ಮುದ್ರಾ ವಿಜ್ಞಾನ ಮತ್ತು ಆರೋಗ್ಯ

ಮುದ್ರಾ ವಿಜ್ಞಾನ ಮತ್ತು ಆರೋಗ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀಮತಿ ಸುಮನ್ ಕೆ.ಚಿಪ್ಳೂಣ್ ಕರ್
ಪ್ರಕಾಶಕರು
ಅಭಿಜಿತ್ ಪ್ರಕಾಶನ, ಮುಂಬಯಿ
ಪುಸ್ತಕದ ಬೆಲೆ
ರೂ. 250.00

ಶ್ರೀಮತಿ ಸುಮನ್ ಕೆ. ಚಿಪ್ಳೂಣ್ ಕರ್ ಇವರು ಬರೆದ ಮುದ್ರಾ ವಿಜ್ಞಾನ ಮತ್ತು ಆರೋಗ್ಯ ಪುಸ್ತಕ ಮಾಹಿತಿ ಪೂರ್ಣವಾಗಿದೆ. ಬೆನ್ನುಡಿಯಲ್ಲಿ ಡಾ.ತಾಳ್ತಜೆ ವಸಂತ್ ಕುಮಾರ್ ಇವರು ಬರೆಯುತ್ತಾರೆ- ಜೀವನ ಪದ್ಧತಿಗಳು ನಿಸರ್ಗದ ಶಿಶುವಾದ ಮಾನವನನ್ನು ಅವನ ಮೂಲ ಶಕ್ತಿ ಸ್ರೋತದಿಂದ ಬಹುದೂರಕ್ಕೆ ಕೊಂಡೊಯ್ಯುತ್ತಿವೆ. ಆಹಾರ, ವಿಹಾರ, ಚಿಂತನೆ, ವಿಶ್ರಾಂತಿ ಮುಂತಾದ ಸಾಮಾನ್ಯ ದಿನಚರ್ಯೆಗಳು ಕೂಡಾ ಅನಿಯಂತ್ರಿತವಾಗಿ ಯೋಚನೆ-ಯೋಜನೆಗಳ ಸಾಂಗತ್ಯಗಳಿಂದ ದೂರವಾಗುತ್ತಿವೆ. ಈ ವಿಕೃತ ವಿಧಾನಗಳ ಪ್ರತ್ಯಕ್ಷ-ಪರೋಕ್ಷ ಪರಿಣಾಮಗಳು ಮನುಷ್ಯನ ಬದುಕನ್ನು ಅಸಹನೀಯಗೊಳಿಸುತ್ತಿವೆ. ಈ ಅತಂತ್ರಾವಸ್ಥೆಯಿಂದ ಪಾರಾಗಿ ಸ್ವಚ್ಚ್, ಸ್ವಸ್ಥ ಸ್ಥಿತಿಯನ್ನು ಊರ್ಜಿತಕ್ಕೆ ತರಬೇಕೆಂಬ ತುಡಿದದಿಂದ ಶೀಮತಿ ಸುಮನ್ ಇವರು ಪೂರ್ಣ ದೃಷ್ಟಿಯಿಂದ ಪ್ರಸ್ತುತ ಕೃತಿ 'ಮುದ್ರಾ ವಿಜ್ಞಾನ ಮತ್ತು ಆರೋಗ್ಯ'ವನ್ನು ನಮ್ಮ ಮಡಿಲಿಗೆ ಹಾಕಿದ್ದಾರೆ. 

ಲೇಖಕಿಯವರು ಮುಂಬಯಿಯಲ್ಲಿ ವಾಸ್ತವ್ಯವಿದ್ದು ಮೂಲತಃ ಕಾರ್ಕಳದವರು. ಮುಂಬಯಿ ಮಹಾನಗರ ಪಾಲಿಕೆಯ ಶಿಕ್ಷಣ ವಿಭಾಗದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಕೆ. ವೈಜ್ಞಾನಿಕ ದೃಷ್ಟಿಕೋನ, ಕ್ರಿಯಾಶೀಲತೆ ಹಾಗೂ ಆಳವಾದ ಅಧ್ಯಯನ ಇವರ ವೈಶಿಷ್ಟ್ಯ. ನಮ್ಮ ಪ್ರಾಚೀನ ಜ್ಞಾನ-ಮುದ್ರಾ ವಿಜ್ಞಾನದ ಪ್ರಚಾರ ಇವರ ಪರಮ ಧ್ಯೇಯ. ಇವರು ದೇಶ ವಿದೇಶಗಳಲ್ಲಿ ಅನೇಕ ಮುದ್ರಾ ವಿಜ್ಞಾನದ ಶಿಬಿರಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. 

ನಮ್ಮ ಕೈ ಬೆರಳುಗಳಿಂದ ಸರಳವಾದ ಮುದ್ರೆಗಳನ್ನು ಮಾಡಿ (ಎಲ್ಲದಕ್ಕೂ ರೇಖಾ ಚಿತ್ರಗಳಿವೆ) ವಿವರಗಳನ್ನು ನೀಡಿದ್ದಾರೆ. ಮುದ್ರಾ ವಿಜ್ಞಾನದೊಂದಿಗೆ ಆಯುರ್ವೇದದಲ್ಲಿ ಆರೋಗ್ಯ, ನೈಸರ್ಗಿಕ ತತ್ವಗಳು ಹಾಗೂ ಆರೋಗ್ಯ, ಯೋಗದಂತೆ ಆರೋಗ್ಯ, ತತ್ವಜ್ಞಾನವೂ ಆರೋಗ್ಯವೂ, ಸೂರ್ಯೋಪಾಸನೆ ಮತ್ತು ಗಾಯತ್ರೀ ಉಪಾಸನೆ ಹೀಗೆ ಹಲವಾರು ಮಜಲುಗಳ ಅಧ್ಯಾಯಗಳಿವೆ. ಸುಮಾರು ೩೦೦ ಪುಟಗಳ ಪುಸ್ತಕವು ನಿಮ್ಮ ಬದುಕಿನ ಶೈಲಿಯನ್ನು ಸರಿಯಾಗಿ ರೂಪಿಸಿ ಆರೋಗ್ಯ ಸಂಪಾದಿಸುವ, ಸಂರಕ್ಷಣೆಯ ಏಕೈಕ ಮಾರ್ಗ ಎಂಬುದನ್ನು ತಿಳಿಸಿಕೊಡುತ್ತದೆ.