ಸ್ವಪ್ನ ಸಾರಸ್ವತ

ಸ್ವಪ್ನ ಸಾರಸ್ವತ

ಪುಸ್ತಕದ ಲೇಖಕ/ಕವಿಯ ಹೆಸರು
ಗೋಪಾಲಕೃಷ್ಣ ಪೈ
ಪ್ರಕಾಶಕರು
ಹೇಮಂತ ಸಾಹಿತ್ಯ, ೫೩/೧, ಕಾಟನ್ ಪೇಟೆ ಮುಖ್ಯ ರಸ್ತೆ, ಬೆಂಗಳೂರು ೫೬೦೦೫೩
ಪುಸ್ತಕದ ಬೆಲೆ
ರೂ.400.00

'ಸ್ವಪ್ನ ಸಾರಸ್ವತ' ಹೆಸರೇ ಹೇಳುವಂತೆ ಸಾರಸ್ವತ ಸಮುದಾಯದವರ ಅನುಭವ ಕಥಾನಕದ ಸಾರ. ಇದರ ಲೇಖಕರಾದ ಗೋಪಾಲಕೃಷ್ಣ ಪೈ ಇವರು ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ನಿಕಟವರ್ತಿಗಳು. ಆಳವಾದ ಶೋಧನೆಯನ್ನು ಮಾಡಿ ಈ ಕಾದಂಬರಿಯನ್ನು ಬರೆದಿದ್ದಾರೆ. ಮೂಲ ವ್ಯಕ್ತಿ, ಸ್ಥಳಗಳ ಆಶಯಗಳಿಗೆ ಧಕ್ಕೆ ಬಾರದಂತೆ ಈ ಕಾದಂಬರಿಯ ಪಾತ್ರಗಳನ್ನು ನಿರೂಪಿಸಿದ್ದಾರೆ. ಈ ನಿರಂತರ ಶೋಧದ ಫಲವೇ ಕಳೆದ ನಾಲ್ಕು ನೂರು ವರುಷಗಳಲ್ಲಿ ಹಾದು ಬಂದ ಸಾರಸ್ವತ ಸಮುದಾಯದ ಅನುಭವಗಳ ಮೂಲಕ ಚರಿತ್ರೆ ಹಾಗೂ ವರ್ತಮಾನ ಜೀವನದ ಪರಸ್ಪರ ಮುಖಾಮುಖಿಗಳನ್ನೂ ಸಂಬಂಧಗಳನ್ನೂ ವೈಯಕ್ತಿಕ ಅನುಭವದ ನೆಲೆಗಳಲ್ಲಿ ಕೌಟುಂಬಿಕ ಸಂದರ್ಭಗಳಲ್ಲಿಟ್ಟು ಪರೀಕ್ಷಿಸುತ್ತದೆ ಈ ಕಾದಂಬರಿ.

ನಾಲ್ಕು ನೂರು ವರುಷಗಳ ಹಿಂದೆ ಗೋವಾದಲ್ಲಿ ಸಂತೃಪ್ತವಾಗಿದ್ದ ಸಾರಸ್ವತ ಬ್ರಾಹ್ಮಣ ಕುಟುಂಬಗಳು ಪೋರ್ಚ್ ಗೀಸರ ಆಕ್ರಮಣದಿಂದ ತಮ್ಮ ನಂಬುಗೆ, ಧರ್ಮ ಹಾಗೂ ಜೀವಗಳನ್ನು ಉಳಿಸಿಕೊಳ್ಳಲು ದಕ್ಷಿಣಾಭಿಮುಖವಾಗಿ ವಲಸೆ ಬರುತ್ತಾರೆ. ಅವರಲ್ಲಿ ಕಾಸರಗೋಡಿನ ಸಮೀಪದ ಕುಂಬಳೆಯಲ್ಲಿ ನೆಲೆ ನಿಂತ ವಿಟ್ಟು ಪೈ ತನ್ನ ಕುಟುಂಬದ ಕತೆಯನ್ನು ಮೊಮ್ಮಗ ರಾಮಚಂದ್ರ ಪೈಗೆ ಹೇಳುವ ಮೂಲಕ ಇಲ್ಲಿ ಕಾದಂಬರಿ ಆರಂಭವಾಗುತ್ತದೆ.

ಗೋವಾ ಪ್ರಾಂತ್ಯದ ವೆರೆಣೆ  (ಈಗಿನ ವರ್ಣಾ) ಯಲ್ಲಿ ವ್ಯಾಪಾರ ಮಾಡಿಕೊಂಡು ಅನುಕೂಲಸ್ಥರಾಗಿದ್ದ ಸಾರಸ್ವತ ಕುಟುಂಬದ ಮಾಳ ಶರ್ಮರ ಮಗ ನರಸಪ್ಪಯ್ಯನವರ ಮೊಮ್ಮಗನಾದ ವಿಟ್ಟು ಪೈ ೧೫೪೨ರಲ್ಲಿ ಹುಟ್ಟಿದಾಗ ಅದೇ ಸಮಯ ಪೋರ್ಚ್ ಗೀಸರು ಗೋವಾದ ಮೇಲೆ ಕಾಲಿಟ್ಟರು. ವಿಟ್ಟು ಪೈ ಯೌವನಕ್ಕೆ ಕಾಲಿಡುವಾಗ ಪೋರ್ಚ್ ಗೀಸರ ಆಡಳಿತ ಗೋವಾದಲ್ಲಿ ಬಲಿಷ್ಟವಾಗಿ ಬೆಳೆಯಿತು. ಹಿಂದೂಗಳ ಮತಾಂತರ, ದೇವಸ್ಥಾನಗಳ ನಾಶ, ಪೋರ್ಚ್ ಗೀಸರ ದೇವರನ್ನು ಕಡ್ಡಾಯವಾಗಿ ನಂಬಿ ಕಿರಿಸ್ಥಾನರಾಗುವುದು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಸಾರಸ್ವತರ ಸಮೂಹ ಶಕ್ತಿಯ ಸಂಕೇತ ನಾಗ್ಡೋ ಭೇತಾಳ (ದಿಗಂಬರ ಸನ್ಯಾಸಿ) ನ ಸಮಯ ಪ್ರಜ್ಞೆಯಿಂದ ದಕ್ಷಿಣಾಭಿಮುಖವಾಗಿ ವಲಸೆ ಹೋಗುವಂತೆ ಅಪ್ಪಣೆಯಾಗುತ್ತದೆ. ಹೀಗೆ ಗೋವಾದಿಂದ ಪ್ರಾರಂಭವಾದ ವಲಸೆಯು ಉತ್ತರ ಕನ್ನಡದಿಂದ ಪ್ರಾರಂಭವಾಗಿ ಕೇರಳ ರಾಜ್ಯದ ಕೊಚಿನ್ ತನಕ ಮುಂದುವರೆಯುತ್ತದೆ. 

ಹೀಗೆ ಆಸಕ್ತಿ ಮತ್ತು ಕುತೂಹಲಕಾರಿಯಾಗಿ ಮುಂದುವರೆಯುವ ಈ ಕಾದಂಬರಿ ಮುಂದೆ ವಿಟ್ಟು ಪೈಯ ಮೊಮ್ಮಗ ರಾಮಚಂದ್ರ ಪೈ ಮೂಲಕ ಸಾರಸ್ವತ ಸಮುದಾಯದಲ್ಲಿ ನಾಲ್ಕುನೂರು ವರುಷಗಳಿಂದ ಬೆಳೆದು ಬಂದ ಮನುಷ್ಯ ಕುಲದ ವಲಸೆ ಹಾಗೂ ನೆಲೆಗಳ ಪರಸ್ಪರ ಚರ ಹಾಗೂ ಅಚರ ಸಂಬಂಧಗಳ ಪ್ರಜ್ಞೆ ಮಂಡಿತವಾಗಿದೆ. ರಾಮಚಂದ್ರ ಪೈಯ ಮೂವರೂ ಮಕ್ಕಳ ಕಥೆ, ವ್ಯಥೆ ಎಲ್ಲವೂ ಇದರಲ್ಲಿ ಕಣ್ಣಿಗೆ ಕಟ್ಟುವಂತೆ ಬಿಂಬಿತವಾಗಿದೆ. ದಾಯಾದಿ ಕಲಹವು ಮಹಾಭಾರತವನ್ನು ನೆನಪಿಸಿದಂತೆ ತೋರುತ್ತದೆ. ಸಾರಸ್ವತ ಸಮುದಾಯಗಳ ಸಾಕ್ಷಿ ಪ್ರಜ್ಞೆ ಎಂಬಂತಿರುವ ನಾಗ್ಡೋ ಭೇತಾಳ ಕಾದಂಬರಿಯುದ್ದಕ್ಕೂ ಸಲಹೆ ಸಹಕಾರಗಳನ್ನು ನೀಡುತ್ತಾ ಹೋಗುತ್ತಾನೆ. ಸಾರಸ್ವತ ಸಮಾಜದ ಕೊನೆಯ ಕುಡಿ ನಾಶವಾಗದಂತೆ ಕಾದಂಬರಿಯ ಕೊನೆಗೆ ನಾಗ್ಡೋ ಭೇತಾಳನೇ ಪ್ರತ್ಯಕ್ಷನಾಗಿ ಅಭಯ ನೀಡಿ ಸಿದ್ದನ ಮಗುವಾದ ವೆಂಕಟೇಶನನ್ನು ಧರ್ಮಸ್ಥಳದತ್ತ ಒಯ್ದು ಸಾರಸ್ವತ ಕುಟುಂಬವನ್ನು ಕಾಪಾಡುತ್ತಾನೆ.

ಕಾದಂಬರಿಯಲ್ಲಿ ಸಾರಸ್ವತರ ಆಚಾರ, ವಿಚಾರ ಹಾಗೂ ಆಹಾರ ಪದ್ದತಿಯನ್ನು ತೋರಿಸಿಕೊಡಲಾಗಿದೆ. ಅಲ್ಲಲ್ಲಿ ಬರುವ ಕೊಂಕಣಿ ಪದಗಳು, ವಿಟ್ಟು ಪೈ ಪೋರ್ಚ್ ಗೀಸ್ ಯುವತಿ ಅಲ್ವೀರಾ ಜೊತೆಗಿನ ಪ್ರೇಮ ಪ್ರಸಂಗ ಇವೆಲ್ಲಾ ಕಾದಂಬರಿಯ ರೋಚಕತೆಯನ್ನು ಇಮ್ಮಡಿ ಗೊಳಿಸಿವೆ. ಕೆಲವು ಕೊಂಕಣಿ ಜಾನಪದ ಗೀತೆಗಳೂ ಇವೆ. ಗೋಪಾಲಕೃಷ್ಣ ಪೈಯವರು ಇಂಥಹ ಒಂದು ಸುದೀರ್ಘವಾದ ಕಾದಂಬರಿಯನ್ನು ವೃತದಂತೆ ತಿದ್ದುತ್ತಾ ಪ್ರಾದೇಶಿಕ ಅನುಭವವನ್ನು ಕನ್ನಡದ ಎಲ್ಲರ ಅನುಭವವಾಗುವಂತೆ ರಚಿಸಿದ್ದಾರೆ. 

ಎಸ್. ಆರ್. ವಿಜಯ ಶಂಕರ್ ಮುನ್ನುಡಿ ಬರೆದಿದ್ದಾರೆ. ಕಾದಂಬರಿಯು ಮೊದಲು ಮುದ್ರಣ ಕಂಡದ್ದು ಒಕ್ಟೋಬರ್ ೨೦೦೯ರಲ್ಲಿ. ಈಗಾಗಲೇ ೮ ಮುದ್ರಣಗಳನ್ನು ಕಂಡಿದೆ. ಸುಮಾರು ೫೦೦ ಪುಟಗಳ ಸಮೃದ್ಧ ಸಾಹಿತ್ಯವನ್ನು ಓದಿ ನೋಡ ಬಹುದು. ಸ್ವಪ್ನ ಸಾರಸ್ವತ ಕಾದಂಬರಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ೨೦೧೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಅದೇ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಇದೊಂದು ಉತ್ತಮ ಕೃತಿ ಎಂದರೆ ತಪ್ಪಾಗಲಾರದು.