಿಗೋಸ್ಕರ ದೇಶವನ್ನು ವಿಭಜಿಸುವುದಾದರೆ ಯಹೂದಿಗಳು ಬಹಳಷ್ಟು ಸಂಖ್ಯೆಯಲ್ಲಿರುವ ಇಂಗ್ಲೆಂಡ್ ಹಾಗೂ ಅಮೇರಿಕಾ ದೇಶಗಳನ್ನು ವಿಭಜಿಸಿ ಯಹೂದಿಗಳಿಗೆ ದೇಶ ನಿರ್ಮಿಸಿಕೊಡುತ್ತಾರೆಯೇ? ಸಾವಿರಾರು ವರ್ಷಗಳ ಕಾಲದಿಂದಲೂ ಭಾರತದಲ್ಲಿ ಹಿಂದೂ ಹಾಗೂ ಮುಸ್ಲಿಮರು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಿದ್ದಾರೆ. ಅವರನ್ನು ವಿಭಜಿಸಬೇಡಿ ಎಂದು ತಮ್ಮ ಲೇಖನದಲ್ಲಿ ಪ್ರತಿಪಾದಿಸುತ್ತಾರೆ. ನಂತರದ ದಿನಗಳಲ್ಲಿ ಭಾರತ ವಿಭಜನೆಯು ಇಂಗ್ಲೆಂಡಿನ ಸಂಸತ್ತಿನಲ್ಲಿ ಅಂಗೀಕಾರವಾದಾಗ ಆಲ್ಡ್ರೆಡ್ ತನ್ನ ಪತ್ರಿಕೆಯಲ್ಲಿ ‘ ಅವರೇನು ಸಮಾಜವಾದಿಗಳೇ? ಮೂರ್ಖರು, ವಂಚಕರು, ಅಲ್ಲಲ್ಲ ಇವರೆಲ್ಲಾ ಭಾರತದ ಕೊಲೆಗಡುಕರೇ ಸೈ’ ಎಂದು ಖಾರವಾಗಿ ಬರೆದುಕೊಂಡಿದ್ದರು. 

ಸ್ವಾತಂತ್ರ್ಯದ ನಂತರ ಭಾರತಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕೆಂದು ಆಲ್ಡ್ರೆಡ್ ಅವರಿಗೆ ಅಪಾರ ಹಂಬಲವಿತ್ತು. ಆದರೆ ಹಣಕಾಸಿನ ಮುಖ ನೋಡದೇ ಜೀವಮಾನವಿಡೀ ಹೋರಾಟದ ಹಾದಿ ತುಳಿದದ್ದರಿಂದ ಆಲ್ಡ್ರೆಡ್ ಬಳಿ ಸಾಕಷ್ಟು ಹಣ ಇರಲಿಲ್ಲ. ಆರ್ಥಿಕ ಸಂಕಷ್ಟ ವಿಪರೀತವಾಗಿತ್ತು. ಆದರೆ ಇವರ ಕನಸನ್ನು ನನಸು ಮಾಡಿದ್ದು ಭಾರತದ ಮೊದಲ ಮಹಿಳಾ ವಿಶ್ವವಿದ್ಯಾನಿಲಯದ ಸಂಸ್ಥಾಪಕರಾದ ಡಾ. ಧೋಂಡೋಪಂತ ಕೇಶವ ಕರ್ವೆಯವರು. 

ಕರ್ವೆಯವರಿಗೆ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಆಫ್ರೆಡ್ ಆಲ್ಡ್ರೆಡ್ ಅವರ ಭೇಟಿಯಾಗುತ್ತದೆ. ಕರ್ವೆಯವರಿಗೆ ಒಮ್ಮೆ ಅಮೇರಿಕಾದ ‘ಹ್ಯೂಮನಿಸ್ಟ್ ಸೊಸೈಟಿ ಆಫ್ ಫ್ರೆಂಡ್ಸ್' ಸಂಸ್ಥೆಯ ಬಗ್ಗೆ ಮಾಹಿತಿ ಬೇಕಾಗಿರುತ್ತದೆ. ಆ ಸಂಸ್ಥೆಯು ತಮ್ಮ ಬಗ್ಗೆ ‘ದ ವರ್ಲ್ಡ್' ಪತ್ರಿಕೆಯಲ್ಲಿ ಬಂದ ಲೇಖನದ ಪ್ರತಿಯನ್ನು ಕಳುಹಿಸುತ್ತದೆ. ಆ ಲೇಖನವನ್ನು ಕರ್ವೆಯವರು ಬಹಳ ಮೆಚ್ಚಿ ಕೊಳ್ಳುತ್ತಾರೆ. ದ ವರ್ಲ್ಡ್ ಪತ್ರಿಕೆಗೆ ತಮ್ಮ ವಾರ್ಷಿಕ ಚಂದಾ ಕಳುಹಿಸಿ ಆ ಪತ್ರಿಕೆಯ ಸಂಪಾದಕರ ಬಗ್ಗೆ ವಿಚಾರಿಸುತ್ತಾರೆ. ಆಗ ಅವರಿಗೆ ಆಲ್ಡ್ರೆಡ್ ಹಾಗೂ ವೀರ ಸಾವರ್ಕರ್ ಜೊತೆಯಾಗೇ ಇಂಗ್ಲೆಂಡ್ ನಲ್ಲಿ ಜೈಲುವಾಸ ಅನುಭವಿಸಿದ ಸಂಗತಿ ತಿಳಿದು ಆಶ್ಚರ್ಯವಾಗುತ್ತದೆ. ಆಲ್ಡ್ರೆಡ್ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡುತ್ತಾರೆ ಮತ್ತು ಅವರ ಎಲ್ಲಾ ಪ್ರಯಾಣದ ವೆಚ್ಚವನ್ನು ಕರ್ವೆಯವರೇ ಭರಿಸುತ್ತಾರೆ. ಹೀಗೆ ಭಾರತಕ್ಕೆ ಮೊದಲ ಸಲ ಬಂದಿಳಿಯುವ ಆಲ್ಡ್ರೆಡ್ ಅವರು ಸುಮಾರು ೪೦ ವರ್ಷಗಳ ನಂತರ ವೀರ್ ಸಾವರ್ಕರ್ ಅವರನ್ನು ಭೇಟಿಯಾಗಿ ಧನ್ಯತಾ ಭಾವನೆಯನ್ನು ವ್ಯಕ್ತ ಪಡಿಸುತ್ತಾರೆ. 

ಆಲ್ಡ್ರೆಡ್ ಅವರ ಬದುಕಿನ ಕೊನೆಯ ದಿನಗಳು ತುಂಬಾ ಯಾತನಾದಾಯಕವಾಗಿದ್ದುವು. ತೀವ್ರ ಆರ್ಥಿಕ ಸಂಕಷ್ಟ, ಅನಾರೋಗ್ಯದಿಂದ ಜರ್ಜರಿತರಾದ ಆಲ್ಡ್ರೆಡ್ ೧೯೬೩ರ ಅಕ್ಟೋಬರ್ ೧೬ರಂದು ನಿಧನ ಹೊಂದುತ್ತಾರೆ. ತಮ್ಮ ದೇಹವನ್ನು ಗ್ಲಾಸ್ಗೋ ಆಸ್ಪತ್ರೆಗೆ ದಾನ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆಯುತ್ತಾರೆ. ಹೀಗೆ ಮಾನವೀಯ ಕಳಕಳಿಯ ಆಲ್ಫ್ರೆಡ್ ಆಲ್ಡ್ರೆಡ್ ಎಂಬ ವ್ಯಕ್ತಿ ಆಂಗ್ಲನಾಗಿ ಹುಟ್ಟಿದರೂ, ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕೆಂದು ಮಾಡಿದ ಹೋರಾಟ ಭಾರತೀಯರು ಸದಾಕಾಲ ನೆನಪಿನಲ್ಲಿಡುವಂತದ್ದು.