ವ್ಯವಸ್ಥೆಯೆಂಬ ಅವ್ಯವಸ್ಥೆ

ವ್ಯವಸ್ಥೆಯೆಂಬ ಅವ್ಯವಸ್ಥೆ

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀರಾಮ ದಿವಾಣ
ಪ್ರಕಾಶಕರು
ಅಂಬಾರಿ ಪ್ರಕಾಶನ, ಕುವೆಂಪುನಗರ, ಮೈಸೂರು -೫೭೦ ೦೨೩
ಪುಸ್ತಕದ ಬೆಲೆ
ರೂ.೧೯೦.೦೦, ಮುದ್ರಣ : ೨೦೧೭

ಪತ್ರಕರ್ತ, ಸಂಘಟಕ ಶ್ರೀರಾಮ ದಿವಾಣರದ್ದು ಬಹುಮುಖ ಪ್ರತಿಭೆ. ಅವರೊಬ್ಬ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ. ‘ವ್ಯವಸ್ಥೆಯೆಂಬ ಅವ್ಯವಸ್ಥೆ' ಇದು ಶ್ರೀರಾಮ ದಿವಾಣರ ಎರಡನೇ ಪ್ರಕಟಿತ ಲೇಖನಗಳ ಸಂಕಲನ. ಈಗಾಗಲೇ ೩೧ ಆಯ್ದ ಲೇಖನಗಳನ್ನು ‘ಕೃಷ್ಣಾರ್ಪಣ!’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಈ ಪುಸ್ತಕದಲ್ಲಿರುವ ಲೇಖನಗಳು ೨೦೧೧ ರಿಂದ ೨೦೧೪ರ ನಡುವಿನ ಅವಧಿಯಲ್ಲಿ ಜಯಕಿರಣ ಪತ್ರಿಕೆ, ಹಾಯ್ ಉಡುಪಿ ಮತ್ತು ಉಡುಪಿ ಬಿಟ್ಸ್.ಇನ್ ಇವುಗಳಲ್ಲಿ ಬರೆದ ಅಂಕಣ ಬರಹಗಳು. ೬೧ ಲೇಖನಗಳನ್ನು ಒಳಗೊಂಡಿರುವ ಈ ಸಂಕಲನವು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ಅವ್ಯವಸ್ಥೆಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. 

ಲೇಖಕರಾದ ಶ್ರೀರಾಮ ದಿವಾಣರೇ ಅವರ ಮೊದಲ ಮಾತು ಇದರಲ್ಲಿ ಹೇಳುವಂತೆ “ಒಬ್ಬ ಪೂರ್ಣಾವಧಿ ಪತ್ರಕರ್ತನಾಗಿ, ಸಂಘಟಕನಾಗಿ, ಮಾನವ ಹಕ್ಕು, ಮಾಹಿತಿ ಹಕ್ಕು ಕಾರ್ಯಕರ್ತನಾಗಿ, ಜನಪದ ಹೋರಾಟಗಾರನಾಗಿ, ನಾನು ಪ್ರತ್ಯಕ್ಷ ನೋಡಿದ, ಕೇಳಿದ ಮತ್ತು ನೊಂದವರ, ಸಂತ್ರಸ್ತರ, ಪ್ರತ್ಯಕ್ಷದರ್ಶಿಗಳ ಅನುಭವವೇ ನನ್ನ ಬರಹಗಳಾಗಿವೆಯೇ ಹೊರತು ಇವುಗಳ್ಯಾವುವೂ ಕಾಲ್ಪನಿಕ ವಿಷಯಗಳಲ್ಲ. ಶಬ್ದಾಡಂಬರಕ್ಕೆ ಇಲ್ಲಿ ಅವಕಾಶವೇ ಇಲ್ಲ. ಇಲ್ಲೇನಿದ್ದರೂ ಸರಳ, ಸುಲಭ ಮತ್ತು ನೇರ ಬರವಣಿಗೆ. ಪತ್ರಿಕಾ ಬರೆಹಗಳಾದ ಕಾರಣ ಇವುಗಳಿಗೆ ಮಿತಿ ಇರುವುದು ಸಹಜವೇ ಆಗಿದೆ."

ಪುಸ್ತಕದಲ್ಲಿರುವ ೬೧ ಲೇಖನಗಳೂ ಓದಲು ಉಪಯುಕ್ತ. ಇದರಲ್ಲಿ ಜನಜಾಗೃತಿಯ ಕೂಗು ಇದೆ. ಭಾರತದ ಜನರೇ ಜನ ಲೋಕಪಾಲರಾಗಬೇಕು, ತಾಯಿ ಮಗುವನ್ನು ಬೇರ್ಪಡಿಸಿದ ವ್ಯವಸ್ಥೆ, ‘ಸರಕಾರಿ ನಿರೋಧ್’ ಯಾರಿಗೂ ಬೇಡ. ಮುಂತಾದ ಉಪಯುಕ್ತ ಲೇಖನಗಳಿವೆ. ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡ ಸಮಯದಲ್ಲಿ ಮಾಡಿದ ದುಂದು ವೆಚ್ಚದ ಬಗ್ಗೆ ಒಂದು ಲೇಖನವಿದೆ. ‘ಹತ್ತು ನಿಮಿಷದ ಪ್ರಮಾಣವಚನಕ್ಕೆ ಒಂದು ಬಲಿ!’ ಎಂಬ ಈ ಲೇಖನವು ನಮ್ಮ ವ್ಯವಸ್ಥೆಯ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಎತ್ತುತ್ತದೆ. ಸರಳವಾಗಿ ನಡೆಯಬೇಕಾದ ಪ್ರಮಾಣ ವಚನವು ಕಂಠೀರವ ಕ್ರೀಡಾಂಗಣದಲ್ಲಿ ನಡೆಸಿ ಸುಮಾರು ನಲವತ್ತು ಸಾವಿರ ಜನರನ್ನು ಸೇರಿಸಿ, ಕೊನೆಗೆ ನೂಕು ನುಗ್ಗಲಾಗಿ ಒಬ್ಬ ಅಮಾಯಕ ಬಲಿಯಾದದ್ದು ಬಹಳ ನೋವಿನ ಸಂಗತಿ. ಅವನ ಜೀವಕ್ಕೆ ಎರಡು ಲಕ್ಷ ಬೆಲೆ (?!)ಯನ್ನೂ ಕೊಡಲಾಯಿತು. ಕೇವಲ ಹತ್ತು ನಿಮಿಷಗಳ ಈ ಕಾರ್ಯಕ್ರಮಕ್ಕಾಗಿ ಇಷ್ಟೊಂದು ಸಂಪನ್ಮೂಲಗಳನ್ನು ವ್ಯಯಿಸಬೇಕಿತ್ತೇ? ಆ ಪ್ರಮಾಣವಚನಕ್ಕೆ ಮಾಡಿದ ವೆಚ್ಚ ನಮ್ಮದೇ ತೆರಿಗೆ ಹಣವಲ್ಲವೇ? ಇದನ್ನು ಲೂಟಿ ಮಾಡಲು ಜನಪ್ರತಿನಿಧಿಗಳಿಗೆ ಯಾರು ಅಧಿಕಾರ ಕೊಟ್ಟದ್ದು? ಎಂಬೆಲ್ಲಾ ಪ್ರಶ್ನೆಗಳು ಈ ಲೇಖನ ಓದಿದ ನಂತರ ನಮ್ಮಲ್ಲಿ ಮೂಡಲಾರಂಬಿಸುತ್ತವೆ. ಇದು ಆ ಪಾರ್ಟಿ, ಈ ಪಾರ್ಟಿ ಎಂದು ಏನಿಲ್ಲ. ಜನರ ದುಡ್ಡನ್ನು ಹಾಳು ಮಾಡುವುದರಲ್ಲಿ ಎಲ್ಲಾ ಪಕ್ಷಗಳೂ ಸಮಾನರೇ. ಸರಳವಾಗಿ ಪ್ರಮಾಣವಚನ ತೆಗೆದುಕೊಂಡರೆ ಆ ವ್ಯಕ್ತಿ ಮುಖ್ಯಮಂತ್ರಿ ಎನಿಸಿ ಕೊಳ್ಳಲಾರರೇ? 

ಶಿರಡಿಬಾಬಾ ಅವತಾರ ಪುರುಷರಲ್ಲವಾದರೆ ಶಂಕರಾಚಾರ್ಯ - ಮಧ್ವಾಚಾರ್ಯರೂ, ರಾಮ ಕೃಷ್ಣರೂ ಅವತಾರ ಪುರುಷರಲ್ಲ ಎಂಬ ಒಂದು ಲೇಖನ ಈ ಪುಸ್ತಕದಲ್ಲಿದೆ. ಗುಜರಾತ್ ನ ದ್ವಾರಕೆಯ ಶಂಕರಾಚಾರ್ಯ ಪೀಠದ ಸ್ವಾಮಿ ಸ್ವರೂಪಾನಂದರು, ‘ಶಿರಡಿ ಸಾಯಿಬಾಬಾ ಅವತಾರ ಪುರುಷರಲ್ಲ. ಅವರು ದೇವರೂ ಅಲ್ಲ. ಅವರೊಬ್ಬ ಮಾನವ. ಅವರನ್ನು ಆರಾಧಿಸಬೇಡಿ. ಬಾಬಾ ದೇಗುಲಗಳನ್ನು ಕಟ್ಟಬೇಡಿ' ಎಂದು ಕರೆಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಲ್ಲದೇ ‘ಭಿಕ್ಷುಕ ಹೆಸರಿನಲ್ಲೂ ವಸೂಲಿ, ತೆರಿಗೆ ಎಂಬ ದರೋಡೆ, ಘನತೆ ಕಳೆದುಕೊಳ್ಳುತ್ತಿರುವ ಅಟ್ರಾಸಿಟಿ ಕಾಯಿದೆ. ಲೈಂಗಿಕತೆ ಮತ್ತು ಜನರ ಮಾನಸಿಕತೆ.. ಮುಂತಾದ ಕೆಲವು ಲೇಖನಗಳು ನಮ್ಮಲ್ಲಿ ವ್ಯವಸ್ಥೆಯ ಬಗ್ಗೆ ಹೇಸಿಗೆ ಹುಟ್ಟಿಸಿಬಿಡುತ್ತದೆ.

ಈ ರೀತಿಯ ಒಂದೆರಡಲ್ಲ ೬೧ ಲೇಖನಗಳಿವೆ. ಸಣ್ಣ ಸಣ್ಣ ಲೇಖನಗಳಾಗಿರುವುದರಿಂದ ಯಾವಾಗ ಬೇಕಾದರೂ ಬಿಡುವು ಮಾಡಿಕೊಂಡು ಓದಬಹುದು. ಆಕರ್ಷಕ ಮುಖಪುಟ ಹೊಂದಿರುವ ಮೈಸೂರಿನ ಅಂಬಾರಿ ಪ್ರಕಾಶನದವರು ಈ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಸುಮಾರು ೨೫೦ ಪುಟಗಳ ಸಂಮೃದ್ಧ ಓದಿಗಾಗಿ ನೀವು ಈ ಪುಸ್ತಕವನ್ನು ಗಮನಿಸಬಹುದಾಗಿದೆ.