ಸ್ವಸಹಾಯವೇ ಅತ್ಯುತ್ತಮ ಸಹಾಯ

ಸ್ವಸಹಾಯವೇ ಅತ್ಯುತ್ತಮ ಸಹಾಯ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

ಇದರ ಮುನ್ನುಡಿಯಲ್ಲಿ ಎ. ವೆಂಕಟ ರಾವ್ ಬರೆದಿರುವ ಈ ಮಾತುಗಳು ಗಮನಾರ್ಹ: "ಸತ್ಯಂ ವದ ಧರ್ಮಂ ಚರ”, "ದಯೆಯೇ ಧರ್ಮದ ಮೂಲವಯ್ಯಾ” ….. ಎಂಬ ಸೂಕ್ತಿಗಳನ್ನು ನಾವು ಹೇಳುತ್ತಲೇ ಇರುತ್ತೇವೆ. ಆದರೆ ವಾಸ್ತವ ನ್ಯಾಯದಾನದಲ್ಲಿ - ಆತ ಎಷ್ಟೇ ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ - ಅನಿರೀಕ್ಷಿತ ಮತ್ತು ಪರಿಹಾರವಾಗಿರದ ನೂತನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. …. ಅಂಥ ಪ್ರತಿಯೊಂದು ಪ್ರಸಂಗದಲ್ಲಿಯೂ ಧರ್ಮಮಾರ್ಗದಿಂದ ನಾನು ವಿಚಲಿತನಾಗಿಲ್ಲ ಎಂಬ ತೃಪ್ತಿ ಸಮಾಧಾನಗಳು ನನಗಿವೆ”

ಇಡೀ ದೇಶದಲ್ಲಿ ಕಳೆದ ಏಳು ವರುಷಗಳ ಕಾಲ ಸಂಚಲನ ಮೂಡಿಸಿದ್ದ “ನಿರ್ಭಯಾ ಪ್ರಕರಣ”ದಲ್ಲಿ ೨೦ ಮಾರ್ಚ್ ೨೦೨೦ರಂದು ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜ್ಯಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶರು “ಧರ್ಮಮಾರ್ಗ"ದಲ್ಲಿ ಹೇಗೆ ನಡೆಯಬೇಕೆಂದು ಬೆಳಕು ಚೆಲ್ಲುವ ಕೆಲವು ಆಯ್ದ ಅನುಭವಗಳನ್ನು ದಿ. ಎ. ವೆಂಕಟ ರಾವ್ ಅವರ ಪುಸ್ತಕದಿಂದ ಪ್ರಸ್ತುತ ಪಡಿಸುತ್ತಿದ್ದೇವೆ.)

ಕುಂದಾಪುರದಲ್ಲಿ ನಮ್ಮ ನ್ಯಾಯಾಲಯಕ್ಕೆ ಇಬ್ಬರು ಜವಾನರನ್ನು ನಾನೇ ನೇಮಕ ಮಾಡಿದ್ದುದರಿಂದ ಅವರು ಅತ್ಯಂತ ವಿಧೇಯರೂ ನಿಷ್ಠರೂ ಆಗಿದ್ದರು. ಪ್ರತಿ ಶನಿವಾರ ನಡೆಯುತ್ತಿದ್ದ ಸಂತೆಯಿಂದ ತಾಜಾತರಕಾರಿಗಳನ್ನು ಅವರು ತರುತ್ತಿದ್ದರು. ಬೆಲೆಗಳು ತುಂಬ ನ್ಯಾಯಸಮ್ಮತವೇ ಆಗಿರುತ್ತಿದ್ದವು.
    ೧೯೫೭ರ ಮೇಯಲ್ಲಿ ಕುಂದಾಪುರದಿಂದ ಬಂಟ್ವಾಳಕ್ಕೆ ನನಗೆ ವರ್ಗವಾಯಿತು. ಅಲ್ಲಿ ನ್ಯಾಯಾಲಯ ಮತ್ತು ಸರ್ಕಾರಿ ನಿವಾಸ ಬಂಟ್ವಾಳದ ಬಡಾವಣೆಯಾದ ಬಿ.ಸಿ.ರೋಡಿನಲ್ಲಿ ಇದ್ದವು. ಬಿ.ಸಿ.ರೋಡಿಗೆ ಬಂದನಂತರವೂ ಅದೇ ಪರಿಪಾಠ ಮುಂದುವರಿಸಿದೆ: ನಮಗಾಗಿ ಸ್ವಲ್ಪ ತರಕಾರಿಗಳನ್ನು ತರುವಂತೆ ಜವಾನರಿಗೆ ಹೇಳುವುದು. ನಾವು ಹೇಳಿದ ತರಕಾರಿಗಳನ್ನು ಅವುಗಳ ಗುಣಮಟ್ಟ ಅಥವಾ ಬೆಲೆ ಏನೇ ಇರಲಿ, ಅವರು ತಂದು ಬಿಡುತ್ತಿದ್ದರು. ಇದರ ಪರಿಣಾಮವೆಂದರೆ ನಮಗೆ ದುಬಾರಿ ಬೆಲೆಯಲ್ಲಿ ಹಳೆಯ ತರಕಾರಿಗಳಷ್ಟೇ ದೊರೆಯುತ್ತಿದ್ದುದು.
    ಕೆಲವು ತಿಂಗಳನಂತರ, ಧರ್ಮಸ್ಥಳ ಹೆಗ್ಡೆಯವರಿಗೆ ಸೇರಿದ ಕಾಂಪೌಂಡಿನಲ್ಲಿ ಟೆನ್ನಿಸ್‍ಕೋರ್ಟು ಪ್ರಾರಂಭಿಸಿದೆವು. ಇದು ಬಿ.ಸಿ.ರೋಡ್ ಮತ್ತು ಬಂಟ್ವಾಳಗಳ ನಡುವೆ ಇದ್ದಿತು. ನಾನು ಟಿನ್ನಿಸ್‍ಕೋರ್ಟಿಗೆ ಬೈಸಿಕಲ್‍ನಲ್ಲಿ ಹೋಗುತ್ತಿದ್ದೆ. ರಸ್ತೆಬದಿಯ ಅಂಗಡಿಗಳಲ್ಲಿ ಹೊಚ್ಚಹೊಸ ಮತ್ತು ತಾಜಾ ತರಕಾರಿಗಳನ್ನು  ಇಟ್ಟುಕೊಂಡಿರುವುದನ್ನು ಗಮನಿಸಿದೆ. ಒಂದು ದಿವಸ ಟೆನ್ನಿ ಸ್‍ಕೋರ್ಟಿನಿಂದ ಹಿಂದಿರುಗುವಾಗ ಒಂದು ಸಣ್ಣ ಅಂಗಡಿಯ ಮುಂದೆ ಬೈಸಿಕಲ್ ನಿಲ್ಲಿಸಿದೆ ಮತ್ತು ತರಕಾರಿಗಳ ಬೆಲೆ ವಿಚಾರಿಸಿದೆ. ಅದು ತುಂಬ ಅಗ್ಗವಾಗಿರುವುದಷ್ಟೇ ಅಲ್ಲದೆ ಎಲ್ಲವೂ ತಾಜಾ ತರಕಾರಿಗಳಾಗಿದ್ದವು. ಅಂದಿನಿಂದ ನಾನೇ ತರಕಾರಿ ಖರೀದಿ ಮಾಡುತ್ತ ಬರಲಾರಂಭಿಸಿದೆ. ಮೈಸೂರಿನಲ್ಲಿ ಜಿಲ್ಲಾ ಮತ್ತು ಸೆಷನ್ಸ್ ಜಡ್ಜ್ ಆಗಿದ್ದಾಗ ಕೂಡ ಹೊಸಹೊಸ ಎಳೆಯ ತರಕಾರಿಗಳನ್ನು ನಾನೇ ಖರೀದಿಸುತ್ತಿದ್ದೆ.
    ಬಿ.ಸಿ. ರೋಡಿನಲ್ಲಿ ಮೂರು-ನಾಲ್ಕು ತಿಂಗಳ ವಾಸ್ತವ್ಯದ ನಂತರ, ನಮ್ಮ ನೆರೆಹೊರೆ ಪ್ರದೇಶದಲ್ಲಿ ಸಿಡುಬು ಕಾಣಿಸಿಕೊಂಡಿದೆ ಎಂಬ ಸುದ್ದಿ ಹಬ್ಬಿತ್ತು. ನಮ್ಮ ಮಕ್ಕಳಿಗೆ ವ್ಯಾಕ್ಸಿನೇಷನ್ ಹಾಕಿಸಬಯಸಿದೆ. ನನ್ನ ಹಿಂದಿನವರ ಅಧಿಕಾರಾವಧಿಯಲ್ಲಿ ಬಂಟ್ವಾಳದಿಂದ ಹೆಲ್ತ್ ಇನ್‍ಸ್ಪೆಕ್ಟರೊಬ್ಬರು ಇದಕ್ಕಾಗಿ ಮನೆಗೆ ಬರುತ್ತಿದ್ದರು ಎಂದು ನಮ್ಮ ಜವಾನ ಹೇಳಿದ. ನಮ್ಮ ಮನೆಗೆ ಬಂದು ಮಕ್ಕಳಿಗೆ ವ್ಯಾಕ್ಸಿನೇಷನ್ ಮಾಡಬೇಕೆಂದು ಅವರನ್ನು ವಿನಂತಿಸಲು ಜವಾನನ್ನು ಕಳಿಸಿದೆ. ಆದರೆ  ಮಕ್ಕಳನ್ನುನ್ನು ಹೆಲ್ತ್ ಇನ್‍ಸ್ಪೆಕ್ಟರರ ಆಫೀಸಿಗೇ ಕರೆದುಕೊಂಡು ಹೋಗಬೇಕೆಂದು ಅವರು ಹೇಳಿ, ಮನೆಗೆ ಬರಲು ನಿರಾಕರಿಸಿರುವರು ಎಂದು ಜವಾನ ಬಂದು ಹೇಳಿದ. ನನಗೆ ಸ್ವಲ್ಪಮಟ್ಟಿಗೆ ಬೇಸರವಾಯಿತಾದರೂ ನಮ್ಮ ಮಕ್ಕಳಿಗೆ ವ್ಯಾಕ್ಸಿನೇಷನ್ ಮಾಡಿಸದೆಯೇ ಕಾಲ ಕಳೆದುಹೋಯಿತು.
    ಕೆಲವು ತಿಂಗಳನಂತರ ಅದೇ ಹೆಲ್ತ್ ಇನ್‍ಸ್ಪೆಕ್ಟರನ್ನು ಯಾವುದೋ ಕಾರ್ಯಕ್ರಮದಲ್ಲಿ ನನಗೆ ಪರಿಚಯಮಾಡಿಕೊಡಲಾಯಿತು. ಆತ ಒಳ್ಳೆಯ ವರ್ತನೆಯ, ಸಭ್ಯವ್ಯಕ್ತಿಯಂತೆ ನನಗೆ ಕಂಡುಬಂದಿತು. ನಮ್ಮ ಸ್ನೇಹ ಬೆಳೆಯಿತು ಮತ್ತು ಆತ ನಮ್ಮ ಮನೆಗೆ ಬರಲಾರಂಭಿಸಿದರು. ನಮ್ಮ ಮನೆಗೆ ಬಂದು ಮಕ್ಕಳಿಗೆ ವ್ಯಾಕ್ಸಿನೇಷನ್ ಮಾಡಲು ವಾಸ್ತವವಾಗಿ ತಾವು ನಿರಾಕರಿಸಿದ್ದಿರೇ ಎಂದು ಒಂದು ಸಲ ಕೇಳಿಬಿಟ್ಟೆ. ಅವರ ಬಳಿಗೆ ಹೋಗಿದ್ದ ಜವಾನ, "ಮ್ಯಾಜಿಸ್ಟ್ರೇಟರ ಮನೆಗೆ ಬಂದು ಅವರ ಮಕ್ಕಳಿಗೆ ವ್ಯಾಕ್ಸಿನೇಟ್ ಮಾಡಬೇಕೆಂದು  ಆದೇಶಿಸಿದ್ದಾರೆಂದು  ಹೇಳಿದ್ದ” ಎಂದರು. ಹಾಗಾಗಿ ಅವರು ಬರಲು ನಿರಾಕರಿಸಿದ್ದುದು ಸರಿಯಾಗಿಯೇ ಇದ್ದಿತು. ಇದಕ್ಕೆಲ್ಲ ಕಾರಣ ಸಂವಹನದ ಕೊರತೆ!