ರಾಜ್ ಲೀಲಾ ವಿನೋದ

ರಾಜ್ ಲೀಲಾ ವಿನೋದ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೨೫೦.೦೦ ಮೊದಲ ಮುದ್ರಣ: ಡಿಸೆಂಬರ್ ೨೦೧೬

‘ಮನದಾಚೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ?’ ಎಂಬ ಸಾಲುಗಳು ‘ರಾಜ್ ಲೀಲಾ ವಿನೋದ' ಪುಸ್ತಕದ ಮುಖಪುಟದಲ್ಲೇ ಮುದ್ರಿತವಾಗಿವೆ. ಕನ್ನಡದ ವರನಟರಾದ ಡಾ. ರಾಜ್ ಕುಮಾರ್ ಇವರ ತೀರಾ ಖಾಸಗಿ ಬದುಕಿನ ಪುಟಗಳನ್ನು ಖ್ಯಾತ ಲೇಖಕ, ಪತ್ರಕರ್ತ ರವಿ ಬೆಳಗೆರೆಯವರು ಅನಾವರಣ ಮಾಡಿದ್ದಾರೆ. ಸ್ವತಃ ಲೀಲಾವತಿಯವರೇ ತಮ್ಮ ಬದುಕಿನ ಕರುಣಾಜನಕ ಕಥೆಯನ್ನು ಈ ಲೇಖಕರ ಬಳಿ ತೆರೆದಿಟ್ಟಿದ್ದಾರೆ. ಅಣ್ಣಾವ್ರು ಬದುಕಿರುವಾಗ ಈ ಪುಸ್ತಕ ಹೊರ ಬಂದಿದ್ದರೆ ಅದರ ಕಥೆಯೇ ಬೇರೆ ಇತ್ತು. ಆದರೆ ಈ ಸಮಯ ಬದಲಾಗಿದೆ. ಸಮಾಜವೂ ಇಂಥಹ ಸಂಬಂಧಗಳಿಗೆ ಮಾನ್ಯತೆ ನೀಡುವ ಉದಾರ ಮನೋಭಾವನೆ ತೋರಿಸುತ್ತಿದೆ. ಇರಲಿ.

ಲೇಖಕರಾದ ರವಿ ಬೆಳಗೆರೆಯವರೇ ತಮ್ಮ ಬೆನ್ನುಡಿಯಲ್ಲಿ ಬರೆದಂತೆ' ರಾಜ್ ಕುಮಾರ್ ಬಗ್ಗೆ ನನಗೆ ಪ್ರೀತಿಯಿದೆ. ಆರಾಧನೆ ಇಲ್ಲ. ನಾನು ವೀರಾಭಿಮಾನಿಯೂ ಅಲ್ಲ. ಲೀಲಾವತಿಯವರಲ್ಲಿ ನಾನು ನನ್ನ ತಾಯಿಯನ್ನು ಕಾಣುತ್ತೇನೆ. ಅವರಿಗೀಗ ಎಂಬತ್ತು ವರ್ಷಗಳು. ಹೃದಯ ಸಂಬಂಧೀ ಕಾಯಿಲೆಗಳಿವೆ. “ಅಮ್ಮಾ, ನೀನೂ ಈ ಹಂತದಲ್ಲಿ ಜನಗಳಿಗೆ ನಿಜ ಹೇಳಲಿಲ್ಲ ಅಂದ್ರೆ ನನ್ನ ತಂದೆ ಯಾರು ಎಂದು ಹೇಳುತ್ತಾರೆ. ರವಿಯವರು ಮನೆಯವರೆಗೆ ಬಂದಿದ್ದಾರೆ. ನೀನು ಮಾತನಾಡು “ ಎಂದು ಸ್ವತಃ ಹೇಳಿದ್ದು ವಿನೋದ್ ರಾಜ್. ಆತ ರಾಜ್ ಮತ್ತು ಲೀಲಾವತಿಯವರ ಮಗ ಎಂದು ಯಾರಾದರೂ ಹೇಳುತ್ತಾರೆ. ಲೀಲಾವತಿಯವರ ಬಾಯಿಯಿಂದಲೇ ಜೀವನ ಕಥನ ಕೇಳಿಕೊಂಡು ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಮಿಥ್ಯವಿಲ್ಲ. ಇದು ರಾಜ್ ಕುಮಾರ್ ಕುಟುಂಬದ ಬಗ್ಗೆ ತಪ್ಪು ಕಲ್ಪನೆ ಮೂಡಿಸುವ ಪುಸ್ತಕವಲ್ಲ. ಕೇವಲ ಆ ಕಾಲದ ಘಟನೆಗಳೇನು ಇವೆಯೋ ಅವು ಮಾತ್ರ ಇಲ್ಲಿವೆ'.

ಲೇಖಕರು ಲೀಲಾವತಿಯವರ ಸಂದರ್ಶನ ಮಾಡುವ ಸಂದರ್ಭದಲ್ಲಿ ರಾಜ್ ಜೊತೆ ಲೀಲಾವತಿ, ವಿನೋದ್ ರಾಜ್ ಜೊತೆ ಇರುವ ಫೋಟೋ, ರಾಜ್ ಕುಮಾರ್ ವಿನೋದ್ ಗೆ ತಂದು ಕೊಟ್ಟ ಅಂಗಿ, ರಾಜ್ ಲೀಲಾವತಿಗೆ ಬರೆದ ಪ್ರೇಮ ಪತ್ರಗಳೆಲ್ಲವೂ ಸಿಗುತ್ತವೆ. ಇದನ್ನೇಕೆ ೫೦ ವರ್ಷಗಳವರೆಗೆ ಅಡಗಿಸಿ ಇಟ್ಟಿರಿ ಎಂದು ಲೇಖಕರು ಕೇಳಿದಾಗ ಲೀಲಾವತಿ ಬಹಳ ಮಾರ್ಮಿಕ ಉತ್ತರ ನೀಡುತ್ತಾರೆ. ‘ಬೆಳಗೆರೆಯವರೇ, ನಾನು ಹೀಗೆ ಹೇಳಿದರೆ ಪ್ರಪಂಚ ನಂಬದೇ ಹೋಗಬಹುದು. ಸುಮಾರು ಐದು ದಶಕಗಳ ಕಾಲ ನಾನು ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ಏಕೆಂದರೆ ಅವರು ದೊಡ್ಡವರು (ರಾಜ್ ಕುಮಾರ್ ರನ್ನು ಲೀಲಾವತಿ ಕರೆಯುತ್ತಿದ್ದುದೇ ಹಾಗೆ) ಅವರ ಬಗ್ಗೆ ಮಾತನಾಡಕೂಡದು. ಹಾಗಂತ ನಾನು ಪ್ರಮಾಣ ಮಾಡಿದ್ದೆ. ರಾಜ್ ನನ್ನ ಮಗುವಿನ ತಂದೆಯಾದಾಗಲೂ ಮಾತನಾಡಲಿಲ್ಲ. ಈ ವಿಷಯ ರಾಜ್ ಕುಮಾರ್ ಗೆ ಗೊತ್ತಾದಾಗ ತುಂಬಾ ವಿಚಲಿತರಾಗಿದ್ದರು. “ನೋಡು ಲೀಲಾ, ಈ ಸಂಗತಿ ಪಾರ್ವತಿಗೆ ಗೊತ್ತಾದರೆ ತುಂಬಾ ನೊಂದು ಕೊಳ್ಳುತ್ತಾಳೆ. ಅದಕ್ಕೆ ಬದಲಾಗಿ, ನಾನೇ ಸಮಯ ಸಂದರ್ಭ ನೋಡಿ ಅವಳ ಎದುರು ಈ ಸಂಬಂಧದ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಅಲ್ಲಿಯವರೆಗೆ ಸುಮ್ಮನಿರುವೆ ಎಂದು ಮಾತು ಕೊಡು" ಎಂದು ಬಿಟ್ಟರು. ನಾನು ಕೊಟ್ಟ ಮಾತನ್ನು ಅವರು ಜೀವಂತ ಇರುವವರೆಗೆ ಮುರಿಯಲಿಲ್ಲ. ಆದರೆ ಅವರು ಮಾತ್ರ ಅವರು ಕೊಟ್ಟ ಮಾತನ್ನು ಮರೆತೇ ಬಿಟ್ಟರು'

ಅಂದಿನ ಕಾಲದಲ್ಲಿ ಗಂಡನಿಲ್ಲದ ಮಗುವನ್ನು ಸಾಕಿದ್ದೇ ಲೀಲಾವತಿಯವರ ಹೆಗ್ಗಳಿಕೆ. ದೊಡ್ಡವರ ಕುಟುಂಬದ ಹಂಗಿಲ್ಲದೇ ತಮ್ಮದೇ ಆದ ತೋಟವನ್ನು ತೆಗೆದುಕೊಂಡು ಕೃಷಿ ಮಾಡಿ ವಿನೋದ್ ರಾಜ್ ಜೊತೆ ಬಾಳುತ್ತಿರುವ ಲೀಲಾವತಿಯವರು ಅಭಿನಂದನಾರ್ಹರು. ಪುಸ್ತಕದ ತುಂಬೆಲ್ಲಾ ರಾಜ್ ಕುಮಾರ್-ಲೀಲಾವತಿಯವರ ಮತ್ತು ವಿನೋದ್ ರಾಜ್ ಬಾಲ್ಯದ ಅಪರೂಪದ ಕಪ್ಪು ಬಿಳುಪು ಚಿತ್ರಗಳೇ ತುಂಬಿದೆ. ಸುಮಾರು ೨೦೦ ಪುಟಗಳ ಸಮೃದ್ಧ ಓದು ನಿಮ್ಮದಾಗಲಿ.