ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವ

ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವ

ಮತ್ತೆ ಬಂದಿದೆ ಸ್ವಾಮಿ ವಿವೇಕಾನಂದರ ಜಯಂತಿ (೧೨ ಜನವರಿ). ಪ್ರತಿಯೊಬ್ಬರ ಆತ್ಮಕ್ಕೂ ಚೇತನ ತುಂಬಬಲ್ಲ, ಪ್ರತಿಯೊಬ್ಬರ ಬದುಕಿಗೂ ಬೆಳಕು ನೀಡಬಲ್ಲ ಅದ್ಭುತ ವ್ಯಕ್ತಿತ್ವ ಅವರದು. ಕೇವಲ ೩೯ ವರುಷ (೧೨.೧.೧೮೬೩ - ೪.೭.೧೯೦೨) ಬಾಳಿದ ಅವರ ಬದುಕಿನ ಸಾಧನೆಗಳು ಅಮೋಘ.

ಮಾನವ ಜನ್ಮ ದೊಡ್ಡದು ಎಂದು ನಂಬಿದ್ದ ಅವರು ಮಾನವ ಜನಾಂಗದ ಒಳಿತಿಗಾಗಿ ತಮ್ಮ ಬದುಕನ್ನೇ ಸಮರ್ಪಿಸಿದವರು. ರಾಷ್ಟ್ರದ ಹಾಗೂ ವ್ಯಕ್ತಿಗಳ ಪ್ರಗತಿ ಸಾಧನೆಗಾಗಿ ೧೮೯೭ರಲ್ಲಿ ರಾಮಕೃಷ್ಣ ಮಠವನ್ನು ಸ್ಥಾಪಿಸಿ, ಧ್ಯೇಯಬದ್ಧ ಸನ್ಯಾಸಿಗಳ ತಂಡ ಕಟ್ಟಿ, ಮುನ್ನಡೆಸಿದ್ದು ಅವರ ದೂರಾಲೋಚನೆಯ ಉಜ್ವಲ ಉದಾಹರಣೆ.

ಸ್ವಾಮಿ ವಿವೇಕಾನಂದರ ಬಗ್ಗೆ ಉನ್ನತ ಚಿಂತನೆಯ ವ್ಯಕ್ತಿಗಳೂ, ರಾಷ್ಟ್ರ ನೇತಾರರೂ ವ್ಯಕ್ತ ಪಡಿಸಿರುವ ಅಭಿಪ್ರಾಯಗಳು, ಅವರ ಆದರ್ಶ ವ್ಯಕ್ತಿತ್ವವನ್ನು ತೆರೆದಿಡುತ್ತವೆ:

ಮಹಾತ್ಮಾ ಗಾಂಧಿ: “ಸ್ವಾಮಿ ವಿವೇಕಾನಂದರ ಪವಿತ್ರ ಸ್ಮರಣೆಗೆ ನನ್ನ ನಮನ ಮತ್ತು ಗೌರವ ಅರ್ಪಿಸಲು ನಾನು ಇಲ್ಲಿಗೆ (ಬೇಲೂರು ಮಠ, ಕೊಲ್ಕತಾ) ಅವರ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಬಂದಿದ್ದೇನೆ. ಅವರ ಬರವಣಿಗೆಗಳನ್ನು ನಾನು ಆಮೂಲಾಗ್ರವಾಗಿ ಓದಿಕೊಂಡಿದ್ದು, ಹಾಗೆ ಓದಿಕೊಂಡ ನಂತರ ನನ್ನ ದೇಶದ ಬಗ್ಗೆ ನನಗಿದ್ದ ಪ್ರೀತಿ ಸಾವಿರಪಟ್ಟು ಹೆಚ್ಚಾಗಿದೆ. ಇಲ್ಲಿರುವ ಯುವಜನರೇ, ಸ್ವಾಮಿ ವಿವೇಕಾನಂದರು ಜೀವಿಸಿದ್ದ ಮತ್ತು ತೀರಿಕೊಂಡ ಈ ಸ್ಥಳದ ಚೈತನ್ಯದ ಒಂದಂಶವನ್ನಾದರೂ ನಿಮ್ಮದಾಗಿಸಿಕೊಳ್ಳದೆ ಇಲ್ಲಿಂದ ಖಾಲಿ ಕೈಗಳಲ್ಲಿ ಹೊರಟು ಹೋಗಬೇಡಿ.”

ಸುಭಾಷ್ ಚಂದ್ರ ಬೋಸ್: “ಭಾವಪರವಶತೆಗೆ ಒಳಗಾಗದೇ ನಾನು ಸ್ವಾಮಿ ವಿವೇಕಾನಂದರ ಬಗ್ಗೆ ಬರೆಯಲಾರೆ. … ಅವರ ವ್ಯಕ್ತಿತ್ವ ಸಮೃದ್ಧ, ಅಗಾಧ ಮತ್ತು ಸಂಕೀರ್ಣ. ಈ ವ್ಯಕ್ತಿತ್ವವೇ - ಅವರು ಕಲಿಸಿದ್ದು ಮತ್ತು ಬರೆದದ್ದರ ಹೊರತಾಗಿ - ತನ್ನ ದೇಶಬಾಂಧವರ ಮೇಲೆ ಅವರು ಬೀರಿದ ಅದ್ಭುತ ಪ್ರಭಾವಕ್ಕೆ ಕಾರಣ. ಅವರದು ಪರಿಪೂರ್ಣ ಗಂಡೆದೆಯ ವ್ಯಕ್ತಿತ್ವ ಮತ್ತು ದೇಹದ ಕಣಕಣದಲ್ಲಿಯೂ ಅವರೊಬ್ಬ ಹೋರಾಟಗಾರ. ದೇಶಬಾಂಧವರ ಉತ್ಥಾನಕ್ಕಾಗಿ ಅವರು ವೇದಾಂತದ ಪ್ರಾಯೋಗಿಕ ಅರ್ಥವಿವರಣೆ ನೀಡಿದರು … ನಾನು ಅವರ ಬಗ್ಗೆ ಗಂಟೆಗಟ್ಟಲೆ ಮಾತನಾಡ ಬಲ್ಲೆನಾದರೂ ಆ ಶ್ರೇಷ್ಠ ವ್ಯಕ್ತಿಯ ಬಗ್ಗೆ ಕಿಂಚಿತ್ತೂ ತಿಳಿಸಲಿಕ್ಕಾಗದೆ ಸೋಲುತ್ತೇನೆ. ಯಾಕೆಂದರೆ ಅವರು ಅಂತಹ ಸಮೃದ್ಧ, ಅಗಾಧ ಮತ್ತು ಸಂಕೀರ್ಣ ವ್ಯಕ್ತಿ. ಅವರು ಸತ್ಯದೊಂದಿಗೆ ನೇರವಾಗಿ ಭಾವೈಕ್ಯರಾದ ಅತ್ಯುನ್ನತ ಅಧ್ಯಾತ್ಮಿಕ ಮಟ್ಟದ ಯೋಗಿ; ತನ್ನ ರಾಷ್ಟ್ರದ ಮತ್ತು ಮಾನವ ಜನಾಂಗದ ನೈತಿಕ ಮತ್ತು ಅಧ್ಯಾತ್ಮಿಕ ಉತ್ಥಾನಕ್ಕಾಗಿ ತನ್ನ ಸಂಪೂರ್ಣ ಬದುಕನ್ನು ಸಮರ್ಪಿಸಿದವರು ಎಂದು ನಾನು ಅವರನ್ನು ಚಿತ್ರಿಸುತ್ತೇನೆ. ಈಗ ಅವರು ಜೀವಂತವಾಗಿ ಇದ್ದಿದ್ದರೆ, ನಾನು ಅವರ ಚರಣಗಳಿಗೆ ವಂದಿಸುತ್ತಿದ್ದೆ.

ಸ್ವಾಮಿ ವಿವೇಕಾನಂದರು ಪೂರ್ವ ಮತ್ತು ಪಶ್ಚಿಮಗಳನ್ನು, ಧರ್ಮ ಮತ್ತು ವಿಜ್ನಾನಗಳನ್ನು, ಪ್ರಾಚೀನ ಮತ್ತು ವರ್ತಮಾನಗಳನ್ನು ಸಾಮರಸ್ಯಗೊಳಿಸಿದವರು. ಆದ್ದರಿಂದಲೇ ಅವರು ಗ್ರೇಟ್. ಅವರು ನೀಡಿದ ಜ್ನಾನದಿಂದಾಗಿ ನಮ್ಮ ದೇಶಬಾಂಧವರು ಅಪೂರ್ವ ಆತ್ಮಗೌರವ, ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನ ಗಳಿಸಿದ್ದಾರೆ."

ವಿನೋಬಾ ಭಾವೆ: “ಸ್ವಾಮಿ ವಿವೇಕಾನಂದರು ನಮ್ಮ ತಾಕತ್ತಿನ ಬಗ್ಗೆ ನಮ್ಮಲ್ಲಿ ಅರಿವು ಮೂಡಿಸಿದರು ಮಾತ್ರವಲ್ಲ, ನಮ್ಮ ದೋಷಗಳು ಮತ್ತು ದೌರ್ಬಲ್ಯಗಳನ್ನೂ ತೋರಿಸಿಕೊಟ್ಟರು. … ಭಾರತವು ಆ ಸಮಯದಲ್ಲಿ ತಮಸ್ಸಿನಲ್ಲಿ ಮುಳುಗಿತ್ತು ಹಾಗೂ ದೌರ್ಬಲ್ಯಗಳನ್ನು ನಿರ್ಮೋಹ ಮತ್ತು ನೆಮ್ಮದಿಯೆಂದು ತಪ್ಪಾಗಿ ತಿಳಿದಿತ್ತು. ಅದಕ್ಕಾಗಿಯೇ ವಿವೇಕಾನಂದರು ಆಲಸ್ಯ ಮತ್ತು ಮೈಗಳ್ಳತನಕ್ಕಿಂತ ಅಪರಾಧಿ ಪ್ರವೃತ್ತಿಗೆ ಪ್ರಾಶಸ್ತ್ಯ ನೀಡಬಹುದೆಂದು ಹೇಳಬೇಕಾಯಿತು. ತಾವು ಇದ್ದ ತಾಮಸಿಕ ಸ್ಥಿತಿಯ ಬಗ್ಗೆ, ಅದರಿಂದ ಬಿಡುಗಡೆ ಪಡೆಯಬೇಕಾದ ಅವಶ್ಯಕತೆಯ ಬಗ್ಗೆ ಮತ್ತು ಎದೆ ಸೆಟೆದು ನಿಲ್ಲುವುದರ ಬಗ್ಗೆ ಅವರು ಜನರಲ್ಲಿ ಅರಿವು ಮೂಡಿಸಿದರು - ಇವೆಲ್ಲವೂ ಜನರು ತಮ್ಮ ಜೀವನದಲ್ಲಿ ವೇದಾಂತದ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲಿ ಎಂಬ ಉದ್ದೇಶ ಸಾಧನೆಗಾಗಿ. ಇತರರೊಂದಿಗಿನ ದೈನಂದಿನ ಸಂಬಂಧಗಳಲ್ಲಿ ಮತ್ತು ನಮ್ಮ ಚಟುವಟಿಕೆಗಳಲ್ಲಿ ಸ್ಥಾನ ಪಡೆಯದ ತತ್ವಜ್ನಾನವು ನಿಷ್ಪ್ರಯೋಜಕ ಮತ್ತು ಶೂನ್ಯಸಮಾನವೆಂಬ ಸತ್ಯವನ್ನು ಸ್ವಾಮಿ ವಿವೇಕಾನಂದರು ನಮಗೆ ತೋರಿಸಿಕೊಟ್ಟರು. ಆದ್ದರಿಂದಲೇ ಅವರು ದರಿದ್ರ-ನಾರಾಯಣರ ಸೇವೆಗೆ, ಅವರ ಉತ್ಥಾನ ಮತ್ತು ಜ್ನಾನವೃದ್ಧಿಗೆ, ನಮ್ಮನ್ನು ಸಮರ್ಪಿಸಿಕೊಳ್ಳ ಬೇಕೆಂದು ಸಲಹೆಯಿತ್ತರು. ಸ್ವಾಮಿ ವಿವೇಕಾನಂದರು ಠಂಕಿಸಿದ ದರಿದ್ರ-ನಾರಾಯಣ ಎಂಬ ಪದವನ್ನು ಗಾಂಧೀಜಿ ಜನಪ್ರಿಯಗೊಳಿಸಿದರು."

“ನೀವು ಅಸಹಾಯಕರೆಂದು ಭಾವಿಸುವುದು ಬಹಳ ದೊಡ್ಡ ತಪ್ಪು. ಯಾರಿಂದಲೂ ಸಹಾಯ ಕೇಳಬೇಡಿ. ನಮಗೆ ಸಹಾಯ ಮಾಡಬೇಕಾದವರು ನಾವೇ. ನಮಗೆ ಸಹಾಯ ಮಾಡಲು ನಮಗೇ ಸಾಧ್ಯವಾಗದಿದ್ದರೆ, ಬೇರೆ ಯಾರಿಂದಲೂ ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ” ಎಂಬ ಸ್ವಾಮಿ ವಿವೇಕಾನಂದರ ಮಿಂಚಿನ ಮಾತು ನಮ್ಮ ಕಣ್ಣು ತೆರೆಸಲಿ. ಆ ಮೇರು ವ್ಯಕ್ತಿಯ ಜನ್ಮದಿನದ ಸಂದರ್ಭದಲ್ಲಿ “ಏಳು, ಎದ್ದೇಳು, ಗುರಿ ತಲಪುವ ತನಕ ವಿರಮಿಸದಿರು” ಎಂಬ ಅವರ ಕರೆಯನ್ನು ಮತ್ತೆಮತ್ತೆ ನೆನೆಯುತ್ತಾ, ಉನ್ನತ ಧ್ಯೇಯದ ಬದುಕಿನತ್ತ ಮುನ್ನಡಿಯಿಡೋಣ.