ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೭) - ಉಲೂಪಿ

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೭) - ಉಲೂಪಿ

ನಾವು ಕೇಳಿದ, ಓದಿದ ಮಹಾಭಾರತದ ಕಥೆಗಳಲ್ಲಿ ಉಲೂಪಿ ಅಥವಾ ಉಲ್ಲೂಪಿಯ ನೇರ ಉಲ್ಲೇಖಗಳು ಕಂಡು ಬರುವುದು ಕಮ್ಮಿ. ಆದರೆ ಉಲೂಪಿಯ ಬಗ್ಗೆ ವಿಷ್ಣು ಪುರಾಣ ಹಾಗೂ ಭಾಗವತ ಪುರಾಣಗಳಲ್ಲಿ ಉಲ್ಲೇಖವಿದೆ. ಉಲೂಪಿ ಓರ್ವ ನಾಗ ಕನ್ಯೆ. ನಾಗ ರಾಜ ಕೌರವ್ಯನ ಮಗಳು. ಗಂಗಾ ನದಿಯ ಆಳದಲ್ಲಿ ಇರುವ ನಾಗ ಸಾಮ್ರಾಜ್ಯವನ್ನು ಕೌರವ್ಯ ರಾಜನು ಆಳುತ್ತಿದ್ದ. ಉಲೂಪಿಯು ಓರ್ವ ಸಮರ್ಥ ಯೋಧಳಾಗಿದ್ದಳು. ಉಲೂಪಿ ಜೊತೆ ಹಲವಾರು ಕತೆಗಳು ಜೋಡಿಸಲ್ಪಟ್ಟಿವೆ. ಉಲೂಪಿ ಅರ್ಜುನನ ಎರಡನೇ ಪತ್ನಿ. 

ಪಾಂಚಾಲದ ರಾಜ ದ್ರುಪದನ ಪುತ್ರಿಯಾದ ದ್ರೌಪದಿಯನ್ನು ಸ್ವಯಂವರದಲ್ಲಿ ಗೆದ್ದ ಬಳಿಕ ಅರ್ಜುನ, ತನ್ನ ತಾಯಿ ಕುಂತಿಯಲ್ಲಿ ನಾನು ದಾನವನ್ನು ತಂದಿದ್ದೇನೆ ಎಂದಾಗ ಕುಂತಿ, ದಾನದ ಸ್ವರೂಪವನ್ನು ತಿಳಿಯದ ಆಕೆ ಪಡೆದ ದಾನವನ್ನು ನೀವೆಲ್ಲಾ ಸಹೋದರರು ಸಮಾನವಾಗಿ ಹಂಚಿಕೊಳ್ಳಿ ಎನ್ನುತ್ತಾಳೆ. ಈ ಕಾರಣದಿಂದ ದ್ರೌಪದಿ ಪಂಚ ಪಾಂಡವರ ಪತ್ನಿಯಾಗಬೇಕಾಗುತ್ತದೆ. ಆಗ ಅಲ್ಲಿಗೆ ನಾರದ ಮುನಿಯು ಆಶೀರ್ವಾದ ನೀಡಲು ಬಂದಾಗ ಅವರು ಸಹೋದರರ ನಡುವೆ ಒಬ್ಬಳು ಸತಿ ಇದ್ದರೆ ಅವರೊಳಗೇ ಕಲಹಕ್ಕೆ ಕಾರಣವಾಗಬಹುದು ಎಂದು ರಾಕ್ಷಸ ಸಹೋದರರಿಬ್ಬರ ಕತೆ ಹೇಳುತ್ತಾರೆ. ಸಹೋದರರ ನಡುವೆ ಇರುವ ಒಗ್ಗಟ್ಟು ಮುರಿಯಬಾರದು ಅದಕ್ಕಾಗಿ ಪಾಂಡವರು ಎಲ್ಲಾ ಸೇರಿ ಒಂದು ನಿಯಮವನ್ನು ರೂಪಿಸುತ್ತಾರೆ. ಸರದಿಯ ಪ್ರಕಾರ ದ್ರೌಪದಿ ಒಂದೊಂದು ವರ್ಷ ಒಬ್ಬೊಬ್ಬ ಪಾಂಡವನ ಜೊತೆ ಇರುವುದು ಎಂದು ನಿರ್ಧಾರವಾಗುತ್ತೆ. ಯಾರಾದರೂ ಈ ನಿಯಮವನ್ನು ಭಂಗ ಮಾಡಿದರೆ ಅವರು ೧೨ ವರ್ಷ ತೀರ್ಥಯಾತ್ರೆಗೆ ಹೋಗಬೇಕು ಎಂದು ನಿಯಮವನ್ನು ಮಾಡುತ್ತಾರೆ. ಪ್ರಥಮ ವರ್ಷ ದ್ರೌಪದಿ ಯುದಿಷ್ಟಿರನ ಜೊತೆ ಅಂತಪುರದಲ್ಲಿರುವಾಗ ಅರ್ಜುನನಿಗೆ ಅನಿವಾರ್ಯವಾಗಿ ಅವರ ಕೋಣೆಗೆ ಪ್ರವೇಶ ಮಾಡಬೇಕಾಗುತ್ತದೆ. ಓರ್ವ ಬ್ರಾಹ್ಮಣನ ದನಗಳನ್ನು ಕಳ್ಳರು ಅಪಹರಿಸಿಕೊಂಡು ಹೋದಾಗ ಅವನು ಸಹಾಯಾರ್ಥ ಅರ್ಜುನನ ಬಳಿಗೆ ಬರುತ್ತಾನೆ. ಅರ್ಜುನನ ಬಿಲ್ಲು ಯುದಿಷ್ಟಿರನ ಕೋಣೆಯಲ್ಲಿರುತ್ತದೆ. ಆದುದರಿಂದ ಅರ್ಜುನ ನಿಯಮ ಭಂಗ ಮಾಡಬೇಕಾಗುತ್ತದೆ. ನಂತರ ಸತ್ಯ ವಿಷಯ ಪಾಂಡವರಿಗೆ ತಿಳಿದಾಗ ಅವರು ಅವನನ್ನು ಕ್ಷಮಿಸುತ್ತಾರೆ. ಆದರೆ ಅರ್ಜುನ ತಾನು ಶಿಕ್ಷೆಯನ್ನು ಅನುಭವಿಸುತ್ತೇನೆ ಎಂದು ೧೨ ವರ್ಷಗಳ ತೀರ್ಥಯಾತ್ರೆಗೆ ಹೊರಡುತ್ತಾನೆ. 

ತೀರ್ಥಯಾತ್ರೆಗೆ ಹೊರಟ ಅರ್ಜುನ ಗಂಗಾ ನದಿಯ ತಟಕ್ಕೆ ಬಂದಾಗ ಅಲ್ಲಿ ಸ್ನಾನ ಮಾಡಲು ನದಿಗೆ ಇಳಿಯುತ್ತಾನೆ. ಆಗ ಅವನನ್ನು ಯಾವುದೋ ಒಂದು ಅಜ್ಞಾತ ಶಕ್ತಿ ನೀರಿನ ಒಳಕ್ಕೆ ಎಳೆಯುವಂತೆ ಭಾಸವಾಗುತ್ತದೆ. ಅವನನ್ನು ಓರ್ವ ಯುವತಿ ನೀರಿನ ಒಳಗೆ ಎಳೆಯುತ್ತಾಳೆ. ಅವಳೇ ನಾಗಲೋಕದ ರಾಜಕುಮಾರಿ ಉಲೂಪಿ. ಅವಳು ಅರ್ಜುನನನ್ನು ತಮ್ಮ ನಾಗ ಸಾಮ್ರಾಜ್ಯಕ್ಕೆ ಕರೆದುಕೊಂಡು ಹೋಗುತ್ತಾಳೆ. ಅರ್ಜುನನ ಬಳಿ ನನಗೆ ನಿನ್ನ ಮೇಲೆ ಪ್ರೇಮಾಂಕುರವಾಗಿದೆ ಎಂದು ಹೇಳುತ್ತಾಳೆ. ಆದರೆ ಅರ್ಜುನ 'ನಾನು ೧೨ ವರ್ಷಗಳ ದೇಶಾಂತರ ಹೊರಟು ತೀರ್ಥಯಾತ್ರೆ ಮಾಡುವ ಶಿಕ್ಷೆಗೆ ಒಳಗಾಗಿರುವೆ. ಆದುದರಿಂದ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ’ ಎನ್ನುತ್ತಾನೆ. ಆ ಶಿಕ್ಷೆಯು ದ್ರೌಪದಿಗೆ ಸಂಬಂಧಿಸಿದ್ದು. ನನಗಲ್ಲ ಎಂದು ಉಲೂಪಿಯು ಅರ್ಜುನನ್ನು ಮದುವೆಯಾಗಲು ಮನವೊಲಿಸುತ್ತಾಳೆ. ಅವಳ ಮಾತಿನಿಂದ ಸಮಾಧಾನಗೊಂಡ ಅರ್ಜುನನೂ ಅವಳ ಬೇಡಿಕೆಯನ್ನು ಮನ್ನಿಸಿ ಅವಳನ್ನು ಮದುವೆಯಾಗುತ್ತಾನೆ. ಮದುವೆಯ ನಂತರ ಅರ್ಜುನ ಉಲೂಪಿಯವರಿಗೆ ಓರ್ವ ಪುತ್ರ ಸಂತಾನವಾಗುತ್ತೆ. ಅವನಿಗೆ ಇರಾವಾನ್ (ಇವನ ಬಗ್ಗೆ ಮುಂದೆ ಬರೆವೆ) ಎಂದು ನಾಮಕರಣ ಮಾಡುತ್ತಾರೆ. ಪುತ್ರನ ಸಂತಾನವಾದ ಬಳಿಕ ಅತೀವ ಸಂತೋಷಗೊಂಡ ಉಲೂಪಿಯು ಅರ್ಜುನನಿಗೆ ವರವನ್ನು ದಯಪಾಲಿಸುತ್ತಾಳೆ. ಅದರಂತೆ ನೀರಿನ ಆಳದಲ್ಲಿರುವ ಎಲ್ಲಾ ಜಲಚರಗಳು ಅರ್ಜುನನ ಆಜ್ಞೆಯನ್ನು ಪಾಲಿಸುತ್ತವೆ ಹಾಗೂ ನೀರಿನಲ್ಲಿ ಅರ್ಜುನನನ್ನು ಸೋಲಿಸಲು ಸಾಧ್ಯವಿಲ್ಲ. ನಂತರ ಅರ್ಜುನ ತನ್ನ ತೀರ್ಥಯಾತ್ರೆಯನ್ನು ಮುಂದುವರೆಸಲು ಉಲೂಪಿ ಮತ್ತು ಇರಾವಾನ್ ರನ್ನು ನಾಗಲೋಕದಲ್ಲಿ ಬಿಟ್ಟು ಮುಂದಕ್ಕೆ ಸಾಗುತ್ತಾನೆ. 

ನಮಗೆ ಮತ್ತೆ ಉಲೂಪಿಯ ಪಾತ್ರ ಕಂಡು ಬರುವುದು ಕುರುಕ್ಷೇತ್ರದ ಯುದ್ಧದ ಸಮಯದಲ್ಲಿ. ಭೀಷ್ಮನನ್ನು ಯುದ್ಧದಲ್ಲಿ ಸೋಲಿಸಿ ಅರ್ಜುನನು ಅವರನ್ನು ಶರಶಯ್ಯೆಯಲ್ಲಿ ಮಲಗಿದ್ದನ್ನು ಕಂಡ ಭೀಷ್ಮನ ಸಹೋದರರಾದ ವಾಸುಗಳು ಅರ್ಜುನನಿಗೆ ಶಾಪ ನೀಡುತ್ತಾರೆ. ಅರ್ಜುನನಿಗೆ ಅವನ ಮಗನಿಂದಲೇ ಮರಣವಾಗಲಿ ಎಂಬ ಆ ಶಾಪದ ಬಗ್ಗೆ ಉಲೂಪಿಗೆ ತಿಳಿಯುತ್ತದೆ. ಅವಳು ತನ್ನ ತಂದೆ ಕೌರವ್ಯರ ಬಳಿ ಇದಕ್ಕೆ ಪರಿಹಾರ ಹುಡುಕಿ ಎಂದು ಕೇಳಿಕೊಂಡಾಗ ಕೌರವ್ಯ ಅವಳನ್ನು ಕರೆದುಕೊಂಡು ಭೀಷ್ಮನ ತಾಯಿಯಾದ ಗಂಗೆಯ ಬಳಿ ಹೋಗುತ್ತಾರೆ. ಗಂಗೆಯ ಬಳಿ ನಿನ್ನ ಪುತ್ರರ ಶಾಪದಿಂದ ನನ್ನ ಪತಿ ಅರ್ಜುನನನ್ನು ರಕ್ಷಿಸು ಎಂದು ಬೇಡಿದಾಗ ಗಂಗೆಯು ಉಲೂಪಿಗೆ ಒಂದು ಮಣಿಯನ್ನು  ನೀಡಿ ಅರ್ಜುನ ಮರಣಹೊಂದಿದಾಗ ಅವನ ಎದೆಯ ಭಾಗದಲ್ಲಿ ನೀನು ಭಕ್ತಿಯಿಂದ ಪ್ರಾರ್ಥಿಸಿ ಈ ಮಣಿಯನ್ನು ಇರಿಸಿದರೆ ಶಾಪ ವಿಮೋಚನೆಯಾಗಿ ಅವನು ಜೀವಿತನಾಗುತ್ತಾನೆ ಎನ್ನುತಾಳೆ.

ಮುಂದಿನ ದಿನಗಳಲ್ಲಿ ಅರ್ಜುನನನು ತನ್ನದೇ ಪುತ್ರನಾದ ಭಬ್ರುವಾಹನ (ಇವನ ಬಗ್ಗೆ, ಇವನ ತಾಯಿ ಚಿತ್ರಾಂಗದ ಬಗ್ಗೆ ಮುಂದಿನ ಭಾಗದಲ್ಲಿ ಬರೆವೆ) ನಿಂದ ಹತನಾಗುತ್ತನೆ. ಈ ಯುದ್ಧಕ್ಕೆ ಭಬ್ರುವಾಹನನಿಗೆ ಉಲೂಪಿಯೇ ಪ್ರೇರಣೆ ನೀಡಿರುತ್ತಾಳೆ. ಏಕೆಂದರೆ ಅವಳಿಗೆ ಅರ್ಜುನನ ಶಾಪ ವಿಮೋಚನೆ ಮಾಡಲೇ ಬೇಕಿತ್ತು. ಉಲೂಪಿಯಿಂದಲೇ ತನ್ನ ಮಗ ಭಬ್ರುವಾಹನ ತನ್ನ ಪತಿಯಾದ ಅರ್ಜುನನ ಹತ್ಯೆ ಮಾಡಿದ ಎಂದು ಉಲೂಪಿಯ ಮೇಲೆ ಚಿತ್ರಾಂಗದ ಕೋಪಗೊಳ್ಳುತ್ತಾಳೆ. ಆಗ ಉಲೂಪಿಯು ತನ್ನ ನಾಗಲೋಕಕ್ಕೆ ಹೋಗಿ ಅಲ್ಲಿಂದ ಗಂಗಾ ಮಾತೆಯು ನೀಡಿದ ನಾಗಮಣಿಯನ್ನು ತಂದು ಅರ್ಜುನನ ಎದೆಯ ಮೇಲಿಟ್ಟು ಪ್ರಾರ್ಥಿಸುತ್ತಾಳೆ. ಇದರಿಂದ ಅರ್ಜುನನು ಜೀವಿತನಾಗುತ್ತಾನೆ. ಅವನು ಉಲೂಪಿ ಹಾಗೂ ಉಳಿದವರನ್ನೆಲ್ಲಾ ಕರೆದುಕೊಂಡು ಹಸ್ತಿನಾಪುರಕ್ಕೆ ತೆರಳುತ್ತಾನೆ. ಅಲ್ಲಿ ನಡೆಯುತ್ತಿದ್ದ ರಾಜಸೂಯ ಯಾಗದಲ್ಲಿ ಅವರೆಲ್ಲಾ ಭಾಗವಹಿಸುತ್ತಾರೆ. ಪಾಂಡವರು ದ್ವಾಪರ ಯುಗದ ಕೊನೆಗೆ ಸ್ವರ್ಗಾರೋಹಣ ಮಾಡಲು ಹಿಮಾಲಯದತ್ತ ತೆರಳುವಾಗ, ಉಲೂಪಿಯು ನಾಗಲೋಕಕ್ಕೆ ತೆರಳುತ್ತಾಳೆ.

ಪೂರಕ ಮಾಹಿತಿ: ಕೆಲವೊಂದು ಪುರಾಣಗಳ ಪ್ರಕಾರ ಅರ್ಜುನನನ್ನು ಮದುವೆಯಾಗುವ ಮೊದಲೇ ಉಲೂಪಿಗೆ ನಾಗ ಲೋಕದ ಯುವಕನೊಡನೆ ಮದುವೆಯಾಗಿತ್ತಂತೆ. ಅದರೆ ಮದುವೆಯಾಗಿ ಕೆಲವೇ ದಿನಗಳಲ್ಲಿ ಅವಳು ತನ್ನ ಪತಿಯನ್ನು ಕಳೆದುಕೊಂಡು ವಿಧವೆಯಾಗ ಬೇಕಾಗುತ್ತದೆ. ಅವಳ ಪತಿಯನ್ನು ಗರುಡ ದೇವನು ಒಂದು ಯುದ್ಧದಲ್ಲಿ ಕೊಲ್ಲುತ್ತಾನೆ. ಹೀಗಾಗಿ ವಿಧವೆಯಾದ ಉಲೂಪಿಯನ್ನು ಅರ್ಜುನನು ಮುಂದಿನ ದಿನಗಳಲ್ಲಿ ಮದುವೆಯಾಗುತ್ತಾನೆ.

ಚಿತ್ರದಲ್ಲಿ: ಅರ್ಜುನ ಹಾಗೂ ಉಲೂಪಿ (ಅಂತರ್ಜಾಲ ಕೃಪೆ)