ಮಹಾ ಸಮಾಜ ಸುಧಾರಕ ಬಸವಣ್ಣನವರು

ಮಹಾ ಸಮಾಜ ಸುಧಾರಕ ಬಸವಣ್ಣನವರು

ಮಹಾ ಸಮಾಜ ಸುಧಾರಕ ಬಸವಣ್ಣನವರು ಜನಿಸಿದ್ದು ೧೧೦೫ರಲ್ಲಿ - ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಎಪ್ರಿಲ್ ೨೬ ಬಸವಣ್ಣನವರ ಜಯಂತಿ.

ಜನಸಾಮಾನ್ಯರ ಆಡುಮಾತಿನಲ್ಲಿ ರಚಿಸಿದ ವಚನಗಳ ಮೂಲಕ ಸಾಮಾಜಿಕ ಬದಲಾವಣೆಯ ಕಹಳೆ ಮೊಳಗಿಸಿದವರು ಬಸವಣ್ಣ. ಬಾಲ್ಯದಿಂದಲೇ ಅವರ ಚಿಂತನಶೀಲತೆ, ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಸ್ವಭಾವ ಎದ್ದು ಕಾಣುತ್ತಿತ್ತು. ಉದಾಹರಣೆಗೆ ಎಂಟು ವರುಷ ವಯಸ್ಸಿನಲ್ಲಿ ಹೆತ್ತವರು ಉಪನಯನ ಮಾಡಲು ಮುಂದಾದಾಗ, ಬಸವಣ್ಣ ಅದನ್ನು ನಿರಾಕರಿಸಿದರು.

ಅಷ್ಟೇ ಅಲ್ಲ, ಕುಟುಂಬವನ್ನೇ ತೊರೆದು ಕೂಡಲಸಂಗಮಕ್ಕೆ ನಡೆದರು. ಅಲ್ಲಿ ಜಾತವೇದ ಮುನಿಗಳ ಶಿಷ್ಯರಾಗಿ, ವೇದ ಮತ್ತು ಉಪನಿಷತ್ತುಗಳ ಅಧ್ಯಯನದಲ್ಲಿ ತೊಡಗಿದರು. ದಿನದಿನವೂ ಸಂಗಮನಾಥ ದೇವರ ಪೂಜೆ ಮಾಡುತ್ತಾ, ಧಾರ್ಮಿಕ ಹಾಗೂ ಸಾಹಿತ್ಯ ಚಿಂತನೆಯಲ್ಲಿ ತಲ್ಲೀನರಾದರು. ಕ್ರಮೇಣ ಸರಳ ಭಾಷೆಯಲ್ಲಿ, ಜನಸಾಮಾನ್ಯರ ಮನಮುಟ್ಟುವ ಶೈಲಿಯಲ್ಲಿ ಅಧ್ಯಾತ್ಮಿಕ ಸಾಹಿತ್ಯ ರಚನೆಯನ್ನು ಕೈಗೆತ್ತಿಕೊಂಡರು. ಸಮಾಜದ ಭೇದಭಾವಗಳನ್ನು ತೊಡೆದು ಹಾಕಿ, ಸಮಾನತೆಯ ನೆಲೆಯಲ್ಲಿ ಹೊಸ ಸಮಾಜ ಕಟ್ಟುವುದೇ ಅವರ ಗುರಿಯಾಯಿತು.

ತನ್ನ ಸೋದರಮಾವ ಬಲದೇವನ ಮಗಳು ಗಂಗಾಂಬಿಕೆಯನ್ನು ಮದುವೆಯಾಗಿ ಬಸವಣ್ಣ ಸಂಸಾರಿಯಾದರು. ಅನಂತರ ಮಂಗಳವೇಡೆಗೆ ಬಂದು ನೆಲೆಸಿದರು. ಅಲ್ಲಿನ ದೊರೆ ಬಿಜ್ಜಳ. ಆತ ಬಸವಣ್ಣನವರ ಪ್ರತಿಭೆಯಿಂದ ಪ್ರಭಾವಿತನಾದ. ಬಸವಣ್ಣನವರನ್ನು ಕರಣಿಕರಾಗಿ ನೇಮಿಸಿದ. ಬಸವಣ್ಣನವರು ತಮ್ಮ ಕಾರ್ಯನಿಷ್ಠೆಯಿಂದ ಬಿಜ್ಜಳನ ವಿಶ್ವಾಸ ಗಳಿಸಿದರು. ಬಿಜ್ಜಳನ ಇಬ್ಬರು ದಂಡನಾಯಕರಲ್ಲೊಬ್ಬ ಸಿದ್ಧರಸ. ಆತನ ಮಗಳು ನೀಲಾಂಬಿಕೆ. ಈಕೆಯೊಂದಿಗೆ ಬಸವಣ್ಣನವರ ಎರಡನೆಯ ಮದುವೆ ಮಾಡಿಸಿದ ಬಿಜ್ಜಳ. ತಮ್ಮ ಮಡದಿಯರಾದ ಗಂಗಾಂಬಿಕೆ ಮತ್ತು ನೀಲಾಂಬಿಕೆಯರ ವ್ಯಕ್ತಿತ್ವ ವಿಕಸನಕ್ಕೆ ಬಸವಣ್ಣನವರು ಅಪಾರ ಪ್ರೋತ್ಸಾಹ ನೀಡಿದ್ದರಿಂದಾಗಿ ಅವರಿಬ್ಬರೂ ವಚನಕಾರ್ತಿಯರಾದರು.

ಬಸವಣ್ಣನವರ ಪ್ರತಿಭೆ ಹಾಗೂ ದಕ್ಷತೆಯನ್ನು ಮೆಚ್ಚಿಕೊಂಡ ದೊರೆ ಬಿಜ್ಜಳ ರಾಜ್ಯಭಾರವನ್ನು ಅವರಿಗೆ ಒಪ್ಪಿಸಿದ. ಆಗ, ಕಲ್ಯಾಣದಲ್ಲಿ “ಅನುಭವ ಮಂಟಪ”ವನ್ನು ಸ್ಥಾಪಿಸಿದರು ಬಸವಣ್ಣ. ಇದು ಜಗತ್ತಿನ ಮೊದಲನೆಯ ಸಂಸತ್ತು ಎಂದು ಗುರುತಿಸಲ್ಪಟ್ಟಿದೆ. ಅಲ್ಲಿನ ಎಲ್ಲ ಚಟುವಟಿಕೆಗಳೂ ಇಂದಿನ ಪ್ರಜಾಪ್ರಭುತ್ವದ ಮಾದರಿಯಲ್ಲೇ ಜರಗುತ್ತಿದ್ದವು. ಅಲ್ಲಿ ಎಲ್ಲ ಸಮುದಾಯದವರೂ ಒಟ್ಟು ಸೇರಿ ಚಿಂತನೆ ಹಾಗೂ ಸಂವಾದ ನಡೆಸುತ್ತಿದ್ದರು. ಬಸವಣ್ಣ ಮತ್ತು ಇತರ ವಚನಕಾರರು ವಚನಗಳ ಮೂಲಕ ಮೂಢನಂಬಿಕೆಗಳನ್ನು ಧಿಕ್ಕರಿಸುತ್ತಾ ನವಸಮಾಜದ ಬೀಜ ಬಿತ್ತಿದರು. ಬಸವಣ್ಣನವರ ಪ್ರಗತಿಪರ ವಿಚಾರಗಳು ಕಲ್ಯಾಣದ ಅಭಿವೃದ್ಧಿಗೆ ಅಡಿಪಾಯ ಹಾಕಿದವು. ಸಮರ್ಥ ಮುಂದಾಳುತನದಿಂದ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯನ್ನು ಮುನ್ನಡೆಸಿದರು ಬಸವಣ್ಣ. ಇದರಿಂದಾಗಿ ಬಿಜ್ಜಳ ದೊರೆಯೂ ಜನಮನ್ನಣೆ ಗಳಿಸುವಂತಾಯಿತು.

ಜಾತಿಭೇದಗಳನ್ನು ತೊಡೆದು ಹಾಕಲು ಅಂತರ್ಜಾತೀಯ ವಿವಾಹಗಳು ಅಗತ್ಯವೆಂದು ನಂಬಿದ್ದರು ಬಸವಣ್ಣನವರು. ಹಾಗಾಗಿ, ದಲಿತ ಶರಣ ಹರಳಯ್ಯನ ಮಗನಿಗೂ ಬ್ರಾಹ್ಮಣ ಶರಣ ಮಧುವರಸನ ಮಗಳಿಗೂ ಮದುವೆ ಮಾಡಿಸಿದರು. ಈ ಕ್ರಾಂತಿಕಾರಿ ನಡೆಯನ್ನು ಸಂಪ್ರದಾಯವಾದಿಗಳು ತೀವ್ರವಾಗಿ ವಿರೋಧಿಸಿದರು. ಕೊನೆಗೆ, ದೊರೆ ಬಿಜ್ಜಳ ಅವರ ಒತ್ತಡಕ್ಕೆ ಮಣಿದು, ಹರಳಯ್ಯ ಮತ್ತು ಮಧುವರಸರಿಗೆ ಶಿಕ್ಷೆ ನೀಡಿದರು.

ಇದರಿಂದ ಮನನೊಂದ ಬಸವಣ್ಣನವರು ಮಂತ್ರಿ ಪದವಿ ತೊರೆದರು; ಕಲ್ಯಾಣವನ್ನೂ ತೊರೆದರು. ಅಲ್ಲಿಂದ ಪುನಃ ಕೂಡಲಸಂಗಮಕ್ಕೆ ಹೋಗಿ ನೆಲೆಸಿ, ತಮ್ಮ ಸಾಮಾಜಿಕ ಬದಲಾವಣೆಯ ಆಂದೋಲನವನ್ನು ಮುಂದುವರಿಸಿದರು. ಅವರು ೧೧೬೭ರಲ್ಲಿ ಲಿಂಗೈಕ್ಯರಾದರು.

೧೨ನೆಯ ಶತಮಾನದಲ್ಲಿ ಅಂಧಶ್ರದ್ಧೆ, ಮೇಲು-ಕೀಳು ಭಾವನೆ, ಮಹಿಳೆಯರ ಮೇಲಿನ ದಬ್ಬಾಳಿಕೆ, ಜಾತಿಭೇದಗಳಿಂದಾಗಿ ಸಮಾಜ ನಿಂತ ನೀರಾಗಿತ್ತು. ಆಗ, ಮಾನವೀಯ ಮೌಲ್ಯಗಳ ಹೊಸ ಅಲೆಯ ಮೂಲಕ ಸಮಾನತೆಯ ನವಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದವರು ಬಸವಣ್ಣನವರು. “ಕಾಯಕವೇ ಕೈಲಾಸ” ಎಂಬ ಮಂತ್ರದ ಮೂಲಕ ಕಾಯಕದ ಶ್ರೇಷ್ಠತೆಯನ್ನು ಮನಗಾಣಿಸಿದವರು. ದಾಸೋಹದ ಪರಿಕಲ್ಪನೆಯನ್ನು ಪ್ರಬಲವಾಗಿ ಪ್ರತಿಪಾದಿಸಿದವರು. ಇದರ ಅನುಸಾರ ಶ್ರಮಪಟ್ಟು ಗಳಿಸಿದ ಸಂಪತ್ತು ತನ್ನೊಬ್ಬನಿಗಾಗಿ ಅಲ್ಲ; ಅದು ಸಮಾಜದ ಒಳಿತಿಗಾಗಿ ಬಳಕೆಯಾಗ ತಕ್ಕದ್ದು. ಅದಕ್ಕಾಗಿ, ಅನ್ನ ದಾಸೋಹ, ಜ್ನಾನ ದಾಸೋಹ, ಕಾಯಕ ದಾಸೋಹ - ಈ ಮೂರು ವಿಧದ ದಾಸೋಹ ನಡೆಸಬೇಕೆಂದು ಆಗ್ರಹಿಸಿದವರು.

ತಮ್ಮ ಪ್ರತಿಯೊಂದು ವಚನದಲ್ಲಿಯೂ ಹೊಸ ಚಿಂತನೆಯ ಬೀಜ ಬಿತ್ತಿ, ವಿಚಾರಕ್ರಾಂತಿಗೆ ಕಾರಣರಾದವರು ಬಸವಣ್ಣನವರು.
ಸಮಾಜದ ಪ್ರತಿಯೊಬ್ಬನೂ ನಮ್ಮ ಮನೆಯ ಮಗನೇ ಎಂಬುದನ್ನು ಈ ವಚನದಲ್ಲಿ ಎಷ್ಟು ಚಂದ ಮಾಡಿ ತಿಳಿಸಿದ್ದಾರೆ ನೋಡಿ:
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ

ದೇವರು ಒಬ್ಬನೇ ಎಂಬುದನ್ನು ಈ ವಚನದಲ್ಲಿ ಎಷ್ಟು ಸರಳವಾಗಿ ಪ್ರತಿಪಾದಿಸಿದ್ದಾರೆ ಗಮನಿಸಿ:
ಇಬ್ಬರು ಮೂವರು ದೇವರೆಂದು/ ಉಬ್ಬಿ ಮಾತನಾಡಬೇಡ
ಒಬ್ಬನೆ ಕಾಣಿರೊ/ ಇಬ್ಬರೆಂಬುದು ಹುಸಿ/ ನೋಡಾ
ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ

ಆ ದೇವರ ಆರಾಧನೆ ಮಾಡುವಾಗ ಎತ್ತೆತ್ತಲೋ ಸುಳಿಯುವ ಮನಸ್ಸನ್ನು ನಿಗ್ರಹಿಸಿ, ಏಕಾಗ್ರತೆ ಮತ್ತು ತನ್ಮಯತೆ ಕರುಣಿಸಬೇಕೆಂದು ಅವರು ದೇವರನ್ನು ಈ ವಚನದಲ್ಲಿ ಪ್ರಾರ್ಥಿಸುವ ಪರಿ ನೋಡಿ:
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ
ಇರಿಸು ಕೂಡಲಸಂಗಮದೇವಾ

ತಾನು ನುಡಿದಂತೆ ನಡೆದರೆ ಅದು ದೇವರ ಕೃಪೆ ಎಂಬ ಅಪ್ಪಟ ವಿನಯ ತೋರುವ ಮಹಾಪುರುಷ ಬಸವಣ್ಣನವರು:
ಎನ್ನ ನಡೆಯೊಂದು ಪರಿ
ಎನ್ನ ನುಡಿಯೊಂದು ಪರಿ
ಎನ್ನೊಳಗೇನೂ ಶುದ್ಧವಿಲ್ಲ
ನೋಡಯ್ಯಾ
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ

ಮನುಷ್ಯ ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ ಸಾಧಿಸಿ, ದೇವರು ಮೆಚ್ಚುವಂತೆ ಬದುಕಲಿಕ್ಕಾಗಿ ಏಳು ಸರಳ  ನಿಯಮಗಳನ್ನು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ ವಿಶ್ವಮಾನ್ಯ ಬಸವಣ್ಣನವರು:
ಕಳ ಬೇಡ, ಕೊಲ ಬೇಡ, ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸ ಬೇಡ, ಇದಿರು ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ!
ಇದೆ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ

ಚಿತ್ರ ಕೃಪೆ: ವಿಕಿಪಿಡಿಯ